ಮಂಗಳವಾರ, ಏಪ್ರಿಲ್ 20, 2021
32 °C

Karnataka Budget 2021: ಸ್ತ್ರೀಯರಿಗೆ ಸಿ.ಎಂ ಸಲಾಮ್!

ರಾಜೇಶ್‌ ರೈ ಚಟ್ಲ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನಿತ್ಯ ಕಿವಿಗೆ ಅಪ್ಪಳಿಸುವ ಕೌಟುಂಬಿಕ ಹಿಂಸೆ, ತಾರತಮ್ಯ, ಅತ್ಯಾಚಾರ, ದೌರ್ಜನ್ಯ ಪ್ರಕರಣಗಳು ಹೆಣ್ಣು ಮಕ್ಕಳ ಸುರಕ್ಷತೆ, ಸಶಕ್ತೀಕರಣ, ಸಬಲೀಕರಣಕ್ಕೆ ಮತ್ತಷ್ಟು ಕ್ರಮ ಕೈಗೊಳ್ಳಬೇಕೆಂಬುದನ್ನು ಸಾರಿ ಹೇಳುತ್ತಿವೆ. ಮತ್ತೊಂದು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಸಂದರ್ಭದಲ್ಲೂ ಎಲ್ಲೆಡೆ ಅದೇ ಮಾತು.

ಈ ನಡುವೆ, ಆಯವ್ಯಯ ಮಂಡಿಸಿದ ಬಿ.ಎಸ್‌. ಯಡಿಯೂರಪ್ಪ ಮಹಿಳೆಯರ ಸಮಾನತೆ ಮತ್ತು ಸಬಲೀಕರಣಕ್ಕೆ ಒತ್ತು ನೀಡುವ ಮೂಲಕ, ಮೊದಲ ಬಾರಿಗೆ ಮಹಿಳಾ ಸಮುದಾಯದ ಆರೈಕೆ– ಓಲೈಕೆಗೆ ಮುಂದಾಗಿದ್ದಾರೆ.‌ ಮಹಿಳಾ ಉದ್ದೇಶಿತ ಯೋಜನೆಗಳಿಗೆ ₹ 37,188 ಕೋಟಿ ಅನುದಾನ ಒದಗಿಸಿದ್ದಾರೆ.

ಬೆಂಗಳೂರು ಸೇರಿದಂತೆ ಇತರ ಮಹಾನಗರಗಳಲ್ಲಿರುವ ಅಂಗನವಾಡಿಗಳನ್ನು ಶಿಶುಪಾಲನಾ ಕೇಂದ್ರಗಳಾಗಿ ಮೇಲ್ದರ್ಜೆಗೆ ಏರಿಸುವ ಮೂಲಕ ಹೊಸ ಸ್ವರೂಪ ನೀಡಲಾಗುವುದು. ಅಲ್ಲದೆ, ಜಿಲ್ಲಾ ಕೇಂದ್ರಗಳಲ್ಲಿ ತಲಾ ಎರಡು ಪ್ರಮುಖ ಸರ್ಕಾರಿ ಕಚೇರಿಗಳಲ್ಲಿ ಶಿಶುಪಾಲನಾ ಕೇಂದ್ರ ಆರಂಭಿಸಲಾಗುತ್ತಿದೆ. ದುಡಿಯುವ ಮಹಿಳೆಯರ ಮಕ್ಕಳನ್ನು ಗಮನದಲ್ಲಿಟ್ಟು ಈ ಕೇಂದ್ರಗಳನ್ನು ತೆರಯುವುದು ಸರ್ಕಾರದ ಉದ್ದೇಶ.

ಶೇ 4ರ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಒದಗಿಸುವ ಮೂಲಕ ಉದ್ಯಮ ಕ್ಷೇತ್ರದತ್ತ ಮಹಿಳೆಯರನ್ನು ಆಕರ್ಷಿಸಲು ಯೋಜನೆ ಬಜೆಟ್‌ನಲ್ಲಿದೆ. ಆಸ್ಪತ್ರೆ, ವೈದ್ಯಕೀಯ, ಆರೈಕೆ ಮತ್ತಿತರ ಸೇವಾ ವಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಉದ್ಯಮಿಗಳಿಗೆ ಮಹಿಳಾ ಅಭಿವೃದ್ಧಿ ನಿಗಮ ಅಥವಾ ಹಣಕಾಸು ಸಂಸ್ಥೆಯಿಂದ ಸರ್ಕಾರ ಸಾಲ ಸೌಲಭ್ಯ ಒದಗಿಸಲಿದೆ. ಗ್ರಾಮೀಣ ಮಹಿಳಾ ಸ್ವಸಹಾಯ ಸಂಘ, ಕೇಟರಿಂಗ್, ಸ್ವಚ್ಛತಾ ಕಾರ್ಯ, ಕೋಳಿ ಸಾಕಣೆ, ಕುರಿ ಸಾಕಣೆ, ನಿರ್ಮಾಣ ಕಾರ್ಯಗಳ ಮೂಲಕ ಸ್ವ ಉದ್ಯೋಗ ಕಲ್ಪಿಸಲು ಪಂಚಾಯತ್‌ರಾಜ್‌ ಸಂಸ್ಥೆಗಳ ಮೂಲಕ ಸರ್ಕಾರ ನೆರವು ನೀಡಲಿದೆ.

ಎಲ್ಲ ಪೊಲೀಸ್ ಠಾಣೆಗಳಲ್ಲಿ ನಿರ್ಭಯಾ ಯೋಜನೆಯಡಿ ಸಹಾಯ ಕೇಂದ್ರಗಳ ಸ್ಥಾಪನೆ, ಬೆಂಗಳೂರು ನಗರ ಸಾರ್ವಜನಿಕ ಸ್ಥಳಗಳಲ್ಲಿ ಕ್ಯಾಮೆರಾಗಳ ಅಳವಡಿಕೆ, ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ಸೂಕ್ತ ನೆರವು, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಿಂದ ಪರವಾನಗಿ ಪಡೆದು ಕಾರ್ಯನಿರ್ವಹಿಸುವ ಮಹಿಳೆಯರಿಗೆ ನಿವೇಶನ, ಗೋದಾಮು, ಅಂಗಡಿ ಹಂಚಿಕೆಯಲ್ಲಿ ಶೇ10ರಷ್ಟು ಮೀಸಲಾತಿ, ಮಹಿಳಾ ವಾಣಿಜ್ಯ ಉದ್ಯಮಿಗಳನ್ನು ಬೆಂಬಲಿಸಲು ಎಲಿವೇಟ್ ವುಮೆನ್ ಎಂಟರ್‌ಪ್ರೀನರ್‌ಶಿಪ್‌ ಸೇರಿದಂತೆ ವಿವಿಧ ಯೋಜನೆಗಳಿಗೆ ಅನುದಾನ ಒದಗಿಸಲಾಗಿದೆ.

ನಾಲ್ಕು ವಿಭಾಗಗಳಲ್ಲಿ ‘ತಾಯಂದಿರ ಎದೆಹಾಲಿನ ಬ್ಯಾಂಕ್‌’
ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಮಕ್ಕಳ ಉದ್ದೇಶಿತ ಯೋಜನೆಗಳಿಗೆ ಒಟ್ಟು ₹37,527 ಕೋಟಿ ಅನುದಾನ ಒದಗಿಸಲಾಗಿದೆ. ತಾಯಿ ಹಾಲಿನ ಕೊರತೆ ಪರಿಣಾಮ ನವಜಾತ ಶಿಶುಗಳು ಅಪೌಷ್ಟಿಕತೆಯಿಂದ ಬಳಲುವುದನ್ನು ತಡೆಗಟ್ಟುವ ಸಲುವಾಗಿ ರಾಜ್ಯದ ನಾಲ್ಕು ವಿಭಾಗಗಳಲ್ಲಿ ಒಟ್ಟು ₹ 2.5 ಕೋಟಿ ವೆಚ್ಚದಲ್ಲಿ ‘ತಾಯಂದಿರ ಎದೆಹಾಲಿನ ಬ್ಯಾಂಕ್‌’ ಸ್ಥಾಪಿಸಲು ಒತ್ತು ನೀಡಲಾಗಿದೆ.

* ಗರ್ಭಿಣಿಯರ ಸ್ಕ್ಯಾನಿಂಗ್‌ ಉತ್ತೇಜಿಸಲು ‘ಚಿಗುರು’ ಕಾರ್ಯಕ್ರಮ. ಇದಕ್ಕಾಗಿ ₹ 10 ಕೋಟಿ.

* ನವಜಾತ ಶಿಶುಗಳಲ್ಲಿ ಕಂಡುಬರುವ ಅನುವಂಶೀಯ ಮೆಟಾಬಾಲಿಕ್‌ ಕಾಯಿಲೆಯನ್ನು ಮೂಲದಲ್ಲೇ ಪತ್ತೆ ಮಾಡಲು ಬಳ್ಳಾರಿ ಮತ್ತು ಬೆಂಗಳೂರಿನಲ್ಲಿ ಪ್ರಯೋಗಾಲಯಗಳ ಸ್ಥಾಪನೆ. ಇದಕ್ಕೆ ₹10 ಕೋಟಿ ಅನುದಾನ.

* ತಾಯಿ ಮತ್ತು ಮಗುವನ್ನು ಅಪೌಷ್ಟಿಕತೆಯಿಂದ ರಕ್ಷಿಸಲು ₹5 ಕೋಟಿ ವೆಚ್ಚದಲ್ಲಿ ‘ಪೋಷಣೆ ಮತ್ತು ಜೀವನೋಪಾಯ’ ಕಾರ್ಯಕ್ರಮ.

* ಶೇ 75ಕ್ಕಿಂತ ಹೆಚ್ಚಿನ ಮನೋವೈಕಲ್ಯ ಹೊಂದಿರುವ ಮಕ್ಕಳಿಗೆ ಸದ್ಯ ನೀಡುತ್ತಿರುವ ಮಾಸಾಶನವನ್ನು ₹ 1,400 ರಿಂದ ₹ 2,000ಕ್ಕೆ ಹೆಚ್ಚಿಸುವುದು.

ಮಹಿಳೆಯರಿಗಾಗಿ ಉತ್ತೇಜನ

* ‘ಸಂಜೀವಿನಿ‘ ಯೋಜನೆ ಅಡಿ ಗ್ರಾಮೀಣ ಮಹಿಳಾ ಸ್ವಸಹಾಯ ಸಂಘಗಳ ಮೂಲಕ 60 ಸಾವಿರ ಮಹಿಳೆಯರಿಗೆ ಸ್ವಯಂ ಉದ್ಯೋಗದ ಅವಕಾಶ

* ಹಪ್ಪಳ, ಉಪ್ಪಿನಕಾಯಿ, ರೊಟ್ಟಿ, ಮಸಾಲೆಪುಡಿ ಮತ್ತಿತರ ಆಹಾರ ಪದಾರ್ಥಗಳ ಸಣ್ಣ ಉದ್ಯಮಗಳಿಗೆ  ಆಹಾರ ಸುರಕ್ಷತೆ, ಪ್ಯಾಕೇಜಿಂಗ್, ಬ್ರಾಂಡಿಂಗ್, ರಸ್ತೆ ಬದಿ ಮಳಿಗೆಗಳು ಮತ್ತು ಆನ್‌ಲೈನ್‌ ಮೂಲಕ ಮಾರುಕಟ್ಟೆ

* ಉದ್ಯೋಗಸ್ಥ ಮಹಿಳೆಯರ ಮಕ್ಕಳ ಪಾಲನೆಗೆ ಜಿಲ್ಲಾ ಮಟ್ಟದಲ್ಲಿ 2 ಶಿಶುಪಾಲನಾ ಕೇಂದ್ರ ಸ್ಥಾಪನೆ

* ಮಹಿಳಾ ಉದ್ಯಮಿಗಳನ್ನು ಪ್ರೋತ್ಸಾಹಿಸಲು ಶೇ 4 ಬಡ್ಡಿ ದರದಲ್ಲಿ ಸಾಲ ಸೌಲಭ್ಯ

* ಸರ್ಕಾರಿ ನೌಕರರಿಯಲ್ಲಿರುವ ಮಹಿಳೆಯರಿಗೆ ಹೆರಿಗೆ ರಜೆ 6 ತಿಂಗಳು ಜೊತೆಗೆ ಸೇವಾವಧಿಯಲ್ಲಿ 6 ತಿಂಗಳು ಮಕ್ಕಳ ಆರೈಕೆ ರಜೆ

* ‘ವನಿತಾ ಸಂಗಾತಿ’– ಗಾರ್ಮೆಂಟ್ಸ್ ಮಹಿಳಾ ಕಾರ್ಮಿಕರಿಗೆ ರಿಯಾಯಿತಿ ದರದಲ್ಲಿ ಬಸ್ ಪಾಸ್

* ಎಲ್ಲಾ ಪೊಲೀಸ್ ಠಾಣೆಗಳಲ್ಲಿ ನಿರ್ಭಯಾ ಸಹಾಯ ಕೇಂದ್ರ

* ಪ್ರತಿ ತಾಲ್ಲೂಕಿನಲ್ಲಿ 10ರಂತೆ 2,260 ಕಿರು ಉದ್ದಿಮೆ ಮೂಲಕ ಉತ್ತೇಜನ.

*
ಒಟ್ಟು ಜನಸಂಖ್ಯೆಯ ಅರ್ಧಭಾಗದಷ್ಟಿರುವ ಮಹಿಳೆಯರು ರಾಷ್ಟ್ರ ನಿರ್ಮಾಣ ಹಾಗೂ ಆರ್ಥಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಾಗ ಸಮೃದ್ಧಿಯ ವಾತಾವರಣ ಮೂಡುವುದು ಕಠಿಣವಲ್ಲ. ಇದರಿಂದ ಮಹಿಳೆಯರ ಆತ್ಮಬಲವೂ ವೃದ್ಧಿಯಾಗಲಿದೆ. ಮಹಿಳೆಯರ ಸಮಾನತೆ ಮತ್ತು ಸಬಲೀಕರಣಕ್ಕೆ ನಮ್ಮ ಸರ್ಕಾರ ಬದ್ಧ.
–ಬಿ.ಎಸ್‌. ಯಡಿಯೂರಪ್ಪ, ಮುಖ್ಯಮಂತ್ರಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು