ಮಂಗಳವಾರ, ಜೂನ್ 22, 2021
22 °C

ಸದನದಲ್ಲಿ ಅಶ್ಲೀಲ ಚಿತ್ರ ವೀಕ್ಷಣೆ: ಇನ್ನೂ 10 ಶಾಸಕರು ಭಾಗಿ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾವೇರಿ: `ವಿಧಾನಸಭೆ ಅಧಿವೇಶನ ಸಂದರ್ಭದಲ್ಲಿ ಬ್ಲೂ ಫಿಲಂ ವೀಕ್ಷಣೆಯನ್ನು ಕೇವಲ ಮೂವರು ಶಾಸಕರಷ್ಟೇ (ಈಗ ಮಾಜಿ ಸಚಿವರು) ಮಾಡಿಲ್ಲ. ಅವರೊಂದಿಗೆ ಇನ್ನೂ 8-10 ಶಾಸಕರಿದ್ದಾರೆ. ಅವರಿಗೂ  ಸದನ ಸಮಿತಿ ಶೀಘ್ರವೇ ನೋಟಿಸ್ ಜಾರಿ ಮಾಡಲಿದೆ~ ಎಂದು ಪ್ರಕರಣದ ತನಿಖೆ ನಡೆಸಲು ನೇಮಿಸಿರುವ ಸದನ ಸಮಿತಿಯ ಸದಸ್ಯರಲ್ಲಿ ಒಬ್ಬರಾದ ಶಾಸಕ ನೆಹರೂ ಓಲೇಕಾರ ಅವರು ಭಾನುವಾರ ಇಲ್ಲಿ ಬಹಿರಂಗಪಡಿಸಿದ್ದಾರೆ.ಬೇರೆ ಶಾಸಕರೂ ಬ್ಲೂಫಿಲಂ ವೀಕ್ಷಣೆ ಮಾಡಿದ್ದಕ್ಕೆ ಸಾಕ್ಷಿಗಳಿವೆ. ಅವರೆಲ್ಲ ಯಾವುದೋ ಒಂದು ನಿರ್ದಿಷ್ಟ ಪಕ್ಷಕ್ಕೆ ಸೇರಿದವರಲ್ಲ. ಬೇರೆ ಬೇರೆ ಪಕ್ಷದ ಶಾಸಕರಾಗಿದ್ದಾರೆ.ಈ ಎಲ್ಲ ಶಾಸಕರಿಗೆ ಮಾ.8ರ ನಂತರ ವಿಚಾರಣೆಗಾಗಿ ನೋಟಿಸ್ ನೀಡಲಾಗುತ್ತದೆ ಎಂದು ಅವರು ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸುತ್ತ ತಿಳಿಸಿದರು.ಕೇವಲ ಮೂವರು ಅಶ್ಲೀಲ ಚಿತ್ರ ನೋಡುತ್ತಿರುವ ದೃಶ್ಯಗಳಷ್ಟೇ ಮಾಧ್ಯಮದವರಿಗೆ ದೊರೆತಿವೆ. ಆದರೆ, ವಿಧಾನಸಭೆ ಸಿಸಿ ಟಿವಿ ಕ್ಯಾಮರಾದಲ್ಲಿ ಬೇರೆ ಬೇರೆ ಪಕ್ಷದ ಶಾಸಕರು ವೀಕ್ಷಣೆ ಮಾಡಿರುವುದು ಸೆರೆಯಾಗಿದೆ.

 ಸದನ ಸಮಿತಿ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಈ ಅಂಶ ಬೆಳಕಿಗೆ ಬಂದಿದೆ ಎಂದು ತಿಳಿಸಿದರು.ಆದರೆ, ಬ್ಲೂಫಿಲಂ ವೀಕ್ಷಣೆ ಮಾಡಿರುವ ಪಟ್ಟಿಯಲ್ಲಿ ಹೊಸದಾಗಿ ಸೇರ್ಪಡೆಯಾಗುವ ಶಾಸಕರು ಯಾರು, ಅವರು ಯಾವ ಪಕ್ಷದವರು ಎಂಬುದನ್ನು ಬಹಿರಂಗಪಡಿಸಲು ನಿರಾಕರಿಸಿದ ಅವರು, ಮಾರ್ಚ್ 8 ರಂದು ಈ ಮೂವರು ಮಾಜಿ ಸಚಿವರ ವಿಚಾರಣೆ ನಡೆಯಲಿದೆ. ನಂತರ ಈ ಶಾಸಕರಿಗೂ ನೋಟಿಸ್ ಜಾರಿ ಮಾಡಿದ ಮೇಲೆ ಅವರ ಹೆಸರು, ಪಕ್ಷ ಎಲ್ಲವೂ ಬಹಿರಂಗಗೊಳ್ಳಲಿದೆ ಎಂದರು.ಪ್ರಕರಣ ಕುರಿತು ವರದಿ ಸಲ್ಲಿಸಲು ಈ ಮುಂಚೆ ಮಾರ್ಚ್ 13ಕ್ಕೆ ನಿಗದಿ ಮಾಡಲಾಗಿತ್ತು. ಆದರೆ ಇನ್ನಷ್ಟು ಶಾಸಕರ ವಿಚಾರಣೆ ನಡೆಸಬೇಕಿರುವುದರಿಂದ ಬಜೆಟ್ ಅಧಿವೇಶನಕ್ಕೂ ಮುನ್ನ ಮಾರ್ಚ್ 20ರಂದು ಸರ್ಕಾರಕ್ಕೆ ವರದಿ ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.ಫೆಬ್ರುವರಿ 8 ರಂದು ನಡೆದ ವಿಧಾನಸಭೆ ಅಧಿವೇಶನದಲ್ಲಿ ಬ್ಲೂಫಿಲಂ ವೀಕ್ಷಣೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವರಾಗಿದ್ದ ಸಿ.ಸಿ.ಪಾಟೀಲ, ಲಕ್ಷ್ಮಣ ಸವದಿ ಹಾಗೂ ಕೃಷ್ಣ ಪಾಲಿಮಾರ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದನ್ನು ಹಾಗೂ ಪ್ರಕರಣ ವಿಚಾರಣೆಗಾಗಿ ಸಭಾಪತಿ ಕೆ.ಜಿ. ಬೋಪಯ್ಯ ಅವರು ಗದಗ ಶಾಸಕ ಶ್ರೀಶೈಲಪ್ಪ ಬಿದರೂರ ನೇತೃತ್ವದಲ್ಲಿ ಏಳು ಜನ ಶಾಸಕರ ಸದನ ಸಮಿತಿ ರಚಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.