ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

Karnataka Budget 2023: ಹೊಸತು ಕಡಿಮೆ, ಮುಂದುವರಿದ ಹಳೇ ಯೋಜನೆಗಳು

ಆರೋಗ್ಯ, ಶಿಕ್ಷಣಕ್ಕೆ ಅನುದಾನ ಕಡಿತ, ಮಹಿಳೆ– ಮಕ್ಕಳಿಗೆ ಹೆಚ್ಚಳ
Published 7 ಜುಲೈ 2023, 23:30 IST
Last Updated 7 ಜುಲೈ 2023, 23:30 IST
ಅಕ್ಷರ ಗಾತ್ರ

ಪ್ರಗತಿಶೀಲ ರಾಜ್ಯವೊಂದರಲ್ಲಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಿಗೆ ಆದ್ಯತೆ ಹಾಗೂ ಅನುದಾನ ನೀಡಿಕೆ ಗಣನೀಯ ಪ್ರಮಾಣದಲ್ಲಿರಬೇಕು. ಹಾಗೆಯೇ, ಬದಲಾದ ಕಾಲಕ್ಕೆ ತಕ್ಕಂತೆ ಈ ಎರಡೂ ಕ್ಷೇತ್ರಗಳನ್ನು ಉನ್ನತೀಕರಿಸಿ, ಆಧುನಿಕ ಮತ್ತು ಸಮಕಾಲೀನ ವಿಚಾರ, ತಂತ್ರಜ್ಞಾನಗಳ ಅಳವಡಿಕೆ ಮತ್ತು ಅದಕ್ಕೆ ಪೂರಕವಾಗಿ ಕಾರ್ಯಕ್ರಮಗಳನ್ನು ರೂಪಿಸುವುದು ಅತ್ಯಗತ್ಯ. ಇಲ್ಲವಾದಲ್ಲಿ ಒಂದೇ ದೇಶದಲ್ಲಿ ಎರಡು ಬಗೆಯ ಸಮಾಜ ಸೃಷ್ಟಿಯಾಗುತ್ತದೆ ಎಂಬ ವಾದ ಹಿಂದಿನಿಂದಲೂ ಇದೆ. ಆದರೆ, ಪ್ರತಿ ಬಾರಿ ಮಂಡಿಸಲ್ಪಡುವ ಬಜೆಟ್‌ಗಳು ತಮ್ಮ ಸೈದ್ದಾಂತಿಕ ಮತ್ತು ಚುನಾವಣಾ ಭರವಸೆಗಳಿಗೆ ತಕ್ಕಂತೆ ಸಿದ್ಧ ಸೂತ್ರ ಹಾಗೂ ಪಾರಂಪರಿಕ ಚೌಕಟ್ಟನ್ನು ಮೀರಿ ಹೊಸ ಪರಂಪರೆಯನ್ನು ಸೃಷ್ಟಿಸುವುದು ತೀರಾ ಅಪರೂಪ. ಈ ಬಾರಿಯ ಬಜೆಟ್‌ ಕೂಡ ಭಿನ್ನವಾಗಿಲ್ಲ.

ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಿಗೆ ಅನುದಾನ ನೀಡಿಕೆಯಲ್ಲಿ ಹಿಂದಿನ ವರ್ಷಕ್ಕಿಂತ ತಲಾ ಶೇ 1 ರಷ್ಟು ಕಡಿತಗೊಳಿಸಲಾಗಿದ್ದು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕ್ಷೇತ್ರಕ್ಕೆ ಶೇ 2 ರಿಂದ ಶೇ 7 ಕ್ಕೆ ಹೆಚ್ಚಿಸಲಾಗಿದೆ. ಪ್ರಾಯಶಃ ಈ ಏರಿಕೆ ಗೃಹಲಕ್ಷ್ಮಿ, ಶಕ್ತಿಯಂತಹ ಮಹಿಳಾ ಕೇಂದ್ರಿತ ‘ಗ್ಯಾರಂಟಿ’ ಯೋಜನೆಗಳ ಹಣ ಹೊಂದಾಣಿಕೆಗೆ ಎಂಬುದು ಸ್ಪಷ್ಟ. ಏಕೆಂದರೆ ಮಹಿಳೆಯರಿಗೆ ಚಾಲ್ತಿಯಲ್ಲಿರುವ ಕೆಲವು ಯೋಜನೆಗಳಿಗೆ ಅನುದಾನ ಹೆಚ್ಚಿಸಿರುವುದು ಮತ್ತು ಬೆರಳೆಣಿಕೆಯ ಹೊಸ ಯೋಜನೆಗಳನ್ನು ಪ್ರಕಟಿಸಿರುವುದು ಬಿಟ್ಟರೆ ಉಳಿದಂತೆ ಗಮನಾರ್ಹ ಅಂಶಗಳಿಲ್ಲ. ಬುದ್ದಿಮಾಂದ್ಯ ಮಕ್ಕಳಿಗಾಗಿ ಈ ಸಾಲಿನಲ್ಲಿ ಏಳು ಜಿಲ್ಲೆಗಳಲ್ಲಿ 10 ವಸತಿ ಶಾಲೆಗಳನ್ನು ಆರಂಭಿಸಲು ₹2 ಕೋಟಿ ನಿಗದಿ ಮಾಡಲಾಗಿದೆ. ಇವುಗಳನ್ನು ಎನ್‌ಜಿಓಗಳ ಮೂಲಕ ನಡೆಸಲಾಗುವುದು ಎಂದು ಪ್ರಕಟಿಸಲಾಗಿದೆ. 

ನಿರೀಕ್ಷೆಯಂತೆ ಉನ್ನತ ಶಿಕ್ಷಣದಲ್ಲಿ ಜಾರಿ ಆಗಿದ್ದ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಯನ್ನು ಕೈಬಿಟ್ಟಿದೆ. ಬದಲಿಗೆ ಹೊಸ ನೀತಿ ರೂಪಿಸುವುದಾಗಿ ಹೇಳಿದೆ. ಎನ್‌ಇಪಿ ಕೈಬಿಡಲು ಕೊಟ್ಟ ಕಾರಣಗಳು ಹೀಗಿವೆ– ‘ರಾಷ್ಟ್ರೀಯ ಶಿಕ್ಷಣ ನೀತಿಯು ಒಕ್ಕೂಟ ವ್ಯವಸ್ಥೆಗೆ ಮಾರಕ, ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ವಿರುದ್ಧವಾದ ಅವೈಜ್ಞಾನಿಕ ಅಂಶಗಳನ್ನು ಒಳಗೊಂಡಿವೆ’. ಇಸ್ರೋ ಮಾಜಿ ಅಧ್ಯಕ್ಷ ಡಾ.ಕೆ.ಕಸ್ತೂರಿರಂಗನ್ ಅಧ್ಯಕ್ಷತೆಯ ಕರಡು ಸಮಿತಿಯಲ್ಲಿ ರಾಷ್ಟ್ರ ಮತ್ತು ಅಂತರರಾಷ್ಟ್ರಿಯ ತಜ್ಞರು ಸೇರಿ ನೀತಿಯ ಕರಡು ರೂಪಿಸಿದ್ದರು. ಕನಕಪುರಕ್ಕೊಂದು ವೈದ್ಯಕೀಯ ಕಾಲೇಜು ಬೇಕು ಎಂಬ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಹು ದಿನಗಳ ಬೇಡಿಕೆಯನ್ನು ಈಡೇರಿಸಲಾಗಿದೆ. 

ವಿಶ್ವವಿದ್ಯಾಲಯಗಳಲ್ಲಿ ಪಿಎಚ್‌.ಡಿ ಪ್ರವೇಶಕ್ಕಾಗಿ ಹೊಸ ವ್ಯವಸ್ಥೆ ಆರಂಭಿಸಲಾಗಿದೆ. ಅದರ ಪ್ರಕಾರ ಎಲ್ಲ ಸರ್ಕಾರಿ ವಿಶ್ವವಿದ್ಯಾಲಯಗಳಲ್ಲಿ ಮತ್ತು ಖಾಸಗಿ ವಿಶ್ವವಿದ್ಯಾಲಯಗಳಲ್ಲಿ ಶೇ 40 ಸೀಟುಗಳ ಭರ್ತಿಗೆ ಕೌನ್ಸೆಲಿಂಗ್‌ ನಡೆಸಲಾಗುವುದು. ವಿಶ್ವವಿದ್ಯಾಲಯಗಳಲ್ಲಿ ಈವರೆಗೆ ಆಯಾ ವಿಭಾಗಗಳೇ ಪಿಎಚ್‌.ಡಿ ಪ್ರವೇಶ ಪ್ರಕ್ರಿಯೆ ನಡೆಸುತ್ತಿದ್ದವು. ಇದರಲ್ಲಿ ಸ್ವಜನಪಕ್ಷಪಾತ ಮತ್ತು ಭ್ರಷ್ಟಾಚಾರದ ವ್ಯಾಪಕ ಆರೋಪಗಳು ಕೇಳಿ ಬಂದಿದ್ದವು. ಹೊಸ ವ್ಯವಸ್ಥೆ ಅದಕ್ಕೆ ಕಡಿವಾಣ ಹಾಕಲಿದೆಯೇ ಎಂಬುದನ್ನು ಕಾದು ನೋಡಬೇಕು.

ಇನ್ನು ಮುಂದೆ 9 ಮತ್ತು 10 ನೇ ತರಗತಿ ವಿದ್ಯಾರ್ಥಿಗಳಿಗೂ ಚಿಕ್ಕಿ, ಮೊಟ್ಟೆ, ಹಾಲು ವಿತರಣೆ ಮಾಡಲಾಗುವುದು. ಅಲ್ಲದೇ, 1 ರಿಂದ 8 ನೇ ತರಗತಿ ವಿದ್ಯಾರ್ಥಿಗಳಿಗೆ ವಾರದಲ್ಲಿ ಎರಡು ಬಾರಿ ವಿತರಿಸಲು ನಿರ್ಧರಿಸಲಾಗಿದೆ. ಕಡಿಮೆ ಶೌಚಾಲಯಗಳಿರುವ 5,775 ಶಾಲೆಗಳು ಮತ್ತು 150 ಕಾಲೇಜುಗಳಲ್ಲಿ ಶೌಚಾಲಯ ಘಟಕಗಳನ್ನು ನರೇಗಾ ಯೋಜನೆ ಸಂಯೋಜನೆಯೊಂದಿಗೆ ₹200 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಪ್ರಸ್ತಾಪಿಸಲಾಗಿದೆ.

ಮಾಧ್ಯಮಿಕ ಮತ್ತು ಪಿಯು ಕಾಲೇಜುಗಳಲ್ಲಿ ಇನ್ನೋವೇಶನ್‌ ಲ್ಯಾಬ್‌ ಸ್ಥಾಪಿಸಲಾಗುವುದು. ಇದು ವಿದ್ಯಾರ್ಥಿಗಳ ವಿನೂತನ ಆಲೋಚನೆಗಳು ಕನಸುಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಉತ್ತಮ ವೇದಿಕೆ ಆಗಲಿದೆ. ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆ ಉತ್ತೇಜನ ನೀಡಲು 24 ಲಕ್ಷ ವಿದ್ಯಾರ್ಥಿಗಳಿಗೆ ಮೆಟ್ರಿಕ್‌ ನಂತರದ ವಿದ್ಯಾರ್ಥಿ ವೇತನ ಪುನರಾರಂಭಿಸಲಾಗುವುದು. ಎಸ್‌ಸಿ, ಎಸ್‌ಟಿ, ಒಬಿಸಿ ಮತ್ತು ಅಲ್ಪಸಂಖ್ಯಾತರಿಗೆ ವಿದೇಶಗಳಲ್ಲಿ ಉನ್ನತ ಶಿಕ್ಷಣ ಪಡೆಯಲು ಶೂನ್ಯ ಬಡ್ಡಿ ದರದಲ್ಲಿ ₹20 ಲಕ್ಷ ಸಾಲ ಸೌಲಭ್ಯ ಮುಂದುವರಿಕೆ, ಐಸೆಕ್‌ನಲ್ಲಿ ಪಿಎಚ್‌.ಡಿ ಪಡೆಯುವ ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳಿಗೆ ಡಾ. ಅಂಬೇಡ್ಕರ್‌ ಹೆಸರಲ್ಲಿ ಫೆಲೋಶಿಪ್‌ ನೀಡಲು ₹2 ಕೋಟಿ ಕಾಪು ನಿಧಿ ಸ್ಥಾಪಿಸಲು ಪ್ರಸ್ತಾಪಿಸಲಾಗಿದೆ. ಹಿಂದಿನ ಸರ್ಕಾರ ಜಾರಿ ಮಾಡಿದ್ದ ರೈತವಿದ್ಯಾನಿಧಿ, ಮುಖ್ಯಮಂತ್ರಿ ವಿದ್ಯಾನಿಧಿ ಸೇರಿ ಶಾಲಾ– ಕಾಲೇಜು ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಹಲವು ಯೋಜನೆಗಳ ಪ್ರಸ್ತಾಪವಿಲ್ಲ. ಅಹಿಂದ ವರ್ಗಕ್ಕೆ ಈ ಹಿಂದೆ ತಮ್ಮ ಸರ್ಕಾರದ ಅವಧಿಯಲ್ಲಿ ಜಾರಿ ಮಾಡಿದ್ದ ಎಲ್ಲ ಕಾರ್ಯಕ್ರಮಗಳನ್ನೂ ಮತ್ತೆ ಜಾರಿ ಮಾಡಿದ್ದಾರೆ. 

ಆರೋಗ್ಯ ಕ್ಷೇತ್ರದಲ್ಲಿ ಮಧುಮೇಹ, ರಕ್ತದೊತ್ತಡದಿಂದ ಬಳಲುವ ರೋಗಿಗಳ ಮನೆಗೆ ಔಷಧಿ ತಲುಪಿಸುವ ಯೋಜನೆ ಪ್ರಾಯೋಗಿಕವಾಗಿ ನಡೆಸಲು ತೀರ್ಮಾನ. ಹಠಾತ್‌ ಹೃದಯಸ್ತಂಭನ ಆದವರಿಗೆ ತುರ್ತು ಚಿಕಿತ್ಸೆ ನೀಡಲು ಪುನಿತ್‌ರಾಜ್‌ಕುಮಾರ್‌ ಹೆಸರಿನಲ್ಲಿ ಎಇಡಿ ಎಂಬ ವ್ಯವಸ್ಥೆಯನ್ನು ಜಿಲ್ಲಾ ಆಸ್ಪತ್ರೆಗಳಲ್ಲಿ ಆರಂಭಿಸಲು ಪ್ರಸ್ತಾಪಿಸಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT