ಶನಿವಾರ, ಫೆಬ್ರವರಿ 27, 2021
30 °C

ವಿದೇಶಿ ನೇರ ಹೂಡಿಕೆ ಕುಸಿತ; ಕರ್ನಾಟಕದಲ್ಲಿನ ಹೂಡಿಕೆ ಪ್ರಮಾಣ ಶೇ 46 ಇಳಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ದೇಶದ ಒಳಗೆ ಹರಿದು ಬರುವ ವಿದೇಶಿ ನೇರ ಬಂಡವಾಳ ಹೂಡಿಕೆ (ಎಫ್‌ಡಿಐ) ಪ್ರಮಾಣವು ಗಮನಾರ್ಹ ಕುಸಿತ ಕಂಡಿದ್ದು, ಕರ್ನಾಟಕವೂ ಇದರಿಂದ ತೀವ್ರವಾಗಿ ಬಾಧಿತವಾಗಿದೆ.

ರಾಜಕೀಯ ಅನಿಶ್ಚಿತತೆ ಮತ್ತು ಅಮೆರಿಕದಲ್ಲಿ ಹೂಡಿಕೆ ಆಯ್ಕೆಗಳು ಹೆಚ್ಚಿರುವುದರಿಂದ ದೇಶದಲ್ಲಿನ ‘ಎಫ್‌ಡಿಐ’ ಹರಿವು ಕಡಿಮೆಯಾಗಿದೆ.

ರಾಜ್ಯದಲ್ಲಿ ಪ್ರಸಕ್ತ ಹಣಕಾಸು ವರ್ಷದ (2018–19) ಏಪ್ರಿಲ್‌ನಿಂದ ಸೆಪ್ಟೆಂಬರ್‌ ಅವಧಿಯಲ್ಲಿ ₹ 17,500 ಕೋಟಿ ಬಂಡವಾಳ ಹೂಡಿಕೆಯಾಗಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ಇದು ₹ 32,900 ಕೋಟಿಗಳಷ್ಟಿತ್ತು. ಒಟ್ಟಾರೆ ಹೂಡಿಕೆ ಪ್ರಮಾಣವು ಶೇ 46ರಷ್ಟು ಕಡಿಮೆಯಾಗಿದೆ. ಹಿಂದಿನ ಐದು ವರ್ಷಗಳ ಅಂಕಿ ಅಂಶ ಪರಿಶೀಲಿಸಿದರೆ, 2017–18ರಲ್ಲಿ ರಾಜ್ಯದಲ್ಲಿನ ಎಫ್‌ಡಿಐ ಗಣನೀಯ ಏರಿಕೆ ಕಂಡಿತ್ತು.

ರಾಷ್ಟ್ರೀಯ ಮಟ್ಟದಲ್ಲಿನ ಹೂಡಿಕೆ ಪ್ರಮಾಣ ₹1.77ಲಕ್ಷ ಕೋಟಿಗಳಿಂದ, ₹ 1.58 ಲಕ್ಷ ಕೋಟಿಗೆ ಇಳಿದಿದೆ. ಅತಿದೊಡ್ಡ ರಾಜ್ಯಗಳಾದ ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶಗಳಲ್ಲಿನ ಹೂಡಿಕೆ ಪ್ರಮಾಣವು ಕೂಡ ಕ್ರಮವಾಗಿ ಶೇ 46 ಮತ್ತು ಶೇ 29ರಷ್ಟು ಕಡಿಮೆಯಾಗಿರುವುದು ಭಾರತೀಯ ರಿಸರ್ವ್‌ ಬ್ಯಾಂಕ್‌ನ ಅಂಕಿ ಅಂಶಗಳಿಂದ ತಿಳಿದು ಬರುತ್ತದೆ.

‘ಇದೊಂದು ಜಾಗತಿಕ ವಿದ್ಯಮಾನವಾಗಿದೆ. ಪಾಶ್ಚಿಮಾತ್ಯ ದೇಶಗಳ ಆರ್ಥಿಕತೆಯ ಚೇತರಿಕೆಯ ಕಾರಣಕ್ಕೆ ಭಾರತಕ್ಕೆ ವಿದೇಶಿ ಬಂಡವಾಳದ ಹರಿವು ಕಡಿಮೆಯಾಗಿದೆ’ ಎಂದು ಕೇರ್‌ ರೇಟಿಂಗ್ಸ್‌ನ ಮದನ್‌ ಸಬ್ನವಿಸ್‌ ಅವರು ಅಭಿಪ್ರಾಯಪಟ್ಟಿದ್ದಾರೆ.

‘ಎಫ್‌ಡಿಐ ಹೂಡಿಕೆಯಲ್ಲಿ ನಾವು ಸದ್ಯಕ್ಕೆ ದೇಶದಲ್ಲಿಯೇ 3ನೇ ಸ್ಥಾನದಲ್ಲಿ ಇದ್ದೇವೆ. ಕಂಪ್ಯೂಟರ್‌ ಹಾರ್ಡ್‌ವೇರ್‌ / ಸಾಫ್ಟ್‌ವೇರ್‌ ಮತ್ತು ದೂರಸಂಪರ್ಕ ವಲಯಗಳಲ್ಲಿನ ಹೂಡಿಕೆಯು ಕೆಲಮಟ್ಟಿಗೆ ಕಡಿಮೆಯಾಗಿದೆ’ ಎಂದು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಗೌರವ್‌ ಗುಪ್ತ ಹೇಳಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು