ಗುರುವಾರ , ಜುಲೈ 7, 2022
23 °C
ಜಿಲ್ಲೆಯ ಜನರ ನಿರೀಕ್ಷೆ ಹುಸಿಗೊಳಿಸಿದ ಬಜೆಟ್‌; ಪಾಲಿಗೆ ಬಂದಿದ್ದೇ ‘ಪಂಚಾ’ಮೃತ

ಕೈಗಾರಿಕೆ, ಕೃಷಿ ಕ್ಷೇತ್ರಕ್ಕಿಲ್ಲ ಪ್ರೋತ್ಸಾಹ

ಕೆ.ಎಂ,ಸತೀಶ್‌ ಬೆಳ್ಳಕ್ಕಿ Updated:

ಅಕ್ಷರ ಗಾತ್ರ : | |

ಗದಗ: ಉತ್ತರ ಕರ್ನಾಟಕದವರೇ ಆದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಡಿಸುವ ಚೊಚ್ಚಲ ಬಜೆಟ್‌ನಲ್ಲಿ ಗದಗ ಜಿಲ್ಲೆಗೆ ಭರಪೂರ ಯೋಜನೆಗಳು ಘೋಷಣೆ ಆಗಬಹುದು ಎಂಬ ಜನರ ನಿರೀಕ್ಷೆಗಳು ಹುಸಿಯಾಗಿವೆ. 2022– 23ನೇ ಸಾಲಿನ ಆಯವ್ಯಯದಲ್ಲಿ ಗದಗ ಜಿಲ್ಲೆ ಐದು ಅಂಶಗಳಿಗಷ್ಟೇ ಸೀಮಿತವಾಗಿದ್ದು, ಜಿಲ್ಲೆಯ ಜನರು ಪಾಲಿಗೆ ಬಂದಿದ್ದೇ ‘ಪಂಚಾ’ಮೃತ ಎಂದು ಸಮಾಧಾನ ಪಟ್ಟುಕೊಳ್ಳುವಂತಾಗಿದೆ.

ಗದಗ ಕೃಷಿ ಪ್ರಧಾನ ಜಿಲ್ಲೆಯಾಗಿದ್ದು, ಈ ಬಾರಿಯ ಆಯವ್ಯಯದಲ್ಲಿ ಕೃಷಿ ಮತ್ತು ಕೃಷಿ ಆಧರಿತ ಕೈಗಾರಿಕೆಗಳಿಗೆ ಹೆಚ್ಚಿನ ಆದ್ಯತೆ ಸಿಗಬಹುದು ಎಂಬ ನಿರೀಕ್ಷೆ ಇತ್ತು. ಅಲ್ಲದೇ, ಈ ಹಿಂದೆ ಗದುಗಿನಲ್ಲಿ ನಡೆದ ಉತ್ತರ ಕರ್ನಾಟಕ ವಾಣಿಜ್ಯೋದ್ಯಮಿಗಳ ಸಮಾವೇಶದಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿ ಬೊಮ್ಮಾಯಿ, ‘ತುಂಗಭದ್ರಾ ಮತ್ತು ಕೃಷ್ಣಾ ನದಿ ತೀರಗಳ ಮಧ್ಯೆ ಇರುವ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಯೋಜಿತ ರೀತಿಯಲ್ಲಿ ಮುನ್ನಡೆದರೆ ಆಹಾರ ಸಂಸ್ಕರಣ ಘಟಕಗಳ ಸರಪಳಿಯನ್ನೇ ಸೃಷ್ಟಿಸಿ ಮಿನಿ ಪಂಜಾಬ್‌ ಮಾಡಬಹುದು. ಈ ಕಲ್ಪನೆ ಸಾಕಾರಕ್ಕೆ ನೀರಾವರಿ, ಕೃಷಿ ಮತ್ತು ಕೈಗಾರಿಕಾ ಕ್ಷೇತ್ರಗಳು ಒಂದುಗೂಡಬೇಕು. ರೈತ ಸ್ನೇಹಿ, ಪರಿಸರ ಸ್ನೇಹಿ ಉದ್ಯಮ ರೂಪಿಸಿ, ರೈತರಿಗೆ ಉತ್ತಮ ಬೆಲೆ ದೊರಕಿಸುವ ನಿಟ್ಟಿನಲ್ಲಿ ಸರ್ಕಾರ ಮುಂದಿನ ದಿನಗಳಲ್ಲಿ ಪ್ರಯತ್ನ ಮಾಡಲಿದೆ’ ಎಂದು ಹೇಳಿ ಹೊಸ ಕನಸು ಬಿತ್ತಿ ಹೋಗಿದ್ದರು. ಹಾಗಾಗಿ, ಈ ಬಾರಿಗೆ ಜಿಲ್ಲೆಗೆ ಫುಡ್‌ ಪಾರ್ಕ್‌ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದವರ ಕನಸಿಗೆ ಈ ಬಜೆಟ್‌ ತಣ್ಣೀರೆರಚಿದೆ.

ಗದಗ ಜಿಲ್ಲೆ ನೇಕಾರಿಕೆಗೂ ಹೆಸರುವಾಸಿಯಾಗಿದ್ದು, ಇಲ್ಲಿ ಸಿದ್ಧವಾಗುವ ಸೀರೆ ಹಾಗೂ ಜವಳಿ ಉತ್ಪನ್ನಗಳು ವಿವಿಧೆಡೆಗೆ ರಫ್ತಾಗುತ್ತವೆ. ಜಿಲ್ಲೆಯ ನೇಕಾರಿಕೆಯನ್ನು ಮತ್ತಷ್ಟು ಉತ್ತೇಜಿಸಲು ಟೆಕ್ಸ್‌ಟೈಲ್ ಪಾರ್ಕ್ ಸ್ಥಾಪಿಸಬೇಕು ಎಂಬುದು ನೇಕಾರರ ಹಲವು ವರ್ಷಗಳ ಬೇಡಿಕೆಯಾಗಿತ್ತು. ಆದರೆ, ಈ ಯೋಜನೆ ಧಾರವಾಡ ಮತ್ತು ಹಾವೇರಿ ಜಿಲ್ಲೆಗಳ ಪಾಲಾಗಿದ್ದು, ನೇಕಾರರ ಕನಸನ್ನು ಭಗ್ನಗೊಳಿಸಿದೆ.

ಪ್ರಾಕೃತಿಕ ಸೊಬಗು ಹಾಗೂ ಅತ್ಯಮೂಲ್ಯ ಔಷಧೀಯ ಸಸ್ಯ ಸಂಪತ್ತಿನಿಂದ ಖ್ಯಾತಿ ಗಳಿಸಿರುವ ಕಪ್ಪತಗುಡ್ಡ, ಐತಿಹಾಸಿಕ ಲಕ್ಕುಂಡಿ, ಡಂಬಳ ಕೆರೆ, ಗದಗ ಮೃಗಾಲಯ, ಬಿಂಕದಕಟ್ಟಿ ಸಾಲುಮರದ ತಿಮ್ಮಕ್ಕ ಉದ್ಯಾನ, ಗಜೇಂದ್ರಗಡ ಗುಡ್ಡ, ಶಿರಹಟ್ಟಿ ಕೋಟೆ ಮೊದಲಾದವುಗಳನ್ನು ಇರಿಸಿಕೊಂಡು ಪ್ರವಾಸೋದ್ಯಮ ಅಭಿವೃದ್ಧಿಗೆ ಹೆಚ್ಚಿನ ಅವಕಾಶಗಳು ಇದ್ದವು. ಆದರೆ, ಈ ಆಯವ್ಯದಲ್ಲಿ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಯಾವುದೇ ಅನುದಾನ ಘೋಷಣೆ ಆಗಿಲ್ಲ. 

ಸಾಸಲವಾಡ ಏತ ನೀರಾವರಿ ಯೋಜನೆ, ಬೃಹತ್‌ ಕೈಗಾರಿಕೆಗಳ ನಿರ್ಮಾಣ, ಜಿಂಕೆ ವನ ಸ್ಥಾಪನೆ ಮೊದಲಾದ ಬೇಡಿಕೆಗಳಿಗೆ ಈ ಆಯವ್ಯಯದಲ್ಲಿ ಮನ್ನಣೆ ಸಿಗದಿರುವುದು ಜಿಲ್ಲೆಯ ಜನತೆಗೆ ಬೇಸರ ತರಿಸಿದೆ.

ಗದಗ ಜಿಲ್ಲೆಗೆ ಸಿಕ್ಕಿದ್ದೇನು?

* ಕಳಸಾ ಬಂಡೂರಿ ನಾಲಾ ತಿರುವು ಯೋಜನೆ ಅನುಷ್ಠಾನಕ್ಕೆ ಪ್ರಸಕ್ತ ಸಾಲಿನಲ್ಲಿ ₹1 ಸಾವಿರ ಕೋಟಿ ಅನುದಾನ ಘೋಷಣೆ
* ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ಮಸ್ಕಿ, ಸಿಂಧನೂರು, ಗದಗ ಮತ್ತು ಯಾದಗಿರಿ ನಗರಗಳಿಗೆ ಬೈಪಾಸ್‌ ನಿರ್ಮಾಣ ಯೋಜನೆಗೆ ಅವಶ್ಯಕವಿರುವ ಭೂಸ್ವಾಧೀನ ವೆಚ್ಚದಲ್ಲಿ ರಾಜ್ಯ ಸರ್ಕಾರದ ಪಾಲನ್ನು ಭರಿಸಲು ತಾತ್ವಿಕ ಒಪ್ಪಿಗೆ
* ಗದಗ ವಾಡಿ ರೈಲು ಮಾರ್ಗ ಯೋಜನೆಗೆ ಚಾಲನೆ
* 55 ಕಿ.ಮೀ. ಉದ್ದದ ಗದಗ ಯಲವಿಗೆ ನೂತನ ರೈಲು ಮಾರ್ಗ ಯೋಜನೆ ಜಾರಿಗೆ ₹640 ಕೋಟಿ
* ರಸ್ತೆ ಸುರಕ್ಷತಾ ನಿಧಿಯಡಿ ಗದಗದಲ್ಲಿ ಸ್ವಯಂಚಾಲಿತ ಚಾಲನಾ ಪರೀಕ್ಷಾ ಪಥ ಸ್ಥಾಪನೆಗೆ ಕ್ರಮ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು