ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೋತ್ತರ | ಇಲ್ಲಿದೆ ಹಣ ಸುರಕ್ಷಿತವಾಗಿರಿಸುವ ಮಾರ್ಗದರ್ಶನ

Last Updated 17 ಜೂನ್ 2020, 3:07 IST
ಅಕ್ಷರ ಗಾತ್ರ

ರಾಮಚಂದ್ರಪ್ಪ, ಗದಗ

ನಾನು ಜೂನಿಯರ್‌ ಕಾಲೇಜಿನ ಉಪನ್ಯಾಸಕನಾಗಿ ಇನ್ನೆರಡು ತಿಂಗಳಿನಲ್ಲಿ ನಿವೃತ್ತನಾಗಲಿದ್ದೇನೆ. ನನಗೆ ಪಿಂಚಣಿ ಇದೆ. ನಿವೃತ್ತಿಯಿಂದ ಸುಮಾರು ₹ 30 ಲಕ್ಷ ಹಣ ಬರುತ್ತದೆ. ಇಬ್ಬರು ಗಂಡು ಮಕ್ಕಳು ಇದ್ದಾರೆ. ಹಣ ಸುರಕ್ಷಿತವಾಗಿ ಇರಿಸಲು ಮಾರ್ಗದರ್ಶನ ಮಾಡಿ. ನನ್ನ ಪಿಪಿಎಫ್‌ ಖಾತೆ ಕೂಡಾ 15 ವರ್ಷದ ಅವಧಿಗೆ ಮುಗಿಯಲಿದೆ.

ಉತ್ತರ: ನಿಮಗೆ ನಿವೃತ್ತಿಯಿಂದ ಬರಬಹುದಾದ ₹ 30 ಲಕ್ಷದಲ್ಲಿ ₹ 15 ಲಕ್ಷ ಅಂಚೆ ಕಚೇರಿ ಹಿರಿಯ ನಾಗರಿಕರ ಠೇವಣಿಯಲ್ಲಿ ಇರಿಸಿ. ಇದು 5 ವರ್ಷಗಳ ಯೋಜನೆ. ಬಡ್ಡಿ ದರ ಶೇ 7.40. ಬಡ್ಡಿ ಪ್ರತಿ ಮೂರು ತಿಂಗಳಿಗೊಮ್ಮೆ ಉಳಿತಾಯ ಖಾತೆಗೆ ಜಮೆ ಆಗುತ್ತದೆ. ನಿಮಗೆ ಬಡ್ಡಿ ಅವಶ್ಯಕತೆ ಇರದಿದ್ದರೆ ಅಂಚೆ ಕಚೇರಿಯಲ್ಲಿ ಆರ್‌.ಡಿ ಮಾಡಿ. ಇನ್ನುಳಿದ ₹ 15 ಲಕ್ಷದಲ್ಲಿ ₹ 10 ಲಕ್ಷ ಎಲ್‌ಐಸಿಯಲ್ಲಿ, ಪ್ರಧಾನ ಮಂತ್ರಿ ವಯ ವಂದನಾ ಯೋಜನೆಯಲ್ಲಿ ಇರಿಸಿರಿ. ಇದು 10 ವರ್ಷಗಳ ಯೋಜನೆ. ಬಡ್ಡಿ ಪ್ರತಿ ತಿಂಗಳೂ ಪಡೆಯಬಹುದು. ಬಡ್ಡಿ ದರ ಶೇ 7.40. ಇನ್ನುಳಿದ ₹ 5 ಲಕ್ಷ ನೀವು ಸಂಬಳ, ಪಿಂಚಣಿ ಪಡೆಯುವ ಬ್ಯಾಂಕ್‌ನಲ್ಲಿ ಅವಧಿ ಠೇವಣಿಯಲ್ಲಿ ಇರಿಸಿ. ಪಿಪಿಎಫ್‌ ಖಾತೆ 15 ವರ್ಷ ಮುಗಿದರೂ 5 ವರ್ಷಗಳವರೆಗೆ ಮುಂದುವರಿಸುತ್ತಲೇ ಇರಿ. ಇಲ್ಲಿ ಬರುವ ಬಡ್ಡಿಗೆ ಸೆಕ್ಷನ್‌ 10(II) ಆಧಾರದ ಮೇಲೆ ಸಂಪೂರ್ಣ ತೆರಿಗೆ ವಿನಾಯಿತಿ ಇದೆ. ಈ ಖಾತೆ 5 ವರ್ಷಕ್ಕೆ ಮುಂದುವರಿಸಿರಿ.

ವಿಶಾಲಾಕ್ಷಿ, ರಾಮನಗರ

ನಾನು ಬೆಂಗಳೂರಿನಲ್ಲಿ ಫ್ಲ್ಯಾಟ್ ಮಾರಾಟ ಮಾಡಿದ್ದೇನೆ. ಇದರಿಂದ ₹ 52 ಲಕ್ಷ ಹಣ ಬಂದಿದೆ. ಸದ್ಯ ಈ ಹಣ ನನ್ನ ಉಳಿತಾಯ ಖಾತೆಯಲ್ಲಿ ಇರಿಸಿದ್ದೇನೆ. ಮಕ್ಕಳ ಮದುವೆ, ಕೈ ಸಾಲ ಹಾಗೂ ಇನ್ನಿತರ ಕೌಟುಂಬಿಕ ಖರ್ಚು ಇವೆಲ್ಲವನ್ನೂ ನಿಭಾಯಿಸಲು ಈ ಮೊತ್ತ ಬಳಸಬೇಕಾಗಿದೆ. ತೆರಿಗೆ ಬಂದರೆ ಎಷ್ಟು ಬರಬಹುದು. ಈ ಫ್ಲ್ಯಾಟ್‌ 2015ರಲ್ಲಿ ₹ 28 ಲಕ್ಷಕ್ಕೆ ಕೊಂಡಿದ್ದಾಗಿದೆ.

ಉತ್ತರ: ಬಂದಿರುವ ಲಾಭದಲ್ಲಿಬಂಡವಾಳ ವೃದ್ಧಿ ತೆರಿಗೆ ರೂಪದಲ್ಲಿ ಶೇ 20ರಷ್ಟು ಕೊಡಬೇಕಾಗುತ್ತದೆ. ಇದೇ ವೇಳೆ 2015ರಿಂದ ಇಲ್ಲಿಯವರೆಗಿನ cost of inflation index ಕೊಟ್ಟಿರುವ brokerage, ಇವೆಲ್ಲವನ್ನೂ ₹ 52 ಲಕ್ಷದಲ್ಲಿ ಕಳೆದು ತೆರಿಗೆ ಸಲ್ಲಿಸಬಹುದು. ನೀವು ಈವರೆಗೆ ಆದಾಯ ತೆರಿಗೆಗೆ ಒಳಗಾಗದಿದ್ದರೂ ಫ್ಲ್ಯಾಟ್‌ ಮಾರಾಟ ಮಾಡಿರುವುದರಿಂದ ಐ.ಟಿ ರಿಟರ್ನ್ಸ್‌ ಸಲ್ಲಿಸಿ ಬಂಡವಾಳ ತೆರಿಗೆ ಕೊಡಬೇಕಾಗುತ್ತದೆ. ಸಮೀಪದ ತೆರಿಗೆ ಸಲಹೆಗಾರರು ಅಥವಾ ಚಾರ್ಟರ್ಡ್‌ ಅಕೌಂಟಂಟ್ ಮೂಖಾಂತರ ರಿಟರ್ನ್ಸ್‌ ತುಂಬಿ.ಸುಮಾರು ₹ 4 ಲಕ್ಷದಷ್ಟು ಬಂಡವಾಳ ವೃದ್ಧಿ ತೆರಿಗೆ ಬರಬಹುದು. ನೀವು ಆಸ್ತಿ ಮಾರಾಟ ಮಾಡಿ ಬಂದ ಹಣವನ್ನು ಉಳಿತಾಯ ಖಾತೆಯಲ್ಲಿ ಇಡುವುದಕ್ಕಿಂತ 3 ಅಥವಾ 6 ತಿಂಗಳಿಗೆ ಎಫ್‌ಡಿ ಮಾಡಿ. ಇದರಿಂದ ಕನಿಷ್ಠ ₹ 10 ಸಾವಿರ ಹೆಚ್ಚಿನ ಬಡ್ಡಿ ಪಡೆಯಬಹುದು. ಇತ್ತೀಚಿನ ದಿನಗಳಲ್ಲಿ ಸೈಬರ್‌ ದಾಳಿ ಹೆಚ್ಚಾಗುತ್ತಿದ್ದು, ಉಳಿತಾಯ ಖಾತೆಯಲ್ಲಿ ಬಹಳಷ್ಟು ಹಣ ಬಹಳ ಕಾಲ ಇಡುವುದು ಸೂಕ್ತವಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT