ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಮೆರೆಯಲಿದೆ‘ಚೇತಕ್’

ಬ್ಯಾಟರಿ ಚಾಲಿತ ಮಾದರಿಯಲ್ಲಿ ಸ್ಕೂಟರ್ ಕ್ಷೇತ್ರಕ್ಕೆ ಮರಳಿದ ಬಜಾಜ್
Last Updated 20 ನವೆಂಬರ್ 2019, 19:30 IST
ಅಕ್ಷರ ಗಾತ್ರ

1576 ನೇ ಇಸವಿಯ ಜೂನ್ 21ರಂದು ನಡೆದ ಹಲ್ಡಿಘಾಟಿ ಕದನದಲ್ಲಿ ಮೇವಾರದ ದೊರೆ ಮಹಾರಾಣ ಪ್ರತಾಪನನ್ನು ತನ್ನ ಪ್ರಾಣವನ್ನು ಲೆಕ್ಕಿಸದೆ ರಕ್ಷಿಸಿದ ಕುದುರೆ ಚೇತಕ್ ಇಂದಿಗೂ ಇತಿಹಾಸದ ಪುಟಗಳಲ್ಲಿ ಅಚ್ಚಾಗಿದೆ. ಈ ಹೆಸರು ಮತ್ತೆ ಜನಪ್ರಿಯತೆ ಪಡೆದದ್ದು, ಬಜಾಜ್‌ ಸ್ಕೂಟರ್ ತಯಾರಿಕಾ ಕಂಪನಿಯಿಂದ. ಬೈಕ್‌ನತ್ತ ಗಮನ ಹರಿಸಿದ ನಂತರ ಮತ್ತೆ ಮರೆಗೆ ಸರಿದಿದ್ದ ಈ ಹೆಸರು, ಈಗ ವಿದ್ಯುತ್ ಚಾಲಿತ ವಾಹನಗಳ ಕಾಲದಲ್ಲಿ ಮತ್ತೆ ಮುನ್ನೆಲೆಗೆ ಬಂದಿದೆ.

ವಿದ್ಯುತ್ ಚಾಲಿತ ದ್ವಿಚಕ್ರ ವಾಹನಗಳು ಹೆಚ್ಚು ಜನಪ್ರಿಯತೆ ಪಡೆದುಕೊಳ್ಳುತ್ತಿರುವ ಕಾಲದಲ್ಲಿ ಮರೆಯಾಗಿದ್ದ ಚೇತಕ್‌ ಬ್ರ್ಯಾಂಡ್‌ ಅನ್ನು ಮತ್ತೆ ಪರಿಚಯಿಸಲು ಬಜಾಜ್ ಮುಂದಾಗಿದೆ. ಚೇಕತ್ ಹೆಸರಿನ ವಿದ್ಯುತ್ ಚಾಲಿತ ಸ್ಕೂಟರ್ ಈಗಾಗಲೇ ಸಾಕಷ್ಟು ಸುದ್ದಿಯಲ್ಲಿದೆ. 2020ರಲ್ಲಿ ಇದು ರಸ್ತೆಗಿಳಿಯುವ ಸಾಧ್ಯತೆ ಇದೆ.

ರೆಟ್ರೊ ವಿನ್ಯಾಸ

ಆಧುನಿಕ ವಿದ್ಯುತ್ ಚಾಲಿತ ಸ್ಕೂಟರ್‌ ಇದಾಗಿದ್ದರೂ, ವಿನ್ಯಾಸದಲ್ಲಿ 60ರ ದಶಕದ ಸ್ಕೂಟರ್‌ ಅನ್ನು ನೆನಪಿಸುವಂತೆ ರೆಟ್ರೊ ಸ್ಪರ್ಶ ನೀಡಲಾಗಿದೆ. ಹಳೇ ಸ್ಕೂಟರ್‌ ನೆನಪಿಸುವಂತಿದ್ದರೂ, ಹೊಸ ಬಗೆಯ ವಿನ್ಯಾಸ ಗಮನ ಸೆಳೆಯುವಂತಿದೆ. ಮಲ್ಟಿ ಸ್ಪೋಕ್ಸ್‌ ಚಕ್ರಗಳು ಹಾಗೂ ಗುಣಮಟ್ಟದ ಮತ್ತು ಆಕರ್ಷಕ ಸೀಟ್‌ ಹೊಸತನದಿಂದ ಕೂಡಿದೆ. ರೆಟ್ರೊ ವಿನ್ಯಾಸ ಈಗ ಹೆಚ್ಚು ಜನಪ್ರಿಯಗೊಂಡಿದ್ದು, ಯಮಹಾ ಫಸಿನೊ, ಸುಜುಕಿ ಆ್ಯಕ್ಸಿಸ್‌ 125 ಮತ್ತು ಹೀರೊ ಪ್ಲೆಷರ್ ಪ್ಲಸ್ 110 ಕೂಡಾ 60–70ರ ದಶಕದ ವಿನ್ಯಾಸವನ್ನೇ ಅಳವಡಿಸಿಕೊಂಡಿರುವುದನ್ನು ಇಲ್ಲಿ ಸ್ಮರಿಸಬಹುದು,

ಗುಣಮಟ್ಟಕ್ಕೆ ಆದ್ಯತೆ

ಗೇರ್ ಸ್ಕೂಟರ್‌ಗಳಿಂದ ಪಲ್ಸರ್‌ನಂತ ಬೈಕ್‌ನತ್ತ ಮುಖ ಮಾಡಿದ ಬಜಾಜ್, ಸ್ಕೂಟರ್‌ ಕ್ಷೇತ್ರದಲ್ಲಿನ ತನ್ನ ಪಾಲನ್ನು ಇತರರಿಗೆ ಬಿಟ್ಟುಕೊಟ್ಟಿತ್ತು. ಈಗ ಮತ್ತೆ ಸ್ಕೂಟರ್ ಕ್ಷೇತ್ರಕ್ಕೆ ಮರಳುತ್ತಿರುವ ಬಜಾಜ್, ವಿದ್ಯುತ್ ಚಾಲಿತ ಎಂಬ ಹೊಸ ಕ್ಷೇತ್ರವನ್ನೇ ಬಳಸಿಕೊಂಡಿದೆ. ಹೀಗಾಗಿ 2 ದಶಕಗಳ ನಂತರ ಬಜಾಜ್ ಸ್ಕೂಟರ್ ಕ್ಷೇತ್ರಕ್ಕೆ ಮರಳುತ್ತಿದ್ದು, ಇದಕ್ಕಾಗಿ ಗುಣಮಟ್ಟದಲ್ಲಿ ರಾಜಿ ಇಲ್ಲದಂತೆ ನೋಡಿಕೊಂಡಿದೆ.

ಫೆದರ್ ಟಚ್ ಸ್ವಿಚ್‌ಗಳು, ಸಂಪೂರ್ಣ ಎಲ್‌ಇಡಿ ದೀಪಗಳು, ಡಿಜಿಟಲ್ ಸ್ಪಿಡೊ ಮೀಟರ್‌ ಅಳವಡಿಸಲಾಗಿದೆ. ಗಟ್ಟಿಮುಟ್ಟಾದ ಲೋಹದ ದೇಹ ಚೇತಕ್‌ನದ್ದು. ಎಲ್ಲಿಯೂ ಲೋಹದ ಜೋಡಣೆ ಕಾಣದಂತ ಕೌಶಲವನ್ನು ಇದರಲ್ಲಿ ಕಾಣಬಹುದು. ಇದರಿಂದಾಗಿ ಸ್ಕೂಟರ್ ಬೆಲೆ ತುಸು ದುಬಾರಿಯಾಗಿದೆ. ಆದರೆ ಅದರಿಂದ ಸ್ಕೂಟರ್‌ನ ಅಂದ ಹೆಚ್ಚಿದೆ.

ಉತ್ತಮ ಮೈಲೇಜ್ ಮತ್ತು ಕಾರ್ಯಕ್ಷಮತೆ

ಚೇತಕ್ ಸ್ಕೂಟರ್ 4 ಕಿಲೋ ವಾಟ್‌ ಎಲೆಕ್ಟ್ರಿಕ್ ಮೋಟಾರು ಹೊಂದಿದೆ. ಐಪಿ67 ಶ್ರೇಣಿಯ ಲಿಥಿಯಂ–ಅಯಾನ್ ಬ್ಯಾಟರಿ ಇದರದ್ದಾಗಿದ್ದು, ಹೊರಗೆ ತೆಗೆದಿಡಬಹುದಾದ ಸೌಕರ್ಯವೂ ಇದೆ. ಜತೆಗೆ ಜಲರಕ್ಷಕ ಗುಣ ಹೊಂದಿದೆ ಎಂದೂ ಹೇಳಲಾಗುತ್ತಿದೆ. ಇಂಧನ ಕ್ಷಮತೆಯ ಇಕೊ ಮತ್ತು ಸ್ಪೋರ್ಟ್ಸ್ ಎಂಬ ಎರಡು ಮಾದರಿ ಇದರಲ್ಲಿ ಅಳವಡಿಸಲಾಗಿದೆ. ಒಂದು ಸಂಪೂರ್ಣ ಚಾರ್ಜ್‌ಗೆ ಎಕೊ ಮೋಡ್‌ನಲ್ಲಿ 95ಕಿ.ಮೀ. ದೂರ ಕ್ರಮಿಸಿದರೆ, ಸ್ಪೋರ್ಟ್ಸ್ ಮೋಡ್‌ನಲ್ಲಿ 85ಕಿ.ಮೀ. ಕ್ರಮಿಸಬಹುದು ಎಂದೆನ್ನಲಾಗಿದೆ. ಎಆರ್‌ಎಐ ಪರೀಕ್ಷಾ ನಿಯಮಗಳಿಗೆ ಅನುಗುಣವಾಗುವಂತೆ ಪುಣೆ ನಗರದ ಸುತ್ತಮುತ್ತ ನಡೆಸಿದ ಪರೀಕ್ಷೆಯ ಅನುಗುಣವಾಗಿ ದಾಖಲಿಸಲಾಗಿದೆ.

ಇದರ ಮತ್ತೊಂದು ವಿಶೇಷವೆಂದರೆ ತಗ್ಗಿನಲ್ಲಿ ನಿಲ್ಲಿಸಿದ ಸ್ಕೂಟರ್‌ ಅನ್ನು ಹಿಮ್ಮುಖವಾಗಿ ಎಳೆಯಲು ಕಷ್ಟವಾದರೆ, ಒಂದು ಬಟನ್‌ ಒತ್ತಿ ಸ್ಕೂಟರ್‌ ಅನ್ನು ನಿಧಾನವಾಗಿ ಹಿಮ್ಮುಖವಾಗಿ ಚಲಿಸುವಂತೆ ಮಾಡಬಹುದು (ಇದು ಹೇಗೆ ಕೆಲಸ ನಿರ್ವಹಿಸಲಿದೆ ಎಂಬುದನ್ನು ಈವರೆಗೂ ಕಂಪನಿ ಹೇಳಿಲ್ಲ. ಬಿಡುಗಡೆ ನಂತರವೇ ತಿಳಿಯಲಿದೆ). ಹಾಗೆಯೇ ಸ್ಕೂಟರ್‌ನಲ್ಲಿ ಬ್ಯಾಟರಿ ಮರು ಚಾರ್ಜ್ ಆಗುವಂತಹ ವ್ಯವಸ್ಥೆಯನ್ನೂ ಅಳವಡಿಸಲಾಗಿದೆ. ಬ್ರೇಕ್ ಹಿಡಿದಾಗ ಕೈನೆಟ್ ಶಕ್ತಿ ಮೂಲಕ ಬ್ಯಾಟರಿ ಮರುಪೂರಣ ತಂತ್ರಜ್ಞಾನ ಅಳವಡಿಸಲಾಗಿದೆ.

ಸಾಮಾನ್ಯವಾಗಿ ಮನೆಯಲ್ಲಿ ಬಳಸುವ 5 ಆ್ಯಂಪ್‌ನ ಸ್ವಿಚ್‌ನಲ್ಲಿ ಬ್ಯಾಟರಿ ಚಾರ್ಜ್ ಮಾಡಬಹುದು. ಆದರೆ ವೇಗದ ಚಾರ್ಜಿಂಗ್‌ನ ಡಿಸಿ ಚಾರ್ಜರ್ ಇಲ್ಲ. ಹೀಗಾಗಿ ಸಂಪೂರ್ಣ ಚಾರ್ಜ್‌ಗೆ 5 ಗಂಟೆ ತೆಗೆದುಕೊಳ್ಳುತ್ತದೆ. ಸಂಪೂರ್ಣ ಚಾರ್ಜ್‌ಗೆ ಎಷ್ಟು ವಿದ್ಯುತ್‌ ತೆಗೆದುಕೊಂಡಿತು ಎಂಬ ಮಾಹಿತಿಯನ್ನೂ ನೀಡಲಿದೆ.

ಆಕರ್ಷಕ ಬೆಲೆ?

ಬಹುತೇಕ ಸ್ಥಳೀಯವಾಗಿಯೇ ಅಭಿವೃದ್ಧಿಗೊಂಡ ಚೇತಕ್‌ನ ಬೆಲೆಯೂ ಆಕರ್ಷಕವಾಗಿರುವ ನಿರೀಕ್ಷೆ ಮಾಡಲಾಗಿದೆ. ಈವರೆಗೂ ಬೆಲೆ ಕುರಿತು ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಬೆಲೆ ಕಡಿತಗೊಳಿಸಲು, ಹಿಂಬದಿಯ ಚಕ್ರಕ್ಕೆ ಡ್ರಮ್ ಬ್ರೇಕ್ ಅಳವಡಿಸಲಾಗಿದೆ, ಜತೆಗೆ ಟಿಎಫ್‌ಟಿ ಪರದೆ ಬದಲು, ಡಿಜಿಟಲ್ ಡಿಸ್‌ಪ್ಲೇ ಹಾಕಲಾಗಿದೆ. ಇವೆಲ್ಲವನ್ನೂ ಒಳಗೊಂಡು ಚೇತಕ್‌ನ ಬೆಲೆ ₹1.5ಲಕ್ಷ ನಿಗದಿಯಾಗುವ ಅಂದಾಜು ಇದೆ. ಸ್ಕೂಟರ್‌ಗೆ ಫೇಮ್‌–2 ಸಬ್ಸಿಡಿ ಕೂಡಾ ಲಭ್ಯವಿದೆ. ಹೀಗಾಗಿ ₹ 1 ಲಕ್ಷದ ಆಸುಪಾಸಿನಲ್ಲಿ ವಿದ್ಯುತ್ ಚಾಲಿತ ಸ್ಕೂಟರ್ ಲಭ್ಯ. ಏಥರ್ ಕಂಪನಿಯ 450 ಎಂಬ ಮಾದರಿ ಕೂಡಾ ಇದೇ ಸಾಮರ್ಥ್ಯದ್ದು, ಇದರ ಬೆಲೆ ಬೆಂಗಳೂರಿನಲ್ಲಿ ₹ 1.13 ಲಕ್ಷವಿದೆ. 2020ರ ಜನವರಿಯಲ್ಲಿ ಪುಣೆಯಲ್ಲಿ ಬಿಡುಗಡೆಯಾಗಲಿದೆ. ನಂತರ ಬೆಂಗಳೂರಿನಲ್ಲಿ ಲಭ್ಯವಾಗಲಿದೆ ಎಂದು ಮೂಲಗಳು ತಿಳಿಸಿವೆ. ಜನವರಿ ನಂತರ ಬಜಾಜ್ ಚೇತಕ್ ಮತ್ತೆ ಸದ್ದು ಮಾಡಲಿದೆ. ‘ಹಮಾರಾ ಬಜಾಜ್‌’ ಎಂಬ ಜಾಹೀರಾತು ಮನೆಮಾತಾಗಿದ್ದ ಕಾಲವೊಂದಿತ್ತು. ಆ ಅಡಿಬರಹವನ್ನು ಕೊಂಚ ಬದಲಾಯಿಸಿ, ‘ಹಮಾರಾ ಕಲ್‌’ ಎಂದು ಸ್ಕೂಟರ್‌ ಪರಿಚಯಿಸಿದೆ.

ಬಜಾಜ್ ಚೇತಕ್
ಇವಿ ಸ್ಕೂಟರ್‌ನ ಆಕರ್ಷಕ ಅಂಶಗಳು

* ಸಾಫ್ಟ್‌ ಟಚ್‌ ಬಟನ್‌ಗಳು

* ಸಂಪೂರ್ಣ ಎಲ್‌ಇಡಿ ಬಳಕೆ

* ಗಟ್ಟಿಮುಟ್ಟಾದ ದೇಹ, ಉತ್ತಮ ಫಿನಿಷ್

*ಹಿಂದೆ ಎಳೆಯಲು ಸಾಧ್ಯವಾಗದಿದ್ದರೆ, ಮೋಟಾರಿನ ಹಿಂಬದಿ ಚಾಲನೆಗೆ ಅವಕಾಶ

* ಹಿಂಬದಿ ಕೂರುವ ಮಹಿಳೆಯರಿಗಾಗಿ ಆಕರ್ಷಕ ಫೂಟರ್‌ರೆಸ್ಟ್

* ಪ್ರತಿ ಚಾರ್ಜ್‌ನಲ್ಲಿ ಎಕೊ ಮೋಡ್‌ನಲ್ಲಿ 95ಕಿ.ಮೀ.,ಸ್ಪೋರ್ಟ್ಸ್ ಮೋಡ್‌ನಲ್ಲಿ 85 ಕಿ.ಮೀ.

* ವಾಟರ್ ಪ್ರೂಫ್‌ ಬ್ಯಾಟರಿ

* ಚಲನೆ ಸಂದರ್ಭದಲ್ಲಿ ಬ್ರೇಕ್ ಹಾಕಿದರೆ ಸೆಲ್ಫ್‌ ಚಾರ್ಜಿಂಗ್ ಮೂಲಕ ಬ್ಯಾಟರಿ ಮರುಪೂರಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT