ಶುಕ್ರವಾರ, ಫೆಬ್ರವರಿ 28, 2020
19 °C

ನೇರ ತೆರಿಗೆ ಎಂದರೇನು, ಯಾರಿಗೆಲ್ಲ ಅನ್ವಯಿಸುತ್ತದೆ? 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತೆರಿಗೆ ಲೆಕ್ಕಾಚಾರ– ಸಾಂದರ್ಭಿಕ ಚಿತ್ರ

ಬಜೆಟ್‌ ಮಂಡನೆಯಲ್ಲಿ ಸಾರ್ವಜನಿಕರು ಗಮನಿಸುವ ಬಹುಮುಖ್ಯ ಭಾಗ ತೆರಿಗೆ. ಅದರಲ್ಲೂ ಆದಾಯ ತೆರಿಗೆಯಲ್ಲಿ ಆಗುವ ಬದಲಾವಣೆಗಳ ಬಗ್ಗೆ ತೀವ್ರ ಕುತೂಹಲ. ಸರ್ಕಾರ ವಿತ್ತೀಯ ಕೊರತೆಯಿಂದ ತಪ್ಪಿಸಿಕೊಳ್ಳಲು ಇರುವ ಪ್ರಮುಖ ಮಾರ್ಗವೂ ತೆರಿಗೆ ಸಂಗ್ರಹ. ಬಜೆಟ್‌ನಲ್ಲಿ ಪದೇ ಪದೇ ಕೇಳಿಬರುವ ಸಾಲು ನೇರ ತೆರಿಗೆ (ಡೈರೆಕ್ಟ್‌ ಟ್ಯಕ್ಸ್‌). ನೇರ ತೆರಿಗೆ ಎಂದರೆ?

ಸರ್ಕಾರ ನೇರವಾಗಿ ತೆರಿಗೆದಾರರಿಂದ ಮತ್ತು ಸ್ವತ್ತುಗಳ ಮೇಲೆ ಮೂಲದಲ್ಲಿಯೇ ಕಡಿತಗೊಳಿಸುವ ತೆರಿಗೆಯನ್ನು ನೇರ ತೆರಿಗೆ ಎನ್ನಬಹುದು. ಇದರೊಂದಿಗೆ ಪರೋಕ್ಷ ತೆರಿಗೆಯನ್ನೂ ದೇಶದ ತೆರಿಗೆ ವ್ಯವಸ್ಥೆ ಒಳಗೊಂಡಿರುತ್ತದೆ. 

ವ್ಯಕ್ತಿಯ ಒಟ್ಟು ಆದಾಯ ಅಥವಾ ಸಂಪತ್ತಿನ ಮೇಲೆ ವಿಧಿಸುವ ತೆರಿಗೆಗಳು ನೇರ ತೆರಿಗೆ ಅಡಿಯಲ್ಲಿ ಬರುತ್ತವೆ. 

* ಆದಾಯ ತೆರಿಗೆ: ವಾರ್ಷಿಕ ₹5 ಲಕ್ಷ ಮತ್ತು ಅದಕ್ಕಿಂತಲೂ ಹೆಚ್ಚು ವೇತನ ಪಡೆಯುವ ಉದ್ಯೋಗಿಗಳಿಗೆ ಟಿಡಿಎಸ್‌ (ಮೂಲದಲ್ಲಿಯೇ ತೆರಿಗೆ ಕಡಿತ) ಮಾಡಲಾಗುತ್ತದೆ.

* ಆಸ್ತಿ ತೆರಿಗೆ: ಪುರಸಭೆ, ಪಟ್ಟಣ ಅಥವಾ ಗ್ರಾಮ ಪಂಚಾಯಿತಿ, ಕಾರ್ಪೊರೇಷನ್‌ಗಳು ವ್ಯಕ್ತಿ ಹೊಂದಿರುವ ಕಟ್ಟಡ, ಭೂಮಿ ಅಥವಾ ಖರೀದಿಸುವ ಆಸ್ತಿಗೆ ತೆರಿಗೆ ಸಂಗ್ರಹಿಸಲಾಗುತ್ತದೆ. ರಾಜ್ಯವಾರು ತೆರಿಗೆ ದರದಲ್ಲಿ ವ್ಯತ್ಯಾಸವಾಗುತ್ತದೆ.

* ಕಾರ್ಪೊರೇಟ್‌ ತೆರಿಗೆ: ನೇರ ತೆರಿಗೆ ಸಂಗ್ರಹದಲ್ಲಿ ಕಾರ್ಪೊರೇಟ್‌ ತೆರಿಗೆ ಪ್ರಮುಖ ಭಾಗವಾಗಿದೆ. ಇದು ಹಲವು ರೀತಿಯ ತೆರಿಗೆಗಳು ಒಳಗೊಂಡಿದೆ; 

– ತೆರಿಗೆ ಪಾವತಿಯಿಂದ ತಪ್ಪಿಸಿಕೊಳ್ಳಲು ಶೂನ್ಯ ಅಥವಾ ಅತ್ಯಂತ ಕಡಿಮೆ ಆದಾಯ ತೋರಿಸುವ ಕಂಪನಿಗಳಿಗೆ ನಿರ್ದಿಷ್ಟ ತೆರಿಗೆ ವಿಧಿಸುವುದು ಕನಿಷ್ಠ ಪರ್ಯಾಯ ತೆರಿಗೆಯಿಂದ (ಮ್ಯಾಟ್‌) ಸಾಧ್ಯವಾಗಿದೆ

– ಸಂಸ್ಥೆಗಳು ಉದ್ಯೋಗಿಗಳಿಗೆ ನೀಡುವ ಸವತ್ತುಗಳಿಗೆ ಪಾವತಿಸಬೇಕಾದುದು ಹೆಚ್ಚುವರಿ ಸೌಲಭ್ಯ ತೆರಿಗೆ (ಎಫ್‌ಬಿಟಿ)

– ಷೇರುಗಳ ಖರೀದಿ ಮತ್ತು ಮಾರಾಟದ ಮೇಲೆ ವಿಧಿಸಲಾಗುವ ಷೇರು ವರ್ಗಾವಣೆ ತೆರಿಗೆ (ಎಸ್‌ಟಿಟಿ) ಹಾಗೂ ಷೇರುದಾರರಿಗೆ ಕಂಪನಿಗಳು ನೀಡುವ ಲಾಭಾಂಶದ ಮೇಲೆ ವಿಧಿಸಲಾಗುವ ತೆರಿಗೆ ಲಾಭಾಂಶ ವಿತರಣಾ ತೆರಿಗೆ (ಡಿಡಿಟಿ) 

* ಬಂಡವಾಳ ವೃದ್ಧಿ ತೆರಿಗೆ: ಸಂಸ್ಥೆಗಳು ಅಥವಾ ವ್ಯಕ್ತಿಗೆ ಆಸ್ತಿ ಮಾರಾಟದಿಂದ ಬರುವ ಹಣದ ಮೇಲೆ ತೆರಿಗೆ ವಿಧಿಸಲಾಗುತ್ತದೆ. ಆಸ್ತಿಯ ಮೂಲ ಬೆಲೆ ಮತ್ತು ಮಾರಾಟ ಮಾಡಿದ ಬೆಲೆಯ ವ್ಯತ್ಯಾಸಕ್ಕೆ ಬಂಡವಾಳ ವೃದ್ಧಿ ತೆರಿಗೆ (ಕ್ಯಾಪಿಟಲ್‌ ಗೇಯ್ಸ್‌ ಟ್ಯಾಕ್ಸ್‌) ವಿಧಿಸಲಾಗುತ್ತದೆ. ದೀರ್ಘಾವಧಿ ಮತ್ತು ಅಲ್ಪಾವಧಿ ಎರಡು ವಿಧಗಳಾಗಿ ಇದನ್ನು ವಿಂಗಡಿಸಲಾಗಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು