ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಟ್‌ಕಾಯಿನ್ ರೀತಿಯ ಕ್ರಿಪ್ಟೊಕರೆನ್ಸಿ ಕಾನೂನು ಮಾನ್ಯ ಆಗದು: ಹಣಕಾಸು ಕಾರ್ಯದರ್ಶಿ

Last Updated 2 ಫೆಬ್ರುವರಿ 2022, 14:27 IST
ಅಕ್ಷರ ಗಾತ್ರ

ನವದೆಹಲಿ: ಬಿಟ್‌ಕಾಯಿನ್‌ ಮತ್ತು ಎಥೇರಿಯಮ್‌ ರೀತಿಯ ಕ್ರಿಪ್ಟೊಕರೆನ್ಸಿಗಳು ಕಾನೂನುಮಾನ್ಯ ಆಗುವುದು ಸಾಧ್ಯವಿಲ್ಲ, ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ವಿತರಿಸುವ ಡಿಜಿಟಲ್‌ ರೂಪಾಯಿ ಮಾತ್ರವೇ ಅಧಿಕೃತ ಡಿಜಿಟಲ್‌ ಕರೆನ್ಸಿ ಆಗಲಿದೆ ಎಂದು ಹಣಕಾಸು ಸಚಿವಾಲಯದ ಕಾರ್ಯದರ್ಶಿ ಟಿ.ವಿ.ಸೋಮನಾಥನ್‌ ಹೇಳಿದ್ದಾರೆ.

'ಆರ್‌ಬಿಐ ಹಣವನ್ನು ಬಿಡುಗಡೆ ಮಾಡುತ್ತದೆ, ಅದು ಡಿಜಿಟಲ್‌ ರೂಪದಲ್ಲಿ ಇರುತ್ತದೆ. ಡಿಜಿಟಲ್‌ ರೂಪಾಯಿ ಬಳಸಿ ನಾವು ಡಿಜಿಟಲ್‌ ಸ್ವತ್ತು ಹೊರತಾದ ವಸ್ತುಗಳನ್ನು ಖರೀದಿಸಲು ಬಳಸಬಹುದಾಗಿದೆ ಅಥವಾ ಯುಪಿಐ ಪ್ಲಾಟ್‌ಫಾರ್ಮ್‌ ಮೂಲಕ ಪಾವತಿ ಮಾಡಬಹುದು. ಬಿಟ್‌ಕಾಯಿನ್‌, ಎಥೇರಿಯಮ್‌ ಅಥವಾ ನಾನ್‌ ಫಂಜಿಬಲ್‌ ಟೋಕನ್‌ (ಎನ್‌ಎಫ್‌ಟಿ) ಸೇರಿದಂತೆ ಇನ್ನಾವುದೇ ಕ್ರಿಪ್ಟೊಕರೆನ್ಸಿಗಳು ಯಾವತ್ತಿಗೂ ಕಾನೂನುಮಾನ್ಯ ಆಗುವುದಿಲ್ಲ' ಎಂದು ಸೋಮನಾಥನ್‌ ತಿಳಿಸಿದ್ದಾರೆ.

'ಕ್ರಿಪ್ಟೊ ಸ್ವತ್ತುಗಳ ಮೌಲ್ಯ ಇಬ್ಬರು ವ್ಯಕ್ತಿಗಳ ನಡುವೆ ನಿರ್ಧಾರವಾಗುತ್ತದೆ. ಆ ಮೂಲಕ ಖರೀದಿಸುವ ಕ್ರಿಪ್ಟೊ ಸ್ವತ್ತುಗಳಿಗೆ ಸರ್ಕಾರದಿಂದ ಮಾನ್ಯತೆ ಇರುವುದಿಲ್ಲ. ಖಾಸಗಿ ಕ್ರಿಪ್ಟೊಕರೆನ್ಸಿಗಳಲ್ಲಿ ಹೂಡಿಕೆ ಮಾಡುತ್ತಿರುವ ಜನರು ಇದನ್ನು ಅರ್ಥ ಮಾಡಿಕೊಳ್ಳಬೇಕಿದೆ. ಅವರ ಹೂಡಿಕೆ ಫಲಕಾರಿಯಾಗುವುದೊ ಅಥವಾ ಇಲ್ಲವೋ ಎಂಬುದಕ್ಕೆ ಖಾತ್ರಿ ಇರುವುದಿಲ್ಲ ಹಾಗೂ ಸರ್ಕಾರವು ಅದಕ್ಕೆ ಜವಾಬ್ದಾರರಾಗಿರುವುದಿಲ್ಲ' ಎಂದು ವಿವರಿಸಿದ್ದಾರೆ.

'ಬಿಟ್‌ಕಾಯಿನ್‌ ಅಥವಾ ಎಥೇರಿಯಮ್‌ ಅಕ್ರಮವಾದುದು ಎಂದು ಹೇಳುತ್ತಿಲ್ಲ. ಆದರೆ, ಕ್ರಿಪ್ಟೊಕರೆನ್ಸಿಗಳಿಗೆ ನಿಬಂಧನೆಗಳು ಜಾರಿಯಾದರೂ ಸಹ ಅವು ಕಾನೂನುಮಾನ್ಯ ಆಗುವುದಿಲ್ಲ' ಎಂದಿದ್ದಾರೆ.

'ಪೇಟಿಎಂ, ಯುಪಿಐ ರೀತಿಯ ಡಿಜಿಟಲ್‌ ವ್ಯಾಲೆಟ್‌ಗಳ ಮೂಲಕ ಪ್ರಸ್ತುತ ನಡೆಸುತ್ತಿರುವ ರೀತಿಯಲ್ಲೇ ಡಿಜಿಟಲ್‌ ರೂಪಾಯಿಯ ವಹಿವಾಟು ನಡೆಸಬಹುದಾಗಿದೆ. ನಾವು ನಡೆಸುವ ನಗದು ವಹಿವಾಟಿಗೆ ಅದು ಸಮನಾಗಿರುತ್ತದೆ' ಎಂದು ಸೋಮನಾಥನ್‌ ಹೇಳಿದ್ದಾರೆ.

ಕ್ರಿಪ್ಟೊಕರೆನ್ಸಿಗಳು ಊಹೆಯ ಆಧಾರ ಮೇಲೆ ನಡೆಯುವ ವಹಿವಾಟು ಆಗಿರುವುದರಿಂದ ಸರ್ಕಾರವು ಶೇಕಡ 30ರಷ್ಟು ತೆರಿಗೆ ವಿಧಿಸಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT