ಗುರುವಾರ , ಜೂನ್ 4, 2020
27 °C
ನರೇಗಾ: ₹ 40 ಸಾವಿರ ಕೋಟಿ ಹೆಚ್ಚುವರಿ ವೆಚ್ಚ, ರಾಜ್ಯಗಳ ಸಾಲ ಸಂಗ್ರಹಿಸುವ ಮಿತಿ ಏರಿಕೆ

ಉದ್ಯೋಗ ಖಾತರಿ, ಖಾಸಗೀಕರಣಕ್ಕೆ ಒತ್ತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ : ‘ನರೇಗಾ’ ಉದ್ಯೋಗ ಖಾತರಿ ಯೋಜನೆಗೆ ಹೆಚ್ಚಿನ ಅನುದಾನ, ಸುಸ್ತಿದಾರ ಕಂಪನಿಗಳಿಂದ ಸಾಲ ವಸೂಲಿ ಪ್ರಕ್ರಿಯೆಗೆ (ಐಬಿಸಿ) ಒಂದು ವರ್ಷ ವಿನಾಯ್ತಿ, ರಾಜ್ಯಗಳ ಸಾಲ ಸಂಗ್ರಹಿಸುವ ಮಿತಿ ಹೆಚ್ಚಳ, ಹೊಸ ಕೇಂದ್ರೋದ್ಯಮ ನೀತಿ, ಖಾಸಗೀಕರಣಕ್ಕೆ ಹೆಚ್ಚಿದ ಒಲವು  – ಇವು ಕೇಂದ್ರ ಸರ್ಕಾರ ಭಾನುವಾರ ಪ್ರಕಟಿಸಿದ ಐದನೇ ಕಂತಿನ ಆರ್ಥಿಕ ಕೊಡುಗೆಗಳಲ್ಲಿನ ಮಹತ್ವದ ನಿರ್ಧಾರಗಳಾಗಿವೆ.

ನಿಸ್ತೇಜಗೊಂಡಿರುವ ಆರ್ಥಿಕತೆ ಮೇಲಿನ ದಿಗ್ಬಂಧನದ ಹೊರೆ ತಗ್ಗಿಸಲು ಪ್ರಕಟಿಸಲಾಗಿರುವ ಈ ಕೊಡುಗೆಗಳು ಮಧ್ಯಮಾವಧಿ ಮತ್ತು ದೀರ್ಘಾವಧಿ ಪರಿಹಾರ ಕ್ರಮಗಳಾಗಿವೆ. ಅತ್ಯಂತ ಪ್ರಮುಖ ಕೇಂದ್ರೋದ್ಯಮ ಹೊರತುಪಡಿಸಿ ಉಳಿದೆಲ್ಲ ವಲಯಗಳಲ್ಲಿ ಖಾಸಗೀಕರಣದ ಹಾದಿ ಸುಗಮಗೊಳಿಸಲಾಗಿದೆ. ಲಾಕ್‌ಡೌನ್‌ ಪರಿಣಾಮದಿಂದಾಗಿ ಜೀವನೋಪಾಯಕ್ಕೆ ಎರವಾಗಿರುವ ಬಡವರಿಗೆ ತಕ್ಷಣಕ್ಕೆ ನೆಮ್ಮದಿ ನೀಡುವ ಯಾವುದೇ ಪರಿಹಾರ ಒಳಗೊಂಡಿಲ್ಲ. ನೆರವಿಗೆ ಪರಿಗಣಿಸದ ಕಾರಣಕ್ಕೆ ಹೋಟೆಲ್‌ ಮತ್ತು ವಿಮಾನಯಾನ ವಲಯಗಳಿಂದ ಆಘಾತ ವ್ಯಕ್ತವಾಗಿದೆ.

ಎಲ್ಲ ಐದೂ ಕೊಡುಗೆಗಳ ಒಟ್ಟಾರೆ ವೆಚ್ಚವು ಜಿಡಿಪಿಯ ಶೇ 1ಕ್ಕಿಂತ ಕಡಿಮೆ ಇರಲಿದೆ. ಕೊಡುಗೆಗಳ ವೆಚ್ಚವು ‘ಜಿಡಿಪಿ’ಯ ಶೇ 10ರಷ್ಟು ಇರಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿಕೊಂಡಿದ್ದರು. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಸುದ್ದಿಗೋಷ್ಠಿಯಲ್ಲಿ ಕೊನೆಯ ಕಂತಿನ ಕೊಡುಗೆಗಳ ವಿವರ ನೀಡಿದ್ದಾರೆ.

ಉದ್ಯೋಗ ಖಾತರಿ ಯೋಜನೆ

ಹಳ್ಳಿಗಳಿಗೆ ಮರಳಿರುವ ವಲಸಿಗರಿಗೆ ಸ್ಥಳೀಯವಾಗಿ ದುಡಿಮೆ ಕಲ್ಪಿಸಲು ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಗೆ (ಮನರೇಗಾ) ₹ 1 ಲಕ್ಷ ಕೋಟಿ ವೆಚ್ಚ ಮಾಡಲು ನಿರ್ಧಾರಿಸಲಾಗಿದೆ. ಬಜೆಟ್‌ನಲ್ಲಿ ನಿಗದಿಪಡಿಸಿದ್ದ ₹ 61 ಸಾವಿರ ಕೋಟಿಗೆ ಪೂರಕವಾಗಿ ₹ 40 ಸಾವಿರ ಕೋಟಿ ಹೆಚ್ಚುವರಿ ವೆಚ್ಚ ಮಾಡಲಾಗುವುದು. ವರ್ಷವೊಂದರಲ್ಲಿ ಕುಟುಂಬವೊಂದಕ್ಕೆ 100 ದಿನಗಳ ಉದ್ಯೋಗ ಖಾತರಿಯನ್ನು ‘ಮನರೇಗಾ’ ನೀಡುತ್ತದೆ.

 ರಾಜ್ಯಗಳ ಸಾಲ ಸಂಗ್ರಹ ಮಿತಿ ಹೆಚ್ಚಳ

ಆರೋಗ್ಯ ಮತ್ತು ಸಾಮಾಜಿಕ – ಆರ್ಥಿಕ ಸವಾಲುಗಳನ್ನು ಎದುರಿಸುವುದಕ್ಕೆ ಹೆಚ್ಚುವರಿ ಸಂಪನ್ಮೂಲ ಸಂಗ್ರಹಿಸಲು ರಾಜ್ಯಗಳ ಸಾಲ ಸಂಗ್ರಹ ಮಿತಿ ಏರಿಸಲಾಗಿದೆ. ವಿತ್ತೀಯ ಹೊಣೆಗಾರಿಕೆ ಮತ್ತು ಬಜೆಟ್‌ ನಿರ್ವಹಣೆ ಕಾಯ್ದೆಯಡಿ ರಾಜ್ಯಗಳ ಸಾಲ ಎತ್ತುವ ಮಿತಿಯನ್ನು ರಾಜ್ಯಗಳ ಆಂತರಿಕ ಉತ್ಪನ್ನದ (ಜಿಎಸ್‌ಡಿಪಿ) ಶೇ 3 ರಿಂದ ಶೇ 5ಕ್ಕೆ ಹೆಚ್ಚಿಸಲಾಗಿದೆ. ಇದು 2020–21ನೇ ಹಣಕಾಸು ವರ್ಷಕ್ಕೆ ಮಾತ್ರ ಸೀಮಿತವಾಗಿರಲಿದೆ. ರಾಜ್ಯಗಳು ಈ ವರ್ಷ ₹ 4.28 ಲಕ್ಷ ಕೋಟಿ ಮೊತ್ತದ ಹೆಚ್ಚುವರಿ ಸಾಲ ಸಂಗ್ರಹಿಸಬಹುದಾಗಿದೆ. ಇದಕ್ಕೆ ಕೆಲ ಸುಧಾರಣಾ ಕ್ರಮಗಳ ಷರತ್ತುಗಳನ್ನೂ ವಿಧಿಸಲಾಗಿದೆ.

ಸಾಲ ವಸೂಲಾತಿ ನಿಯಮ ಸಡಿಲು

ಸುಸ್ತಿದಾರ ಕಂಪನಿಗಳಿಂದ ಸಾಲ ವಸೂಲಾತಿ ಪ್ರಕ್ರಿಯೆಗೆ ಕನಿಷ್ಠ ಮಿತಿಯನ್ನು ₹ 1ಲಕ್ಷ ದಿಂದ ₹ 1 ಕೋಟಿಗೆ ಹೆಚ್ಚಿಸಲಾಗಿದೆ. ಇದರಿಂದ ಸಾಲ ಮರುಪಾವತಿಸದ ಬಹುತೇಕ ‘ಎಂಎಸ್‌ಎಂಇ’ಗಳಿಗೆ ಪ್ರಯೋಜನವಾಗಲಿದೆ. ‘ಐಬಿಸಿ’ ಸಂಹಿತೆಯಡಿ ಸಾಲ ವಸೂಲಾತಿ ಪ್ರಕ್ರಿಯೆಯನ್ನು ಒಂದು ವರ್ಷ ಸ್ಥಗಿತಗೊಳಿಸಲಾಗಿದೆ. ಕೋವಿಡ್‌ನಿಂದ ಬಾಧಿತ ಸಾಲವನ್ನು ‘ಸುಸ್ತಿ’ ವ್ಯಾಖ್ಯೆಯಿಂದ ಕೈಬಿಡಲಾಗಿದೆ. ಈ ಸಂಬಂಧ ಸದ್ಯದಲ್ಲೇ ಸುಗ್ರೀವಾಜ್ಞೆ ಹೊರ ಬೀಳಲಿದೆ.

ಕಂಪನಿ ಕಾಯ್ದೆ ಸಡಿಲಿಕೆ

ಕಾರ್ಪೊರೇಟ್‌ ಸಾಮಾಜಿಕ ಹೊಣೆಗಾರಿಕೆ (ಸಿಎಸ್ಆರ್‌) ಜಾರಿ ಮತ್ತು ನಿರ್ದೇಶಕ ಮಂಡಳಿ ಸಭೆಯ ಕಲಾಪಗಳ ವಿವರ ನೀಡದಿರುವ, ವಾರ್ಷಿಕ ಸರ್ವ ಸದಸ್ಯರ ಸಭೆ ಕರೆದಿರುವುದು ಸೇರಿದಂತೆ  ಕಂಪನಿ ಕಾಯ್ದೆಯ ಸಣ್ಣಪುಟ್ಟ ತಾಂತ್ರಿಕ ನಿಯಮಗಳನ್ನು ಪಾಲಿಸದಿರುವುದನ್ನು ಕಾಯ್ದೆಯ ಉಲ್ಲಂಘನೆ ಅಥವಾ ಅಪರಾಧವೆಂದು ಪರಿಗಣಿಸುವುದಿಲ್ಲ.

ಹೊಸ ಕೇಂದ್ರೋದ್ಯಮ ನೀತಿ

ದೇಶದ ಆರ್ಥಿಕತೆ ಮತ್ತು ಸುರಕ್ಷತೆ ದೃಷ್ಟಿಯಿಂದ ಹೆಚ್ಚು ಮಹತ್ವವಲ್ಲದ ಕೇಂದ್ರೋದ್ಯಮಗಳ ಖಾಸಗೀಕರಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಮಹತ್ವದ ಉದ್ದಿಮೆ ವಲಯಗಳಲ್ಲಿ ಖಾಸಗಿಯವರಿಗೂ ಅವಕಾಶ ಇರಲಿದೆ.

 ಷೇರುವಹಿವಾಟು ನಿಯಮ ಸಡಿಲಿಕೆ

ವಿದೇಶಿ ಷೇರುಪೇಟೆಗಳಲ್ಲಿ ದೇಶಿ ಕಂಪನಿಗಳು ನೇರವಾಗಿ  ವಹಿವಾಟು ಆರಂಭಿಸಲು ಮತ್ತು ಖಾಸಗಿ ಕಂಪನಿಗಳು ಷೇರುಪೇಟೆಗಳಲ್ಲಿ ತಮ್ಮ ಪರಿವರ್ತಿಸಲಾಗದ ಸಾಲಪತ್ರಗಳ  (ಎನ್‌ಸಿಡಿ)  ವಹಿವಾಟು ನಡೆಸಿದರೆ ಅಂತಹ ಕಂಪನಿಗಳನ್ನು ‘ಲಿಸ್ಟೆಡ್‌ ಕಂಪನಿ’ಗಳೆಂದು ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ

***

₹ 20.97 ಲಕ್ಷ ಕೋಟಿ- ಒಟ್ಟಾರೆ ಆರ್ಥಿಕ ಕೊಡುಗೆಯ ಮೊತ್ತ

***

ಐದನೇ ಮತ್ತು ಕೊನೆಯ ಕಂತಿನ ಆರ್ಥಿಕ ಉತ್ತೇಜನಾ ಕೊಡುಗೆಗಳಲ್ಲಿ ಸುಧಾರಣಾ ಕ್ರಮಗಳಿಗೆ ಗರಿಷ್ಠ ಆದ್ಯತೆ ದೊರೆತಿದೆ
-ಹಣಕಾಸು ಸಚಿವೆ ನಿರ್ಮಲಾ

ಈ ಕೊಡುಗೆಗಳು ಗ್ರಾಮೀಣ ಆರ್ಥಿಕತೆ ಪುನರುಜ್ಜೀವನಗೊಳಿಸಲಿದ್ದು, ಆರೋಗ್ಯ ಮತ್ತು ಶಿ್ಕ್ಷಣ ಕ್ಷೇತ್ರಗಳಲ್ಲಿ ಪರಿವರ್ತನೆ ತರಲಿದೆ
-ಪ್ರಧಾನಿ ನರೇಂದ್ರ ಮೋದಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು