ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೆಪೊ ದರ ಏರಿಕೆಯ ಪರಿಣಾಮ ಅಸ್ಪಷ್ಟ: ಜೆ.ಆರ್‌. ವರ್ಮಾ

ಆರ್‌ಬಿಐನ ಹಣಕಾಸು ನೀತಿ ಸಮಿತಿ ಸದಸ್ಯ ಹೇಳಿಕೆ
Last Updated 2 ಸೆಪ್ಟೆಂಬರ್ 2022, 19:31 IST
ಅಕ್ಷರ ಗಾತ್ರ

ಮುಂಬೈ: ಹಣದುಬ್ಬರ ನಿಯಂತ್ರಿಸಲು ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಈಚೆಗೆ ಮಾಡಿರುವ ರೆಪೊ ದರ ಏರಿಕೆಯು ಎಷ್ಟರಮಟ್ಟಿಗೆ ಪರಿಣಾಮ ಬೀರಿದೆ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಆರ್‌ಬಿಐ ಹಣಕಾಸು ನೀತಿ ಸಮಿತಿಯ (ಎಂಪಿಸಿ) ಸದಸ್ಯ ಜೆ.ಆರ್‌. ವರ್ಮಾ ಹೇಳಿದ್ದಾರೆ.

ಆರ್ಥಿಕ ಸ್ಥಿತಿಯ ಆಧಾರದ ಮೇಲೆ ಬಡ್ಡಿದರ ಹೊಂದಾಣಿಕೆಯ ಪ್ರಮಾಣವು ನಿರ್ಧಾರವಾಗಲಿದೆ ಎಂದೂ ಅವರು ತಿಳಿಸಿದ್ದಾರೆ.

‘ಆರ್ಥಿಕ ಬೆಳವಣಿಗೆಯು ಉತ್ತಮವಾಗಿದ್ದರೆ, ಹಣದುಬ್ಬರವನ್ನು ಶೇ 4ಕ್ಕೆ ಇಳಿಕೆ ಮಾಡುವ ನಿಟ್ಟಿನಲ್ಲಿ ಹೆಚ್ಚಿನ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ಆದರೆ, ಆರ್ಥಿಕತೆಯು ಬೆಳವಣಿಗೆ ಸಾಧಿಸಲು ಹೆಣಗಾಡುತ್ತಿದ್ದಲ್ಲಿ ಬಡ್ಡಿದರದಲ್ಲಿ ನಿಧಾನಗತಿಯ ಹೊಂದಾಣಿಕೆಯ ಸಾಕಾಗುತ್ತದೆ’ ಎಂದು ಅವರು ಹೇಳಿದ್ದಾರೆ.

ಆರ್‌ಬಿಐ ಆಗಸ್ಟ್‌ ತಿಂಗಳಿನಲ್ಲಿ ರೆಪೊ ದರವನ್ನು ಶೇ 0.50ರಷ್ಟು ಹೆಚ್ಚಿಸಿದೆ. ಇದರಿಂದಾಗಿ ಮೇ ತಿಂಗಳಿನಿಂದ ಆಗಸ್ಟ್‌ವರೆಗೆ ರೆಪೊ ದರವು ಒಟ್ಟಾರೆ ಶೇ 1.40ರಷ್ಟು ಹೆಚ್ಚಾಗಿದೆ. ಸೆಪ್ಟೆಂಬರ್‌ 30ರಂದು ಆರ್‌ಬಿಐ ರೆಪೊ ದರವನ್ನು ಮತ್ತೆ ಶೇ 0.50ರಷ್ಟು ಹೆಚ್ಚಿಸುವ ನಿರೀಕ್ಷೆ ಮಾಡಲಾಗಿದೆ.

‘ನಗದು ಲಭ್ಯತೆಯನ್ನು ನಿಯಂತ್ರಿಸಲು ಬ್ಯಾಂಕ್‌ಗಳ ಮಧ್ಯೆ ವಿತರಿಸುವ ಅಲ್ಪಾವಧಿಯ ಸಾಲದ ಬಡ್ಡಿದರವನ್ನು ಗರಿಷ್ಠ ಮಟ್ಟದಲ್ಲಿ ಇಡಲಾಗಿದೆ. ಹೀಗಾಗಿ ಬಡ್ಡಿದರ ಏರಿಕೆಯು ನಿಜವಾಗಿಯೂ ಶೇ 1.40ರಷ್ಟು ಅಲ್ಲ, ಬದಲಾಗಿ ಶೇ 2.05ರಷ್ಟು ಹೆಚ್ಚಾಗಿದೆ’ ಎಂದು ಅವರು ವಿವರಿಸಿದ್ದಾರೆ.

‘ಸದ್ಯ ನಾವು ಗರಿಷ್ಠ ಹಣದುಬ್ಬರ ಮತ್ತು ಮಂದಗತಿಯ ಆರ್ಥಿಕ ಬೆಳವಣಿಗೆಯ ಸ್ಥಿತಿಯಲ್ಲಿ ಇದ್ದೇವೆ. ಹೀಗಾಗಿ ನೈಜ ಬಡ್ಡಿದರವು ‘ತಟಸ್ಥ ದರ’ಕ್ಕಿಂತಲೂ (ಶೇ 6 ರಿಂದ ಶೇ 6.25ರವರೆಗೆ) ತುಸು ಹೆಚ್ಚಿನ ಮಟ್ಟದಲ್ಲಿ ಇರಲಿದೆ. ನೈಜ ಬಡ್ಡಿದರವನ್ನು ಹಾಲಿ ಇರುವ ಹಣದುಬ್ಬರದ ಪ್ರಮಾಣದ ಆಧಾರದ ಮೇಲೆ ಅಂದಾಜು ಮಾಡುವುದಕ್ಕೆ ಬದಲಾಗಿ ಮೂರರಿಂದ ನಾಲ್ಕು ತ್ರೈಮಾಸಿಕಗಳ ಹಣದುಬ್ಬರವನ್ನು ಒಟ್ಟುಗೂಡಿಸಿ ಅಂದಾಜು ಮಾಡಬೇಕಾಗುತ್ತದೆ’ ಎಂದು ಅವರು ತಿಳಿಸಿದ್ದಾರೆ.

ಆರ್‌ಬಿಐಗೆ ಬಡ್ಡಿದರ ಏರಿಸಲು ಅವಕಾಶ ಇದೆಯಾದರೂ ಬಹುಶಃ ಹೆಚ್ಚಿನ ಪ್ರಮಾಣದಲ್ಲಿ ಏರಿಕೆ ಮಾಡಲು ಅಲ್ಲ ಎಂದು ಹೇಳಿದ್ದಾರೆ.

‘ಶೇ 5ಕ್ಕೆ ಇಳಿಯಲಿದೆ ಹಣದುಬ್ಬರ’
ಹಣದುಬ್ಬರವು ಮುಂದಿನ ವರ್ಷದ ಏಪ್ರಿಲ್‌–ಜೂನ್‌ ತ್ರೈಮಾಸಿಕದಲ್ಲಿ ಶೇ 5ರ ಆಸುಪಾಸಿಗೆ ಇಳಿಕೆ ಕಾಣುವ ನಿರೀಕ್ಷೆ ಇದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ್‌ ದಾಸ್‌ ಜೀ ಬಿಸಿನೆಸ್‌ ಟಿ.ವಿ.ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಚಿಲ್ಲರೆ ಹಣದುಬ್ಬರವು ಹಲವು ತಿಂಗಳುಗಳಿಂದ ಶೇ 6ರ ಮಟ್ಟಕ್ಕಿಂತಲೂ ಹೆಚ್ಚಿಗೆ ಇದೆ. ಜುಲೈನಲ್ಲಿ ಚಿಲ್ಲರೆ ಹಣದುಬ್ಬರವು ಶೇ 6.71ರಷ್ಟಾಗಿದೆ.

ಆರ್ಥಿಕ ಬೆಳವಣಿಗೆಯ ಮೇಲೆ ಹೆಚ್ಚಿನ ಪರಿಣಾಮ ಆಗದೇ ಇರುವ ರೀತಿಯಲ್ಲಿ ಹಣದುಬ್ಬರವನ್ನು ನಿಯಂತ್ರಿಸಲು ಹಣಕಾಸು ನೀತಿಯ ಗಮನ ಹರಿಸಲಿದೆ ಎಂದೂ ಅವರು ಹೇಳಿದ್ದಾರೆ.

ವಿದೇಶಿ ವಿನಿಮಯ ಮೀಸಲು ಸಂಗ್ರಹ ಹೆಚ್ಚಿನ ಮಟ್ಟದಲ್ಲಿ ಇರುವುದು ರೂಪಾಯಿ ಸ್ಥಿರವಾಗಿರಲು ನೆರವಾಗಿದೆ ಎಂದು ದಾಸ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT