ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಸಾಧಕರು | ಮುರಳಿ ಮೋಹನ್ -ಎಲೆಕ್ಟ್ರಿಕ್ ವಾಹನ ಕಂಪನಿ ಕಟ್ಟಿದ ಕನ್ನಡಿಗ

Last Updated 1 ಜನವರಿ 2023, 4:41 IST
ಅಕ್ಷರ ಗಾತ್ರ

'ಪ್ರಜಾವಾಣಿ' ಪಾಲಿಗಿದು ಅಮೃತ ಮಹೋತ್ಸವದ ವರ್ಷ. 75 ವರ್ಷಗಳ ಹಾದಿಯಲ್ಲಿ ಜನಮುಖಿಯಾಗಿರುವ ಪತ್ರಿಕೆ, ನಮ್ಮ ನಡುವಿನ ಪ್ರತಿಭಾವಂತರನ್ನು ಗುರುತಿಸುವ ಕೆಲಸವನ್ನೂ ಲಾಗಾಯ್ತಿನಿಂದ ಮಾಡುತ್ತಾ ಬಂದಿದೆ. 2020ರಿಂದ ಪ್ರತಿವರ್ಷ ಆಯಾ ಇಸವಿಯ ಕೊನೆಯ ಎರಡು ಅಂಕಿಗಳಿಗೆ ಹೊಂದುವಷ್ಟು ಸಂಖ್ಯೆಯ ಸಾಧಕರನ್ನು ಆಯ್ಕೆ ಮಾಡಿ, ಸನ್ಮಾನಿಸುತ್ತಿರುವುದೇ ಇದಕ್ಕೆ ಸಾಕ್ಷಿ. ಶಿಕ್ಷಣ, ಸಮಾಜಸೇವೆ, ವಿಜ್ಞಾನ, ಕ್ರೀಡೆ, ಸಾಹಿತ್ಯ–ಕಲೆ–ಮನರಂಜನೆ, ಪರಿಸರ, ಉದ್ಯಮ, ಸಂಶೋಧನೆ, ಆಡಳಿತ, ಕನ್ನಡ ಕೈಂಕರ್ಯ ಹೀಗೆ ಹಲವು ಕ್ಷೇತ್ರಗಳಲ್ಲಿ ತಮ್ಮಷ್ಟಕ್ಕೆ ತಾವು ಮುಗುಮ್ಮಾಗಿ ಸೇವೆ ಸಲ್ಲಿಸುತ್ತಿರುವವರನ್ನು 23 ಸಾಧಕರನ್ನು 2023ರ ಹೊಸವರ್ಷಕ್ಕೆ ಸಾಂಕೇತಿಕವಾಗಿ ಮಾಡಲಾಗಿದೆ. ಸಾಧಕರ ಕಿರು ಪರಿಚಯವನ್ನು ಇಲ್ಲಿ ನೀಡಲಾಗಿದ್ದು, ಅವರ ಹೆಜ್ಜೆಗುರುತುಗಳು ಈ ಅಕ್ಷರಚೌಕಟ್ಟನ್ನೂ ಮೀರಿದ್ದು. ಹೊಸ ವರ್ಷವನ್ನು ಈ ಸಾಧಕರೊಟ್ಟಿಗೆ ಬರಮಾಡಿಕೊಳ್ಳುವುದಕ್ಕೆ ಪತ್ರಿಕಾ ಬಳಗ ಹರ್ಷಿಸುತ್ತದೆ.

****ಹೆಸರು: ಮುರಳಿ ಮೋಹನ್

ವೃತ್ತಿ: ಉದ್ಯಮಿ

ಸಾಧನೆ: ಎಲೆಕ್ಟ್ರಿಕ್ ವಾಹನಗಳ ತಯಾರಿಕೆಯಲ್ಲಿ ವಿಕ್ರಮ

ಬಡತನದಲ್ಲೂ ಓದಿ ಎಲೆಕ್ಟ್ರಿಕ್ ವಾಹನ ತಯಾರಿಕೆ ಕಂಪನಿ ಕಟ್ಟಿರುವ ಕನ್ನಡಿಗ ಮುರುಳಿ ಮೋಹನ್, ಕೋಲಾರ ಜಿಲ್ಲೆಯ ಎಸ್‌. ಅಗ್ರಹಾರದವರು. ತಂದೆ ಮುನಿವೆಂಕಟಪ್ಪ ಹಾಗೂ ತಾಯಿ ಕಮಲಮ್ಮ.

ಹೆತ್ತವರ ಜೊತೆ ಕೂಲಿ ಮಾಡುತ್ತಲೇ ಎಸ್ಸೆಸ್ಸೆಲ್ಸಿ ಪೂರ್ಣಗೊಳಿಸಿದ್ದ ಮುರಳಿ ಮೋಹನ್ ಅವರಿಗೆ ಕಡಿಮೆ ಅಂಕ ಬಂದಿತ್ತು. ಇದೊಂದೇ ಕಾರಣಕ್ಕೆ ಪಿಯು ವಿಜ್ಞಾನ, ವಾಣಿಜ್ಯ ವಿಭಾಗದಲ್ಲಿ ಸೀಟು ನೀಡಲು ಕಾಲೇಜುಗಳು ನಿರಾಕರಿಸಿದವು. ತಮ್ಮಿಷ್ಟದ ವಿಷಯದಲ್ಲಿ ಓದಲು ಆಗಲಿಲ್ಲವೆಂಬ ಕೊರಗಿನಲ್ಲೇ ಹೆತ್ತವರಿಗೆ ಆಸರೆಯಾಗಬೇಕೆಂದು ದುಡಿಯಲು ಬೆಂಗಳೂರಿಗೆ ಬಂದರು.

ಬಿಡುವಿನ ಅವಧಿಯಲ್ಲೇ ತಾಂತ್ರಿಕ ವಿದ್ಯಾಭ್ಯಾಸ ಮುಗಿಸಿ ಟೊಯೊಟಾ ಕಿರ್ಲೊಸ್ಕರ್‌ನ ಐಸಿನ್ ಟೆಕೊಕಾ ಕಂಪನಿಯಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದರು. ಜನರಿಗೆ ತಮ್ಮದೇ ಸ್ವಂತ ಉತ್ಪನ್ನ ನೀಡಬೇಕೆಂಬ ತುಡಿತ ಮಾತ್ರ ಕಡಿಮೆ ಆಗಿರಲಿಲ್ಲ. ಅವಾಗಲೇ, ಎಲೆಕ್ಟ್ರಿಕ್ ವಾಹನ ತಯಾರಿಕೆ ಕ್ಷೇತ್ರಕ್ಕೆ ಲಗ್ಗೆ ಇಟ್ಟರು. ಸಂಬಳಕ್ಕೆ ಕೈಚಾಚಿ ಕುಳಿತರೆ ಸಾಧನೆ ಅಸಾಧ್ಯವೆಂದು ತಿಳಿದು ಸ್ವಂತ ಆಲೋಚನೆಯೊಂದಿಗೆ ಮಾರುತಿಸ್ಯಾನ್ ಇವಿ ಕಂಪನಿ ಹುಟ್ಟು ಹಾಕಿದ್ದಾರೆ. ಎಲೆಕ್ಟ್ರಿಕ್ ಸ್ಕೂಟರ್ ಹಾಗೂ ಮೋಟಾರ್ ಸೈಕಲ್ ತಯಾರಿಕೆಯಲ್ಲಿ ಯಶಸ್ಸು ಸಾಧಿಸಿದ್ದಾರೆ.

2019ರ ಡಿಸೆಂಬರ್‌ನಲ್ಲಿ ಮಾರುತಿಸ್ಯಾನ್ ಇವಿ ಆರಂಭಿಸಿದರು. ಮೊದಲ ಹಂತದಲ್ಲೇ 850 ಎಲೆಕ್ಟ್ರಿಕ್ ವಾಹನಗಳು ಮಾರಾಟವಾದವು. ಈ ಮೂಲಕ ಕಂಪನಿಯು ಎಲೆಕ್ಟ್ರಿಕ್ ಬೈಕ್‌ಗಳ ತಯಾರಿಕೆಯಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಛಾಪು ಮೂಡಿಸಿತು. ಆಟೋಮೇಟಿವ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾದಿಂದ (ಎಆರ್‌ಐ) ಮಾನ್ಯತೆ ಪಡೆದ ರಾಜ್ಯದ ಮೊದಲ ಕಂಪನಿ ಇದಾಗಿದೆ. ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿ ವಾಹನ ತಯಾರಿಕೆ ಘಟಕವನ್ನು ತೆರೆದಿದ್ದು, ಈ ಭಾಗದ ಯುವಕರಿಗೂ ಉದ್ಯೋಗ ನೀಡುತ್ತಿದ್ದಾರೆ. ರಾಜ್ಯದ 36 ನಗರಗಳಲ್ಲಿ ಇವರ ವಾಹನ ಮಾರಾಟ ಮಳಿಗೆಗಳಿವೆ. ದ್ವಿಚಕ್ರ ವಾಹನಗಳ ಜೊತೆಯಲ್ಲೇ ನಾಲ್ಕು ಚಕ್ರದ ಗೂಡ್ಸ್ ವಾಹನ ಪರಿಚಯಿಸಲು ತಯಾರಿ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT