ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜ್ಯದಲ್ಲಿ ₹2,280 ಕೋಟಿ ಬಂಡವಾಳ ಹೂಡಿಕೆಗೆ ಅಸ್ತು

3,457 ಉದ್ಯೋಗ ಸೃಷ್ಟಿ: ಸಚಿವ ಎಂ.ಬಿ. ಪಾಟೀಲ
Published 17 ಆಗಸ್ಟ್ 2024, 15:23 IST
Last Updated 17 ಆಗಸ್ಟ್ 2024, 15:23 IST
ಅಕ್ಷರ ಗಾತ್ರ

ಬೆಂಗಳೂರು: ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ 147ನೇ ರಾಜ್ಯಮಟ್ಟದ ಏಕಗವಾಕ್ಷಿ ಅನುಮೋದನಾ ಸಮಿತಿ ಸಭೆಯು ₹2,280.52 ಕೋಟಿ ಬಂಡವಾಳ ಹೂಡಿಕೆಯ 20 ಯೋಜನೆಗಳಿಗೆ ಒಪ್ಪಿಗೆ ನೀಡಿದೆ.

ವೈಮಾಂತರಿಕ್ಷ ಜೋಡಣಾ ಘಟಕ, ಹಾಲು ಸಂಸ್ಕರಣಾ ಘಟಕಗಳೂ ಒಪ್ಪಿಗೆ ನೀಡಿರುವ ಯೋಜನೆಗಳಲ್ಲಿ ಸೇರಿವೆ. ರಾಮನಗರ, ಕೋಲಾರ, ಬೆಳಗಾವಿ, ತುಮಕೂರು, ಧಾರವಾಡ ಮತ್ತು ಕಲಬುರಗಿ ಜಿಲ್ಲೆಯಲ್ಲಿ ಈ ಕೈಗಾರಿಕಾ ಘಟಕಗಳು ಅಸ್ತಿತ್ವಕ್ಕೆ ಬರಲಿದ್ದು, 3,457 ಉದ್ಯೋಗಗಳು ಸೃಷ್ಟಿಯಾಗಲಿವೆ.

ಬಿಡದಿಯಲ್ಲಿ ₹450 ಕೋಟಿ ವೆಚ್ಚದಡಿ ಟೊಯೊಟೆಟ್ಸು ಇಂಡಿಯಾ ಆಟೊ ಪಾರ್ಟ್ಸ್‌ ಪ್ರೈವೆಟ್‌ ಲಿಮಿಟೆಡ್‌ನ ವಾಹನ ಬಿಡಿಭಾಗ ತಯಾರಿಕೆಯ 4ನೇ ಘಟಕಕ್ಕೆ ಒಪ್ಪಿಗೆ ನೀಡಿದೆ. ಇದರಿಂದ ಇನೊವಾ ಹೈಕ್ರಾಸ್‌ನ ಬೇಡಿಕೆ ಪೂರೈಸಲು ಅಗತ್ಯವಾದ ಬಿಡಿಭಾಗಗಳನ್ನು ತಯಾರಿಕೆಗೆ ಸಹಕಾರಿಯಾಗಲಿದೆ.

ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನಲ್ಲಿ ಮುಂಬೈನ ಐಎಲ್‌ವಿ ಸೌತ್‌ ವೇರ್‌ ಹೌಸಿಂಗ್‌ ಪಾರ್ಕ್ಸ್‌ ಪ್ರೈವೆಟ್‌ ಲಿಮಿಟೆಡ್‌ ₹423 ಕೋಟಿ ವೆಚ್ಚದಲ್ಲಿ ಕೈಗಾರಿಕಾ ಪಾರ್ಕ್‌ ನಿರ್ಮಿಸಲಿದೆ. ಬೆಳಗಾವಿಯ ಮೃಣಾಲ್‌ ಷುಗರ್ಸ್‌ ಲಿಮಿಟೆಡ್‌, ಧಾರವಾಡ ಜಿಲ್ಲೆಯಲ್ಲಿ ₹ 386.86 ಕೋಟಿ ವೆಚ್ಚದಡಿ ಸಕ್ಕರೆ ಕಾರ್ಖಾನೆ ಸ್ಥಾಪಿಸಲಿದೆ.

ತುಮಕೂರು ಜಿಲ್ಲೆಯ ವಸಂತನರಸಾಪುರದಲ್ಲಿ ಅಯೊಮಾ ಆಟೊಮೋಟಿವ್‌ ಫಾಸ್ಟನರ್ಸ್‌ (ಇಂಡಿಯಾ) ಪ್ರೈವೆಟ್‌ ಲಿಮಿಟೆಡ್‌ ₹210 ಕೋಟಿ ಮೊತ್ತದಲ್ಲಿ ವಾಹನ ಬಿಡಿಭಾಗ ತಯಾರಿಕಾ ಘಟಕಗಳನ್ನು ಸ್ಥಾಪಿಸಲಿದೆ.

₹50 ಕೋಟಿಗೂ ಹೆಚ್ಚಿನ ಬಂಡವಾಳ ಹೂಡಿಕೆಯ ಆರು ಬೃಹತ್‌ ಮತ್ತು ಮಧ್ಯಮ ಯೋಜನೆಗಳಿಗೆ ಒಪ್ಪಿಗೆ ನೀಡಲಾಗಿದೆ. ಇವುಗಳಿಂದ ₹2,025.71 ಕೋಟಿ ಮೊತ್ತದ ಬಂಡವಾಳ ಹೂಡಿಕೆಯೊಂದಿಗೆ 2,440 ಜನರಿಗೆ ಉದ್ಯೋಗ ದೊರೆಯಲಿದೆ.

₹15 ಕೋಟಿಯಿಂದ ₹50 ಕೋಟಿ ಒಳಗಿನ ಬಂಡವಾಳ ಹೂಡಿಕೆಯ 13 ಹೊಸ ಯೋಜನೆಗಳಿಗೆ ಸಭೆಯು ಅನುಮೋದನೆ ನೀಡಿದೆ. ಇವುಗಳಿಂದ ₹214.81 ಕೋಟಿ ಮೊತ್ತದ ಹೂಡಿಕೆಯೊಂದಿಗೆ 1,017 ಉದ್ಯೋಗ ಸೃಷ್ಟಿಯಾಗಲಿವೆ.

ಹೆಚ್ಚುವರಿ ಬಂಡವಾಳ ಹೂಡಿಕೆಯ ಒಂದು ಯೋಜನೆಗೆ ಸಭೆಯು ಅನುಮೋದನೆ ನೀಡಿದೆ. ಇದರಿಂದ ₹ 40 ಕೋಟಿ ಹೂಡಿಕೆಯಾಗಲಿದೆ.

ಸಭೆಯಲ್ಲಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಎಸ್. ಸೆಲ್ವಕುಮಾರ್, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಆಯುಕ್ತೆ ಗುಂಜನ್ ಕೃಷ್ಣ, ಐಟಿ.-ಬಿ.ಟಿ ಇಲಾಖೆಯ ನಿರ್ದೇಶಕ ದರ್ಶನ್‌ ಎಚ್‌.ವಿ., ಕರ್ನಾಟಕ ಉದ್ಯೋಗ ಮಿತ್ರ ವ್ಯವಸ್ಥಾಪಕ ನಿರ್ದೇಶಕ ದೊಡ್ಡ ಬಸವರಾಜು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT