ಮಂಗಳವಾರ, 6 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓಲಾ ಎಲೆಕ್ಟ್ರಿಕ್‌ ಸ್ಕೂಟರ್‌ ಕಾರ್ಖಾನೆ: ಇಲ್ಲಿ ಸಂಪೂರ್ಣ ಮಹಿಳೆಯರದ್ದೇ ನೇತೃತ್ವ

Last Updated 13 ಸೆಪ್ಟೆಂಬರ್ 2021, 11:37 IST
ಅಕ್ಷರ ಗಾತ್ರ

ನವದೆಹಲಿ: ಓಲಾ ಕಂಪನಿಯ ವಿದ್ಯುತ್ ಚಾಲಿತ ಸ್ಕೂಟರ್ ಕಾರ್ಖಾನೆಯನ್ನು ಮಹಿಳೆಯರೇ ಸಂಪೂರ್ಣವಾಗಿ ಮುನ್ನಡೆಸಲಿದ್ದಾರೆ. ಕಾರ್ಖಾನೆಯು ಪೂರ್ಣ ಪ್ರಮಾಣದಲ್ಲಿ ಕೆಲಸ ಆರಂಭಿಸಿದಾಗ ಹತ್ತು ಸಾವಿರಕ್ಕಿಂತ ಹೆಚ್ಚಿನ ಸಂಖ್ಯೆಯ ಮಹಿಳೆಯರಿಗೆ ಉದ್ಯೋಗ ನೀಡಲಿದೆ. ಓಲಾ ಕಂಪನಿಯ ಸಹ ಸಂಸ್ಥಾಪಕ ಭವೀಶ್ ಅಗರ್ವಾಲ್ ಅವರು ಈ ವಿಷಯ ತಿಳಿಸಿದ್ದಾರೆ.

‘ಆತ್ಮನಿರ್ಭರ ಭಾರತಕ್ಕೆ ಆತ್ಮನಿರ್ಭರ ಮಹಿಳೆಯರ ಅಗತ್ಯವಿದೆ! ಓಲಾ ಕಾರ್ಖಾನೆಯನ್ನು ಮಹಿಳೆಯರೇ ಸಂಪೂರ್ಣವಾಗಿ ಮುನ್ನಡೆಸಲಿದ್ದಾರೆ ಎಂಬುದನ್ನು ಹೇಳಲು ಹೆಮ್ಮೆಯಾಗುತ್ತಿದೆ! ಇದು ಮಹಿಳೆಯರೇ ನಡೆಸುವ, ಜಗತ್ತಿನ ಅತಿದೊಡ್ಡ ಕಾರ್ಖಾನೆ ಆಗಿರಲಿದೆ’ ಎಂದು ಅಗರ್ವಾಲ್ ಅವರು ಸೋಮವಾರ ಹೇಳಿದ್ದಾರೆ.

ಅಗರ್ವಾಲ್ ಅವರು ತಮ್ಮ ಕಂಪನಿಯ ಕಾರ್ಖಾನೆಯಲ್ಲಿ ಕೆಲಸ ಮಾಡಲು ನೇಮಕ ಮಾಡಿಕೊಂಡಿರುವ ಮೊದಲ ಬ್ಯಾಚ್‌ನ ಮಹಿಳೆಯರು ಇರುವ ದೃಶ್ಯವೊಂದನ್ನು ಕೂಡ ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಂಡಿದ್ದಾರೆ. ಆಟೊಮೊಬೈಲ್‌ ಉತ್ಪಾದನೆಯಲ್ಲಿ ತೊಡಗಿಸಿಕೊಂಡಿರುವ, ಮಹಿಳೆಯರು ಮಾತ್ರ ಕೆಲಸ ಮಾಡುವ ಜಗತ್ತಿನ ಏಕೈಕ ಕಾರ್ಖಾನೆ ಇದು ಎಂಬ ಮಾತನ್ನು ಅವರು ಬ್ಲಾಗ್ ಬರಹವೊಂದರಲ್ಲಿ ಹೇಳಿದ್ದಾರೆ.

ಕೆಲಸಗಾರರ ತಂಡವು ಎಲ್ಲರನ್ನೂ ಒಳಗೊಳ್ಳುವಂಥದ್ದಾಗಿರಬೇಕು, ಮಹಿಳೆಯರಿಗೆ ಆರ್ಥಿಕ ಅವಕಾಶಗಳು ಸಿಗಬೇಕು ಎಂಬ ಉದ್ದೇಶದಿಂದ ಓಲಾ ತೆಗೆದುಕೊಳ್ಳುತ್ತಿರುವ ಹಲವು ಕ್ರಮಗಳ ಸಾಲಿನಲ್ಲಿ ಇದು ಮೊದಲನೆಯದು ಎಂದು ಅವರು ಹೇಳಿದ್ದಾರೆ. ಕೆಲಸಗಾರರಿಗೆ ಕೌಶಲ ನೀಡಲು ಓಲಾ ಕಂಪನಿಯು ಗಮನಾರ್ಹ ಪ್ರಮಾಣದಲ್ಲಿ ಹೂಡಿಕೆ ಮಾಡಿದೆ. ಕಾರ್ಖಾನೆಯಲ್ಲಿ ತಯಾರಾಗುವ ಪ್ರತಿ ವಾಹನಕ್ಕೂ ಅವರೇ ಜವಾಬ್ದಾರರು ಎಂದು ಅಗರ್ವಾಲ್ ತಿಳಿಸಿದ್ದಾರೆ.

‘ಮಹಿಳೆಯರನ್ನು ಆರ್ಥಿಕ ಅವಕಾಶಗಳ ಮೂಲಕ ಸಶಕ್ತರನ್ನಾಗಿಸುವುದರಿಂದ ಅವರಿಗೆ ಮಾತ್ರವೇ ಒಳ್ಳೆಯದಾಗುವುದಿಲ್ಲ. ಅವರ ಕುಟುಂಬಕ್ಕೆ ಹಾಗೂ ಇಡೀ ಸಮುದಾಯಕ್ಕೆ ಒಳಿತಾಗುತ್ತದೆ. ಕಾರ್ಮಿಕರಾಗಿ ಕೆಲಸ ಮಾಡುವಲ್ಲಿ ಮಹಿಳೆಯರಿಗೆ ಸಮಾನ ಅವಕಾಶ ಕಲ್ಪಿಸಿದಲ್ಲಿ ಭಾರತದ ಒಟ್ಟು ಆಂತರಿಕ ಉತ್ಪಾದನೆಯು (ಜಿಡಿಪಿ) ಶೇಕಡ 27ರಷ್ಟು ಹೆಚ್ಚಳ ಕಾಣಬಹುದು ಎಂಬುದನ್ನು ಅಧ್ಯಯನಗಳು ಹೇಳಿವೆ’ ಎಂದು ವಿವರಿಸಿದ್ದಾರೆ.

ಭಾರತದ ಉತ್ಪಾದನಾ ವಲಯದ ಕಾರ್ಮಿಕರ ಪೈಕಿ ಮಹಿಳೆಯರ ಪ್ರಮಾಣವು ಶೇಕಡ 12ರಷ್ಟು ಮಾತ್ರ. ‘ದೇಶವು ತಯಾರಿಕಾ ವಲಯದ ಪ್ರಮುಖ ರಾಷ್ಟ್ರವಾಗಬೇಕು ಎಂದಾದರೆ ಮಹಿಳೆಯರಿಗೆ ತರಬೇತಿ ನೀಡುವುದನ್ನು, ಅವರಿಗೆ ಉದ್ಯೋಗ ಸೃಷ್ಟಿಸುವುದನ್ನು ಆದ್ಯತೆಯ ಕೆಲಸವಾಗಿ ಮಾಡಬೇಕು’ ಎಂದೂ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT