Central Budget 2021: ಆರಂಭಿಕ ಮುನ್ನಡೆ ದಾಖಲಿಸಿದ ಷೇರು ಪೇಟೆ

ಮುಂಬಯಿ: ಬಜೆಟ್ ಮಂಡನೆಯಲ್ಲಿ ಹಣಕಾಸು ಹೂಡಿಕೆ ಮತ್ತು ಷೇರುಪೇಟೆ ಹಾಗೂ ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ದೊರೆಯುವ ನಿರೀಕ್ಷೆಯಿದ್ದು, ಸೋಮವಾರದ ಷೇರುಪೇಟೆ ವಹಿವಾಟು ಆರಂಭದಲ್ಲಿಯೇ ಮುನ್ನಡೆ ದಾಖಲಿಸಿದೆ.
ವಿತ್ತ ಸಚಿವರಾಗಿರುವ ನಿರ್ಮಲಾ ಸೀತಾರಾಮನ್ ಪ್ರಸಕ್ತ ಹಣಕಾಸು ವರ್ಷದ ಬಜೆಟ್ ಮಂಡಿಸುತ್ತಿದ್ದಾರೆ. ಕೋವಿಡ್ ಸಮಸ್ಯೆಯಿಂದ ತೊಂದರೆಗೊಳಗಾಗಿರುವ ವಿವಿಧ ಕ್ಷೇತ್ರಗಳ ಪುನಶ್ಚೇತನಕ್ಕಾಗಿ ಹಣಕಾಸು ಪ್ಯಾಕೇಜ್ ನಿರೀಕ್ಷೆಯಲ್ಲಿರುವ ಉದ್ಯಮ, ಹೂಡಿಕೆ ಕ್ಷೇತ್ರದಲ್ಲಿ ಹೆಚ್ಚಿನ ಅನುದಾನದ ಬೇಡಿಕೆ ಹೊಂದಿದೆ.
ಈ ಮಧ್ಯೆ ಷೇರುಪೇಟೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುವ ಬ್ಯಾಂಕಿಂಗ್, ರಿಯಲ್ ಎಸ್ಟೇಟ್, ಇಂಧನ ಮತ್ತು ಹೂಡಿಕೆ ಕ್ಷೇತ್ರದ ಷೇರುಗಳು ಉತ್ತಮ ಮುನ್ನಡೆ ವಹಿವಾಟು ದಾಖಲಿಸಿವೆ. ಜತೆಗೆ ಬಜೆಟ್ ನಿರೀಕ್ಷೆಯಿಂದಾಗಿ ಷೇರುಪೇಟೆಯ ಹೂಡಿಕೆ ಕೂಡ ಚೇತರಿಕೆ ಕಾಣಿಸುವ ಹಾದಿಯಲ್ಲಿದೆ.
ಬಾಂಬೆ ಸ್ಟಾಕ್ ಎಕ್ಸ್ಚೇಂಜ್ ಸೋಮವಾರ ದಿನದ ವಹಿವಾಟು ಆರಂಭಕ್ಕೆ 489 ಅಂಶಗಳ ಮುನ್ನಡೆಯೊಂದಿಗೆ 46,775 ಗಡಿಯಲ್ಲಿದೆ. ಹೀಗಾಗಿ ದಿನದ ಆರಂಭದಲ್ಲಿ ಗರಿಷ್ಠ ಮುನ್ನಡೆ ಕಾಯ್ದುಕೊಂಡಿರುವುದರಿಂದ, ಹೆಚ್ಚಿನ ವಹಿವಾಟು ನಿರೀಕ್ಷಿಸಲಾಗಿದೆ.
ಇದನ್ನೂ ಓದಿ: ಚಿತ್ರಗಳಲ್ಲಿ ನೋಡಿ: ಬಜೆಟ್ ಮಂಡನೆಗೆ ಹೊರಟ ನಿರ್ಮಲಾ ಸೀತಾರಾಮನ್
ಮತ್ತೊಂದೆಡೆ ನಿಫ್ಟಿ 50 ಸೂಚ್ಯಂಕ ಕೂಡ 111 ಅಂಶಗಳ ಏರಿಕೆಯೊಂದಿಗೆ 13,746 ಗಡಿ ತಲುಪಿದ್ದು, ಏರುಗತಿಯಲ್ಲಿ ಸಾಗಿದೆ. ಬಜೆಟ್ ಕುರಿತ ನಿರೀಕ್ಷೆ ಮಾರುಕಟ್ಟೆ ಮೇಲೆ ಪರಿಣಾಮ ಬೀರಿದ್ದು, ಮುನ್ನಡೆಗೆ ಕಾರಣವಾಗಿದೆ.
ಇದನ್ನೂ ಓದಿ: ಕಾಗದರಹಿತ ಡಿಜಿಟಲ್ ಬಜೆಟ್; ಟ್ಯಾಬ್ ಪ್ರದರ್ಶಿಸಿದ ನಿರ್ಮಲಾ ಸೀತಾರಾಮನ್
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.