ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಅಡಿಕೆಗೆ ಸುಳಿ ತಿಗಣೆ ರೋಗ, ರೈತ ಕಂಗಾಲು

ಜಿಲ್ಲೆಯಲ್ಲಿ ಹುಳು ಬಾಧೆ: ಶೇ 30ರಷ್ಟು ಇಳುವರಿ ನಷ್ಟ
Last Updated 18 ನವೆಂಬರ್ 2018, 16:52 IST
ಅಕ್ಷರ ಗಾತ್ರ

ದಾವಣಗೆರೆ: ದಾವಣಗೆರೆ ಭಾಗದಲ್ಲಿ ಈ ಬಾರಿ ಹದ ಮಳೆ ಸುರಿಯಿತು. ಭದ್ರಾ ಅಣೆಕಟ್ಟೆಯೂ ತುಂಬಿದ್ದರಿಂದ ಕಾಲುವೆಯಲ್ಲಿ ಸಾಕಷ್ಟು ನೀರು ಹರಿಯಿತು. ರೈತರ ಅಡಿಕೆ ತೋಟಕ್ಕೆ ಮಳೆ ನೀರು, ಕಾಲುವೆ ನೀರು ಎರಡೂ ಯಥೇಚ್ಛ ಸಿಕ್ಕವು. ಈ ಅತಿಯಾದ ನೀರೇ ಅಡಿಕೆ ಬೆಳೆಗಾರರಿಗೆ ಕಂಟಕ ಆಗಿದೆ. ಅಡಿಕೆ ತೋಟಗಳಿಗೆ ಈಗ ಸುಳಿ ತಿಗಣೆ ರೋಗ ಅಂಟಿದೆ.

ಮೊದಲೆಲ್ಲಾ ಅಡಿಕೆ ಸಸಿಗಳಿಗಷ್ಟೇ ಸುಳಿ ತಿಗಣೆ ರೋಗ ಬರುತ್ತಿತ್ತು. ಈ ವರ್ಷ ದೊಡ್ಡ ದೊಡ್ಡ ಮರಗಳಿಗೆ ರೋಗ ತಗುಲಿದೆ. ಹೀಗಾಗಿ 10 ಸಾವಿರ ಹೆಕ್ಟೇರ್ ಪ್ರದೇಶದಲ್ಲಿರುವ ಅಡಿಕೆ ಬೆಳೆಯ ಇಳುವರಿ ಕುಂಠಿತವಾಗಿದೆ. ಎಕರೆಗೆ 12ರಿಂದ 13 ಕ್ವಿಂಟಲ್ ಇಳುವರಿ ಬರುವ ಕಡೆ 6ರಿಂದ 7 ಕ್ವಿಂಟಲ್ ಮಾತ್ರ ಬಂದಿದೆ.

‘ಸಮರ್ಪಕವಾಗಿ ನೀರು ನಿರ್ವಹಣೆ ಮಾಡಿದವರ ತೋಟಗಳು ಮಾತ್ರ ಚೆನ್ನಾಗಿವೆ. ಅತಿಯಾಗಿ ನೀರು ಹರಿಸಿದ ಅಡಿಕೆ ತೋಟಗಳಲ್ಲಿ ರೋಗ ಕಾಣಿಸಿಕೊಂಡಿದೆ’ ಎಂದು ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕಾ ವಿಜ್ಞಾನಿ ಎಂ.ಜಿ. ಬಸವನಗೌಡ ಹೇಳುತ್ತಾರೆ.

‘ಅತಿಯಾದ ನೀರಿನ ಜತೆಗೆ ಹವಾಮಾನ ಬದಲಾವಣೆ, ಅವೈಜ್ಞಾನಿಕವಾಗಿ ಪೋಷಕಾಂಶಗಳ ಪೂರೈಕೆ, ನಿರ್ವಹಣೆ ಕೊರತೆ ಕಾರಣಗಳಿಂದಾಗಿ ಜಿಲ್ಲೆಯಲ್ಲಿ ಶೇ 30ರಿಂದ ಶೇ 35ರಷ್ಟು ಅಡಿಕೆ ಇಳುವರಿಯಲ್ಲಿ ಕುಸಿತವಾಗಿದೆ. ಮಾಯಕೊಂಡ, ಹೆದ್ನೆ, ರಾಂಪುರ ಹೋಬಳಿಗಳಲ್ಲಿ ರೈತರು ಕಾಲುವೆ ನೀರನ್ನು ಸಾಕಷ್ಟು ಹರಿಸಿದ್ದಾರೆ. ಅಲ್ಲದೇ ಈ ಭಾಗದಲ್ಲಿ ಮಳೆಯೂ ಆಗಿದ್ದರಿಂದ ತೋಟಗಳಲ್ಲಿ ಹಲವು ದಿನಗಳ ಕಾಲ ನೀರು ನಿಂತುಕೊಂಡಿತ್ತು. ಈಗ ಈ ಎಲ್ಲಾ ರೈತರ ತೋಟಗಳಲ್ಲಿನ ದೊಡ್ಡ ಮರಗಳಿಗೆ ಸುಳಿ ತಿಗಣೆ ಕಾಣಿಸಿಕೊಂಡಿದೆ’ ಎನ್ನುತ್ತಾರೆ ಅವರು.

‘ನಾಲ್ಕು ಎಕರೆ ತೋಟ ನಮ್ಮದು. ತೋಟ ಚೆನ್ನಾಗಿರಲಿ ಎಂದು ಸ್ಪಿಂಕ್ಲರ್‌ನಲ್ಲಿ ನೀರು ಕೊಟ್ಟೆವು. ಈ ಸಲ ಮಳೆಯೂ ಚೆನ್ನಾಗಿ ಆಯಿತು. ಜತೆಗೆ ಕಾಲುವೆ ನೀರು ಹಾಯಿಸಿದೆವು. ತೋಟದ ಶೇ 70ರಷ್ಟು ಭಾಗಕ್ಕೆ ಸುಳಿ ತಿಗಣೆ ರೋಗ ತಗುಲಿತು. ಹೀಗಾಗಿ, ಇಳುವರಿ ಈ ಬಾರಿ ಬಹಳ ಕಡಿಮೆಯಾಗಿದೆ’ ಎನ್ನುತ್ತಾರೆ ದಾವಣಗೆರೆ ತಾಲ್ಲೂಕು ಕಕ್ಕರಗೊಳ್ಳದ ರೈತ ವೀರೇಶ್.

ರೋಗದ ಲಕ್ಷಣಗಳು: ಸುಳಿ ತಿಗಣೆ ಕೆಂಪು ಮತ್ತು ಕಪ್ಪು ಮಿಶ್ರಿತ ಬಣ್ಣವನ್ನು ಹೊಂದಿರುತ್ತದೆ. ರಸ ಹೀರಿದ ಸುಳಿಯ ಭಾಗದಲ್ಲಿ ಉದ್ದನೆಯ ಮಚ್ಚೆಗಳು ಉಂಟಾಗುತ್ತವೆ. ಸುಳಿ ಗರಿ ಬಿಚ್ಚಿಕೊಂಡಾಗ ರಂಧ್ರಗಳು ಕಾಣಿಸುತ್ತವೆ. ಬಾಧೆ ಹೆಚ್ಚಾದಾಗ ಗರಿಗಳು ಸೀಳಾಗುತ್ತವೆ. ಸುಳಿ ಭಾಗ ಸಣ್ಣದಾಗಿ ಗರಿಗಳು ಚಿಕ್ಕದಾಗಿರುತ್ತವೆ.

ರೋಗದ ಹತೋಟಿಗೆ ಪೋರೇಟ್ 5 ಗ್ರಾಂ ಅಥವಾ ಕಾರ್ಬೋಪ್ಯುರಾನ್ 5 ಗ್ರಾಂ ಅನ್ನು ಪಾಲಿಥಿನ್ ಟ್ಯೂಬ್‌ನಲ್ಲಿಟ್ಟು ಸಣ್ಣ ರಂಧ್ರ ಮಾಡಿ ಗಿಡದ ಸುಳಿಯಲ್ಲಿ ಇಡಬೇಕು.

ಬಾಧೆ ತೀವ್ರವಾದರೆ ಮಾನೋಟೋಫಾಸ್ 2 ಮಿ. ಲೀಟರ್ ಅಥವಾ ಡೈಮಿಥೋಯೆಟ್ 2 ಮಿ. ಲೀಟರ್‌ನ್ನು ಒಂದು ಲೀಟರ್‌ ನೀರನಲ್ಲಿ ಬೆರೆಸಿ, ಸಿಂಪಡಿಸಬೇಕು ಎಂದು ತೋಟಗಾರಿಕಾ ವಿಜ್ಞಾನಿಗಳು ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT