ಶುಕ್ರವಾರ, ಅಕ್ಟೋಬರ್ 23, 2020
21 °C
ಭಾರತಕ್ಕೆ ವಿದಾಯ ಹೇಳುವ ಘೋಷಣೆ ಮಾಡಿದ ಅಮೆರಿಕದ ಕಂಪನಿ

Pv Web Exclusive | ಹಾರ್ಲೆ ಡೇವಿಡ್‌ಸನ್‌: ದಶಕದಲ್ಲಿ ಕಮರಿದ ಕನಸು

ಸೂರ್ಯನಾರಾಯಣ ವಿ. Updated:

ಅಕ್ಷರ ಗಾತ್ರ : | |

ಜಗತ್ತಿನ ದೊಡ್ಡ ದ್ವಿಚಕ್ರವಾಹನಗಳ ಮಾರುಕಟ್ಟೆಯಲ್ಲಿ ಒಂದಾದ ಭಾರತದಲ್ಲಿ ಭದ್ರವಾಗಿ ತಳ ಊರುವ ಅಮೆರಿಕದ ವಿಲಾಸಿ ಬೈಕ್‌ಗಳ ತಯಾರಿಕಾ ಸಂಸ್ಥೆ ಹಾರ್ಲೆ ಡೇವಿಡ್‌ಸನ್‌ ಕನಸು, ಹತ್ತೇ ವರ್ಷಗಳಲ್ಲಿ ಕರಗಿದೆ‌. 

ಭಾರತದಲ್ಲಿ ಬೈಕ್‌ಗಳ ತಯಾರಿಕೆ ಮತ್ತು ಮಾರಾಟ ಸ್ಥಗಿತಗೊಳಿಸುವ ಘೋಷಣೆಯನ್ನು ಕಂಪನಿ ಮಾಡಿದೆ. ಸದ್ಯ ದೇಶದಲ್ಲಿರುವ ಡೀಲರ್‌ಗಳ ಜಾಲ ಸಕ್ರಿಯವಾಗಿರಲಿದ್ದು, ಒಪ್ಪಂದ ಮುಗಿಯುವರೆಗೂ ಮಾರಾಟ ಹಾಗೂ ಇತರ ಸೇವೆಗಳನ್ನು ಒದಗಿಸಲಿವೆ. ಭಾರತಕ್ಕಾಗಿ ಹೊಸ ವ್ಯವಹಾರ ಮಾದರಿ (ಬಿಸಿನೆಸ್‌ ಮಾಡೆಲ್‌) ಅನುಸರಿಸುವುದಾಗಿ ಹೇಳಿದೆ. 

ಇದೇ 24ರಂದು ಸಂಸ್ಥೆಯು ಬಿಡುಗಡೆ ಮಾಡಿರುವ ಹೇಳಿಕೆ ಪ್ರಕಾರ, ಹರಿಯಾಣದ ಬಾವಲ್‌ನಲ್ಲಿರುವ ಬೈಕ್‌ ತಯಾರಿಕಾ ಘಟಕವನ್ನು ಅದು ಮುಚ್ಚಲಿದೆ. ಗುರುಗ್ರಾಮದಲ್ಲಿರುವ ಮುಖ್ಯ ಕಚೇರಿಯ ಗಾತ್ರವನ್ನು ಗಮನಾರ್ಹವಾಗಿ ಕುಗ್ಗಿಸಲಿದೆ. 

ಮುಂದಿನ ದಿನಗಳಲ್ಲಿ ಭಾರತದಲ್ಲಿ ತನ್ನ ಉತ್ಪನ್ನಗಳನ್ನು ಮಾರಾಟ ಮಾಡುವುದಕ್ಕಾಗಿ, ಬೈಕ್‌ಗಳ ತಯಾರಿಕೆ, ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಹೀರೊ ಕಂಪನಿಯೊಂದಿಗೆ ಹಾರ್ಲೆ ಡೇವಿಡ್‌ಸನ್‌ ಮಾತುಕತೆ ನಡೆಸುತ್ತಿದೆ ಎಂದು ಹೇಳಲಾಗುತ್ತಿದೆ. ಆದರೆ, ಎರಡೂ ಕಂಪನಿಗಳು ಇದನ್ನು ದೃಢಪಡಿಸಿಲ್ಲ, ನಿರಾಕರಿಸಿಯೂ ಇಲ್ಲ. 

ಸ್ಟ್ರೀಟ್‌ 750, ಐರನ್ 883‌, ಫ್ಯಾಟ್‌ ಬಾಯ್‌ ಸೇರಿದಂತೆ ಹಾರ್ಲೆ ಡೇವಿಡ್‌ಸನ್‌ ಕಂಪನಿಯ ಹಲವು ಮಾಡೆಲ್‌ಗಳು ಭಾರತದಲ್ಲಿ ಲಭ್ಯವಿವೆ. ದುಬಾರಿಯಾಗಿರುವ ಈ ಬೈಕ್‌ಗಳ ಬೆಲೆ ₹5.5 ಲಕ್ಷದಿಂದ ಆರಂಭವಾಗುತ್ತದೆ. 

10 ವರ್ಷಗಳ ಪಯಣ: ಐಷಾರಾಮಿ ಬೈಕ್‌ಗಳಿಗೆ ಹೆಸರಾಗಿರುವ ಹಾರ್ಲೆ ಡೇವಿಡ್‌ ಸನ್‌ 2009ರಲ್ಲಿ ಭಾರತದಲ್ಲಿ ಕಾರ್ಯಾಚರಣೆ ಆರಂಭಿಸುವ ಘೋಷಣೆ ಮಾಡಿತ್ತು. 2010ರಲ್ಲಿ ಮಾರುಕಟ್ಟೆಯನ್ನೂ ಪ್ರವೇಶಿಸಿತ್ತು.

ದ್ವಿಚಕ್ರವಾಹನಗಳು ಹೆಚ್ಚು ಜನಪ್ರಿಯವಾಗಿರುವ, ವೇಗವಾಗಿ ಆರ್ಥಿಕವಾಗಿ ಪ್ರಗತಿಹೊಂದುತ್ತಿರುವ ಭಾರತದಲ್ಲಿ ಹಾರ್ಲೆ ಡೇವಿಡ್‌ಸನ್‌ ಬ್ರ್ಯಾಂಡ್‌ನ ಛಾಪನ್ನು ಒತ್ತಬಹುದು ಎಂಬ ವಿಶ್ವಾಸದಿಂದ ಬಾವಲ್‌ನಲ್ಲಿ 2011ರಲ್ಲಿ ಬೈಕ್‌ ತಯಾರಿಕಾ ಘಟಕವನ್ನು ತೆರೆಯಿತು. ಇದು ಬಿಡಿ ಭಾಗಗಳ ಜೋಡಣಾ ಘಟಕವಾಗಿತ್ತು. ಅಮೆರಿಕದಿಂದ ಬಿಡಿಭಾಗಗಳನ್ನು ಆಮದು ಮಾಡಿಕೊಂಡು ಭಾರತದ ಗ್ರಾಹಕರಿಗಾಗಿ ಇಲ್ಲಿ ಜೋಡಣೆ ಮಾಡಲಾಗುತ್ತಿತ್ತು. ಗುರುಗ್ರಾಮದಲ್ಲಿರುವ ಪ್ರಧಾನ ಕಚೇರಿ ಸೇರಿದಂತೆ ದೇಶದಾದ್ಯಂತ ಪ್ರಮುಖ ನಗರಗಳಲ್ಲಿ 33 ಡೀಲರ್‌ಗಳನ್ನು ಹೊಂದಿದ್ದ ಕಂಪನಿಯ ಗ್ರಾಹಕರಲ್ಲಿ ಸಿರಿವಂತರದ್ದೇ ಸಿಂಹಪಾಲು.

ದೇಶದ ದ್ವಿಚಕ್ರವಾಹನದ ಮಾರುಕಟ್ಟೆಯಲ್ಲಿ ಭದ್ರವಾಗಿ ತಳವೂರಲು ಬಯಸಿದ್ದ ಹಾರ್ಲೆ ಡೇವಿಡ್‌ಸನ್‌, ದಶಕದ ಅವಧಿಯಲ್ಲಿ 25 ಸಾವಿರ ಬೈಕ್‌ಗಳನ್ನು ಮಾತ್ರ ಮಾರಾಟ ಮಾಡಿದೆ. ಮಾರಾಟದಲ್ಲಿ ನಿರೀಕ್ಷಿತ ಪ್ರಗತಿ ಕಾಣದಿರುವ ಕಾರಣಕ್ಕೆ ಭಾರತದಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಲು ಅದು ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ. 

ಸುಂಕ, ತೆರಿಗೆಯ ಹೊಡೆತ: ವಿಲಾಸಿ ದ್ವಿಚಕ್ರವಾಹನಗಳ ಪೈಕಿ ಹಾಗೂ ಬೈಕ್‌ ಪ್ರಿಯರ ಮನದಲ್ಲಿ ವಿಶೇಷ ಸ್ಥಾನಮಾನಗಳಿಸಿರುವ ಹಾರ್ಲೆ ಡೇವಿಡ್‌ಸನ್ ಭಾರತದಲ್ಲಿ ಹಿನ್ನಡೆ ಅನುಭವಿಸಲು ಕಾರಣ ಹುಡುಕತ್ತಾ ಹೋದರೆ, ಮೊದಲು ಎದುರಾಗುವುದು, ಬೈಕ್‌ಗಳ ಮೇಲೆ ವಿಧಿಸಲಾಗುತ್ತಿದ್ದ ತೆರಿಗೆ. ಮಿತಿ ಮೀರಿದ ಆಮದು ಸುಂಕ ಹಾಗೂ ಇತರ ತೆರಿಗೆಗಳು ಕಂಪನಿಗೆ ದೊಡ್ಡ ಹೊಡೆತ ನೀಡುತ್ತಿತ್ತು.

ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಬೈಕ್‌ಗಳ ಮೇಲೆ ಹೆಚ್ಚು ತೆರಿಗೆ ವಿಧಿಸುತ್ತಿರುವುದಕ್ಕೆ ಬಹಿರಂಗವಾಗಿ ಆಕ್ಷೇಪ ವ್ಯಕ್ತಪಡಿಸಿದ್ದರು. 2019ರವರೆಗೂ ಅಮೆರಿಕದಿಂದ ಆಮದು ಮಾಡಿಕೊಳ್ಳಲಾಗುತ್ತಿದ್ದ ಹೈ– ಎಂಡ್‌ ಬೈಕ್‌ಗಳಿಗೆ ಶೇ 100ರಷ್ಟು ಸುಂಕ ವಿಧಿಸಲಾಗುತ್ತಿತ್ತು.  ಟ್ರಂಪ್‌ ಅವರು ಪ್ರಧಾನಿ ಮೋದಿ ಅವರೊಂದಿಗೆ ಮಾತುಕತೆ ನಡೆಸಿದ ಬಳಿಕ 2019ರಲ್ಲಿ ಇದನ್ನು ಶೇ 50ರಷ್ಟು ಕಡಿತಗೊಳಿಸಲಾಗಿತ್ತು. ಇದರ ಬಗ್ಗೆಯೂ ಟ್ರಂಪ್‌ ಅವರು ಅಸಮಧಾನ ವ್ಯಕ್ತಪಡಿಸಿದ್ದರು. ‘ನಾವು ಭಾರತದಿಂದ ತರಿಸಿಕೊಳ್ಳುವ ಬೈಕ್‌ಗಳಿಗೆ ತೆರಿಗೆಯನ್ನೇ ವಿಧಿಸುವುದಿಲ್ಲ. ಆದರೆ, ಅಮೆರಿಕದಿಂದ ರಫ್ತು ಮಾಡುವ ಬೈಕ್‌ಗಳಿಗೆ ಶೇ 50 ರಷ್ಟು ತೆರಿಗೆ ವಿಧಿಸಲಾಗುತ್ತಿದೆ. ಇದನ್ನು ಒಪ್ಪಲು ಸಾಧ್ಯವಿಲ್ಲ’ ಎಂದು ಹೇಳಿದ್ದರು. 

ಅಗ್ಗದ ಬೈಕ್‌, ಹೆಚ್ಚು ಮೈಲೇಜ್: ಭಾರತೀಯ ಗ್ರಾಹಕರ ಮನಃಸ್ಥಿತಿಯೂ ಹಾರ್ಲೆ ಡೇವಿಡ್‌ಸನ್‌ನ ಮಾರುಕಟ್ಟೆ ವೈಫಲ್ಯಕ್ಕೆ ಇನ್ನೊಂದು ಕಾರಣ ಎಂದು ಹೇಳುತ್ತಾರೆ ಆಟೊ ಮೊಬೈಲ್‌ ಕ್ಷೇತ್ರವನ್ನು ಬಲ್ಲವರು. ಭಾರತದಲ್ಲಿ ಬೈಕ್,‌ ಸ್ಕೂಟರ್‌ಗಳು ಹೆಚ್ಚು ಜನಪ್ರಿಯವಾಗಿದ್ದರೂ, ಜನರು ಕಡಿಮೆ ಬೆಲೆಯ ಮತ್ತು ಹೆಚ್ಚು ಮೈಲೇಜ್‌ ಕೊಡುವ ದ್ವಿಚಕ್ರವಾಹನಗಳನ್ನೇ ಖರೀದಿಸುತ್ತಾರೆ. ಶೋರೂಂಗಳಿಗೆ ಭೇಟಿ ನೀಡಿದ ವೇಳೆ ಬಹುತೇಕ ಜನರು ಕೇಳುವ ಮೊದಲ ಪ್ರಶ್ನೆ, ‘ಮೈಲೇಜ್‌ ಎಷ್ಟು ಕೊಡುತ್ತದೆ’ ಎಂದು. 

ದ್ವಿಚಕ್ರವಾಹನಗಳ ಮಾರುಕಟ್ಟೆ, ಅಥವಾ ರಸ್ತೆಯಲ್ಲಿ ಸಂಚರಿಸುವ ಬೈಕ್‌ ಸ್ಕೂಟರ್‌ಗಳನ್ನು ಗಮನಿಸಿದರೆ ಸಾಕು. ಬಹುತೇಕ ಬೈಕ್‌, ಸ್ಕೂಟರ್‌ಗಳು ₹60 ಸಾವಿರದಿಂದ ₹1 ಲಕ್ಷದ ಒಳಗಿನ ಬೆಲೆಯವು. ಇವುಗಳಿಗೆ ಜನಸಾಮಾನ್ಯರೇ ಗ್ರಾಹಕರು. ಹಾರ್ಲೆ ಡೇವಿಡ್‌ಸನ್ ಬೈಕ್‌ಗಳು ಜನಸಾಮಾನ್ಯರ ಕೈಗೆ‌‌ಟುಕುವಂತದ್ದಲ್ಲ. ಹಾರ್ಲೆ ಡೇವಿಡ್‌ಸನ್‌ ಬಿಡಿ, ಇತರ ಕಂಪನಿಗಳ ದುಬಾರಿ ಬೈಕ್‌ಗಳಿಗೂ ದೇಶದಲ್ಲಿ ಹೆಚ್ಚಿನ ಬೇಡಿಕೆ ಇಲ್ಲ.  

ಆದರೆ, ಇತ್ತೀಚಿನ ವರ್ಷಗಳಲ್ಲಿ ಯುವ ಜನತೆ ಸ್ಪೋರ್ಟ್ಸ್, ಕ್ರೂಸರ್‌ ಬೈಕ್‌ಗಳತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ₹2.5 ಲಕ್ಷದಿಂದ ₹3 ಲಕ್ಷದವರೆಗಿನ ಬೆಲೆಯುಳ್ಳ ಬೈಕ್‌ಗಳನ್ನು ಖರೀದಿಸುತ್ತಿದ್ದಾರೆ. ಕೊಂಚ ಐಷಾರಾಮಿ, ಸ್ಪೋರ್ಟ್ಸ್‌ ಬೈಕ್‌ಗಳನ್ನು ಬಯಸುವ ಮಧ್ಯಮವರ್ಗದ ಯುವಕರಿಗೂ ಹಾರ್ಲೆ ಡೇವಿಡ್‌ಸನ್‌ ಕೈಗೆಟುಕದ ಹುಳಿ ದ್ರಾಕ್ಷಿ. ಕಾರಣ ದುಬಾರಿ ಬೆಲೆ.    

ಭಾರತದಲ್ಲಿರುವ ವಾಹನ ದಟ್ಟಣೆ, ರಸ್ತೆಯ ಗುಣಮುಟ್ಟ, ದುಬಾರಿ ಬಿಡಿ ಭಾಗಗಳು, ಪ್ರಮುಖ ನಗರಗಳಲ್ಲಿ ಮಾತ್ರ ಶೋ ರೂಂ ಇರುವುದು... ಇವೆಲ್ಲವೂ ಬ್ರ್ಯಾಂಡ್‌ನ ಹಿನ್ನಡೆಗೆ ಕಾರಣ ಎಂದು ಹೇಳುತ್ತಾರೆ ತಜ್ಞರು. 

‘ಮೇಕ್‌ ಇನ್‌ ಇಂಡಿಯಾ’ಗೆ ಹಿನ್ನಡೆ

ಹಾರ್ಲೆ ಡೇವಿಡ್‌ಸನ್‌ ಭಾರತಕ್ಕೆ ವಿದಾಯ ಹೇಳುತ್ತಿರುವುದು ಪ್ರಧಾನಿ ನರೇಂದ್ರ ಮೋದಿ ಅವರ ‘ಮೇಕ್‌ ಇನ್‌ ಇಂಡಿಯಾ’ ಯೋಜನೆಗೆ ಆದ ಹಿನ್ನಡೆ ಎಂದು ವಿಶ್ಲೇಷಿಸಲಾಗುತ್ತಿದೆ. ಕಂಪನಿಯ ನಿರ್ಧಾರದಿಂದ 2,000 ಉದ್ಯೋಗಗಳಿಗೆ ಕುತ್ತು ಬರಬಹುದು ಎಂದು ಆಟೊಮೊಬೈಲ್‌ ಡೀಲರ್‌ ಸಂಘಗಳ ಒಕ್ಕೂಟ ಹೇಳಿದೆ. 

‘ವಿದೇಶಿ ಕಂಪನಿಗಳು ದೇಶಕ್ಕೆ ಬಂದು ಬಂಡವಾಳ ಹೂಡಿ, ಸ್ಥಳೀಯವಾಗಿ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡಿ’ ಎಂದು ಮೋದಿ ಅವರು ಹೇಳುತ್ತಿದ್ದಾರೆ. ಇದರ ಬೆನ್ನಲ್ಲೇ, ಕೆಲವು ಆಟೊಮೊಬೈಲ್‌ ಕ್ಷೇತ್ರದ ಕಂಪನಿಗಳು ಭಾರತದಿಂದ ನಿರ್ಗಮಿಸುತ್ತಿವೆ. 

ಕೆಲವು ತಿಂಗಳ ಹಿಂದೆ, ಭಾರತದಲ್ಲಿ ಕಾರ್ಯಾಚರಣೆಯನ್ನು ಸಂಪೂರ್ಣವಾಗಿ ಜನರಲ್‌ ಮೋಟಾರ್ಸ್‌‌ ಸ್ಥಗಿತಗೊಳಿಸುವುದಾಗಿ ಹೇಳಿದೆ. ಎರಡು ವಾರಗಳ ಹಿಂದೆ ಟೊಯೊಟಾ ಕಂಪೆನಿಯು ಭಾರತದಲ್ಲಿ ಉದ್ಯಮ ವಿಸ್ತರಣೆಯನ್ನು ನಿಲ್ಲಿಸುವುದಾಗಿ ಹೇಳಿತ್ತು. ಇದಕ್ಕೆ, ಇಲ್ಲಿ ವಿಧಿಸಲಾಗುತ್ತಿರುವ ಹೆಚ್ಚಿನ ತೆರಿಗೆಯ ಕಾರಣ ನೀಡಿತ್ತು (ನಂತರ ಅಂತಹ ಯೋಚನೆ ಇಲ್ಲ ಎಂದು ಕಂಪನಿ ಸ್ಪಷ್ಟಪಡಿಸಿತ್ತು). ಈ ಎಲ್ಲ ಬೆಳವಣಿಗೆಗಳ ನಡುವೆಯೇ ಹಾರ್ಲೆ ಡೇವಿಡ್‌ಸನ್‌ ಭಾರತಕ್ಕೆ ವಿದಾಯ ಹೇಳುವ ಘೋಷಣೆ ಮಾಡಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು