ಮಂಗಳವಾರ, ಮೇ 11, 2021
27 °C

ಮ್ಯೂಚುವಲ್‌ ಫಂಡ್‌ ವಹಿವಾಟು ವಿಸ್ತರಣೆಗೆ ಆದಿತ್ಯ ಬಿರ್ಲಾ ಸನ್‌ ಲೈಫ್‌ ಗಮನ

ಕೇಶವ ಜಿ. ಝಿಂಗಾಡೆ Updated:

ಅಕ್ಷರ ಗಾತ್ರ : | |

Prajavani

1994 ರಲ್ಲಿ ಅಸ್ತಿತ್ವಕ್ಕೆ ಬಂದಿರುವ ಆದಿತ್ಯ ಬಿರ್ಲಾ ಸನ್‌ ಲೈಫ್‌ ಎಎಂಸಿ ಲಿಮಿಟೆಡ್‌ ಸದ್ಯಕ್ಕೆ ದೇಶಿ ಮ್ಯೂಚುವಲ್‌ ಫಂಡ್‌ ಉದ್ದಿಮೆಯಲ್ಲಿ ಹೂಡಿಕೆದಾರರ ₹ 2.54 ಲಕ್ಷ ಕೋಟಿ ಸಂಪತ್ತನ್ನು (ಎಯುಎಂ) ನಿರ್ವಹಿಸುತ್ತಿದೆ. ಸರಾಸರಿ ಸಂಪತ್ತು ನಿರ್ವಹಣಾ ಲೆಕ್ಕದಲ್ಲಿ ಸಂಸ್ಥೆಯು ಸದ್ಯಕ್ಕೆ ಮೂರನೇ ಸ್ಥಾನದಲ್ಲಿ ಇದೆ. ಆದಿತ್ಯ ಬಿರ್ಲಾ ಗ್ರೂಪ್‌ ಮತ್ತು ಕೆನಡಾದ ಸನ್‌ ಲೈಫ್‌ ಫೈನಾನ್ಶಿಯಲ್ ಇಂಕ್‌ನ ಜಂಟಿ ಕಂಪನಿಯಾಗಿದೆ. ಭಾರತದ ಮ್ಯೂಚುವಲ್‌ ಫಂಡ್‌ ಮಾರುಕಟ್ಟೆಯಲ್ಲಿನ ಆದಿತ್ಯ ಬಿರ್ಲಾ ಸಮೂಹದ ಅನುಭವ ಮತ್ತು ಸನ್‌ಲೈಫ್‌ನ ಜಾಗತಿಕ ಅನುಭವ ಇಲ್ಲಿ ಜತೆಯಾಗಿದೆ. ದುಬೈ, ಸಿಂಗಪುರ, ಕೆನಡಾದಲ್ಲಿಯೂ ಇದರ ಶಾಖೆಗಳಿವೆ. ಆದಿತ್ಯಾ ಬಿರ್ಲಾ ಗ್ರೂಪ್‌ನ ಸದೃಢ ಹಣಕಾಸು ಪರಿಸ್ಥಿತಿಯು ಈ ಮ್ಯೂಚುವಲ್‌ ಫಂಡ್‌ ವಹಿವಾಟಿನ ಬೆಂಬಲಕ್ಕೆ ಇದೆ. ದೇಶದಾದ್ಯಂತ ತನ್ನ ಸೇವೆ ಒದಗಿಸುತ್ತಿರುವ ಸಂಸ್ಥೆಯು ಮ್ಯೂಚುವಲ್‌ ಫಂಡ್‌ ವಹಿವಾಟನ್ನು ಎಲ್ಲೆಡೆ ಇನ್ನಷ್ಟು ವ್ಯಾಪಕವಾಗಿ ವಿಸ್ತರಿಸಲು ಬದ್ಧವಾಗಿದೆ. ದೇಶದ ಪ್ರತಿಯೊಂದು ಲೋಕಸಭಾ ಕ್ಷೇತ್ರಗಳಲ್ಲಿ ಕಂಪನಿಯ ಕಚೇರಿ ಹೊಂದುವುದು ತಮ್ಮ ಉದ್ದೇಶವಾಗಿದೆ ಎಂದು ಆದಿತ್ಯ ಬಿರ್ಲಾ ಸನ್‌ ಲೈಫ್‌ ಎಎಂಸಿ ಲಿಮಿಟೆಡ್‌ ಸಿಇಒ ಎ. ಬಾಲಸುಬ್ರಮಣಿಯನ್‌ ಹೇಳುತ್ತಾರೆ.

ಮ್ಯೂಚುವಲ್‌ ಫಂಡ್ ವಿತರಕ ಪಾಲುದಾರರು ಮತ್ತು ಹೂಡಿಕೆದಾರರಿಗೆ ಡಿಜಿಟಲ್‌ ಪ್ರಕ್ರಿಯೆ ಮೂಲಕ ವಹಿವಾಟನ್ನು ಸುಲಭಗೊಳಿಸುತ್ತಿದೆ. ಇದರ ಜತೆಗೆ ಸುಲಭ ಪರಿಹಾರ, ಬಳಕೆದಾರ ಸ್ನೇಹಿ ಸೇವೆಗಳು ಮತ್ತಿತರ ಅನುಕೂಲತೆಗಳನ್ನು ಕಲ್ಪಿಸಿಕೊಟ್ಟಿದೆ. ವಲಯವಾರು ಪ್ರತ್ಯೇಕ ಯೋಜನೆ, ಫಂಡ್‌ ಆಫ್‌ ಫಂಡ್‌ ಯೋಜನೆ, ಹೈಬ್ರಿಡ್‌ ಮತ್ತು ಮಾಸಿಕ ವರಮಾನ ಫಂಡ್ಸ್‌, ಸಾಲ ಹಾಗೂ ಟ್ರೆಷರಿ ಉತ್ಪನ್ನಗಳಲ್ಲದೆ ಸಾಗರೋತ್ತರ ವಿದೇಶಿ ನಿಧಿಗಳ ಸೇವೆಯನ್ನೂ ಒದಗಿಸುತ್ತಿದೆ. ಜತೆಗೆ, ವಿದೇಶಗಳಲ್ಲಿ ಇರುವ ಅನಿವಾಸಿ ಭಾರತೀಯರಿಗೂ ಕಂಪನಿಯು ಸೇವೆ ಒದಗಿಸುತ್ತಿದೆ.

ಕಂಪನಿಯು ಪರಿಚಯಿಸಿರುವ ರಿಟೈರ್‌ಮೆಂಟ್‌ ಫಂಡ್‌ ಮತ್ತು ಚೈಲ್ಡ್‌ಕೇರ್‌ ಫಂಡ್‌ಗಳು ಹೂಡಿಕೆದಾರರನ್ನು ಹೆಚ್ಚಾಗಿ ಆಕರ್ಷಿಸಿವೆ. ರಿಟೈರ್‌ಮೆಂಟ್‌ ಫಂಡ್‌ ನಿವೃತ್ತಿ ನಂತರ ಬದುಕಿಗೆ ಆಸರೆಯಾಗಲಿದೆ. ಇದರಲ್ಲಿ 4 ಯೋಜನೆಗಳಿವೆ. 30, 40, 50 ಮತ್ತು 60 ವರ್ಷದವರ ವಿವಿಧ ಬಗೆಯ ಅಗತ್ಯಗಳನ್ನು ಈಡೇರಿಸುವ ಬಗೆಯಲ್ಲಿ ಈ ಯೋಜನೆಯ ವಿನ್ಯಾಸ ರೂಪಿಸಲಾಗಿದೆ.

ಚೈಲ್ಡ್‌ಕೇರ್ ಫಂಡ್‌: ಮಗುವಿನ ಭವಿಷ್ಯದ ದೀರ್ಘಾವಧಿ ಅಗತ್ಯಗಳನ್ನು ಈಡೇರಿಸುವ ಬಗೆಯಲ್ಲಿ ಪಾಲಕರ ಅನುಕೂಲಕ್ಕಾಗಿ ಇದನ್ನು ರೂಪಿಸಲಾಗಿದೆ.

‘ಮ್ಯೂಚುವಲ್‌ ಫಂಡ್‌ಗಳಲ್ಲಿನ ಹೂಡಿಕೆಗೆ ಪ್ರತಿಯಾಗಿ ಬರುವ ವರಮಾನವು ಮಾರುಕಟ್ಟೆ ಏರಿಳಿತ ಆಧರಿಸಿರುತ್ತದೆ. ಇಲ್ಲಿ ಖಚಿತ ವರಮಾನದ ಖಾತರಿ ಇರುವುದಿಲ್ಲ. ಆದರೆ, ಸರಿಯಾದ ಯೋಜನೆ ಆಯ್ಕೆ ಮಾಡಿಕೊಂಡರೆ ನಷ್ಟ ಸಾಧ್ಯತೆ ಇರುವುದಿಲ್ಲ’ ಎಂದು ಎ. ಬಾಲಸುಬ್ರಮಣಿಯನ್‌ ಅವರು ಭರವಸೆಯ ಮಾತು ಆಡುತ್ತಾರೆ.

‘60ನೆ ವಯಸ್ಸಿನಲ್ಲಿ ಷೇರು ವಹಿವಾಟಿನಲ್ಲಿ ಹಣ ತೊಡಗಿಸಿದರೆ ಕಳೆದುಕೊಳ್ಳುವ ಸಾಧ್ಯತೆಯೇ ಹೆಚ್ಚು. ಅದರ ಬದಲಿಗೆ ‘ಎಂಎಫ್‌’ಗಳಲ್ಲಿ ಹಣ ತೊಡಗಿಸುವುದು ಹೆಚ್ಚು ಸುರಕ್ಷಿತ’ ಎಂದೂ ಅವರು ಕಿವಿಮಾತು ಹೇಳುತ್ತಾರೆ. ಗ್ರಾಹಕರಿಗೆ ತೃಪ್ತಿದಾಯಕ ಎನಿಸುವ ಉತ್ತಮ ಸೇವೆ ಒದಗಿಸಿಕೊಡುವುದರಿಂದ ವಹಿವಾಟು ವಿಸ್ತರಿಸಬಹುದು ಎಂಬುದು ಅವರ ವಿಶ್ವಾಸವಾಗಿದೆ.

‘ವ್ಯವಸ್ಥಿತ ಹೂಡಿಕೆ ಯೋಜನೆಯಡಿ (SIP) ಪ್ರತಿ ತಿಂಗಳೂ ₹ 1,500 ರಂತೆ 7 ವರ್ಷಗಳವರೆಗೆ ಹೂಡಿಕೆ ಮಾಡುವವರಿಗೆ ಹೆಚ್ಚುವರಿ ವೆಚ್ಚ ಇಲ್ಲದೆ ವಿಮೆ ಸೌಲಭ್ಯ ನೀಡುವ ಸೌಲಭ್ಯವೂ ಇಲ್ಲಿದೆ. ಹೂಡಿಕೆ ಮಾಡಿದ ಹಣವನ್ನು ವ್ಯವಸ್ಥಿತವಾಗಿ ಹಿಂದಕ್ಕೆ ಪಡೆಯುವ (SWP) ಸೌಲಭ್ಯವನ್ನು ಸಂಸ್ಥೆಯು ಹೂಡಿಕೆದಾರರಿಗೆ ಒದಗಿಸಿದೆ. ಗ್ರಾಹಕರಿಗೆ ವಾರಾಂತ್ಯದಲ್ಲಿ ಹೆಚ್ಚಿನ ಬಿಡುವು ಇರುವುದರಿಂದ ಗ್ರಾಹಕರಿಗೆ ಸೇವೆ ಒದಗಿಸುವ ಕಂಪನಿಯ ‘ಕಾಲ್‌ ಸೆಂಟರ್‌’ ಭಾನುವಾರವೂ ತೆರೆದಿರುತ್ತದೆ. ‘ವೆಗಾ ಪ್ರಾಜೆಕ್ಟ್‌’ನಡಿ 12 ಗಂಟೆಗಳ ಅವಧಿಯಲ್ಲಿ ಗ್ರಾಹಕರ ಕುಂದುಕೊರತೆಗೆ ಸ್ಪಂದಿಸುವ ಮೌಲ್ಯವರ್ಧಿತ ಸೇವೆ ಒದಗಿಸಲಾಗುತ್ತಿದೆ. ಕಳೆದ ಒಂದೆರಡು ವರ್ಷಗಳಲ್ಲಿ ಆರ್ಥಿಕತೆ ಕುಂಠಿತಗೊಂಡಿದೆ. ಬ್ಯಾಂಕೇತರ ಹಣಕಾಸು ಸಂಸ್ಥೆಗಳ ಸಾಲ ನೀಡಿಕೆ ಪ್ರಮಾಣ ಕಡಿಮೆಯಾಗಿದೆ. ಆದರೆ, ಆರ್ಥಿಕತೆಯ ಭವಿಷ್ಯದ ಮುನ್ನೋಟ ಚೆನ್ನಾಗಿದೆ. ಬಡ್ಡಿ ದರಗಳು ಇಳಿಯುತ್ತಿವೆ. ಗ್ರಾಮೀಣ ಪ್ರದೇಶದಲ್ಲಿನ ಬಳಕೆ ಹೆಚ್ಚಳಗೊಳ್ಳಬೇಕಾಗಿದೆ.

‘ಷೇರುಪೇಟೆ ಏರಿಳಿತ ತಾತ್ಕಾಲಿಕವಾಗಿರುತ್ತದೆ. ಮೂರ್ನಾಲ್ಕು ವರ್ಷಗಳಿಂದ ಪೇಟೆ ಏರಿಳಿತ ಕಾಣುತ್ತಿದೆ.ದೀರ್ಘಾವಧಿ ಲೆಕ್ಕಕ್ಕೆ ತೆಗೆದುಕೊಂಡರೆ ಇದು ಸ್ಥಿರವಾಗಿರುತ್ತದೆ. ಜಾಗತಿಕ ಆರ್ಥಿಕ ಹಿಂಜರಿತದಿಂದ ಭಾರತವೂ ಹೊರತಾಗಿಲ್ಲ. ಆರ್ಥಿಕತೆಯಲ್ಲಿ ಇಂತಹ ಏರಿಳಿತ ಸಾಮಾನ್ಯವಾಗಿರುತ್ತದೆ. ಮ್ಯೂಚುವಲ್ ಫಂಡ್‌ಗಳಲ್ಲಿನ ಹೂಡಿಕೆಯು ದೀರ್ಘಾವಧಿಯಲ್ಲಿ ಹೆಚ್ಚು ಲಾಭದಾಯಕವಾಗಿರುತ್ತದೆ ಎನ್ನುವುದರಲ್ಲಿ ಸಂದೇಹ ಇಲ್ಲ. ಮ್ಯೂಚುವಲ್‌ ಫಂಡ್ಸ್‌ಗಳಲ್ಲಿ ಒಂದು ಬಾರಿ ಹೂಡಿಕೆಯಾದರೆ ಲಾಭ ಪಡೆಯಲು ಕೆಲ ವರ್ಷಗಳವರೆಗೆ ಕಾಯಬೇಕು. ಬಡ್ಡಿ ದರ ಕಡಿಮೆಯಾಗುತ್ತಿರುವ ಸದ್ಯದ ಸಂದರ್ಭದಲ್ಲಿ ಅಲ್ಪಾವಧಿಯಲ್ಲಿ ‘ಎಂಎಫ್‌’ ಹೂಡಿಕೆಯು ಏರಿಳಿತ ಕಾಣುತ್ತಿರುತ್ತವೆ. ಆದರೆ, ದೀರ್ಘಾವಧಿಯಲ್ಲಿ ಖಂಡಿತವಾಗಿಯೂ ಲಾಭದಾಯಕವಾಗಿರುತ್ತದೆ’ ಎಂದು ಅವರು ಹೇಳುತ್ತಾರೆ.

ಕರ್ನಾಟಕ ಮಾರುಕಟ್ಟೆ: ದಕ್ಷಿಣ ಭಾರತದಲ್ಲಿ ಕರ್ನಾಟಕದ ವಹಿ
ವಾಟು ಗರಿಷ್ಠ ಮಟ್ಟದಲ್ಲಿ ಇದೆ. ರಾಜ್ಯದ ಮಾರುಕಟ್ಟೆಯು ತ್ವರಿತವಾಗಿ ಬೆಳವಣಿಗೆ ದಾಖಲಿಸುತ್ತಿದೆ. ಕಂಪನಿಯ ಒಟ್ಟಾರೆ ‘ಎಸ್‌ಐಪಿ’ಗಳಲ್ಲಿ
ಕರ್ನಾಟಕದ ಪಾಲು ಶೇ 10ರಷ್ಟಿದೆ. ಬೆಳಗಾಗಿ, ಹುಬ್ಬಳ್ಳಿ, ಮಂಗಳೂರು ಮತ್ತಿತರ ಕಡೆಗಳಲ್ಲಿ ಹೆಚ್ಚಿನ ವಹಿವಾಟು ನಡೆಯುತ್ತಿದೆ.

ವಹಿವಾಟು ವಿಸ್ತರಣೆ ಮತ್ತು ಹೂಡಿಕೆದಾರರ ಸಂಖ್ಯೆ ಹೆಚ್ಚಿಸಲು ಕಂಪನಿಯು ಈಗ ಇತರ ಹೂಡಿಕೆ ಅವಕಾಶಗಳ ಬಗ್ಗೆ ಹೂಡಿಕೆದಾರರಲ್ಲಿ ಹೆಚ್ಚಿನ ಅರಿವು ಮೂಡಿಸಲು ಮುಂದಾಗಿದೆ. ವಹಿವಾಟಿನ ಆದ್ಯತೆಯು ಈಗ ‘ಎಂಎಫ್‌’ ಉತ್ಪನ್ನಗಳ ಜತೆಗೆ ಹೊಸ ಹೂಡಿಕೆ ಸಲಹೆ ಎಡೆಗೆ ಸಾಗುತ್ತಿದೆ. ವಹಿವಾಟು ವಿಸ್ತರಣೆ ಅಂಗವಾಗಿ ಕಂಪನಿಯು ಉಳಿತಾಯ, ನಿರಂತರ ವರಮಾನ, ಸಂಪತ್ತು ಸೃಷ್ಟಿ ಮತ್ತು ತೆರಿಗೆ ಯೋಜನೆ ಹೆಸರಿನ ಹೂಡಿಕೆ ಯೋಜನೆಗಳನ್ನು ಪರಿಚಯಿಸಿದೆ. ಇವುಗಳಲ್ಲಿ ಹಣ ತೊಡಗಿಸುವುದರಿಂದ ವಿವಿಧ ವಯೋಮಾನದವರ ಹಣಕಾಸಿನ ಅನೇಕ ಅಗತ್ಯಗಳನ್ನು ಈಡೇರಿಸಲು ಸಾಧ್ಯವಾಗಲಿದೆ ಎನ್ನುವುದನ್ನು ಮನವರಿಕೆ ಮಾಡಿಕೊಡಲು ಕಾರ್ಯಪ್ರವೃತ್ತವಾಗಿದೆ.

ಸೇವಿಂಗ್ಸ್‌ ಸೊಲುಷನ್ಸ್‌: ಹೂಡಿಕೆದಾರರ ಹಣ ಸಂರಕ್ಷಿಸುವ ಉಳಿತಾಯ ಯೋಜನೆ ಇದಾಗಿದೆ. ಇದೊಂದು ಬ್ಯಾಂಕ್ ಉಳಿತಾಯ ಖಾತೆ ಇದ್ದಂತೆ. ಅಗತ್ಯ ಬಿದ್ದಾಗ ಹಣ ವಾಪಸ್‌ ಪಡೆಯಬಹುದು. ಉತ್ತಮ ಆದಾಯ ನಿರೀಕ್ಷಿಸಬಹುದು.ಸಾಂಪ್ರದಾಯಿಕ ಉಳಿತಾಯ ಯೋಜನೆಗೆ ಹೋಲಿಸಿದರೆ ಕಡಿಮೆ ತೆರಿಗೆ ಹೊರೆ ಇರುತ್ತದೆ. ದಿನನಿತ್ಯದ ಅಗತ್ಯಗಳನ್ನು ಈಡೇರಿಸಿಕೊಳ್ಳಲು, ಉದ್ದಿಮೆ ಆರಂಭಿಸಲು ಹಣ ಹೊಂದಿಸಲು, ಜೀವನಶೈಲಿಯ ವೆಚ್ಚ ಸರಿದೂಗಿಸಲು ಇದನ್ನು ಬಳಸಬಹುದು. ಮ್ಯೂಚುವಲ್‌ ಫಂಡ್‌ಗಳಲ್ಲಿ ಮೊದಲ ಬಾರಿಗೆ ಹೂಡಿಕೆ ಮಾಡುವವರಿಗೆ ಇದು ಹೆಚ್ಚು ಸೂಕ್ತವಾಗಿರುತ್ತದೆ.

ಇನ್‌ಕಂ ಸೊಲುಷನ್ಸ್‌: ನಿಯಮಿತ ವರಮಾನದ ಈ ಹೂಡಿಕೆ ಯೋಜನೆಗಳು  ಕಡಿಮೆ ತೆರಿಗೆ ಪಾವತಿಸುವಂತಹ ಆದಾಯ ತಂದುಕೊಡುತ್ತವೆ. ನಿಯಮಿತ ವರಮಾನದ ಪರ್ಯಾಯ ಹೂಡಿಕೆ ಯೋಜನೆಗಳಲ್ಲಿ ಆಸಕ್ತರಾದವರಿಗೆ ಇದು ಹೆಚ್ಚು ಪ್ರಯೋಜನಕಾರಿಯಾಗಿರುತ್ತವೆ. ನಷ್ಟ ಸಾಧ್ಯತೆ ಕಡಿಮೆ ಇರುತ್ತದೆ. ಸೇವಾ ಅವಧಿ ಮತ್ತು ನಿವೃತ್ತಿ ನಂತರವೂ ಉಪಯುಕ್ತವಾಗಿರುತ್ತದೆ. ಆದರೆ, ಇಲ್ಲಿಯ ವರಮಾನವು ಖಚಿತವಾಗಿರುವುದಿಲ್ಲ.

ವೆಲ್ತ್‌ ಸೊಲುಷನ್ಸ್‌: ಭವಿಷ್ಯದ ವೆಚ್ಚಗಳಿಗಾಗಿ ಹೂಡಿಕೆ ಮಾಡುವವರಿಗೆ ಇವು ಹೆಚ್ಚು ಪ್ರಯೋಜನಕಾರಿಯಾಗಿರುತ್ತವೆ. ಮಕ್ಕಳ ಉನ್ನತ ವಿದ್ಯಾಭ್ಯಾಸ, ಮದುವೆ, ಮನೆ ಖರೀದಿ, ವಿದೇಶ ಪ್ರವಾಸ, ನಿವೃತ್ತಿ ಬದುಕಿನ ವೆಚ್ಚ ಭರಿಸಲು ನೆರವಾಗುತ್ತವೆ.

ಟ್ಯಾಕ್ಸ್‌ ಪ್ಲ್ಯಾನಿಂಗ್‌ ಸೊಲುಷನ್ಸ್‌: ಆದಾಯ ತೆರಿಗೆಯ ಸೆಕ್ಷನ್‌ ‘80 ಸಿ’ನಡಿ ತೆರಿಗೆ ಪ್ರಯೋಜನಗಳನ್ನು ಒದಗಿಸಿ ತೆರಿಗೆ ಹೊರೆ ತಗ್ಗಿಸುತ್ತವೆ. ತೆರಿಗೆ ಉಳಿತಾಯದ ಜತೆ ದೀರ್ಘಾವಧಿಯಲ್ಲಿ ಹೂಡಿಕೆ ಹಣ ಹೆಚ್ಚಿಸುತ್ತವೆ. ತೆರಿಗೆ ಹೊರೆ ತಗ್ಗಿಸಲು ಮತ್ತು ಸೂಕ್ತ ತೆರಿಗೆ ಯೋಜನೆ ರೂಪಿಸಲು ನೆರವಾಗುತ್ತವೆ.  

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು