ಭಾನುವಾರ, ಅಕ್ಟೋಬರ್ 17, 2021
22 °C

ಮಾತೃ ಸಂಸ್ಥೆಗೆ ಮರಳಿದ ಏರ್‌ ಇಂಡಿಯಾ ಕುರಿತು ಕ್ಯಾಪ್ಟನ್ ಜಿ.ಆರ್. ಗೋಪಿನಾಥ್ ಬರಹ

ಕ್ಯಾಪ್ಟನ್ ಜಿ.ಆರ್. ಗೋಪಿನಾಥ್ Updated:

ಅಕ್ಷರ ಗಾತ್ರ : | |

ಏರ್‌ ಇಂಡಿಯಾ ಕಂಪನಿಯು ಟಾಟಾ ಸಮೂಹದ ತೆಕ್ಕೆಗೆ ಮರಳಿದೆ. ರಾಷ್ಟ್ರೀಕರಣದ ಮೂಲಕ ಈ ಕಂಪನಿಯನ್ನು ಕೇಂದ್ರ ಸರ್ಕಾರವು ಟಾಟಾ ಸಮೂಹದಿಂದ 1953ರಲ್ಲಿ ಕಿತ್ತುಕೊಂಡಿತ್ತು. ಆಗ ಜವಾಹರಲಾಲ್ ನೆಹರೂ ಪ್ರಧಾನಿ ಆಗಿದ್ದರು. ಟಾಟಾ ಸಮೂಹಕ್ಕೆ ಒಂದು ನೋಟಿಸ್ ಕೂಡ ನೀಡದೆಯೆ, ಸಮೂಹದ ಜೊತೆ ಮಾತುಕತೆಯನ್ನೂ ನಡೆಸದೆ ಹೀಗೆ ಮಾಡಲಾಗಿತ್ತು. ಸರಿಯಾಗಿ, ಚೆನ್ನಾಗಿ ನಡೆಯುತ್ತಿದ್ದ ಖಾಸಗಿ ಕಂಪನಿಯೊಂದನ್ನು ಸರ್ಕಾರ ಏಕೆ ಸ್ವಾಧೀನಕ್ಕೆ ತೆಗೆದುಕೊಳ್ಳಬೇಕು, ಅದನ್ನು ಹಳ್ಳ ಹಿಡಿಸುವುದು ಏಕೆ ಎಂಬುದು ಅರ್ಥವಾಗುವುದಿಲ್ಲ!

ಸರ್ಕಾರವು ಕಂಪನಿಯನ್ನು ಹಿಂಬಾಗಿಲ ಮೂಲಕ ಸ್ವಾಧೀನಕ್ಕೆ ತೆಗೆದುಕೊಂಡಿತು ಎಂದು ಜೆಆರ್‌ಡಿ ಅವರು ಬೇಸರ ವ್ಯಕ್ತಪಡಿಸಿದ್ದರು. ಕಂಪನಿಯು ಸರ್ಕಾರದ ತೆಕ್ಕೆಗೆ ಸೇರಿದರೂ ಜೆಆರ್‌ಡಿ ಅವರು ಅದರ ಅಧ್ಯಕ್ಷರಾಗಿ 1978ರವರೆಗೆ ಮುಂದುವರಿದರು. ಕಂಪನಿಯನ್ನು ಉತ್ತುಂಗಕ್ಕೆ ಕೊಂಡೊಯ್ದರು. ಇಂದು ವಿಶ್ವದ ಅತ್ಯುತ್ತಮ ವಿಮಾನಯಾನ ಕಂಪನಿ ಎಂಬ ಹೆಗ್ಗಳಿಕೆ ಹೊತ್ತಿರುವ ಸಿಂಗಪುರ ಏರ್‌ಲೈನ್ಸ್‌ ಕಂಪನಿಯು, ಅಂದು ಏರ್‌ ಇಂಡಿಯಾದ ತಾಂತ್ರಿಕ ಮತ್ತು ಕಾರ್ಯಾಚರಣೆ ನೆರವಿನ ಮೂಲಕ ಸ್ಥಾಪನೆ ಆಯಿತು ಎಂಬುದನ್ನು ನಂಬುತ್ತೀರಾ? ನೆರವು ಯಾಚಿಸಿ ಆಗ ಸಿಂಗಪುರ ಸರ್ಕಾರದಿಂದಲೇ ಮನವಿ ಬಂದಿತ್ತು.

ಈಗ ಏರ್ ಇಂಡಿಯಾ ಕಂಪನಿಯು ಮತ್ತೆ ತನ್ನ ಮಾತೃ ಸಂಸ್ಥೆಗೆ ಮರಳಿದೆ. ಆದರೆ ಇಲ್ಲಿ ಹಲವು ಸವಾಲುಗಳು ಕೂಡ ಟಾಟಾ ಸನ್ಸ್‌ ಕಂಪನಿಗೆ ಎದುರಾಗಲಿವೆ. ಟಾಟಾ ಸನ್ಸ್‌ ಕಂಪನಿಯು ಈಗಾಗಲೇ ಎರಡು ವಿಮಾನಯಾನ ಕಂಪನಿಗಳನ್ನು ಮುನ್ನಡೆಸುತ್ತಿದೆ – ಏರ್‌ ಏಷ್ಯಾ ಮತ್ತು ವಿಸ್ತಾರಾ ಅವೆರಡು ಕಂಪನಿಗಳು. ಈ ಎರಡು ಕಂಪನಿಗಳಿಗಾಗಿ ಟಾಟಾ ಸನ್ಸ್‌ ದೊಡ್ಡ ಮೊತ್ತವನ್ನು ವಿನಿಯೋಗಿಸುತ್ತಿದೆ. ಈ ಎರಡು ಕಂಪನಿಗಳ ಪಾಲುದಾರಿಕೆಯ ವಿಚಾರದಲ್ಲಿ ಸಮಸ್ಯೆಗಳು ಇವೆ. ಸಾಲದ ಹೊರೆಯನ್ನೇ ಹೊತ್ತುಕೊಂಡಿರುವ ವಿಮಾನಯಾನ ಕಂಪನಿಯೊಂದನ್ನು ಟಾಟಾ ಸಮೂಹವು ತನ್ನದಾಗಿಸಿಕೊಂಡಿರುವುದು ಸಿಂಗಪುರ ಏರ್‌ಲೈನ್ಸ್‌ ಪಾಲಿಗೆ ಉತ್ಸಾಹ ಮೂಡಿಸುವಂಥದ್ದೇನೂ ಅಲ್ಲ. (ವಿಸ್ತಾರಾ ಕಂಪನಿಯಲ್ಲಿ ಸಿಂಗ‍ಪುರ ಏರ್‌ಲೈನ್ಸ್‌ ಪಾಲು ಹೊಂದಿದೆ.)

ಆದರೆ, ಮೂರೂ ವಿಮಾನಯಾನ ಕಂಪನಿಗಳನ್ನು ಪರಸ್ಪರ ವಿಲೀನಗೊಳಿಸಲು ಟಾಟಾ ಸಮೂಹ ಮನಸ್ಸು ಮಾಡಿದರೆ, ಯಶಸ್ಸು ಸಿಗಬಹುದು. ಮೂರು ಕಂಪನಿಗಳ ವಿಲೀನದ ನಂತರ ಹೊಸದಾಗಿ ರಚನೆಯಾಗುವ ಕಂಪನಿಯಲ್ಲಿ ಚಲನಶೀಲ ನಾಯಕತ್ವವೊಂದು ಇರಬೇಕಾಗುತ್ತದೆ. ಇದು ಸಾಧ್ಯವಾಗಬೇಕು ಎಂದಾದರೆ ಏರ್ ಏಷ್ಯಾ ಮತ್ತು ಸಿಂಗಪುರ ಏರ್‌ಲೈನ್ಸ್ ಜೊತೆ ಮಾತುಕತೆ ನಡೆಸಿಕೊಳ್ಳಬೇಕು. ಏರ್‌ ಇಂಡಿಯಾಕ್ಕೆ ಬಿಡ್ ಸಲ್ಲಿಸುವ ಮೊದಲೇ ಟಾಟಾ ಸಮೂಹವು ಈ ಎಲ್ಲ ಅಂಶಗಳ ಬಗ್ಗೆ ಆಳವಾಗಿ ಆಲೋಚನೆ ನಡೆಸಿರಲೂಬಹುದು.

ಮೂರು ಪ್ರತ್ಯೇಕ ವಿಮಾನಯಾನ ಕಂಪನಿಗಳನ್ನು ಮುನ್ನಡೆಸುವುದು ಮುಂದೆ ಸಮಸ್ಯೆ ತಂದಿಡಬಹುದು. ಮೂರನ್ನೂ ವಿಲೀನಗೊಳಿಸಿದರೆ ಖರ್ಚು ಉಳಿಯುತ್ತದೆ. ಮೂವರು ಸಿಇಒಗಳನ್ನು ಹೊಂದುವ, ಮೂರು ಪ್ರತ್ಯೇಕ ಆಡಳಿತ ಮಂಡಳಿಗಳನ್ನು ಇರಿಸಿಕೊಳ್ಳುವ ಹಾಗೂ ಮೂರೂ ಕಂಪನಿಗಳಿಗೆ ಪ್ರತ್ಯೇಕವಾಗಿ ಹಣಕಾಸು, ಎಂಜಿನಿಯರಿಂಗ್, ಐ.ಟಿ., ಆದಾಯ ನಿರ್ವಹಣೆಯಂತಹ ವಿಭಾಗಗಳನ್ನು ಇರಿಸಿಕೊಳ್ಳುವ ಅಗತ್ಯ ಇರುವುದಿಲ್ಲ. 

ಇವೆಲ್ಲದಕ್ಕಿಂತ ಮುಖ್ಯವಾಗಿ, ಟಾಟಾ ಸಮೂಹದ ಮೂರು ವಿಮಾನಯಾನ ಕಂಪನಿಗಳು ಪರಸ್ಪರ ಸ್ಪರ್ಧೆಗೆ ಇಳಿಯುವ ಸಂದರ್ಭ ಇರುವುದಿಲ್ಲ. ಮೂರೂ ಒಟ್ಟಾಗಿ ಇಂಡಿಗೊ, ಸ್ಪೈಸ್, ಗೋ ಏರ್‌ನಂತಹ ಕಂಪನಿಗಳ ವಿರುದ್ಧ ಸ್ಪರ್ಧಿಸಬೇಕು. 

ದೇಶಿ ಮಾರ್ಗದ ಎಲ್ಲ ವಿಮಾನಗಳಲ್ಲಿ ಎಕಾನಮಿ ವರ್ಗವನ್ನು ಮಾತ್ರ ಉಳಿಸಿಕೊಳ್ಳಬಹುದು. ಏರ್‌ ಫ್ರಾನ್ಸ್ ಮತ್ತು ಯುರೋಪಿನ ಇತರ ಪ್ರಮುಖ ವಿಮಾನಯಾನ ಕಂಪನಿಗಳು ಯೊರೋಪಿನ ವ್ಯಾಪ್ತಿಯಲ್ಲಿ ಹೀಗೆ ಮಾಡಿವೆ. ಅಂತರರಾಷ್ಟ್ರೀಯ ವಿಮಾನ ಯಾನಗಳಲ್ಲಿ ಮಾತ್ರ ಹೆಚ್ಚುವರಿಯಾಗಿ ಬ್ಯುಸಿನೆಸ್ ವರ್ಗದ ಆಸನಗಳು ಇರುತ್ತವೆ. ಈ ರೀತಿ ಮಾಡಲು ಟಾಟಾ ಸಮೂಹಕ್ಕೆ ಸಾಧ್ಯವಾದರೆ, ಸಿಂಗಪುರ ಏರ್‌ಲೈನ್ಸ್‌, ಎಮಿರೇಟ್ಸ್‌, ಬ್ರಿಟಿಷ್ ಏರ್‌ವೇಸ್‌ ಮತ್ತು ಲುಫ್ತಾನ್ಸಾದಂತಹ ಕಂಪನಿಗಳ ವಿರುದ್ಧ ಸ್ಪರ್ಧಿಸಲು ಸಾಧ್ಯವಾಗುತ್ತದೆ.

ಕಡಿಮೆ ವೆಚ್ಚದಲ್ಲಿ ವಿಮಾನಯಾನ ಸೌಲಭ್ಯ ಒದಗಿಸುವ ಕಂಪನಿಗಳ ವಿರುದ್ಧ ಸ್ಪರ್ಧಿಸುವುದು ಸವಾಲಿನದ್ದು ಎಂಬುದು ಟಾಟಾ ಸಮೂಹದ ಮನಸ್ಸಿನಲ್ಲಿ ಇರಬೇಕು. ಪ್ರಯಾಣಿಕರಿಗೆ ಹಲವು ಸೌಲಭ್ಯಗಳನ್ನು ಒದಗಿಸಿ, ಅವುಗಳ ಶುಲ್ಕವನ್ನು ಟಿಕೆಟ್ ದರದ ಮೂಲಕವೇ ಸಂಗ್ರಹಿಸುವ ಯಾವ ವಿಮಾನಯಾನ ಕಂಪನಿಗೂ ಕಡಿಮೆ ವೆಚ್ಚದಲ್ಲಿ ಸೇವೆ ಒದಗಿಸುವ ಕಂಪನಿಗಳ ವಿರುದ್ಧ ಸ್ಪರ್ಧಿಸಲು ಜಗತ್ತಿನ ಯಾವುದೇ ಭಾಗದಲ್ಲಿಯೂ ಸಾಧ್ಯವಾಗಿಲ್ಲ.

ಈಗ ತನ್ನ ಹೆಗಲ ಮೇಲೆ ಹೊತ್ತುಕೊಂಡಿರುವ ಔದ್ಯಮಿಕ ಸಾಹಸಕ್ಕೆ ಅಗತ್ಯವಿರುವ ಆಡಳಿತದ ಅನುಭವ, ಬಂಡವಾಳ ಸಂಗ್ರಹಿಸುವ ಶಕ್ತಿ, ಸವಾಲುಗಳನ್ನು ಎದುರಿಸುವ ಸಾಮರ್ಥ್ಯ ಟಾಟಾ ಸಮೂಹಕ್ಕೆ ಇದೆ. ರತನ್ ಟಾಟಾ ಅವರು ವಿಮಾನಯಾನದ ಬಗ್ಗೆ ಬಹಳ ಪ್ರೀತಿ ಹೊಂದಿರುವ ವ್ಯಕ್ತಿ. ಅವರು ಟಾಟಾ ಸಮೂಹದ ನೇತೃತ್ವವನ್ನೂ ವಹಿಸಿಕೊಂಡಿದ್ದಾರೆ. ಈ ಸ್ವಾಧೀನದಿಂದ ಏರ್‌ ಇಂಡಿಯಾ ಕಂಪನಿಗೆ, ಅದರಲ್ಲಿನ ನೌಕರರಿಗೆ ಹಾಗೂ ಗ್ರಾಹಕರಿಗೆ ಒಳ್ಳೆಯದಾಗುತ್ತದೆ.

ಲೇಖಕ ಏರ್‌ ಡೆಕ್ಕನ್ ಕಂಪನಿಯ ಸಂಸ್ಥಾಪಕ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು