ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಳಿಗಾಲದ ಸೌಂದರ್ಯಕ್ಕೆ ಪುಲ್‌ ಓವರ್‌‌

Last Updated 23 ಅಕ್ಟೋಬರ್ 2021, 7:26 IST
ಅಕ್ಷರ ಗಾತ್ರ

ಚಳಿಗಾಲ, ಮಳೆಗಾಲ, ಬೇಸಿಗೆ ಕಾಲ.. ಹೀಗೆ ಋತುಮಾನಗಳು ಬದಲಾಗುವಂತೆ ಫ್ಯಾಷನ್ ಕ್ಷೇತ್ರದಲ್ಲೂ ಬದಲಾವಣೆಗಳಾಗುತ್ತಿರುತ್ತವೆ. ಆಯಾ ಕಾಲಕ್ಕೆ ಹೊಂದುವಂತಹ ಫ್ಯಾಷನ್‌ ಉಡುಪುಗಳು ಮಾರುಕಟ್ಟೆಯನ್ನು ಪ್ರವೇಶಿಸುತ್ತವೆ. ಇಷ್ಟು ದಿನ ಮಳೆಗಾಲಕ್ಕೆ ಸೂಕ್ತವಾದ ಉಡುಪುಗಳನ್ನು ಧರಿಸುತ್ತಿದ್ದ ನಾವು ಈಗ ಅದನ್ನು ವಾರ್ಡ್‌ರೋಬ್‌ ಮೂಲೆಗೆ ಸೇರಿಸಿ ಚಳಿಗಾಲಕ್ಕೆ ಸನ್ನದ್ಧರಾಗಬೇಕಿದೆ. ಚಳಿಗಾಲವೆಂದರೆ ಬೆಚ್ಚನೆಯ ಉಡುಪುಗಳು. ಇದು ಜಾಕೆಟ್‌, ಸ್ವೆಟ್‌ಶರ್ಟ್‌, ಪುಲ್‌ಓವರ್‌‌ಗಳು ವಾರ್ಡ್‌ರೋಬ್‌ನ ಮುನ್ನೆಲೆಗೆ ಬರುವಂತಹ ಕಾಲ. ಅದರಲ್ಲೂ ಚಳಿಗಾಲದಲ್ಲಿ ಪುಲ್‌ಓವರ್‌‌ ಧರಿಸಲು ಹೆಣ್ಣುಮಕ್ಕಳು ಹೆಚ್ಚು ಇಷ್ಟಪಡುತ್ತಾರೆ. ಪುಲ್‌ ಓವರ್‌‌‌ಗಳು ಟ್ರೆಂಡಿ ಎನ್ನಿಸುವ ಜೊತೆಗೆ ಅಂದವನ್ನೂ ಹೆಚ್ಚಿಸುತ್ತವೆ. ಜೊತೆಗೆ ಚಳಿಗಾಲದಲ್ಲಿ ದೇಹವನ್ನೂ ಬೆಚ್ಚಗಿಸಿರುತ್ತವೆ. ಇದನ್ನು ಜೀನ್ಸ್‌ ಜೊತೆ, ಕುರ್ತಾ ಹಾಗೂ ಸೀರೆ ಮೇಲೆ, ಸ್ಕರ್ಟ್ ಜೊತೆ ಧರಿಸಬಹುದು.

ಜೀನ್ಸ್ ಜೊತೆ ಪುಲ್‌ಓವರ್‌‌

ಜೀನ್ಸ್ ಜೊತೆ ಪುಲ್‌ಓವರ್‌‌ ಹೆಚ್ಚು ಹೊಂದುತ್ತದೆ. ಯಾವುದೇ ಬಣ್ಣದ ಜೀನ್ಸ್ ಮೇಲೆ ಅದಕ್ಕೆ ವಿರುದ್ಧ ಬಣ್ಣದ ಪುಲ್‌ ಓವರ್‌‌ ಧರಿಸಬಹುದು. ಹೆಚ್ಚಾಗಿ ಪುಲ್‌ಓವರ್‌‌‌ ಎಂದರೆ ಉದ್ದ ತೋಳಿನದ್ದೇ ಇರುತ್ತದೆ. ಆದರೆ ಇತ್ತೀಚೆಗೆ ಅರ್ಧ ತೋಳಿನ ಈ ದಿರಿಸು‌ಗಳು ಮಾರುಕಟ್ಟೆಯಲ್ಲಿ ಹೆಚ್ಚು ಸದ್ದು ಮಾಡುತ್ತಿವೆ. ಇದರೊಂದಿಗೆ ಕ್ರಾಪ್‌ ಟಾಪ್‌ನಂತೆ ಅರ್ಧ ಹೊಟ್ಟೆ ಕಾಣಿಸುವಂತಿರುವ ಈ ಉಡುಪುಗಳು ಟ್ರೆಂಡ್ ಸೃಷ್ಟಿಸುತ್ತಿವೆ.

ಸ್ಕರ್ಟ್ ಮೇಲೆ ಪುಲ್‌ಓವರ್‌‌

ಪಾದದವರೆಗೆ ಇಳಿಬಿಟ್ಟಿರುವ ಸ್ಕರ್ಟ್ ಮೇಲೆ ಪುಲ್‌ ಓವರ್‌‌ ಧರಿಸುವುದರಿಂದ ಅಂದವನ್ನು ಹೆಚ್ಚಿಸಿಕೊಳ್ಳಬಹುದು. ಈ ಉಡುಪು ನಮಗೆ ಸಾಂಪ್ರದಾಯಿಕ ಹಾಗೂ ಪಾಶ್ಚಾತ್ಯ ಎರಡೂ ನೋಟ ಸಿಗುವಂತೆ ಮಾಡುತ್ತದೆ. ಉದ್ದನೆಯ ಸ್ಕರ್ಟ್‌ ಜೊತೆ ತುಂಬು ತೋಳಿನದ್ದು ಹೊಂದುತ್ತದೆ. ಮೊಣಕಾಲಿನವರೆಗೆ ಬರುವ ಶಾರ್ಟ್ ಸ್ಕರ್ಟ್‌ ಮೇಲೂ ಕೂಡ ಇದನ್ನು ಧರಿಸಬಹುದು. ಇದರಿಂದ ಸ್ಟೈಲಿಶ್ ಆಗಿ ಕಾಣಬಹುದು.

ಕುರ್ತಾ ಮೇಲೆ

ಚಳಿಗಾಲದಲ್ಲಿ ಬೆಚ್ಚಗೆ ಇರಬೇಕು ಎಂದರೆ ಕುರ್ತಾ ಮೇಲೆ ಪುಲ್‌ಓವರ್‌‌ ಧರಿಸಬಹುದು. ಕುರ್ತಾ ಬಣ್ಣದ್ದೇ ಹೂವಿನ ಚಿತ್ತಾರವಿರುವ ಈ ಉಡುಪು ಧರಿಸುವುದರಿಂದ ಅಂದ ಹೆಚ್ಚುವುದಲ್ಲದೇ ಟ್ರೆಂಡ್ ಸೃಷ್ಟಿಸಿದಂತಾಗುತ್ತದೆ. ಕುರ್ತಾ ಮೇಲೆ ಇದನ್ನು‌ ಧರಿಸಿದಾಗ ಉಲ್ಲನ್ ಸ್ಟೋಲ್‌ ಕುತ್ತಿಗೆಗೆ ಸುತ್ತಿಕೊಳ್ಳಬಹುದು. ಇದು ನಮ್ಮ ನೋಟವನ್ನೇ ಬದಲಿಸುವುದರಲ್ಲಿ ಸಂಶಯವಿಲ್ಲ.

ಸೀರೆಯೊಂದಿಗೆ

ಸೀರೆಯೊಂದಿಗೆ ಬ್ಲೌಸ್ ಧರಿಸುವುದು ಕಾಮನ್‌. ಆದರೆ ಈಗ ಬ್ಲೌಸ್ ಬದಲು ಪುಲ್‌ ಓವರ್‌‌ ಧರಿಸುವುದು ಟ್ರೆಂಡ್‌. ಪುಲ್‌ಓವರ್‌‌ ಮೇಲೆ ಸೀರೆ ಧರಿಸಿ ಈ ಮೂಲಕ ಸೀರೆಯ ಅಂದದೊಂದಿಗೆ ನಮ್ಮ ಅಂದವನ್ನೂ ಹೆಚ್ಚಿಸಿಕೊಳ್ಳಬಹುದು. ಇದು ಹೊಸ ಟ್ರೆಂಡ್ ಕೂಡ ಹೌದು. ಸಂಪ್ರದಾಯಕ್ಕೆ ಒತ್ತು ಕೊಟ್ಟ ಹಾಗೂ ಆಗುತ್ತದೆ, ಚಳಿಗಾಲದಲ್ಲಿ ಈ ರೀತಿಯಾಗಿ ದೇಹವನ್ನು ಬೆಚ್ಚಗಿರಿಸಬಹುದು.

ಬೂಟ್ಸ್

ಜೀನ್ಸ್ ಹಾಗೂ ಪುಲ್‌ಓವರ್‌‌ ಧರಿಸಿದಾಗ ಬೂಟ್ಸ್ ಧರಿಸಬಹುದು. ಪುಲ್ಲೋವರ್ ಬಣ್ಣದ್ದೇ ಅರ್ಧ ಕಾಲಿನವರೆಗೆ ಮುಚ್ಚುವ ಬೂಟ್ಸ್ ಧರಿಸುವ ಮೂಲಕ ಅಂದ ಹೆಚ್ಚಿಸಿಕೊಳ್ಳಬಹುದು. ಲೆದರ್‌ ಬೂಟ್‌ಗಳನ್ನು ಧರಿಸುವುದರಿಂದ ನಮಗೆ ಐಷಾರಾಮಿ ನೋಟ ಸಿಗುವುದರಲ್ಲಿ ಎರಡು ಮಾತಿಲ್ಲ.

ಸ್ಲಿಂಗ್ ಬ್ಯಾಗ್

ಪುಲ್‌ಓವರ್‌‌ ಧರಿಸಿದಾಗ ಸ್ಲಿಂಗ್ ಬ್ಯಾಗ್ ಹೆಚ್ಚು ಹೊಂದುತ್ತದೆ. ಇದು ಸೀರೆ, ಸ್ಕರ್ಟ್‌, ಕುರ್ತಾ ಎಲ್ಲದರ ಜೊತೆಗೂ ಹೊಂದುತ್ತದೆ. ಇದು ಟ್ರೆಂಡಿ ಕೂಡ ಹೌದು.

ಉಲ್ಲನ್ ಶಾಲ್‌

ಪುಲ್‌ಓವರ್‌‌ ಧರಿಸಿದಾಗ ಉಲ್ಲನ್ ಶಾಲ್ ಅನ್ನು ಕತ್ತಿಗೆಗೆ ಸುತ್ತಿಕೊಳ್ಳಬಹುದು. ಇದು ಚಳಿಯಿಂದ ನಮ್ಮನ್ನು ರಕ್ಷಿಸುವುದಲ್ಲದೇ ಟ್ರೆಂಡಿ ಆಗಿಯೂ ಕಾಣಿಸುತ್ತದೆ. ಜೀನ್ಸ್ ಹಾಗೂ ಸ್ಕರ್ಟ್‌ ಜೊತೆ ಇದನ್ನು ಧರಿಸಿದಾಗ ಉಲ್ಲನ್ ಶಾಲ್ ಅನ್ನು ಕತ್ತಿಗೆ ಸುತ್ತಿಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT