ಶನಿವಾರ, ಮಾರ್ಚ್ 25, 2023
25 °C

PV Web Exclusive: ಹಾರಿತು ಕಾರು!

ಅಮೃತ ಕಿರಣ್‌ ಬಿ.ಎಂ. Updated:

ಅಕ್ಷರ ಗಾತ್ರ : | |

Prajavani

ನೆಲದಲ್ಲಿ ಓಡಾಡುವ ಮಾನವನಿಗೆ ಹಾರುವ ಕನಸು ಇಂದು ನಿನ್ನೆಯದಲ್ಲ. ವಿಮಾನ, ಹೆಲಿಕಾಪ್ಟರ್‌ಗಳು ಅವನ ಆವಿಷ್ಕಾರದ ಫಲಗಳೇ. ಸ್ಕೈಡೈವಿಂಗ್‌ನಂತಹ ಸಾಹಸ ಕ್ರೀಡೆಗಳಲ್ಲಿ ಕೊಂಚ ಮಟ್ಟಿಗೆ ತನ್ನ ಆಸೆ ತೀರಿಸಿಕೊಂಡಿದ್ದಾನೆ. ಆದರೆ ರಸ್ತೆಯಲ್ಲಿ ಜುಂಯ್ ಎಂದು ಓಡುವ ಕಾರುಗಳನ್ನೇ ಆಗಸದಲ್ಲಿ ಹಾರಾಡುವಂತೆ ಮಾಡುವುದು ಕೂಡ ಅದಮ್ಯ ಅಭಿಲಾಷೆ. ಇದನ್ನು ಸಾಧ್ಯವಾಗಿಸಲು ದಿಗ್ಗಜ ಕಂಪನಿಗಳು ಕೋಟ್ಯಂತರ ರೂಪಾಯಿ ಹಣ ಹೂಡಿವೆ. ಆದರೆ ಯಶ ಕಂಡವರು ವಿರಳ. ಜಪಾನ್‌ ಸ್ಕೈಡ್ರೈವ್ ಎಂಬ ಸಂಸ್ಥೆ ಈ ವಿಚಾರದಲ್ಲಿ ಯಶಸ್ಸು ಕಂಡಂತೆ ತೋರುತ್ತಿದೆ. ಈ ಸಂಸ್ಥೆಯು ಕಳೆದ ವಾರ ಹಾರುವ ಕಾರನ್ನು ಯಶಸ್ವಿಯಾಗಿ ಪ್ರದರ್ಶಿಸಿದೆ. 

ಎಸ್‌ಡಿ–03 ಹೆಸರಿನ ಹಾರುವ ಕಾರಿನ ಪ್ರಾತ್ಯಕ್ಷಿಕೆಯನ್ನು ಕಂಪನಿ ನೀಡಿತು. ಈ ಪುಟ್ಟ ಕಾರು ಆಗಸದಲ್ಲಿ 4 ನಿಮಿಷ ಹಾರಾಡಿ ಭೂಸ್ಪರ್ಶ ಮಾಡಿತು. ಈ ಕಾರು ಬ್ಯಾಟರಿ ಚಾಲಿತ. ಮೇಲಕ್ಕೆ ಹಾರಿಸಲು ಹಾಗೂ ಮುಂದೆ ಚಲಿಸಲು ಶಕ್ತಿ ನೀಡುವ 8 ಮೋಟಾರ್‌ಗಳನ್ನು ಅಳವಡಿಸಲಾಗಿದೆ. ಇದಕ್ಕೆ ರನ್‌ವೇ ಬೇಕಿಲ್ಲ. ಪೈಲಟ್ ಸಹಿತ ಈ ಕಾರು ಹಾರಾಡಿದ್ದು ವಿಶೇಷ.

ನೂರಾರು ಯೋಜನೆ: ಜಗತ್ತಿನಾದ್ಯಂತ 100ಕ್ಕೂ ಹೆಚ್ಚು ಹಾರುವ ಕಾರು ಯೋಜನೆಗಳು ಅಭಿವೃದ್ಧಿ ಹಂತದಲ್ಲಿವೆ. ವಿಮಾನ ತಯಾರಕ ಸಂಸ್ಥೆಗಳಾದ ಏರ್‌ಬಸ್, ಬೋಯಿಂಗ್, ಕಾರು ತಯಾರಕ ಸಂಸ್ಥೆಗಳಾದ ಟೊಯೊಟ, ಹ್ಯುಂಡೈ, ಪೋರ್ಷೆ ಹಾರುವ ಕಾರಿನ ಯೋಜನೆ ಸಿದ್ಧಪಡಿಸುತ್ತಿವೆ. ಆದರೆ ಚಾಲಕ ಸಹಿತ ಹಾರುವ ಕಾರು ಯೋಜನೆಗಳು ಯಶ ಕಂಡಿದ್ದು ಬೆರಳೆಣಿಕೆಯಷ್ಟು ಮಾತ್ರ ಎನ್ನುತ್ತಾರೆ ಸ್ಕೈಡ್ರೈವ್‌ ಸಂಸ್ಥೆಯ  ಕಾರು ಪರೀಕ್ಷೆಗೆ ಒಳಪಡಿಸಿದ ಪೈಲಟ್ ತೊಮೊಹಿರೊ ಫುಕುಜವಾ. 

ಜಪಾನ್ ಸೇರಿದಂತೆ ಕೆಲವು ಸರ್ಕಾರಗಳು ಇಂತಹ ವಿನೂತನ ಯೋಜನೆಗಳಿಗೆ ಬೆಂಬಲ ಕೊಡುತ್ತಿವೆ. ಭವಿಷ್ಯದಲ್ಲಿ ಹಾರುವ ಕಾರುಗಳು ಕಾರ್ಯರೂಪಕ್ಕೆ ಬಂದರೆ, ನಗರಗಳಲ್ಲಿ ಅಲ್ಪ ದೂರದ ಟ್ಯಾಕ್ಸಿ ಸೇವೆ ಒದಗಿಸಲಿವೆ. ತುರ್ತು ಸ್ಥಿತಿಯಲ್ಲಿ ಇವು ಸಮಯವನ್ನು ಉಳಿತಾಯ ಮಾಡುತ್ತವೆ. ರಸ್ತೆ ಮೂಲಕ ತಲುಪಲಾಗದ ಸ್ಥಳಗಳಿಗೆ ಇವುಗಳನ್ನು ಕೊಂಡೊಯ್ಯಬಹುದು. 

ಸವಾಲುಗಳು ನೂರಾರು: ಹಾರುವ ಕಾರುಗಳನ್ನು ನಿಯಂತ್ರಿಸುವುದು ಬಹುದೊಡ್ಡ ಸವಾಲಾಗಿದೆ. ಬಹುತೇಕರು ಇದನ್ನು ಮಾಡಲಾರರು. ಜಪಾನ್‌ನಲ್ಲಿ ನಡೆದ ಪ್ರಾತ್ಯಕ್ಷಿಕೆಯಲ್ಲಿ ಸ್ವಯಂಚಾಲಿತ ಕಂಪ್ಯೂಟರ್ ಸಿಸ್ಟಮ್‌ ಮೂಲಕ ಹಾರಾಟವನ್ನು ನಿಯಂತ್ರಿಸಲಾಯಿತು. ನೆಲದ ಮೇಲಿಂದ ಕಾರನ್ನು ನಿಯಂತ್ರಿಸಲು ಮತ್ತೊಂದು ತಂಡ ಸಿದ್ಧವಾಗಿತ್ತು. 

ಸುರಕ್ಷತೆಯೇ ಇಲ್ಲಿನ ಮುಖ್ಯ ಸಮಸ್ಯೆ. ಹಾರಾಟದ ವೇಳೆ ಮೋಟಾರ್ ಕೈಕೊಟ್ಟರೆ ಹೇಗೆ? ಆಗ ಕಾರಿನಲ್ಲಿರುವ ಜನರು ಮಾತ್ರವಲ್ಲದೆ, ಅದು ಬಿದ್ದ ಜಾಗದಲ್ಲಿರುವ ಜನರಿಗೂ ಹಾನಿ ಖಚಿತ. ಹೀಗಾಗಿ ಎಸ್‌ಡಿ–03 ಹಾರುವ ಕಾರಿಗೆ ಸುರಕ್ಷತೆ ದೃಷ್ಟಿಯಿಂದ 8 ಮೋಟಾರ್‌ಗಳನ್ನು ಅಳವಡಿಸಲಾಗಿದೆ. 

ಹಾರುವ ಕಾರುಗಳಿಂದಾಗಿ ವಾಹನದ ದಟ್ಟಣೆಗೆ ಪರಿಹಾರ ಸಿಕ್ಕು, ಸಾಕಷ್ಟು ಸಮಯ ಉಳಿತಾಯವಾಗಲಿದೆ. ಆದರೆ ಹಾರಾಡುವ ಕಾರುಗಳಿಗೆಂದೇ ಹೊಸದಾಗಿ ಏರ್ ಟ್ರಾಫಿಕ್ ನಿಯಂತ್ರಣ ವ್ಯವಸ್ಥೆ ಜಾರಿಯಾಗಬೇಕಿದೆ. ಇದು ಸುಲಭದ ಮಾತಲ್ಲ. 

ಈ ಕಾರುಗಳು ಹೆಚ್ಚು ಶಕ್ತಿಯನ್ನ ಬೇಡುತ್ತವೆ. ಅಂದರೆ ಹೆಲಿಕಾಪ್ಟರ್‌ಗಿಂತ ಕಡಿಮೆ, ಕಾರುಗಳಿಗಿಂತ ಹೆಚ್ಚು. ಹಾಗೆ ನೋಡಿದರೆ ವಿಮಾನಗಳು ಹೆಚ್ಚು ಜನರನ್ನು ಕೊಂಡೊಯ್ಯುತ್ತವೆ. ಹಾರುವ ಕಾರುಗಳು ವಿದ್ಯುತ್ ಚಾಲಿತ ಆಗಿದ್ದು, ವಾಯುಮಾಲಿನ್ಯ ಉಂಟುಮಾಡುವುದಿಲ್ಲ. 

ಕೊನೆಯದಾಗಿ ಹಾರುವ ಕಾರಿನ ದರವನ್ನು ನೀವು ಕೇಳಿಬಿಡಿ. ನಿಜ ಇವು ದುಬಾರಿಯೇ. ಒಂದೊಮ್ಮೆ ಈ ಕಾರುಗಳು ಸಿದ್ಧವಾದರೆ, ಪ್ರತಿ ಕಾರಿಗೆ ₹2.25 ಕೋಟಿಯಿಂದ 3.75 ಕೋಟಿ ದರ ನಿಗದಿಪಡಿಸಲು ಸ್ಕೈಡ್ರೈವ್ ನಿರ್ಧರಿಸಿದೆ. 

2023ರ ವೇಳೆಗೆ ಇಬ್ಬರು ಪ್ರಯಾಣಿಕರನ್ನು ಹೊತ್ತು ಈ ಕಾರುಗಳು ಹಾರಾಟ ನಡೆಸಲಿವೆ ಎಂದು ಫುಕುಜಾವ‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮುಂದಿನ ದಿನಗಳು ಹಾರುವ ಕಾರುಗಳದ್ದೇ ಜಮಾನ ಎನ್ನುವುದು ಅವರ ವಿಶ್ವಾಸದ ನುಡಿ.

ವಿಮಾನ ಹಾರಾಟ ಕೂಡ ಆರಂಭದಲ್ಲಿ ದೊಡ್ಡ ದೊಡ್ಡ ಸವಾಲುಗಳನ್ನ ಎದುರಿಸಿತ್ತು. ಸುದೀರ್ಘ ಸಂಶೋಧನೆಯ ಬಳಿಕ ಹಾರಾಟ ಸಾಧ್ಯವಾಯಿತು.  ಹಾಗೆಯೇ ಹಾರುವ ಕಾರುಗಳ ಮುಂದಿರುವ ಸವಾಲುಗಳೂ ಕರಗಲಿವೆ ಎಂಬುದು ಈ ಉದ್ಯಮ ವಲಯದ ವಿಶ್ವಾಸ. 

ಹಾರುವ ಕಾರುಗಳಲ್ಲಿ ಈವರೆಗೆ ಅಭೂತಪೂರ್ವ ಯಶಸ್ಸು ಸಾಧಿಸಿರುವುದು ಚೀನಾದ ಇಹ್ಯಾಂಗ್ ಕಂಪನಿ. ಎರಡು ಮಾದರಿಗಳನ್ನು ಕಂಪನಿ ಅಭಿವೃದ್ಧಿಪಡಿಸಿದ್ದು, ಚೀನಾದಲ್ಲಿ ಕೆಲವು ಉದ್ದೇಶಗಳಿಗೆ ಬಳಸಲು ಒಪ್ಪಿಗೆ ಸಿಕ್ಕಿದೆ. ಜಗತ್ತಿನ ಕೆಲವು ಕಡೆ ಪ್ರಾಯೋಗಿಕ ಪರೀಕ್ಷೆಗೆ ಅನುಮತಿ ಸಿಕ್ಕಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು