ಮುಂಬೈ: ವಾಣಿಜ್ಯ ನಗರಿ ಮುಂಬೈಯನ್ನು ಅದರ ಉಪನಗರ ನವಿ ಮುಂಬೈಗೆ ಸಂಪರ್ಕಿಸುವ ದೇಶದ ಅತಿ ಉದ್ದದ ಸೇತುವೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಅಟಲ್ ಬಿಹಾರಿ ವಾಜಪೇಯಿ ಸೇವಾರಿ-ನವ ಶೇವಾ ಅಟಲ್ ಸೇತು ಉದ್ಘಾಟನೆಗೊಂಡ ಬಳಿಕ ಈ ಸೇತುವೆಯಲ್ಲಿ ಕಳೆದ ಏಳು ತಿಂಗಳಲ್ಲಿ 50 ಲಕ್ಷಕ್ಕೂ ಹೆಚ್ಚು ವಾಹನಗಳು ಸಂಚರಿಸಿವೆ ಎಂದು ಮುಂಬೈ ಮೆಟ್ರೊಪಾಲಿಟನ್ ಪ್ರಾದೇಶಿಕ ಅಭಿವೃದ್ಧಿ ಪ್ರಾಧಿಕಾರ (ಎಂಎಂಆರ್‌ಡಿಎ) ತಿಳಿಸಿದೆ.
ಜನವರಿ 13ರಿಂದ ಆಗಸ್ಟ್ 26ರವರೆಗಿನ ಅವಧಿಯಲ್ಲಿ ಮಹಾರಾಷ್ಟ್ರ ಹಾಗೂ ಮುಂಬೈ ಸಾರಿಗೆ ಬಸ್‌ಗಳು ಸೇರಿದಂತೆ 50,04,350 ವಾಹನಗಳು ಸಂಚರಿಸಿವೆ ಎಂದು ಎಂಎಂಆರ್‌ಡಿಎ ಪ್ರಕಟಣೆ ತಿಳಿಸಿದೆ.
ಅಟಲ್ ಸೇತುವೆಯಲ್ಲಿ ವಾಹನಗಳ ದೈನಂದಿನ ಸಂಚಾರ 22,000 ಆಗಿದೆ ಎಂದು ಅದು ಹೇಳಿದೆ.
ಈ ವಾಹನಗಳಲ್ಲಿ 47.40 ಲಕ್ಷ ಕಾರುಗಳು, 50,020 ಮಿನಿ ಬಸ್‌ಗಳು ಹಾಗೂ ಹಗುರ ವಾಹನಗಳು, 59,799 ಡಬಲ್-ಆಕ್ಸೆಲ್ ವಾಹನಗಳು, 73,074 ತ್ರಿಬಲ್-ಆಕ್ಸೆಲ್ ವಾಹನಗಳು, 80,277 ಫೋರ್-ಸಿಕ್ಸ್ ಆಕ್ಸೆಲ್ ವಾಹನಗಳು ಮತ್ತು 503 ಘನ ವಾಹನಗಳು ಸೇರಿವೆ ಎಂದು ವಕ್ತಾರರು ತಿಳಿಸಿದ್ದಾರೆ.
ವರ್ಷಾರಂಭದಲ್ಲಿ ಅಟಲ್ ಸೇತುವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದರು. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರಿನಲ್ಲಿ ನಿರ್ಮಿಸಲಾದ ಸೇತುವೆ ಇದಾಗಿದೆ. ಸುಮಾರು 21.8 ಕಿ.ಮೀ. ಉದ್ದದ ಆರು-ಪಥದ ಅಟಲ್ ಸೇತುವೆಯಲ್ಲಿ, 16.5 ಕಿ.ಮೀ. ಸಮುದ್ರದ ಮೇಲೆ ಹಾಗೂ 5.5 ಕಿ.ಮೀ. ಭೂಮಿಯ ಮೇಲೆ ನಿರ್ಮಿಸಲಾಗಿದೆ.