ಗುರುವಾರ , ಏಪ್ರಿಲ್ 2, 2020
19 °C

ಕೊಡುಗೈ ದಾನಿಯ ಸುದೀರ್ಘ ಪಯಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಜೀಂ ಪ್ರೇಮ್‌ಜಿ ಅವರು 53 ವರ್ಷಗಳಷ್ಟು ಸುದೀರ್ಘ ಅವಧಿವರೆಗೆ ವಿಪ್ರೊ ಸಂಸ್ಥೆಯನ್ನು ಕಟ್ಟಿ, ಬೆಳೆಸಿ ಮುನ್ನಡೆಸಿದ ನಂತರ ಗುರುತರ ಜವಾಬ್ದಾರಿಯನ್ನು ಪೂರ್ಣಗೊಳಿಸಿದ ಸಂತೃಪ್ತ ಭಾವದಿಂದ ವಿಶ್ರಾಂತ ಬದುಕಿಗೆ ಹೊರಳಲಿದ್ದಾರೆ. ಇದರಿಂದ ವಿಪ್ರೊ ಮತ್ತು ದೇಶಿ ಐ.ಟಿ ಉದ್ದಿಮೆಯ ಒಂದು ಯುಗದ ಕೊಂಡಿ ಕಳಚಿದಂತೆ ಆಗಲಿದೆ.

ದೇಶಿ ಮಾಹಿತಿ ತಂತ್ರಜ್ಞಾನ ರಂಗದ ಆದ್ಯ ಪ್ರವರ್ತಕರಲ್ಲಿ ಒಬ್ಬರಾಗಿರುವ, ದೇಶದ ಎರಡನೆ ಅತಿದೊಡ್ಡ ಸಿರಿವಂತರಾಗಿರುವ ಮತ್ತು ಮಾಹಿತಿ ತಂತ್ರಜ್ಞಾನ ದೈತ್ಯ ಸಂಸ್ಥೆಗಳಲ್ಲಿ ಒಂದಾಗಿರುವ ವಿಪ್ರೊ ಸ್ಥಾಪಕ ಅಜೀಂ ಪ್ರೇಮ್‌ಜಿ (73) ಅವರು ತಾವು ಕಟ್ಟಿ ಬೆಳೆಸಿರುವ ಸಾಮ್ರಾಜ್ಯದ ಮುಖ್ಯಸ್ಥನ ಸ್ಥಾನದಿಂದ ನಿವೃತ್ತರಾಗಲಿದ್ದಾರೆ. ಈ ವರ್ಷದ ಜುಲೈ 31 ರಿಂದ ಈ ನಿವೃತ್ತಿ ಜಾರಿಗೆ ಬರಲಿದೆ. ಸಂತೂರ್‌ ಸೋಪ್‌ನಂತಹ ಎಫ್‌ಎಂಸಿಜಿ ಉತ್ಪನ್ನಗಳನ್ನು ತಯಾರಿಸುವ ಮತ್ತು ಇನ್‌ಫ್ರಾಸ್ಟ್ರಕ್ಷರ್‌ ಎಂಜಿನಿಯರಿಂಗ್‌ನ ವಿಪ್ರೊ ಎಂಟರ್‌ಪ್ರೈಸಿಸ್‌ನ ಅಧ್ಯಕ್ಷರಾಗಿ ಮುಂದುವರೆಯಲಿದ್ದಾರೆ. ವೈದ್ಯಕೀಯ ಸಲಕರಣೆಗಳ ಜಂಟಿ ಸಂಸ್ಥೆಯಾಗಿರುವ ವಿಪ್ರೊ –ಜಿಇ ಹೆಲ್ತ್‌ಕೇರ್‌ನ ನಿರ್ದೇಶಕ ಮಂಡಳಿ ಅಧ್ಯಕ್ಷರಾಗಿಯೂ ಮುಂದುವರೆಯಲಿದ್ದಾರೆ.

1945ರಲ್ಲಿ ತಮ್ಮ ತಂದೆ  ಆರಂಭಿಸಿದ್ದ ವನಸ್ಪತಿ ತಯಾರಿಕಾ ಸಂಸ್ಥೆಯನ್ನು ನಂತರದ ದಶಕಗಳಲ್ಲಿ ಜಾಗತಿಕ ಸಂಸ್ಥೆಯನ್ನಾಗಿ ಬೆಳೆಸಿದ ಹಿರಿಮೆ ಇವರದ್ದು. ತಂದೆಯ ಅಕಾಲಿಕ ನಿಧನದಿಂದಾಗಿ 1966ರಲ್ಲಿ ವಿದೇಶದಲ್ಲಿನ ಕಲಿಕೆಯನ್ನು ಅರ್ಧದಲ್ಲಿಯೇ ಮೊಟಕುಗೊಳಿಸಿ ಸಂಸ್ಥೆಯ ಸಾರಥ್ಯ ವಹಿಸಿಕೊಂಡಿದ್ದರು. ತಮ್ಮ ವಿಶಿಷ್ಟ ವ್ಯಕ್ತಿತ್ವದ ಗುಣ ವಿಶೇಷತೆಗಳಿಂದ ಮಾಂತ್ರಿಕ ಸ್ಪರ್ಶದಿಂದ ದೇಶದ ಮೂರನೇ ಅತಿದೊಡ್ಡ ಸಾಫ್ಟ್‌ವೇರ್‌ ರಫ್ತು ಸೇವಾ ಸಂಸ್ಥೆಯಾಗಿರುವ ವಿಪ್ರೊದ ಸಾಮ್ರಾಜ್ಯ ಕಟ್ಟಿ ಬೆಳೆಸಿದ್ದಾರೆ. ನಿವೃತ್ತಿ ನಂತರವೂ ಸಂಸ್ಥೆಯ ಜತೆಗಿನ ಇವರ ನಂಟು ಪರೋಕ್ಷವಾಗಿ ಮುಂದುವರೆಯಲಿದೆ. ಕಾರ್ಯನಿರ್ವಾಹಕಯೇತರ ನಿರ್ದೇಶಕ ಮತ್ತು ಸ್ಥಾಪಕ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ. ಸಂಸ್ಥೆಯ ಸಾರಥ್ಯದ ಹೊಣೆಗಾರಿಕೆಯು  ಇನ್ನು ಮುಂದೆ  ಹೊಸ ತಲೆಮಾರಿನ ಚಿಂತನೆಯ ಪ್ರೇಮ್‌ಜಿ ಪುತ್ರ ರಿಷದ್‌ ಪ್ರೇಮ್‌ಜಿ ಅವರ ಹೆಗಲಿಗೆ ಏರಲಿದೆ.

ವಿಪ್ರೊ ಕಂಪನಿಯನ್ನು ₹ 1.75 ಲಕ್ಷ ಕೋಟಿ ವಹಿವಾಟಿನ ಜಾಗತಿಕ ಐ.ಟಿ ಸಂಸ್ಥೆಯನ್ನಾಗಿ ಬೆಳೆಸುವಲ್ಲಿ ಇವರ ಕೊಡುಗೆ ಅನನ್ಯವಾಗಿದೆ. ಇದಷ್ಟೇ ಅಲ್ಲದೆ, ವಿಪ್ರೊ ಎಂಟರ್‌ಪ್ರೈಸಿಸ್‌ ಲಿಮಿಟೆಡ್‌ ಅನ್ನು ಜಾಗತಿಕ ಎಫ್‌ಎಂಸಿಜಿ, ಮೂಲ ಸೌಕರ್ಯ ಎಂಜಿನಿಯರಿಂಗ್‌ ಮತ್ತು ವೈದ್ಯಕೀಯ ಸಾಧನಗಳ ತಯಾರಿಕೆ, ತಂತ್ರಜ್ಞಾನ ಸಲಹೆ ಮತ್ತು ಹೊರಗುತ್ತಿಗೆಯ ಪ್ರಮುಖ ಸಂಸ್ಥೆಯನ್ನಾಗಿ ಬೆಳೆಸುವಲ್ಲಿಯೂ ಅಪಾರ ಕೊಡುಗೆ ನೀಡಿದ್ದಾರೆ. ಐ.ಟಿ ಕ್ಷೇತ್ರದ ದೂರದೃಷ್ಟಿಯ, ಆದರ್ಶ ನಾಯಕತ್ವ ಗುಣಗಳೊಂದಿಗೆ ವಿಪ್ರೊ ಸಂಸ್ಥೆಯನ್ನು ಜಾಗತಿಕ ಮಾಹಿತಿ ತಂತ್ರಜ್ಞಾನ ಭೂಪಟದಲ್ಲಿ ಗಮನ ಸೆಳೆಯುವ ದೈತ್ಯ ಸಂಸ್ಥೆಗಳಲ್ಲಿ ಒಂದನ್ನಾಗಿ ಬೆಳೆಸಿದ್ದಾರೆ. ಜತೆಗೆ, ದೇಶಿ ಐ.ಟಿ ಉದ್ದಿಮೆಯ ಬೆಳವಣಿಗೆಯಲ್ಲಿಯೂ ಇವರು ಅಸಾಮಾನ್ಯ ಕೊಡುಗೆ ನೀಡಿದ್ದಾರೆ.

ದೃಢ ಮನೋಭಾವ, ವಿನಮ್ರತೆ, ವೃತ್ತಿಪರತೆ, ಪ್ರತಿಕೂಲ ಸನ್ನಿವೇಶದಲ್ಲಿಯೂ ಎದೆಗುಂದದ, ದಾನ ಧರ್ಮದ ಬದ್ಧತೆ ಮುಂತಾದವು ಅವರ ವ್ಯಕ್ತಿತ್ವದ ಗುಣ ವಿಶೇಷತೆಗಳಾಗಿವೆ. ‘ಕಾರ್ಪೊರೇಟ್‌ ಆಡಳಿತ’ ಪರಿಕಲ್ಪನೆಯು ಉದ್ದಿಮೆ ರಂಗದ ಪರಿಭಾಷೆಯಾಗಿ ಬಳಕೆಗೆ ಬರುವ ಸಾಕಷ್ಟು ಮೊದಲೇ ಅದನ್ನು ಕಾರ್ಯರೂಪಕ್ಕೆ ತಂದ ಹೆಗ್ಗಳಿಕೆ ಇವರದ್ದು.

ತತ್ವಾದರ್ಶಗಳಲ್ಲಿನ ಇವರ ನಂಬಿಕೆ ಮತ್ತು ಅವುಗಳಿಗೆ ಕಟಿಬದ್ಧರಾಗಿ ನಿಲ್ಲುವ ಧೋರಣೆಯು ಐದು ದಶಕಗಳಲ್ಲಿ ಯಾವತ್ತೂ ಕಿಂಚಿತ್ತೂ ಮುಕ್ಕಾಗಿಲ್ಲ. ತೀವ್ರವಾಗಿ ತುಡಿಯುವ ಗುಣ, ವೃತ್ತಿಪರತೆ ಮತ್ತು ಮಧ್ಯಮ ವರ್ಗದ ಗುಣಗಳು ಇವರನ್ನು ಕಾರ್ಪೊರೇಟ್‌ ಜಗತ್ತಿನಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವಂತೆ ಮಾಡಿವೆ. ಸಂಸ್ಥೆಯ ಮಾಲೀಕರಾಗಿದ್ದರೂ ವೃತ್ತಿಪರತೆ ಗುಣ ಮೈಗೂಡಿಸಿಕೊಂಡ ಅಪರೂಪದ ವ್ಯಕ್ತಿತ್ವ ಇವರದ್ದಾಗಿದೆ ಎಂದು ಅವರ ಜತೆ ವರ್ಷಗಳ ಕಾಲ ದುಡಿದವರು ಗುಣಗಾನ ಮಾಡುತ್ತಾರೆ.

ಹಣವನ್ನು ಮಿತವಾಗಿ ವೆಚ್ಚ ಮಾಡುವ ಮತ್ತು ದಾನ ನೀಡುವ ವಿಷಯದಲ್ಲಿ ಇವರು ಉದ್ದಕ್ಕೂ ತೋರುತ್ತ ಬಂದಿರುವ ಕಾಳಜಿ ಅನನ್ಯವಾದುದು. ಇತರರಿಗೆ ಮಾದರಿಯೂ ಹೌದು. ಬದುಕಿನಲ್ಲಿ ಅಳವಡಿಸಿಕೊಂಡಿರುವ ಮಿತವ್ಯಯದ, ಆಡಂಬರದಿಂದ ಹೊರತಾದ ಮತ್ತು ಮಧ್ಯಮ ವರ್ಗದವರ ಮೌಲ್ಯಗಳ ಪಾಲನೆಯು ಸಂಸ್ಥೆಯ ಮೌಲ್ಯಗಳನ್ನೂ ಪ್ರಭಾವಿತಗೊಳಿಸಿದೆ.

ಯಾವುದೇ ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ಅಧೈರ್ಯಗೆಡದ, ಹಿಂದೇಟು ಹಾಕದ, ಮೌಲ್ಯಗಳ ಪಾಲನೆಗೆ ತೋರಿದ ಬದ್ಧತೆಯ ಜತೆಯಲ್ಲಿ ಉದ್ದಿಮೆ ವಹಿವಾಟು ಮತ್ತು ಮೌಲ್ಯಗಳನ್ನು ಜತೆ ಜತೆಯಾಗಿ ಕೊಂಡೊಯ್ಯುವುದನ್ನು ಸಾಧಿಸಿ ತೋರಿಸಿದ ಆದರ್ಶವೂ ಇವರದ್ದಾಗಿದೆ. ತಮ್ಮ ಸಂಸ್ಥೆಯಲ್ಲಿ ಐ.ಟಿ ಕ್ಷೇತ್ರದ ಪರಿಣತರನ್ನು ಪೋಷಿಸಿ, ಬೆಳೆಸಿದ ಪರಿಯೂ ಬೆರಗು ಮೂಡಿಸುತ್ತದೆ. ಸದ್ಯಕ್ಕೆ ಬೇರೆ, ಬೇರೆ ಕ್ಷೇತ್ರಗಳಲ್ಲಿ  ಮುಂಚೂಣಿಯಲ್ಲಿ ಇರುವ 200ಕ್ಕೂ ಹೆಚ್ಚು ಸಿಇಒ, ಸಿಎಫ್‌ಒಗಳು ವಿಪ್ರೊದಲ್ಲಿ ಕೆಲಸ ಮಾಡಿದವರೇ ಆಗಿದ್ದಾರೆ.

ಮಿತಭಾಷಿಯಾಗಿರುವ ಅಜೀಂ, ಹಲವಾರು ವರ್ಷಗಳವರೆಗೆ  ಪ್ರಚಾರ ಮತ್ತು ಸಾರ್ವಜನಿಕ ಬದುಕಿನಿಂದ ದೂರ ಉಳಿದಿದ್ದರು. ಸಂಸ್ಥೆಯ ಕಾರ್ಯಚಟುವಟಿಕೆಗಳ ಬಗ್ಗೆ ಕಂಪನಿಯ ಉನ್ನತ ಅಧಿಕಾರಿಗಳೇ ಹೆಚ್ಚಾಗಿ ಮಾಹಿತಿ ನೀಡುತ್ತಿದ್ದರು. ದಾನ ಧರ್ಮದ ಅದರಲ್ಲೂ ವಿಶೇಷವಾಗಿ ಶಿಕ್ಷಣಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳಲ್ಲಿ ಮಾತ್ರ ಇವರ ಉಪಸ್ಥಿತಿ ಎದ್ದು ಕಾಣುತ್ತಿತ್ತು. 

ಇವರು ವಿಪ್ರೊ ಬೆಳೆಸುವುದರ ಜತೆಗೆ ಸಂಪತ್ತು ಸೃಷ್ಟಿಗೂ ಗಣನೀಯ ಕೊಡುಗೆ ನೀಡಿದ್ದಾರೆ. ಸಂಪತ್ತು ಸೃಷ್ಟಿಗಷ್ಟೇ ಇವರ ವ್ಯಕ್ತಿತ್ವ ಸೀಮಿತವಾಗದು. ತಮ್ಮ ಸಂಪತ್ತಿನಲ್ಲಿನ ಗರಿಷ್ಠ ಮೊತ್ತವನ್ನು ದಾನ ಧರ್ಮದ ಉದ್ದೇಶಕ್ಕೆ ಉದಾರ ದಾನ ನೀಡಿ ಆದರ್ಶ ಮೆರೆದಿದ್ದಾರೆ. ಅಸಾಮಾನ್ಯ ಉದಾರ ಗುಣದಿಂದಾಗಿ ಇವರು ಸಮಕಾಲೀನ ಅತ್ಯಂತ ಶ್ರೇಷ್ಠ ದಾನಿಯಾಗಿಯೂ ಗಮನ ಸೆಳೆಯುತ್ತಾರೆ.

ನಿವೃತ್ತಿ ಬದುಕನ್ನು ಪತ್ನಿ ಯಾಸ್ಮೀನ್‌, ಮೊಮ್ಮಕ್ಕಳಾದ ರೋಹಾನ್‌ ಮತ್ತ ರಿಯಾ ಜತೆಗೆ ಕಳೆಯಲಿರುವ ಅಜೀಂ ಅವರು, ತಾವು ಬೆಳೆಸಿ ಹೆಮ್ಮರಗೊಳಿಸಿದ ಸಂಸ್ಥೆಯು ಮಗನ ನೇತೃತ್ವದಲ್ಲಿ ಬೇರುಗಳನ್ನು ಗಟ್ಟಿಗೊಳಿಸಿ ಇನ್ನಷ್ಟು ದಿಕ್ಕುಗಳಿಗೆ ತನ್ನ ರೆಂಬೆ ಕೊಂಬೆಗಳನ್ನು ಚಾಚುವುದನ್ನು ನಿರೀಕ್ಷಿಸಲಿದ್ದಾರೆ.

₹ 1.45 ಲಕ್ಷ ಕೋಟಿ ದಾನ
ದಾನ ಧರ್ಮ ಕಾರ್ಯಗಳಿಗೆ ಅಜೀಂ ಪ್ರೇಮ್‌ಜಿ ತೋರಿರುವ ಬದ್ಧತೆ ಅಸಾಮಾನ್ಯವಾದುದು. ವಿಪ್ರೊ ಸಂಸ್ಥೆಯಲ್ಲಿನ ತಮ್ಮ ಪಾಲು ಬಂಡವಾಳದ ಶೇ 34ರಷ್ಟನ್ನು ದತ್ತಿ ಕಾರ್ಯಕ್ರಮಗಳಿಗೆಂದೇ ಉದಾರವಾಗಿ ನೀಡಿದ್ದಾರೆ. ₹ 52,500 ಕೋಟಿ ಮೊತ್ತದ ಈ ವಾಗ್ದಾನದಿಂದಾಗಿ ಪ್ರೇಮ್‌ಜಿ ಅವರು ದಾನ ಧರ್ಮದ ಉದ್ದೇಶಕ್ಕೆ ಕೊಡಮಾಡಲಿರುವ ಒಟ್ಟಾರೆ ಮೊತ್ತ ₹ 1.45 ಲಕ್ಷ ಕೋಟಿಗೆ ತಲುಪಿದೆ. ಇದರಿಂದ ಅಜೀಂ ಪ್ರೇಮ್‌ಜಿ ಫೌಂಡೇಷನ್, ವಿಶ್ವದಲ್ಲಿನ ಅತ್ಯಂತ ದೊಡ್ಡ ಫೌಂಡೇಷನ್‌ಗಳಲ್ಲಿ ಒಂದಾಗಿದೆ.

ಮೈಕ್ರೊಸಾಫ್ಟ್‌ ಸ್ಥಾಪಕ ಬಿಲ್‌ ಗೇಟ್ಸ್‌ ಮತ್ತು ಕೋಟ್ಯಧಿಪತಿ ಹೂಡಿಕೆದಾರ ವಾರನ್‌ ಬಫೆಟ್‌ ಆರಂಭಿಸಿದ್ದ ‘ದಾನದ ವಾಗ್ದಾನ’ ಕಾರ್ಯಕ್ರಮಕ್ಕೆ ಸಹಿ ಹಾಕಿದ ಮೊದಲ ಭಾರತೀಯ ಇವರಾಗಿದ್ದಾರೆ. ಕುಬೇರರು ತಮ್ಮ ಸಂಪತ್ತಿನ ಶೇ 50ರಷ್ಟನ್ನು ದಾನದ ಉದ್ದೇಶಕ್ಕೆ ಬಳಸಲು ಮುಂದಾಗುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ.

ಪ್ರೇಮ್‌ಜಿ ಕುಟುಂಬವು ಸಂಸ್ಥೆಯಲ್ಲಿ ಶೇ 74.3ರಷ್ಟು ಮತದಾನದ ಹಕ್ಕನ್ನು ಹೊಂದಿದ್ದರೂ, ಹಣಕಾಸಿನ ಲಾಭದ ರೂಪದಲ್ಲಿ ಕೇವಲ ಶೇ 7ರಷ್ಟು ಮಾತ್ರ ಪ್ರಯೋಜನ ಪಡೆಯಲಿದೆ.

ರಿಷದ್‌ಗೆ ಹೊಣೆ: ಹಳೆಯ ತಲೆಮಾರಿನ ಅಜೀಂ ಅವರ ಸಮರ್ಥ ನಾಯಕತ್ವದಲ್ಲಿ ಜಾಗತಿಕ ಮನ್ನಣೆಗೆ ಪಾತ್ರವಾಗಿರುವ ವಿಪ್ರೊಗೆ ಈಗ ಹೊಸ ತಲೆಮಾರಿನ ನಾಯಕತ್ವ ದೊರೆಯಲಿದೆ. ಅಜೀಂ ಅವರ ಹಿರಿಯ ಮಗ ರಿಷದ್‌ (42), ತಂದೆಯ ಹೊಣೆಗಾರಿಕೆ ಮುಂದುವರೆಸಲಿದ್ದಾರೆ.


ರಿಷದ್‌ ಪ್ರೇಮ್‌ಜಿ

ನಿರೀಕ್ಷೆಯಂತೆ ಈ ಉತ್ತರಾಧಿಕಾರಿ ಬದಲಾವಣೆ ಪ್ರಕ್ರಿಯೆಗೆ ದಶಕದ ಹಿಂದೆಯೇ ಚಾಲನೆ ದೊರೆತಿತ್ತು. ಅಧಿಕಾರ ವರ್ಗಾವಣೆಯು ಯೋಜಿತ ರೀತಿಯಲ್ಲಿಯೇ ನಡೆದಿದೆ. ಐ.ಟಿ ಉದ್ದಿಮೆಯು ಹೊಸ ಸವಾಲುಗಳನ್ನು ಎದುರಿಸುತ್ತಿರುವ ಸಂಕ್ರಮಣ ಸಂದರ್ಭದಲ್ಲಿ ಇವರು ಸಂಸ್ಥೆಯನ್ನು ಮುನ್ನಡೆಸಲಿದ್ದಾರೆ.

ಜಾಗತಿಕ ತಂತ್ರಜ್ಞಾನ ಉದ್ದಿಮೆಯ ಆಗು ಹೋಗುಗಳನ್ನು ಕರತಲಾಮಲಕ ಮಾಡಿಕೊಂಡಿರುವ ರಿಷದ್‌, ವೈವಿಧ್ಯಮಯ ನಾಯಕತ್ವದ ಗುಣದಿಂದಾಗಿ ಸಂಸ್ಥೆಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ನಿರೀಕ್ಷೆ ಮೂಡಿಸಿದ್ದಾರೆ. ಸಾಫ್ಟ್‌ವೇರ್‌ ಮತ್ತು ಸೇವಾ ಸಂಸ್ಥೆಗಳ ರಾಷ್ಟ್ರೀಯ  ಒಕ್ಕೂಟದ (ನಾಸ್ಕಾಂ) ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಹಾರ್ವರ್ಡ್‌ ಬಿಸಿನೆಸ್‌ ಸ್ಕೂಲ್‌ ಮತ್ತು ಲಂಡನ್ ಸ್ಕೂಲ್‌ ಆಫ್ ಇಕನಾಮಿಕ್ಸ್‌ನ ಪದವೀಧರರಾಗಿರುವ ಇವರು, 2007ರಲ್ಲಿ ವಿಪ್ರೊ ಸಂಸ್ಥೆಗೆ ಸೇರ್ಪಡೆಗೊಂಡಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು