ಮಂಗಳವಾರ, ಸೆಪ್ಟೆಂಬರ್ 29, 2020
25 °C

ಹಗರಣಗಳ ಸರಮಾಲೆ; ಚರ್ಚೆಯಲ್ಲೇ ತೃಪ್ತಿ, ತನಿಖೆಗಿಲ್ಲ ಆಸಕ್ತಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಗರಣಗಳ ಸರಮಾಲೆ; ಚರ್ಚೆಯಲ್ಲೇ ತೃಪ್ತಿ, ತನಿಖೆಗಿಲ್ಲ ಆಸಕ್ತಿ!

ಮಡಿಕೇರಿ: ಅಕ್ಷರ ದಾಸೋಹದಲ್ಲಿ ಅವ್ಯವಹಾರ, ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಅವ್ಯವಹಾರ,  ತಾಳೆ ಬೆಳೆ- ಜೇನು ಕೃಷಿ ತರಬೇತಿ ಹೆಸರಿನಲ್ಲಿ ಅವ್ಯವಹಾರ...  ಹೀಗೆ ಹಲವು ಅವ್ಯವಹಾರಗಳ ಪ್ರಕರಣಗಳು ನಗರದ ವಿಧಾನಸಭಾಂಗಣದಲ್ಲಿ ಸೋಮವಾರ ನಡೆದ ಜಿಲ್ಲಾ ಪಂಚಾಯಿತಿಯ ಸಾಮಾನ್ಯ ಸಭೆಯಲ್ಲಿ ಪ್ರತಿಧ್ವನಿಸಿದವು.ಇವೆಲ್ಲ ಅವ್ಯವಹಾರಗಳ ಬಗ್ಗೆ ಧ್ವನಿ ಎತ್ತಿದ್ದು ಆಡಳಿತಾರೂಢ ಬಿಜೆಪಿ ಸದಸ್ಯರು ಎನ್ನುವುದು ಸ್ವಾರಸ್ಯಕರ ಸಂಗತಿ. ಪ್ರಮಖವಾಗಿ ಬಿ.ಬಿ. ಭಾರತೀಶ್ ಹಾಗೂ ಗಣಪತಿ ಕೊಡಂದೇರ್ (ಬಾಂಡ್) ದಾಖಲೆಗಳ ಸಮೇತ ಸಭೆಯಲ್ಲಿ ಪ್ರಕರಣಗಳ ಬಗ್ಗೆ ಪ್ರಸ್ತಾಪಿಸಿದರು. ವಿರೋಧ ಪಕ್ಷವಾದ ಕಾಂಗ್ರೆಸ್‌ನ ಸದಸ್ಯರು ಇವರಿಗೆ ಸಾಥ್ ನೀಡಿ, ಲೋಕಾಯುಕ್ತ ಹಾಗೂ ಸಿಒಡಿ ತನಿಖೆಗೆ ಒತ್ತಾಯಿಸಿದರು.ತನಿಖೆಗೆ ಒತ್ತಾಯಿಸುತ್ತಿರುವ ಸಂದರ್ಭಗಳಲ್ಲಿ ಆಡಳಿತ ಪಕ್ಷದ ಸದಸ್ಯರ ನಡುವೆಯೂ ಗೊಂದಲ ಉಂಟಾಯಿತು. ಬಾಂಡ್ ಗಣಪತಿ, ಭಾರತೀಶ್, ಬಲ್ಲಾರಂಡ ಮಣಿ ಉತ್ತಪ್ಪ ಅವರು ಸಿಒಡಿ- ಲೋಕಾಯುಕ್ತ ತನಿಖೆಗೆ ಒತ್ತಾಯಿಸಿದರೆ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಕಾಂತಿ ಬೆಳ್ಯಪ್ಪ ಅವರು ತನಿಖೆಯ ಅವಶ್ಯಕತೆ ಇಲ್ಲವೆಂದು ವಾದಿಸಿದರು.`ದಾಖಲೆಗಳ ಸಮೇತ ಅವ್ಯವಹಾರಗಳನ್ನು ಬಯಲಿಗೆ ಎಳೆದರೂ ತನಿಖೆಗೆ ಏಕೆ ಆದೇಶಿಸುತ್ತಿಲ್ಲ. ಪ್ರತಿಬಾರಿಯೂ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರೆ ಏನು ಪ್ರಯೋಜನ ?~ ಎಂದು ಹತಾಶರಾದ ಸದಸ್ಯ ಬಾಂಡ್ ಗಣಪತಿ ನುಡಿದರು.ಸದಸ್ಯ ಬಿ.ಬಿ. ಭಾರತೀಶ್ ಮಾತನಾಡಿ, ಅಕ್ಷರ ದಾಸೋಹದಲ್ಲಿ ನಡೆಯುತ್ತಿರುವ ಅವ್ಯವಹಾರವನ್ನು ಪರಿಶೀಲಿಸಲು ತೊಡಗಿದಾಗಿನಿಂದಲೂ ನನಗೆ ಹಲವು ಜೀವ ಬೆದರಿಕೆ ಕರೆಗಳು ಬಂದಿವೆ. ಅವುಗಳನ್ನೆಲ್ಲ ಲೆಕ್ಕಿಸದೇ ನಾವು ದಾಖಲೆ ಸಮೇತ ಹಾಜರುಪಡಿಸಿದರೂ ಯಾವ ಪ್ರಯೋಜನವೂ ಆಗುತಿಲ್ಲವೆಂದು ಸುದ್ದಿಗಾರರಿಗೆ ಹೇಳಿದರು. ಹಲವು ಒತ್ತಡಗಳ ನಡುವೆಯೂ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ರವಿ ಕುಶಾಲಪ್ಪ ಅವರು ಲೋಕಾಯುಕ್ತ ಅಥವಾ ಸಿಒಡಿ ತನಿಖೆಗೆ ಒಪ್ಪಿಸಲು ನಿರಾಕರಿಸಿದರು. ಜಿಲ್ಲಾ ಮಟ್ಟದ ಅಧಿಕಾರಿಗಳು ಅಥವಾ ಸ್ಥಾಯಿ ಸಮಿತಿಯಿಂದಲೇ ತನಿಖೆ ಮಾಡಿಸುವುದು ಉತ್ತಮವೆಂದು ವಾದ-ವಿವಾದಕ್ಕೆ ತೆರೆ ಎಳೆದರು.ಉಪಾಧ್ಯಕ್ಷೆ ಎಚ್.ಎಂ.ಕಾವೇರಿ, ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಡಿ.ಬಿ. ಧರ್ಮಪ್ಪ, ಶಿಕ್ಷಣ ಮತ್ತು  ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಕಾಂತಿ ಬೆಳ್ಯಪ್ಪ, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷೆ ಬಬ್ಬೀರ ಸರಸ್ವತಿ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಂಜನಪ್ಪ, ಸದಸ್ಯರು, ಅಧಿಕಾರಿಗಳು ಭಾಗವಹಿಸಿದ್ದರು.ತಾಳೆ-ಜೇನು ಕೃಷಿ ತರಬೇತಿ ಹೆಸರಲ್ಲಿ ಗೋಲ್‌ಮಾಲ್!


ತೋಟಗಾರಿಕಾ ಇಲಾಖೆಯವರು ತಾಳೆ ಕೃಷಿ ಹಾಗೂ ಜೇನು ಕೃಷಿ ಬಗ್ಗೆ ತರಬೇತಿ ನೀಡಿದ್ದೇವೆ ಎಂದು ಹೇಳಿ ಲಕ್ಷಾಂತರ ರೂಪಾಯಿ ಗೋಲ್‌ಮಾಲ್ ಮಾಡಿದ್ದಾರೆ ಎಂದು ಬಾಂಡ್ ಗಣಪತಿ ಆರೋಪಿಸಿದರು.ವಾಸ್ತವವಾಗಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಸ್ಥೆಯವರು ನೀಡಿರುವ ತರಬೇತಿಯನ್ನು ಅಧಿಕಾರಿಗಳು ತಾವೇ ಮಾಡಿರುವುದಾಗಿ ಹಣ ಡ್ರಾ ಮಾಡಿಕೊಂಡಿದ್ದಾರೆ ಎಂದು ಅವರು ಹೇಳಿದರು.ತಾಳೆ ಕೃಷಿ ಬಗ್ಗೆ ವಿರಾಜಪೇಟೆಯ 1240 ಜನರಿಗೆ ತರಬೇತಿ ನೀಡಲಾಗಿದೆ ಎಂದು 3.72 ಲಕ್ಷ ರೂಪಾಯಿ ಹಣವನ್ನು ಪಡೆದುಕೊಳ್ಳಲಾಗಿದೆ. ಆದರೆ ವಾಸ್ತವವಾಗಿ ಒಬ್ಬೊಬ್ಬರ ಹೆಸರಲ್ಲಿಯೇ 3-4 ಬಾರಿ ಹಣವನ್ನು ಪಡೆಯಲಾಗಿದೆ. ಒಂದು ದಿನಕ್ಕೆ ಒಬ್ಬೊಬ್ಬರಿಗೆ ರೂ 300 ವೆಚ್ಚ ಮಾಡಲಾಗಿದೆ ಎಂದು ವೆಚ್ಚದಲ್ಲಿ ತೋರಿಸಲಾಗಿದೆ ಎಂದು ಅವರು ಆರೋಪಿಸಿದರು.ಫಲಾನುಭವಿಗಳ ಪಟ್ಟಿಯಲ್ಲಿ ರಾಜಕಾರಣಿಗಳು, ಜಿ.ಪಂ. ಸದಸ್ಯರು, ಅವರ ಸಂಬಂಧಿಕರು, ಪತ್ರಕರ್ತರ ಹೆಸರುಗಳೂ ಇವೆ. ಇವರಲ್ಲಿ ಬಹಳ ಜನರಿಗೆ ತರಬೇತಿ ನೀಡಿರುವ ಬಗ್ಗೆ ಮಾಹಿತಿಯೇ ಇಲ್ಲ. ಇದಲ್ಲದೇ ಜಿಲ್ಲಾ ಪಂಚಾಯಿತಿ ಕಾರ್ಯಕ್ರಮ ಇದಾಗಿದ್ದರೂ, ಯಾವುದೇ ಸದಸ್ಯರ ಗಮನಕ್ಕೂ ತಂದಿಲ್ಲ. ಫಲಾನುಭವಿಗಳ ಆಯ್ಕೆಯನ್ನು ಅಧಿಕಾರಿಗಳೇ ಮಾಡಿದ್ದಾರೆ ಎಂದು ಅವರು ನುಡಿದರು.ಇದಕ್ಕೆ ಸಂಬಂಧಿಸಿದಂತೆ ತಾಳೆ ಕೃಷಿ ನೋಡಲ್ ಅಧಿಕಾರಿ ದಿನೇಶಕುಮಾರ್ ಮಾತನಾಡಿ, ಸರ್ಕಾರದ ನಿಯಮಾವಳಿಯಂತೆಯೇ ಖಾಸಗಿ ಸಂಸ್ಥೆಯ ಜೊತೆಗೂಡಿ ತರಬೇತಿ ನೀಡಲಾಗಿದೆ. ಯಾವುದೇ ಅವ್ಯವಹಾರ ನಡೆದಿಲ್ಲ ಎಂದು ಹೇಳಿದರು. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಬಿ. ಅಂಜನಪ್ಪ ಮಾತನಾಡಿ, ಫಲಾನುಭವಿಗಳನ್ನು ಆಯ್ಕೆ ಮಾಡುವಾಗ ಸ್ಥಳೀಯ ಜಿ.ಪಂ. ಸದಸ್ಯರನ್ನು ಗಣನೆಗೆ ತೆಗೆದುಕೊಳ್ಳಿ ಹಾಗೂ ಈ ತರಬೇತಿ ಪ್ರಕ್ರಿಯೆ ಬಗ್ಗೆ ಸಂಪೂರ್ಣವಾದ ವಿವರವನ್ನು ಮುಖ್ಯ ಯೋಜನಾಧಿಕಾರಿಗಳಿಗೆ ನೀಡಿ ಎಂದು ತೋಟಗಾರಿಕಾ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.  ಅಧ್ಯಕ್ಷ ರವಿ ಕುಶಾಲಪ್ಪ ಮಾತನಾಡಿ, ಮುಂದಿನ ಸಭೆಗೆ ಸಂಪೂರ್ಣವಾದ ವಿವರವನ್ನು ಮಂಡಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.ಉದ್ಯೋಗ ಖಾತರಿ ಪ್ರಚಾರ ಫಲಕಕ್ಕಾಗಿ ಹಣ ವಸೂಲಿ

ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಬಗ್ಗೆ ಮಾಹಿತಿ ನೀಡುವ ಪ್ರಚಾರ ಫಲಕವನ್ನು ಖರೀದಿಸಬೇಕೆಂದು ಸೋಮವಾರಪೇಟೆ ಹಾಗೂ ವಿರಾಜಪೇಟೆ ತಾಲ್ಲೂಕಿನ ಗ್ರಾಮ ಪಂಚಾಯಿತಿಗಳಿಂದ ತಲಾ ರೂ 39,000 ಹಣವನ್ನು ಪಡೆಯಲಾಗಿದೆ. ಸುಮಾರು 30 ಲಕ್ಷ ರೂಪಾಯಿ ಅವ್ಯವಹಾರ ನಡೆದಿದೆ ಎಂದು ಸದಸ್ಯ ಬಾಂಡ್ ಗಣಪತಿ ಆರೋಪಿಸಿದರು.ಈ ಹಿಂದೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದ ಎನ್.ಕೃಷ್ಣಪ್ಪ ಅವರು ಪಿಡಿಒಗಳಿಗೆ ಲಿಖಿತವಾಗಿ ಆದೇಶ ನೀಡಿ, ನಿಗದಿತ ಕಂಪೆನಿಯೊಂದರಿಂದಲೇ ಈ ಪ್ರಚಾರ ಫಲಕವನ್ನು ಖರೀದಿಸಬೇಕೆಂದು ಒತ್ತಾಯಿಸಿದ್ದರು. ಯಾರು ಖರೀದಿಸಲಿಲ್ಲವೋ ಅಂತಹ ಪಂಚಾಯಿತಿಗಳಿಗೆ ಉದ್ಯೋಗ ಖಾತರಿ ಯೋಜನೆಯ ಅನುದಾನವನ್ನು ತಡೆಹಿಡಿದರು.ಯಾರ ಹತ್ತಿರ ಹಣವಿರಲಿಲ್ಲವೋ ಅಂತಹ ಪಂಚಾಯಿತಿಗಳಿಗೆ ಕೃಷ್ಣಪ್ಪ ಅವರೇ ಬೇರೆ ಅನುದಾನ ನೀಡಿ, ಖರೀದಿಸಲು ಪ್ರಚೋದನೆ ನೀಡಿದ್ದಾರೆ ಎಂದು ಬಾಂಡ್ ಗಣಪತಿ ಆರೋಪಿಸಿದರು.ತನಿಖೆಯನ್ನು ಸಿಒಡಿಗೆ ಒಪ್ಪಿಸಿ ಎಂದು ಆಡಳಿತರೂಢ ಸದಸ್ಯರು ಒತ್ತಾಯಿಸಿದರು. ಆದರೆ, ಶಿಕ್ಷಣ ಹಾಗೂ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಕಾಂತಿ ಬೆಳ್ಯಪ್ಪ ಅವರು ತನಿಖೆಯ ಅವಶ್ಯಕತೆ ಇಲ್ಲ ಎಂದರು.ಅಧ್ಯಕ್ಷ ರವಿ ಕುಶಾಲಪ್ಪ ಮಾತನಾಡಿ, ಈ ಪ್ರಕರಣದ ಬಗ್ಗೆ ಎರಡೂ ತಾಲ್ಲೂಕಿನ ಕಾರ್ಯನಿರ್ವಾಹಕ ಅಧಿಕಾರಿಗಳು ವರದಿ ನೀಡಲಿ. ನಂತರ ಇದರ ಬಗ್ಗೆ ವಿಧಾನಸಭಾಧ್ಯಕ್ಷ ಕೆ.ಜಿ. ಬೋಪಯ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಅಪ್ಪಚ್ಚು ರಂಜನ್ ಅವರೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳುವುದಾಗಿ ಹೇಳಿದರು.ಅಕ್ಷರ ದಾಸೋಹದಲ್ಲಿ ಅವ್ಯವಹಾರ: ಭಾರತೀಶ್


ಜಿಲ್ಲೆಯ ಹಲವು ಶಾಲೆಗಳಿಗೆ ಅಕ್ಷರ ದಾಸೋಹ ಯೋಜನೆಯಡಿ ಪೂರೈಕೆಯಾಗುವ ಆಹಾರ ಧಾನ್ಯಗಳಲ್ಲಿ ಭಾರಿ ಪ್ರಮಾಣದಲ್ಲಿ ಅವ್ಯವಹಾರ ನಡೆದಿದೆ ಎಂದು ಸದಸ್ಯ ಬಿ.ಬಿ. ಭಾರತೀಶ್ ಆರೋಪಿಸಿದರು.ನನ್ನ ವ್ಯಾಪ್ತಿಯ ಎಂಟು ಶಾಲೆಗಳಿಗೆ 62,000 ಕೆ.ಜಿ ಅಕ್ಕಿ ಸರಬರಾಜು ಮಾಡಲು ಬೇಡಿಕೆ ಸಲ್ಲಿಸಿದ್ದರೆ, ಕೇವಲ 52,000 ಕೆ.ಜಿ ಸರಬರಾಜು ಮಾಡಲಾಗಿದೆ. ಒಂದೇ ಕ್ಷೇತ್ರದಲ್ಲಿ ಸುಮಾರು 10,000 ಕೆ.ಜಿ. ಅಕ್ಕಿ ಹೇರಾಫೇರಿ ಆಗಿದೆ. ಹೀಗೆ ಬೇಳೆ ಮತ್ತು ಅಡುಗೆ ಅನಿಲ ಸಿಲಿಂಡರ್ ಪೂರೈಕೆಯಲ್ಲೂ ಗೋಲ್‌ಮಾಲ್ ನಡೆದಿದೆ ಎಂದು ಅವರು ಆರೋಪಿಸಿದರು.ಜಿಲ್ಲೆಯ ಬಹುತೇಕ ಶಾಲೆಗಳಲ್ಲೂ ಈ ರೀತಿ ವ್ಯತ್ಯಾಸ ಕಂಡುಬಂದಿದೆ. ಇದನ್ನು ಕ್ರೋಢಿಕರಿಸಿದರೆ ಕೋಟ್ಯಾಂತರ ರೂಪಾಯಿ ಗೋಲ್‌ಮಾಲ್ ನಡೆದಿರುವ ಸಾಧ್ಯತೆ ಇದೆ. ಇದರಲ್ಲಿ ಆಹಾರ ಧಾನ್ಯ ಸರಬರಾಜು ಮಾಡುತ್ತಿರುವ ಕಂಪೆನಿ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಷಾಮೀಲಾಗಿದ್ದಾರೆ ಎಂದು ಆರೋಪಿಸಿದರು.ಶಾಲೆಗಳಿಗೆ ತಲುಪಿಸುವ 60 ಕೆ.ಜಿ. ಚೀಲದಲ್ಲಿ ಕೇವಲ 42, 45 ಕೆ.ಜಿ ಮಾತ್ರ ಅಕ್ಕಿ ಇರುತ್ತದೆ. ಶಾಲೆಗಳಲ್ಲಿ ಚೀಲಗಳನ್ನು ಇಳಿಸುವಾಗ ತೂಕ ಮಾಡಿಕೊಡುವುದಿಲ್ಲ ಎಂದು ಅವರು ಹೇಳಿದರು.ಈ ಪ್ರಕರಣವನ್ನು ಸಿಒಡಿ ತನಿಖೆಗೆ ಒಪ್ಪಿಸಬೇಕೆಂದು ಅವರು ಒತ್ತಾಯಿಸಿದರು. ಇದಕ್ಕೆ ಬಲ್ಲಾರಂಡ ಮಣಿ ಉತ್ತಪ್ಪ, ಉಷಾ ದೇವಮ್ಮ, ಸರಿತಾ ಪೂಣಚ್ಚ ಸಾಥ್ ನೀಡಿದರು. ಅಧ್ಯಕ್ಷ ಶಾಂತೆಯಂಡ ರವಿ ಕುಶಾಲಪ್ಪ ಮಾತನಾಡಿ, ಈ ಪ್ರಕರಣವನ್ನು ಸಿಒಡಿ ಅಥವಾ ಲೋಕಾಯುಕ್ತ ತನಿಖೆಗೆ ವಹಿಸುವ ಅಗತ್ಯವಿಲ್ಲ. ಶಿಕ್ಷಣ ಹಾಗೂ ಆರೋಗ್ಯ ಸ್ಥಾಯಿ ಸಮಿತಿಯೇ ತನಿಖೆ ನಡೆಸಿ, ವರದಿ ನೀಡಲಿ ಎಂದು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.