ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದಲ್ಲಿ 2021ಕ್ಕೆ ಓಲಾದಿಂದ ಎಲೆಕ್ಟ್ರಿಕ್‌ ದ್ವಿಚಕ್ರ ವಾಹನ 

Last Updated 27 ಮೇ 2020, 9:06 IST
ಅಕ್ಷರ ಗಾತ್ರ
ADVERTISEMENT
""

ನವದೆಹಲಿ: ಓಲಾ ಎಲೆಕ್ಟ್ರಿಕ್‌ ಮೊಬಿಲಿಟಿ (ಒಇಎಂ) ಆಂಸ್ಟರ್ಡ್ಯಾಮ್‌ ಮೂಲದ ಎಟೆರ್ಗೊ ಬಿವಿ ಸಂಸ್ಥೆ ಸ್ವಾಧೀನ ಪಡಿಸಿಕೊಂಡಿದೆ. ಈ ಮೂಲಕ ಭಾರತದ ಓಲಾ ಕಂಪನಿ ಜಾಗತಿಕ ಎಲೆಕ್ಟ್ರಿಕ್‌ ದ್ವಿಚಕ್ರ ವಾಹನಗಳ ಮಾರುಕಟ್ಟೆ ಪ್ರವೇಶಿಸಲಿದೆ.

ಭಾರತದಲ್ಲಿ 2021ಕ್ಕೆ ಎಲೆಕ್ಟ್ರಿಕ್‌ ದ್ವಿಚಕ್ರ ವಾಹನ ಬಿಡುಗಡೆ ಮಾಡುವ ಉದ್ದೇಶ ಹೊಂದಿರುವ ಓಲಾ, ಎಟೆರ್ಗೊದೊಂದಿಗಿನ ಒಪ್ಪಂದ ಮೌಲ್ಯವನ್ನು ಬಹಿರಂಗಪಡಿಸಿಲ್ಲ. ಓಲಾ ಎಲೆಕ್ಟ್ರಿಕ್‌ ಮೊಬಿಲಿಟಿಯ ಎಂಜಿನಿಯರಿಂಗ್‌ ಮತ್ತು ವಿನ್ಯಾಸ ಸಾಮರ್ಥ್ಯ ಈ ಒಪ್ಪಂದದಿಂದ ಹೆಚ್ಚಲಿದೆ.

ಆಂಸ್ಟರ್ಡ್ಯಾಮ್‌ನಲ್ಲೇ ಎಟೆರ್ಗೊ ತಂಡದ ಕಾರ್ಯಗಳು ಮುಂದುವರಿಯಲಿವೆ. 2014ರಲ್ಲಿ ಸ್ಥಾಪನೆಯಾದ ಎಟೆರ್ಗೊ, ಎಲೆಕ್ಟ್ರಿಕ್‌ ದ್ವಿಚಕ್ರ ವಾಹನ 'ಆ್ಯಪ್‌ಸ್ಕೂಟರ್‌' ಅಭಿವೃದ್ಧಿ ಪಡಿಸಿದೆ. ತೆಗೆದು ಬದಲಿಸಬಹುದಾದ ಅತ್ಯಂತ ಸಮರ್ಥ ಬ್ಯಾಟರಿಗಳನ್ನು ಒಳಗೊಂಡಿದ್ದು, ಒಂದು ಬಾರಿ ಪೂರ್ಣ ಚಾರ್ಜ್‌ ಮಾಡಿದರೆ 240 ಕಿ.ಮೀ. ಕ್ರಮಿಸಬಹುದು.

'ಯುರೋಪಿಯನ್‌ ವಿನ್ಯಾಸ, ಎಂಜಿನಿಯರಿಂಗ್‌ ಒಡಂಬಡಿಕೆ ಹಾಗೂ ಭಾರತದ ತಯಾರಿಕೆ ಮತ್ತು ಪೂರೈಕೆಯ ಮೂಲಕ ಓಲಾ ಎಲೆಕ್ಟ್ರಿಕ್‌ 100 ಮಿಲಿಯನ್‌ ಜಾಗತಿಕ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಬದಲಾವಣೆ ತರುವ ಉದ್ದೇಶ ಹೊಂದಿದೆ. ಭಾರತದ 2 ಕೋಟಿ ದ್ವಿಚಕ್ರ ವಾಹನ ಮಾರುಕಟ್ಟೆಯನ್ನು ಪರಿಸರ ಸ್ನೇಹಿ ಇಂಧನ ವ್ಯವಸ್ಥೆಗೆ ಪರಿವರ್ತಿಸುವ ಗುರಿ ಇರುವುದಾಗಿ ಓಲಾ ಎಲೆಕ್ಟ್ರಿಕ್‌ ಹೇಳಿದೆ.

ನಗರ ಸಂಚಾರದಲ್ಲಿ ಎಲೆಕ್ಟ್ರಿಕ್‌ ದ್ವಿಚಕ್ರ ವಾಹನಗಳು ಪರಿಣಾಮಕಾರಿ ಹಾಗೂ ಪರಿಸರ ಸ್ನೇಹಿ ಮಾರ್ಗವಾಗಿದೆ. ಕೋವಿಡ್‌–19 ನಂತರದ ದಿನಗಳಲ್ಲೂ ಇದು ಮತ್ತಷ್ಟು ಪ್ರಸ್ತುತವಾಗಲಿದೆ. ಓಲಾ ದೇಶದೆಲ್ಲೆಡೆ ಚಾರ್ಜಿಂಗ್‌ ಹಾಗೂ ಬ್ಯಾಟರಿ ಬದಲಿಸಿಕೊಳ್ಳುವ ಸಂಪರ್ಕ ವ್ಯವಸ್ಥೆಯನ್ನುಅಭಿವೃದ್ಧಿ ಪಡಿಸುವ ಯೋಜನೆ ಹೊಂದಿದ್ದು, ಪ್ರಸ್ತುತ ಕೆಲವು ಪ್ರಾಯೋಗಿಕ ಕಾರ್ಯಕ್ರಮಗಳನ್ನು ನಡೆಸುತ್ತಿದೆ.

ಭವಿಷ್ಯದಲ್ಲಿ ಸಂಚಾರ ವ್ಯವಸ್ಥೆಯು ಎಲೆಕ್ಟ್ರಿಕ್ ವಾಹನಗಳದ್ದೇ ಆಗಲಿದೆ. ಜಗತ್ತಿನಾದ್ಯಂತ ಪ್ರತಿ ವರ್ಷ ಕಾರುಗಳಿಗೆ ಹೋಲಿಸಿದರೆ ದುಪ್ಪಟ್ಟು ಸಂಖ್ಯೆಯ ದ್ವಿಚಕ್ರ ವಾಹನಗಳು ಮಾರಾಟಗೊಳ್ಳುತ್ತಿವೆ ಎಂದು ಓಲಾ ಎಲೆಕ್ಟ್ರಿಕ್‌ನ ಸಂಸ್ಥಾಪಕ ಹಾಗೂ ಮುಖ್ಯಸ್ಥ ಭವಿಷ್‌ ಅಗರ್‌ವಾಲ್‌ ಹೇಳಿದ್ದಾರೆ.

ಆ್ಯಪ್‌ಸ್ಕೂಟರ್‌ನಲ್ಲಿರುವ ಸೌಲಭ್ಯಗಳು

ಎಲೆಕ್ಟ್ರಿಕ್‌ ಇಂಧನದೊಂದಿಗೆ ಡಿಜಿಟಲ್‌ ಸಾಧನಗಳೊಂದಿಗೆ ಸಂಪರ್ಕ ಹೊಂದುವ ಸೌಲಭ್ಯಗಳಿಂದಾಗಿ ಎಲೆಕ್ಟ್ರಿಕ್‌ ದ್ವಿಚಕ್ರ ವಾಹನಗಳು ನಗರ ಭಾಗಗಳಲ್ಲಿ ನೆಚ್ಚಿನ ಸಾರಿಗೆ ವ್ಯವಸ್ಥೆಯಾಗಲಿದೆ. ಭಾರತದಲ್ಲಿಯೇ ಸಿದ್ಧಪಡಿಸಲಾಗುವ ಎಲೆಕ್ಟ್ರಿಕ್‌ ಸ್ಕೂಟರ್‌ಗಳಲ್ಲಿ ಜಗತ್ತಿನ ಸಮರ್ಥ ಎಂಜಿನಿಯರಿಂಗ್‌ ಹಾಗೂ ವಿನ್ಯಾಸ ಸಾಧ್ಯತೆಗಳನ್ನು ಇರುವಂತೆ ಅಭಿವೃದ್ಧಿ ಪಡಿಸುವ ಯೋಜನೆ ಹೊಂದಿದೆ.

ಕಳೆದ ವರ್ಷ ಓಲಾ, ಸಾಫ್ಟ್‌ ಬ್ಯಾಂಕ್‌ನಿಂದ 250 ಮಿಲಿಯನ್‌ ಅಮೆರಿಕನ್‌ ಡಾಲರ್‌ ಪಡೆದಿದೆ ಹಾಗೂ ಟೈಗರ್‌ ಗ್ಲೋಬಲ್‌ ಮತ್ತು ಮ್ಯಾಟ್ರಿಕ್ಸ್‌ ಇಂಡಿಯಾ ಮೂಲಕ ₹400 ಕೋಟಿ ಸಂಗ್ರಹಿಸಿದೆ. ಟಾಟಾ ಸನ್ಸ್‌ ಮುಖ್ಯಸ್ಥ ರತನ್‌ ಟಾಟಾ ಸಹ ಓಲಾ ಕಂಪನಿಯಲ್ಲಿ ಹೂಡಿಕೆ ಮಾಡಿದ್ದಾರೆ.

2018ರಲ್ಲಿ 'ಮಿಷನ್‌ ಎಲೆಕ್ಟ್ರಿಕ್‌' ಘೋಷಿಸಿದ ಓಲಾ, 2021ರ ವೇಳೆಗೆ 10 ಲಕ್ಷ ಎಲೆಕ್ಟ್ರಿಕ್‌ ವಾಹನಗಳನ್ನು ಭಾರತದ ರಸ್ತೆಗಳಲ್ಲಿ ಇಳಿಸುವ ಗುರಿ ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT