ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಥನಾಲ್–ಬ್ಯಾಟರಿ ಚಾಲಿತ ಟೊಯೊಟಾ ಹೈಕ್ರಾಸ್‌; ಲೀಟರ್‌ಗೆ 23.24 ಕಿ.ಮೀ. ಮೈಲೇಜ್ !

Published 31 ಆಗಸ್ಟ್ 2023, 13:28 IST
Last Updated 31 ಆಗಸ್ಟ್ 2023, 13:28 IST
ಅಕ್ಷರ ಗಾತ್ರ

ನವದೆಹಲಿ: ಎಥನಾಲ್ ಮತ್ತು ಬ್ಯಾಟರಿ ಎರಡನ್ನೂ ಬಳಸಿದ ಕಾರನ್ನು ಇತ್ತೀಚೆಗೆ ಕೇಂದ್ರ ಹೆದ್ದಾರಿ ಹಾಗೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಬಿಡುಗಡೆ ಮಾಡಿದರು. ಫ್ಲೆಕ್ಸಿ ಫ್ಯೂಯೆಲ್ಸ್‌ ಎಂಬ ಕಾರನ್ನು ಹೊರತಂದ ಟೊಯೊಟಾ ಎಂಪಿವಿ ಕಾರು ಎಥನಾಲ್‌ ಹಾಗೂ ಬ್ಯಾಟರಿ ಚಾಲಿತವೂ ಹೌದು.

ಈ ಎರಡೂ ಮಾದರಿಯ ಇಂಧನ ಮೂಲದ ಮೂಲಕ ಚಲಿಸುವ ಸಾಮರ್ಥ್ಯದ ಭಾರತದ ಮೊದಲ ಕಾರು ಇದು ಎಂದು ವರದಿಯಾಗಿದೆ. 

ಟಯೊಟಾ ಇನ್ನೋವಾ ಹೈಕ್ರಾಸ್ ಕಾರನ್ನು ಫ್ಲೆಕ್ಸಿ ಫ್ಯೂಯಲ್ಸ್‌ ವಾಹನವಾಗಿ ಪರಿವರ್ತಿಸಿದೆ. ಭಾರತ್‌ ಸ್ಟೇಜ್‌ 6 ಮಾನ್ಯತೆ ಪಡೆದಿದೆ. ಬ್ಯಾಟರಿಯ ಜತೆಗೆ ಶೇ 20ರಷ್ಟು ಚಾಲನೆ ಎಥನಾಲ್ ಮೂಲಕ ಆಗಲಿದೆ. ಈ ಕಾರಿನಲ್ಲಿ ಇ100 ಶ್ರೇಣಿಯ ಎಥನಾಲ್ ಬಳಸಲಾಗುತ್ತಿದೆ. 2.0 ಲೀಟರ್ ಎಂಜಿನ್‌ ಸಾಮರ್ಥ್ಯದ ಹೈಕ್ರಾಸ್‌ ನಾಲ್ಕು ಸಿಲಿಂಡರ್‌ಗಳನ್ನು ಹೊಂದಿದೆ. ಇ85 ಇಂಧನ ಕ್ಷಮತೆ ಹೊಂದಿದೆ. ಈ ಫ್ಲೆಕ್ಸಿ ಫ್ಯೂಯಲ್ಸ್‌ ಮಾದರಿಯ ಕಾರಿನಲ್ಲಿ ಸ್ಪಾರ್ಕ್‌ ಪ್ಲಗ್‌ ಮತ್ತು ಪಿಸ್ಟನ್‌ ರಿಂಗ್‌ಗಳನ್ನು ಬದಲಿಸಲಾಗಿದೆ.

ಕಡಿಮೆ ತಾಪಮಾನದ ವಾತಾವರಣದಲ್ಲಿ ಕಾರು ಚಾಲನೆ ಮಾಡಲು ಅನುಕೂಲವಾಗುವಂತೆ ಕೋಲ್ಡ್ ಸ್ಟಾರ್ಟ್‌ ತಂತ್ರಜ್ಞಾನವನ್ನು ಟೊಯೊಟಾ ಅಳವಡಿಸಿದೆ. ಸ್ವಯಂ ಚಾರ್ಜ್‌ ಆಗುವ ಲೀಥಿಯಂ ಅಯಾನ್ ಬ್ಯಾಟರಿ ಪ್ಯಾಕ್‌ ಅಳವಡಿಸಲಾಗಿದೆ. ಆದರೆ ಈ ಕಾರು ಮಾರುಕಟ್ಟೆಗೆ ಎಂದು ಬಿಡುಗಡೆಯಾಗಲಿದೆ ಎಂಬ ಮಾಹಿತಿಯನ್ನು ಈವರೆಗೂ ಕಂಪನಿ ಪ್ರಕಟಿಸಿಲ್ಲ.

181 ಅಶ್ವಶಕ್ತಿಯನ್ನು ಉತ್ಪಾದಿಸಬಲ್ಲ ಈ ಕಾರು ಪ್ರತಿ ಲೀಟರ್‌ಗೆ 23.24 ಕಿ.ಮೀ.ಯಷ್ಟು ಇಂಧನ ಕ್ಷಮತೆ ಹೊಂದಿದೆ. ಫ್ಲೆಕ್ಸಿ ಫ್ಯೂಯಲ್ಸ್ ಮೂಲಕ ಶೇ 30ರಿಂದ 50ರಷ್ಟು ಇಂಧನ ಉಳಿತಾಯ ಹೆಚ್ಚಾಗಿದೆ ಎಂದು ಅಂದಾಜಿಸಲಾಗಿದೆ.

ಎಥನಾಲ್ ಬಳಕೆಯ ಕಾರುಗಳು ಈಗಾಗಲೇ ಚೀನಾ, ಬ್ರೆಜಿಲ್, ಅಮೆರಿಕ ಮತ್ತು ಥಾಯ್ಲೆಂಡ್‌ನಲ್ಲಿ ಬಳಕೆಯಲ್ಲಿವೆ. ಎಥನಾಲ್‌ ಅನ್ನು ಪೆಟ್ರೋಲ್‌ನಲ್ಲಿ ಬೆರೆಸುವ ಪ್ರಕ್ರಿಯೆಯನ್ನು ಸರ್ಕಾರ ಆರಂಭಿಸಿದೆ. ಜತೆಗೆ ಹೆಚ್ಚಾಗಿರುವ ಎಥನಾಲ್ ಬೇಡಿಕೆಗೆ ಪೂರಕವಾಗಿ ಅಧಿಕ ಆಹಾರ ಧಾನ್ಯಗಳನ್ನು ಬೆಳೆಯುವಂತೆ ಕೇಂದ್ರ ಸರ್ಕಾರ ಸಲಹೆ ನೀಡಿದೆ. ಡೀಸೆಲ್‌ಗಿಂತ ಅಗ್ಗ ಎಂದೆನ್ನಲಾಗುವ ಎಥನಾಲ್ ಅನ್ನು ಭಾರತದಲ್ಲಿ ಈವರೆಗೂ ವಾಹನಗಳಲ್ಲಿ ಬಳಕೆ ಮಾಡಲಾಗುತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT