ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಷೇರುಪೇಟೆಯ ಮಹಾಪತನ: ಹೂಡಿಕೆದಾರರ ಸಂಪತ್ತು ₹31 ಲಕ್ಷ ಕೋಟಿ ನಷ್ಟ

Published 4 ಜೂನ್ 2024, 15:42 IST
Last Updated 4 ಜೂನ್ 2024, 15:42 IST
ಅಕ್ಷರ ಗಾತ್ರ

ಮುಂಬೈ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ಮೈತ್ರಿಯ ಬೆಂಬಲವಿಲ್ಲದೆ ಬಹುಮತ ಪಡೆಯುವಲ್ಲಿ ವೈಫಲ್ಯ ಕಂಡಿದ್ದರಿಂದ ದೇಶದ ಷೇರು ಸೂಚ್ಯಂಕಗಳು ಮಂಗಳವಾರ ಮಹಾಪತನ ಕಂಡಿವೆ. 

ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್‌ ಹಾಗೂ ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ ಸುಮಾರು ಶೇ 6ರಷ್ಟು ಕುಸಿತ ದಾಖಲಿಸಿವೆ. ಹಾಗಾಗಿ, ಹೂಡಿಕೆದಾರರ ಸಂಪತ್ತು ಒಂದೇ ದಿನ ₹31 ಲಕ್ಷ ಕೋಟಿ ಕರಗಿದೆ.

2020ರ ಮಾರ್ಚ್‌ 23ರಂದು ಕೋವಿಡ್‌ ಸಾಂಕ್ರಾಮಿಕ ಉಲ್ಬಣಗೊಂಡಿದ್ದರಿಂದ ಸರ್ಕಾರವು ಲಾಕ್‌ಡೌನ್‌ ಘೋಷಿಸಿತ್ತು. ಅಂದಿನ ವಹಿವಾಟಿನಲ್ಲಿ ಸೂಚ್ಯಂಕಗಳು ಶೇ 13ರಷ್ಟು ಕುಸಿತ ಕಂಡಿದ್ದವು. ನಾಲ್ಕು ವರ್ಷಗಳ ಬಳಿಕ ಈಗ ತೀವ್ರ ಇಳಿಕೆ ಕಂಡಿವೆ. 

ಸೋಮವಾರದ ವಹಿವಾಟಿನಲ್ಲಿ ಶೇ 3ರಷ್ಟು ಏರಿಕೆ ಕಂಡಿದ್ದ ಸೆನ್ಸೆಕ್ಸ್‌ 4,389 ಅಂಶ ಕುಸಿತ ಕಂಡು (ಶೇ 5.74ರಷ್ಟು) ಎರಡು ತಿಂಗಳ ಕನಿಷ್ಠ ಮಟ್ಟವಾದ 72,079 ಅಂಶಗಳಿಗೆ ತಲುಪಿದೆ. ವಹಿವಾಟಿನ ಒಂದು ಸಂದರ್ಭದಲ್ಲಿ 6,234 ಅಂಶ ಇಳಿಕೆ ಕಂಡು (ಶೇ 8.15ರಷ್ಟು) ಐದು ತಿಂಗಳ ಕನಿಷ್ಠ ಮಟ್ಟವಾದ 70,234 ಅಂಶಗಳಿಗೆ ತಲುಪಿತ್ತು.

ನಿಫ್ಟಿ 1,379 ಅಂಶ ಕುಸಿತ ಕಂಡು (ಶೇ 5.93ರಷ್ಟು) 21,884 ಅಂಶಗಳಲ್ಲಿ ವಹಿವಾಟು ಮುಕ್ತಾಯಗೊಂಡಿತು. ಆರಂಭಿಕ ವಹಿವಾಟಿನಲ್ಲಿ 1,982 ಅಂಶ ಕುಸಿತ ಕಂಡು (ಶೇ 8.52ರಷ್ಟು) 21,281 ಅಂಶಗಳಿಗೆ ಮುಟ್ಟಿತ್ತು.

ಅದಾನಿ ಸಮೂಹದ ಷೇರಿನ ಮೌಲ್ಯ ಕುಸಿತ

ಲೋಕಸಭಾ ಚುನಾವಣಾ ಫಲಿತಾಂಶವು ಉದ್ಯಮಿ ಗೌತಮ್‌ ಅದಾನಿ ಸಮೂಹದ ಮೇಲೂ ಪರಿಣಾಮ ಬೀರಿದ್ದು ಒಂದೇ ದಿನ ಕಂ‍ಪನಿಗಳ ಮಾರುಕಟ್ಟೆ ಮೌಲ್ಯವು ₹3.64 ಲಕ್ಷ ಕೋಟಿ ಕರಗಿದೆ. ಸೋಮವಾರದ ವಹಿವಾಟಿನಲ್ಲಿ ಕಂಪನಿಗಳ ಷೇರಿನ ಮೌಲ್ಯದಲ್ಲಿ ಶೇ 16ರಷ್ಟು ಏರಿಕೆಯಾಗಿದ್ದರಿಂದ ಮಾರುಕಟ್ಟೆ ಮೌಲ್ಯವು ₹19.42 ಲಕ್ಷ ಕೋಟಿ ದಾಟಿತ್ತು.  ಮಂಗಳವಾರದ ಆರಂಭಿಕ ವಹಿವಾಟಿನಲ್ಲಿಯೇ ಷೇರಿನ ಮೌಲ್ಯ ಇಳಿಕೆ ಕಂಡವು. ಹತ್ತು ಕಂಪನಿಗಳ ಪೈಕಿ ಎಂಟು ಕಂಪನಿಗಳ ಷೇರಿನ ಮೌಲ್ಯವು ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಒಟ್ಟು ಎಂ–ಕ್ಯಾಪ್‌ ₹15.78 ಲಕ್ಷ ಕೋಟಿ ಆಗಿದೆ.  ಅದಾನಿ ಪೋರ್ಟ್ಸ್‌ ಷೇರಿನ ಮೌಲ್ಯದಲ್ಲಿ ಶೇ 21.26ರಷ್ಟು ಕುಸಿದಿದೆ. ಅದಾನಿ ಎನರ್ಜಿ ಸೆಲ್ಯೂಷನ್ಸ್‌ ಶೇ 20 ಅದಾನಿ ಎಂಟರ್‌ಪ್ರೈಸಸ್‌ ಶೇ 19.35 ಅದಾನಿ ಗ್ರೀನ್‌ ಎನರ್ಜಿ ಷೇರಿನ ಮೌಲ್ಯದಲ್ಲಿ ಶೇ 19.20ರಷ್ಟು ಇಳಿಕೆಯಾಗಿದೆ.  ಅದಾನಿ ಟೋಟಲ್‌ ಗ್ಯಾಸ್‌ ಶೇ 18.88 ಎನ್‌ಡಿಟಿವಿ ಶೇ 18.52 ಅದಾನಿ ಪವರ್‌ ಶೇ 17.27 ಅಂಬುಜಾ ಸಿಮೆಂಟ್ಸ್‌ ಶೇ 16.88 ಎಸಿಸಿ ಶೇ 14.71 ಹಾಗೂ ಅದಾನಿ ವಿಲ್ಮರ್‌ ಷೇರಿನ ಮೌಲ್ಯದಲ್ಲಿ ಶೇ 9.98ರಷ್ಟು ಕುಸಿದಿದೆ. ಅದಾನಿ ಸಮೂಹವು ಉದ್ಯಮದ ವಿಸ್ತರಣೆಯ ಭಾಗವಾಗಿ ಮುಂದಿನ ಒಂದು ದಶಕದ ಅವಧಿಯಲ್ಲಿ ₹7.51 ಲಕ್ಷ ಕೋಟಿ ಬಂಡವಾಳ ಹೂಡಿಕೆ ಮಾಡಲಿದೆ ಎಂದು ಅಮೆರಿಕದ ಬ್ರೋಕರೇಜ್ ಸಂಸ್ಥೆಯಾದ ಜೆಫರಿಸ್‌ ಹೇಳಿತ್ತು. ಹಾಗಾಗಿ ಶುಕ್ರವಾರದ ವಹಿವಾಟಿನಲ್ಲಿ ಅದಾನಿ‌ ಕಂಪನಿಗಳ ಷೇರಿನ ಮೌಲ್ಯದಲ್ಲಿ ಶೇ 14ರಷ್ಟು ಏರಿಕೆಯಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT