ಸೋಮವಾರ, ಜೂಲೈ 13, 2020
28 °C

ಕೊರೊನಾ ಲಾಕ್‌ಡೌನ್‌: ಅಕ್ಷಯ ತೃತೀಯಕ್ಕೂ ಮಂಕು, ಚಿನ್ನಾಭರಣ ವಹಿವಾಟು ಸ್ಥಗಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಅಕ್ಷಯ ತೃತೀಯ ಬಂತೆಂದರೆ ಚಿನ್ನಾಭರಣ ಮಾರಾಟ ಮಾಡುವವರು ಮತ್ತು ಖರೀದಿಸುವವರು  ಸಂಭ್ರಮ ಪಡುತ್ತಿದ್ದರು. ಆದರೆ, ಈ ಬಾರಿ ಕೊರೊನಾದಿಂದಾಗಿ ದೇಶದಾದ್ಯಂತ ಲಾಕ್‌ಡೌನ್‌ ಜಾರಿಯಲ್ಲಿರುವುದು ಖರೀದಿ ಉತ್ಸಾಹಕ್ಕೆ ತಣ್ಣೀರೆರಚಿದೆ.

ಸಮೃದ್ಧಿ ಮತ್ತು ಅದೃಷ್ಟದ ಪವಿತ್ರ ದಿನ ಎಂದು ಪರಿಗಣಿಸಲಾಗಿರುವ ಅಕ್ಷಯ ತೃತೀಯದಲ್ಲಿ ಪ್ರತಿ ಬಾರಿಯೂ ಭರ್ಜರಿ ವ್ಯಾಪಾರದ ನಿರೀಕ್ಷೆ ಇರುತ್ತದೆ.  ಈ ಬಾರಿ ಅಂಗಡಿಯೇ ತೆರೆಯುವಂತಿಲ್ಲ ಎಂದ ಮೇಲೆ ಎಲ್ಲಿಯ ವ್ಯಾಪಾರ, ಎಲ್ಲಿಯ ಅಕ್ಷಯ ತೃತೀಯ ಎನ್ನುತ್ತಾರೆ ವರ್ತಕರೊಬ್ಬರು. 

‘ಲಾಕ್‌ಡೌನ್‌ನಿಂದ ದಿನದ ವಹಿವಾಟೇ ನಡೆಯುತ್ತಿಲ್ಲ. ಅಕ್ಷಯ ತೃತೀಯದ ಬಗ್ಗೆ ಕೇಳಲೇ ಬೇಡಿ. ಒಟ್ಟಾರೆ ವಹಿವಾಟು ಶೂನ್ಯ. ಆನ್‌ಲೈನ್‌ ವಹಿವಾಟು ಪ್ರಮಾಣ ಹೆಚ್ಚಿಗೆ ನಡೆಯುತ್ತದೆ ಎಂದೇನೂ ಅನಿಸುವುದಿಲ್ಲ. ನಿಧಿ ಸಂಗ್ರಹಿಸುವ ಮೂಲಕ ಕೆಲಸಗಾರರಿಗೆ ದಿನಸಿ ನೀಡಲಾಗುತ್ತಿದೆ’ ಎಂದು ಬೆಂಗಳೂರು ಚಿನ್ನಾಭರಣ ವರ್ತಕರ ಸಂಘದ ಆದ್ಯಕ್ಷ ವೆಂಕಟೇಶ್‌ ಬಾಬು ತಿಳಿಸಿದರು.

‘ಅಕ್ಷಯ ತೃತೀಯದೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿರುವ ಬಹುತೇಕರು ಚಿನ್ನ ಖರೀದಿಸಿ ಮನೆಗೆ ತರುವ ರೂಢಿ ಬೆಳೆಸಿಕೊಂಡು ಬಂದಿದ್ದಾರೆ. ಆದರೆ ಆನ್‌ಲೈನ್‌ನಲ್ಲಿ ದುಡ್ಡು ಕೊಟ್ಟ ತಕ್ಷಣ ಬಂಗಾರ ಕೈಗೆ ಬರಲ್ಲ. ಲಾಕ್‌ಡೌನ್‌ ಮುಗಿದ ಮೇಲಷ್ಟೇ ಚಿನ್ನ ಪಡೆಯಬಹುದು ಹೀಗಾಗಿ ಆನ್‌ಲೈನ್‌ನಲ್ಲಿ ಭಾರಿ ಪ್ರಮಾಣದ ವಹಿವಾಟು ನಡೆಯಲಿದೆ’ ಎಂದು ಹೇಳುವುದು ಕಷ್ಟ ಎನ್ನುತ್ತಾರೆ ಚಿನ್ನಾಭರಣ ಕ್ಷೇತ್ರದಲ್ಲಿ ಅನುಭವ ಹೊಂದಿರುವ ವ್ಯಾಪಾರಿ ಕೃಷ್ಣಮೂರ್ತಿ ಸಿ.ಎ. ಅವರು.

‘ಲಾಕ್‌ಡೌನ್‌ ಅವಧಿ ವಿಸ್ತರಣೆ ಆದಷ್ಟೂ ಚಿನ್ನಾಭರಣ ವರ್ತಕರ ಪರಿಸ್ಥಿತಿ ಇನ್ನಷ್ಟು ಹದಗೆಡಲಿದೆ. ಕೂಡಿಟ್ಟಿದ್ದ ಹಣದಿಂದಲೇ ದಿನನಿತ್ಯದ ಅಗತ್ಯ ವಸ್ತುಗಳನ್ನು ಖರೀದಿಸುತ್ತಿದ್ದಾರೆ. ಸಂಬಂಧಿಕರು, ಹಿತೈಷಿಗಳೂ ನೆರವಿಗೆ ಬರುತ್ತಿದ್ದಾರೆ’ ಎಂದೂ ಅವರು ತಿಳಿಸಿದರು.

ಚಿನ್ನ ಖರೀದಿಗೆ ಪ್ರಮಾಣ ಪತ್ರ
ಲಾಕ್‌ಡೌನ್‌ ಕಾರಣಕ್ಕೆ ಜನಪ್ರಿಯ ಬ್ರ್ಯಾಂಡೆಡ್‌ ಚಿನ್ನಾಭರಣ ಮಳಿಗೆಗಳು ಮತ್ತು ಮೊಬೈಲ್‌ ವಾಲೆಟ್‌ ಕಂಪನಿಗಳು ಆನ್‌ಲೈನ್‌ನಲ್ಲಿ ಚಿನ್ನ ಖರೀದಿಗೆ ಅವಕಾಶ ಕಲ್ಪಿಸಿವೆ.

‘ಚಿನ್ನ ಮಾಲೀಕತ್ವದ ಪ್ರಮಾಣಪತ್ರ ಜಾರಿಗೊಳಿಸಿದ ಬಳಿಕ ಜಾಲತಾಣಕ್ಕೆ ಭೇಟಿ ನೀಡುವವರ ಸಂಖ್ಯೆಯಲ್ಲಿ  ಮೂರು ಪಟ್ಟು ಏರಿಕೆ ಕಂಡು ಬಂದಿದೆ. ಪ್ರಮಾಣ ಪತ್ರವನ್ನು ಇ–ಮೇಲ್‌ / ವಾಟ್ಸ್‌ಆ್ಯಪ್‌ ಮೂಲಕ ಗ್ರಾಹಕರಿಗೆ ಕಳುಹಿಸಲಾಗುವುದು’ ಎಂದು ಕಲ್ಯಾಣ್‌ ಜುವೆಲರ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಟಿ.ಎಸ್‌. ಕಲ್ಯಾಣರಾಮನ್‌ ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು