ಗುರುವಾರ , ಏಪ್ರಿಲ್ 2, 2020
19 °C

ಕೇಂದ್ರ ಬಜೆಟ್‌ 2020: ತೆರಿಗೆ ಶ್ರೇಣಿ ಬದಲಾಗಬಹುದೇ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾರತೀಯ ಅರ್ಥವ್ಯವಸ್ಥೆಗೆ ಸದ್ಯ ಸವಾಲಾಗಿರುವ ಕ್ಷೇತ್ರಗಳಲ್ಲಿ ಕೃಷಿ ವಲಯ ಅತ್ಯಂತ ಪ್ರಮುಖವಾದುದು. ಬಹುಪಾಲು ಜನ ಕೃಷಿ ಕ್ಷೇತ್ರವನ್ನೇ ನೆಚ್ಚಿಕೊಂಡಿದ್ದರೂ ದೇಶದ ನಿವ್ವಳ ಆಂತರಿಕ ಉತ್ಪನ್ನಕ್ಕೆ (ಜಿಡಿಪಿ) ಈ ವಲಯದ ಕೊಡುಗೆಯ ಪ್ರಮಾಣ ಕಡಿಮೆಯಾಗಿದೆ. 2002–2011ರ ಅವಧಿಯಲ್ಲಿ ಜಿಡಿಪಿಗೆ ಕೃಷಿ ಕ್ಷೇತ್ರದ ಕೊಡುಗೆ ಶೇ 4.4ರಷ್ಟಿತ್ತು. ಅದೇ 2012–2019ರ ಅವಧಿಯಲ್ಲಿ ಅದರ ಪ್ರಮಾಣ ಶೇ 3.1ಕ್ಕೆ ಇಳಿದಿದೆ. ಹಿಂದಿನ ಎರಡು ದಶಕಗಳ ಅವಧಿಯಲ್ಲಿ ಕೃಷಿ ಕ್ಷೇತ್ರದ ಪ್ರಗತಿ ತುಂಬಾ ಕುಂಠಿತವಾಗಿದೆ. ಈ ಕಾರಣದಿಂದ ಗ್ರಾಮಾಂತರ ಭಾಗದ ಜನರಲ್ಲಿ ಕೊಳ್ಳುವ ಶಕ್ತಿ ಸಹ ಕಡಿಮೆಯಾಗಿದ್ದು, ಗ್ರಾಮೀಣ ಅರ್ಥವ್ಯವಸ್ಥೆಗೆ ಗ್ರಹಣ ಹಿಡಿದಿದೆ. ಅಲ್ಲದೆ, ಬಡತನದ ಪ್ರಮಾಣವೂ ಹೆಚ್ಚುತ್ತಿದೆ.

ಸೂಕ್ತ ಸಾಲ ಸೌಲಭ್ಯ ಇಲ್ಲದಿರುವುದು, ಕೃಷಿ ಬೆಳೆಗೆ ಉತ್ಪಾದನೆ ವೆಚ್ಚಕ್ಕಿಂತಲೂ ಹೆಚ್ಚಿನ ಬೆಲೆ ಖಾತರಿ ಇನ್ನೂ ಸಿಗದಿರುವುದು, ಹೊಸ ಆವಿಷ್ಕಾರಗಳು ರೈತರನ್ನು ತಲುಪದೇ ಇರುವುದು – ಕೃಷಿ ಕ್ಷೇತ್ರದ ತೆವಳಿಕೆಗೆ ಕಾರಣಗಳು. 2022ರ ವೇಳೆಗೆ ರೈತರ ಆದಾಯ ದ್ವಿಗುಣಗೊಳ್ಳುವಂತೆ ಮಾಡಲಾಗುವುದು ಎನ್ನುವುದು ಪ್ರಧಾನಿ ನೀಡಿದ ಭರವಸೆ.

ಬಜೆಟ್‌ನಲ್ಲಿ ಏನು ನಿರೀಕ್ಷೆ?:

ಪ್ರಧಾನಮಂತ್ರಿ ಕಿಸಾನ್‌ ಯೋಜನೆಯ ವ್ಯಾಪ್ತಿಗೆ ಇನ್ನಷ್ಟು ರೈತರನ್ನು ಸೇರ್ಪಡೆ ಮಾಡಲು ಬಜೆಟ್‌ನಲ್ಲಿ ಕೆಲವು ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ರೈತರ ಖಾತೆಗಳಿಗೆ ತ್ವರಿತವಾಗಿ ನೇರ ಹಣ ವರ್ಗಾವಣೆ ಮಾಡಿ, ಗ್ರಾಮೀಣ ಜನರ ಕೊಳ್ಳುವ ಶಕ್ತಿಯನ್ನು ವೃದ್ಧಿಸಲಾಗುತ್ತದೆ ಎಂದೂ ಆಶಿಸಲಾಗಿದೆ. ಅರುಣ್‌ ಜೇಟ್ಲಿ ಅವರು ಹಣಕಾಸು ಸಚಿವರಾಗಿದ್ದಾಗ ಬಜೆಟ್‌ನಲ್ಲಿ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಹಂಚಿಕೆ ಮಾಡಲಾಗಿತ್ತು. ಆದರೆ, ಬೆಳೆವಿಮೆ ಸೇರಿದಂತೆ ಹಲವು ಯೋಜನೆಗಳು ರೈತರನ್ನು ಸಮರ್ಪಕವಾಗಿ ತಲುಪಿರಲಿಲ್ಲ. ರಾಜ್ಯ ಸರ್ಕಾರಗಳ ಸಂಪೂರ್ಣ ಸಹಕಾರವಿಲ್ಲದೆ ಕೃಷಿ ಕ್ಷೇತ್ರದ ಸುಧಾರಣೆ ಸಾಧ್ಯವಿಲ್ಲ ಎಂದು ಅರಿತಿರುವ ಸಚಿವರು, ಈ ಸಲ ಯೋಜನೆಗಳನ್ನು ಘೋಷಿಸುವಾಗ ರಾಜ್ಯ ಸರ್ಕಾರಗಳಿಗೆ ಮಹತ್ವದ ಹೊಣೆ ವಹಿಸುವ ನಿರೀಕ್ಷೆ ಇದೆ.

ಬೆಳೆ ವೈವಿಧ್ಯ ಹಾಗೂ ರೈತ ಉತ್ಪಾದಕ ಸಂಘಗಳ (ಎಫ್‌ಪಿಒ) ಸ್ಥಾಪನೆಗೆ ಉತ್ತೇಜನ ನೀಡುವಂತಹ ಯೋಜನೆಗಳನ್ನು ಘೋಷಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಎಫ್‌ಪಿಒಗಳಿಗೆ ಅಗತ್ಯ ಹಣಕಾಸು ಮತ್ತು ತಂತ್ರಜ್ಞಾನದ ನೆರವನ್ನು ನೀಡುವ ಮೂಲಕ ಕೃಷಿ ಉತ್ಪಾದನೆ ಹೆಚ್ಚಿಸುವ ಗುರಿ ಸರ್ಕಾರದ್ದಾಗಿದೆ. ನೀರನ್ನು ಅತ್ಯಧಿಕ ಬಯಸುವ ಭತ್ತದ ಬೆಳೆಗೆ ಪರ್ಯಾಯವಾಗಿ ಬೇರೆ ಬೆಳೆಗಳನ್ನು ಬೆಳೆಯುವಂತೆ ಪ್ರೋತ್ಸಾಹಿಸಲು ಬೆಳೆ ವೈವಿಧ್ಯ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ ಎಂದೂ ಹೇಳಲಾಗಿದೆ.

ತೆರಿಗೆ ಶ್ರೇಣಿ ಬದಲು ಸಾಧ್ಯತೆ
ಆದಾಯ ತೆರಿಗೆದಾತರ ಪಾಲಿಗೆ ಈ ಸಲದ ಬಜೆಟ್‌ ಖುಷಿ ತರಬಹುದು ಎಂಬ ನಿರೀಕ್ಷೆ ದಟ್ಟವಾಗಿದೆ. ತೆರಿಗೆ ಕಡಿತ ಹಾಗೂ ತೆರಿಗೆ ಶ್ರೇಣಿಗಳಲ್ಲಿ ಬದಲಾವಣೆ ಮಾಡಲು ಬಜೆಟ್‌ಪೂರ್ವ ಸಭೆಗಳಲ್ಲಿ ಭಾರಿ ಒತ್ತಾಯ ಕೇಳಿಬಂದಿದ್ದು, ಹಣಕಾಸು ಸಚಿವರು ಅದಕ್ಕೆ ಕಿವಿಗೊಡಬಹುದು ಎನ್ನಲಾಗಿದೆ.

ಸದ್ಯ ₹2.5 ಲಕ್ಷದವರೆಗಿನ ಆದಾಯಕ್ಕೆ ತೆರಿಗೆಯಿಂದ ವಿನಾಯ್ತಿ ಇದೆ. ನಂತರದ ಆದಾಯಕ್ಕೆ ಬೇರೆ, ಬೇರೆ ಶ್ರೇಣಿಗಳಲ್ಲಿ ತೆರಿಗೆ ಆಕರಿಸಲಾಗುತ್ತದೆ. ಆ ತೆರಿಗೆ ಶ್ರೇಣಿಗಳು ಬಜೆಟ್‌ನಲ್ಲಿ ಇನ್ನಷ್ಟು ಸರಳೀಕರಣಗೊಳ್ಳುವ ಸಾಧ್ಯತೆ ಇದೆ. ₹2.5 ಲಕ್ಷದಿಂದ ₹10 ಲಕ್ಷದವರೆಗಿನ ಆದಾಯಕ್ಕೆ ಶೇ 10; ₹10 ಲಕ್ಷದಿಂದ ₹20ಲಕ್ಷದವರೆಗಿನ ಆದಾಯಕ್ಕೆ ಶೇ20 ಹಾಗೂ ₹20ಲಕ್ಷದಿಂದ ₹ 2 ಕೋಟಿವರೆಗಿನ ಆದಾಯಕ್ಕೆ ಶೇ 30ರಷ್ಟು ತೆರಿಗೆ ನಿಗದಿ ಮಾಡುವ ಸಾಧ್ಯತೆ ಇದೆ. ತೆರಿಗೆ ವಿನಾಯ್ತಿ ವ್ಯಾಪ್ತಿಯನ್ನು ₹5ಲಕ್ಷದವರೆಗೆ ವಿಸ್ತರಿಸುವ ಸಾಧ್ಯತೆಯೂ ಇದೆ ಎಂದು ಮೂಲಗಳು ತಿಳಿಸಿವೆ.

ಹಿಗ್ಗುತ್ತಲೇ ಇದೆ ಬಜೆಟ್‌ ಕೊರತೆಯ ಬಲೂನು

2019–20ನೇ ಸಾಲಿನ ಆರ್ಥಿಕ ವರ್ಷದಲ್ಲಿ ಬಜೆಟ್‌ ಕೊರತೆ ಪ್ರಮಾಣಶೇ 3.3ರಷ್ಟಕ್ಕಿಂತ ಕಡಿಮೆ ಇರಬೇಕು ಎಂದು ಸರ್ಕಾರವು ಗುರಿ ಹಾಕಿಕೊಂಡಿತ್ತು. ಆದರೆ, ಆರ್ಥಿಕ ವರ್ಷದ ಮಧ್ಯದಲ್ಲೇ ಈ ಗುರಿಯನ್ನು ಪರಿಷ್ಕರಿಸಿ ಬಜೆಟ್ ಕೊರತೆ ಪ್ರಮಾಣವನ್ನು ಶೇ 3.44ಕ್ಕೆ ಹೆಚ್ಚಿಸಿತ್ತು. ದೇಶದ ಆರ್ಥಿಕತೆ ಕುಂಟುತ್ತಿರುವ ಕಾರಣ ಮತ್ತು ನೇರ ತೆರಿಗೆ ಆದಾಯದಲ್ಲಿನ ಭಾರಿ ಕುಸಿತ ಹಾಗೂ ಕಾರ್ಪೊರೇಟ್‌ ತೆರಿಗೆಯ ಕಡಿತದಿಂದ ಸರ್ಕಾರದ ವರಮಾನ ಭಾರಿ ಪ್ರಮಾಣದಲ್ಲಿ ಕಡಿಮೆಯಾಗಿದೆ. ಈ ಎಲ್ಲಾ ಅಂಶಗಳನ್ನು ಪರಿಗಣಿಸಿದರೆ ಈ ಸಾಲಿನಲ್ಲೂ ಬಜೆಟ್‌ ಕೊರತೆಯ ಪ್ರಮಾಣಶೇ 3.8ರಷ್ಟು ಆಗುವ ಸಾಧ್ಯತೆ ಇದೆ. 2020–21ನೇ ಸಾಲಿನ ಬಜೆಟ್‌ನಲ್ಲೂ ಕೊರತೆ ಪ್ರಮಾಣ ಶೇ 3.8ರಿಂದಶೇ 4ರಷ್ಟು ಆಗಬಹುದು ಎನ್ನಲಾಗುತ್ತಿದೆ.

ಕುಂಠಿತ ಆರ್ಥಿಕತೆ ಮುಂದಿನ ಆರ್ಥಿಕ ವರ್ಷದಲ್ಲೂ (2020–21) ಮುಂದುವರಿಯುವ ಸಾಧ್ಯತೆ ಇದೆ. ಬಜೆಟ್ ಕೊರತೆ ಹೆಚ್ಚಿದಷ್ಟೂ ಖಾಸಗಿ ವಲಯಕ್ಕೆ ಲಭ್ಯವಿರುವ ಸಾಲದ ಪ್ರಮಾಣ ಕುಸಿಯುತ್ತದೆ. ಬಜೆಟ್ ಕೊರತೆ ಹೆಚ್ಚದಂತೆ ನೋಡಿಕೊಳ್ಳಲು ಸರ್ಕಾರವು ಹಲವು ಕ್ರಮಗಳನ್ನು ಘೋಷಿಸುವ ಸಾಧ್ಯತೆ ಇದೆ. ಮುಖ್ಯವಾಗಿ ವಿವಿಧ ಯೋಜನೆಗಳ ಮೇಲೆ ಸರ್ಕಾರವು ಮಾಡುವ ವಿನಿಯೋಗವನ್ನು ಕಡಿತ ಮಾಡುವ ಸಾಧ್ಯತೆ ಇದೆ. ಜನರ ಕಲ್ಯಾಣ ಯೋಜನೆಗಳ ಅನುದಾನ ಕಡಿತ ಆಗುವ ಸಾಧ್ಯತೆ ಇದೆ. ಜನರ ಕೊಳ್ಳುವ ಶಕ್ತಿ ಕುಗ್ಗುವುದರಿಂದ, ಆರ್ಥಿಕತೆಯು ಮತ್ತಷ್ಟು ಬಿಕ್ಕಟ್ಟಿಗೆ ಸಿಲುಕುವ ಅಪಾಯವಿದೆ.

ಕುಸಿದ ಬೇಡಿಕೆಗೆ ಬೇಕಿದೆ ಮದ್ದು

ದೇಶದಲ್ಲಿ ಬೇಡಿಕೆ ಕುಸಿದಿರುವ ಕಾರಣ ಎಲ್ಲಾ ಕ್ಷೇತ್ರಗಳ ಪ್ರಗತಿಯೂ ಕುಂಠಿತಗೊಂಡಿವೆ. 2018–19ನೇ ಸಾಲಿಗೆ ಹೋಲಿಸಿದರೆ, 2019–20ರಲ್ಲಿ ಸಾಲ ನೀಡಿಕೆ ಪ್ರಮಾಣವು ಕುಸಿದಿದೆ. ಇದರಿಂದ ಜನರಲ್ಲಿ ಹಣದ ಕೊರತೆ ಉಂಟಾಗಿದೆ. ಈ ಕಾರಣದಿಂದ ಬೇಡಿಕೆ ಕುಸಿದಿದೆ. ಬೇಡಿಕೆ ಇಲ್ಲದ ಕಾರಣ ಎಲ್ಲಾ ಕ್ಷೇತ್ರಗಳಲ್ಲೂ ಉದ್ದಿಮೆದಾರರು ಹೂಡಿಕೆಯಿಂದ ಹಿಂದೆ ಸರಿದಿದ್ದಾರೆ. ಇದರಿಂದ ಉದ್ಯೋಗ ನಷ್ಟವಾಗಿ, ಜನರ ವೆಚ್ಚ ಮಾಡುವ ಸಾಮರ್ಥ್ಯ ಕುಸಿದಿದೆ. 2019–20ನೇ ಆರ್ಥಿಕ ವರ್ಷದಲ್ಲಿ ಹಣದ ಕೊರತೆ–ಬೇಡಿಕೆ ಕುಸಿತ– ಬಂಡವಾಳ ಹೂಡದಿರುವಿಕೆಯ ವರ್ತುಲವು ಕಗ್ಗಂಟಾಗಿ ಮಾರ್ಪಟ್ಟಿದೆ. ಈ ಸಾಲಿನ ಹಬ್ಬದ ಋತುವಿನಲ್ಲಿ ಜನರ ಕೊಳ್ಳುವ ಶಕ್ತಿಯನ್ನು ಹೆಚ್ಚಿಸಲು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಾಲ ನೀಡಿಕೆಯನ್ನು ಉತ್ತೇಜಿಸಲು ಹಲವು ಕ್ರಮಗಳನ್ನು ಘೋಷಿಸಿದ್ದರು. ಆದೂ ಗಮನಾರ್ಹ ಬದಲಾವಣೆ ತರಲಿಲ್ಲ.

ಇದೇ ಪರಿಸ್ಥಿತಿ ಮುಂದಿನ ಆರ್ಥಿಕ ವರ್ಷದಲ್ಲೂ ಮುಂದುವರಿಯುವ ಸಾಧ್ಯತೆ ಇದೆ. ಹೀಗೇ ಆದರೆ, ಈ ಕಗ್ಗಂಟು ಮತ್ತಷ್ಟು ಜಟಿಲವಾಗಲಿದೆ. ಇದನ್ನು ತಪ್ಪಿಸುವ ಉದ್ದೇಶದಿಂದ, ಜನರ ಕೊಳ್ಳುವ ಶಕ್ತಿಯನ್ನು ಹೆಚ್ಚಿಸಲು ಸರ್ಕಾರವು ಹಲವು ಕ್ರಮಗಳನ್ನು ಘೋಷಿಸುವ ನಿರೀಕ್ಷೆ ಇದೆ. ಸರ್ಕಾರವು ಆದಾಯ ತೆರಿಗೆ ಮತ್ತು ಇತರ ತೆರಿಗೆಗಳನ್ನು ಕಡಿಮೆ ಮಾಡಿದರೆ, ವೆಚ್ಚ ಮಾಡಲು ಜನರಲ್ಲಿ ಉಳಿಯುವ ಹಣದ ಪ್ರಮಾಣ ಏರಬಹುದು. ಇದು ಬೇಡಿಕೆ ಮತ್ತು ಬಂಡವಾಳ ಹೂಡಿಕೆ ಹೆಚ್ಚಳವನ್ನು ಉತ್ತೇಜಿಸಬಹುದು.

ಕೈಗೂಡಬೇಕಿದೆ ಬಂಡವಾಳ ಹಿಂತೆಗೆಯುವಿಕೆ

2019–20ನೇ ಆರ್ಥಿಕ ವರ್ಷದಲ್ಲಿ, ಸರ್ಕಾರವು ತನ್ನ ಸ್ವತ್ತುಗಳನ್ನು ಮಾರಾಟ ಮಾಡುವ ಮೂಲಕ ₹ 1 ಲಕ್ಷ ಕೋಟಿ ವರಮಾನ ಗಳಿಸುವ ಗುರಿ ಹಾಕಿಕೊಂಡಿತ್ತು. ಈ ಸಾಲಿನಲ್ಲಿ ಬಂಡವಾಳ ಹಿಂತೆಗೆಯುವಿಕೆ ಮೂಲಕ ಈವರೆಗೆ ₹ 18,000 ಕೋಟಿ ಮಾತ್ರ ಕ್ರೋಡೀಕರಿಸಿದೆ. ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್‌ (ಬಿಪಿಸಿಎಲ್‌) ಅನ್ನು ಸಂಪೂರ್ಣವಾಗಿ ಮಾರಾಟ ಮಾಡುವ ಮೂಲಕ ₹ 60,000 ಕೋಟಿ ಕ್ರೋಡೀಕರಿಸುವ ಗುರಿ ಹಾಕಿಕೊಳ್ಳಲಾಗಿತ್ತು. ಬಿಪಿಸಿಎಲ್ ಮಾರಾಟ ಪ್ರಕ್ರಿಯೆ ಚಾಲನೆಯಲ್ಲಿ ಇದ್ದರೂ, ಈ ಆರ್ಥಿಕ ವರ್ಷದ ಅಂತ್ಯಕ್ಕೆ ಅದು ಪೂರ್ಣವಾಗುವ ನಿರೀಕ್ಷೆ ಇಲ್ಲ. ಹೀಗಾಗಿ ಬಂಡವಾಳ ಹಿಂತೆಗೆಯುವಿಕೆಯ ಗುರಿ ಬಹುಪಾಲು ವಿಫಲವಾಗಲಿದೆ.

2020–21ನೇ ಸಾಲಿನಲ್ಲೂ ಬಂಡವಾಳ ಹಿಂತೆಗೆಯುವಿಕೆ ಮೂಲಕ ಆದಾಯ ಸಂಗ್ರಹಿಸುವ ಗುರಿಯನ್ನು ಹಾಕಿಕೊಳ್ಳುವ ನಿರೀಕ್ಷೆ ಇದೆ. ಬಿಪಿಸಿಎಲ್‌ ಮತ್ತು ಏರ್‌ ಇಂಡಿಯಾ ಮಾರಾಟದಿಂದ ಈ ಗುರಿಯನ್ನು ಮುಟ್ಟುವ ಸಾಧ್ಯತೆ ಇದೆ. ಈ ಗುರಿ ಮುಟ್ಟಿದರೆ, ಬಜೆಟ್‌ ಕೊರತೆಯ ಪ್ರಮಾಣ ಸ್ವಲ್ಪ ತಗ್ಗಬಹುದು.

ಬಜೆಟ್‌ ಹಿಂದೆ ಕೆಲಸ ಮಾಡಿದವರು

2020–21ನೇ ಸಾಲಿನ ಬಜೆಟ್‌ ರಚನೆಗೂ ಪೂರ್ವಭಾವಿಯಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಅರ್ಥಶಾಸ್ತ್ರಜ್ಞರು, ಉದ್ಯಮಿಗಳು, ರೈತರು ಹಾಗೂ ಇತರ ಹಲವು ಸಮುದಾಯದವರ ಜತೆ ಪ್ರತ್ಯೇಕವಾಗಿ ಸಭೆ ನಡೆಸಿದ್ದಾರೆ. ಇವರಲ್ಲದೆ ಇನ್ನೂ ಐವರು ಅಧಿಕಾರಿಗಳ ಸಲಹೆ ಸೂಚನೆಗಳೂ ಈ ಬಾರಿಯ ಬಜೆಟ್‌ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿವೆ.

ರಾಜೀವ್‌ ಕುಮಾರ್‌ (ಹಣಕಾಸು ಕಾರ್ಯದರ್ಶಿ): ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ವಿಲೀನವೂ ಸೇರಿದಂತೆ ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಇತ್ತೀಚೆಗೆ ನಡೆದ ಭಾರಿ ಬದಲಾವಣೆಗಳನ್ನು ರಾಜೀವ್‌ ಅವರು ಅತ್ಯಂತ ಸನಿಹದಿಂದ ಗಮನಿಸಿದ್ದಾರೆ. ಬ್ಯಾಂಕ್‌ಗಳ ಸಬಲೀಕರಣಕ್ಕೆ ಪುನರ್ಧನ ನೀಡಿದ ಸಂದರ್ಭ ಹಾಗೂ ಅನುತ್ಪಾದಕ ಆಸ್ತಿಯ ಪ್ರಮಾಣವು ಅಪಾಯಕಾರಿ ಮಟ್ಟದಲ್ಲಿರುವ ಇಂದಿನ ಸ್ಥಿತಿಯಲ್ಲಿ ಬ್ಯಾಂಕಿಂಗ್‌ ಕ್ಷೇತ್ರವನ್ನು ಬಲಪಡಿಸುವ ನಿಟ್ಟಿನಲ್ಲಿ ಇವರು ಮಹತ್ವದ ಪಾತ್ರ ವಹಿಸಲಿದ್ದಾರೆ ಎನ್ನಲಾಗಿದೆ

ಅತನು ಚಕ್ರವರ್ತಿ (ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ): ಸರ್ಕಾರಿ ಆಸ್ತಿಗಳ ಮಾರಾಟ ತಜ್ಞರಾಗಿರುವ ಚಕ್ರವರ್ತಿ ಅವರು ಕಳೆದ ಜುಲೈ ತಿಂಗಳಲ್ಲಿ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಭಾರತದ ಮೊದಲ ಸಾಗರೋತ್ತರ ಬಾಂಡ್‌ಗಳ ಮಾರಾಟದ ಯೋಜನೆ ರೂಪಿಸುವ ಹೊಣೆಯನ್ನು ಇವರಿಗೆ ನೀಡಲಾಗಿತ್ತು. ದೇಶದ ಆರ್ಥಿಕ ಪ್ರಗತಿ ದರವು ಶೇ 5ಕ್ಕೂ ಕೆಳಕ್ಕೆ ಇಳಿದಾಗ, ಅದರ ಚೇತರಿಕೆಗಾಗಿ ಮೂಲಸೌಲಭ್ಯ ಕ್ಷೇತ್ರದಲ್ಲಿ ₹ 1 ಲಕ್ಷ ಕೋಟಿ ಹೂಡಿಕೆಯ ಯೋಜನೆಯೊಂದನ್ನು ಇವರ ನೇತೃತ್ವದ ಸಮಿತಿಯು ರೂಪಿಸಿತ್ತು. ಈಗ, ಬಜೆಟ್‌ ಕೊರತೆಯನ್ನು ನೀಗಿಸಿ, ಆರ್ಥಿಕತೆಯನ್ನು ಮೇಲೆತ್ತಲು ಅಗತ್ಯವಿರುವ ಸಂಪನ್ಮೂಲಗಳನ್ನು ಸೃಷ್ಟಿಸುವ ನಿಟ್ಟಿನಲ್ಲಿ ಇವರ ಸಲಹೆಗಳು ಅತ್ಯಂತ ಮಹತ್ವಪೂರ್ಣ ಎನಿಸಿವೆ.

ಟಿ.ವಿ. ಸೋಮನಾಥನ್‌ (ವೆಚ್ಚಗಳ ಕಾರ್ಯದರ್ಶಿ): ಇವರು ಹಣಕಾಸು ಸಚಿವಾಲಯಕ್ಕೆ ಇತ್ತೀಚೆಗಷ್ಟೇ ಬಂದವರು. ವ್ಯರ್ಥ ವೆಚ್ಚಗಳನ್ನು ಕಡಿತಗೊಳಿಸಿ, ಹಣವನ್ನು ತರ್ಕಬದ್ಧವಾಗಿ ವೆಚ್ಚಮಾಡುವ ಹೊಣೆ ಇವರದ್ದು. ಪ್ರಧಾನಿ ಮೋದಿ ಅವರ ಕಚೇರಿಯಲ್ಲಿ ಕೆಲಸ ಮಾಡಿರುವ ಅನುಭವವನ್ನು ಹೊಂದಿದ್ದಾರೆ. ಮೋದಿ ಎಂಥ ಬಜೆಟ್‌ ಅನ್ನು ನಿರೀಕ್ಷಿಸುತ್ತಾರೆ ಎಂಬುದರ ಕಲ್ಪನೆ ಇವರಿಗೆ ಇದೆ. ಆದ್ದರಿಂದ ಇವರ ಸಲಹೆ–ಸೂಚನೆಗಳು ಬಜೆಟ್‌ ರಚನೆಯಲ್ಲಿ ಮಹತ್ವ ಪಡೆದಿವೆ.

ಭೂಷಣ್‌ ಪಾಂಡೆ (ರೆವಿನ್ಯೂ ಕಾರ್ಯದರ್ಶಿ): ಬಹುಶಃ ಹಣಕಾಸು ಸಚಿವಾಲಯದಲ್ಲಿ ಅತಿ ಹೆಚ್ಚು ಒತ್ತಡದಲ್ಲಿರುವ ಅಧಿಕಾರಿ ಇವರು. ಯಾಕೆಂದರೆ, ಸರ್ಕಾರದ ಸಂಪನ್ಮೂಲಗಳನ್ನು ಹೆಚ್ಚಿಸುವುದು ಇವರ ಹೊಣೆಯಾಗಿದೆ. ಆರ್ಥಿಕ ಹಿಂಜರಿತದಿಂದಾಗಿ ಸರ್ಕಾರದ ವರಮಾನವು ಕಡಿಮೆಯಾಗಿದೆ. ಹೂಡಿಕೆಯ ಪ್ರಮಾಣ ಹೆಚ್ಚಾಗಬಹುದೆಂಬ ನಿರೀಕ್ಷೆಯಿಂದ ಕಾರ್ಪೊರೇಟ್‌ ತೆರಿಗೆಗಳಲ್ಲಿ ಕಳೆದ ವರ್ಷ ಸುಮಾರು ₹2000 ಕೋಟಿ ಕಡಿತ ಮಾಡಲಾಗಿತ್ತು. ಆದರೆ ಅದು ನಿರೀಕ್ಷಿತ ಫಲ ನೀಡಲಿಲ್ಲ. ಆದ್ದರಿಂದ ಕೆಲವು ವಿನಾಯಿತಿಗಳನ್ನು ರದ್ದುಪಡಿಸುವುದೂ ಸೇರಿದಂತೆ ನೇರ ತೆರಿಗೆ ವಿಚಾರದಲ್ಲಿ ಇವರು ಕೊಟ್ಟ ಸಲಹೆಗಳಿಗೆ ಭಾರಿ ಮಹತ್ವ ಇದೆ.

ತುಹಿನ್‌ಕಾಂತ್‌ ಪಾಂಡೆ (ಷೇರು ವಿಕ್ರಯ ಕಾರ್ಯದರ್ಶಿ): ಸರ್ಕಾರಿ ಸ್ವಾಮ್ಯದ ಏರ್‌ ಇಂಡಿಯಾ ಸಂಸ್ಥೆಯ ಮಾರಾಟಕ್ಕಾಗಿ ಬಿಡ್ ಆಹ್ವಾನಿಸಿರುವುದು ಹಾಗೂ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಮಾರಾಟ ಯೋಜನೆಯ ಹಿಂದಿನ ಶಕ್ತಿ ಇವರು. ಪ್ರಸಕ್ತ ಸಾಲಿನಲ್ಲಿ ಷೇರು ಮಾರಾಟದ ಮೂಲಕ ಒಂದು ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ಸಂಗ್ರಹಿಸುವ ಗುರಿಯನ್ನು ಸಾಧಿಸಲು ಸಾಧ್ಯವಾಗಿಲ್ಲ. ಆದ್ದರಿಂದ ಮುಂದಿನ ವರ್ಷ ಇವರ ಮುಂದೆ ಇನ್ನೂ ದೊಡ್ಡ ಗುರಿಯನ್ನು ಇಡುವ ಸಾಧ್ಯತೆ ಇದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು