ಗುರುವಾರ , ಜೂನ್ 4, 2020
27 °C

ಆರ್ಥಿಕ ಪ್ಯಾಕೇಜ್ 3: ₹1 ಲಕ್ಷ ಕೋಟಿ ಕೃಷಿ ಮೂಲಸೌಕರ್ಯ ನಿಧಿ

ಪ್ರಜಾವಾಣಿ ವೆಬ್‌ ಡೆಸ್ಕ್ Updated:

ಅಕ್ಷರ ಗಾತ್ರ : | |

ಕೇಂದ್ರ ಹಣಕಾಸು ಸಚಿವಾಲಯದ ಸುದ್ದಿ ಗೋಷ್ಟಿಯಲ್ಲಿ ಸಚಿವೆ ನಿರ್ಮಲಾ ಸೀತಾರಾಮನ್‌

ನವದೆಹಲಿ: ಕೋವಿಡ್‌–19 ಲಾಕ್‌ಡೌನ್‌ನಿಂದಾಗಿ ದೇಶದಲ್ಲಿ ಸೃಷ್ಟಿಯಾಗಿರುವ ಆರ್ಥಿಕ ಬಿಕ್ಕಟ್ಟು ಶಮಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ₹20 ಲಕ್ಷ ಕೋಟಿ ಪರಿಹಾರ ಪ್ಯಾಕೇಜ್‌ ಘೋಷಿಸಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಈಗಾಗಲೇ ಎರಡು ಕಂತುಗಳಲ್ಲಿ ವಿವಿಧ ವಲಯ ಹಾಗೂ ವರ್ಗಗಳಿಗೆ ಅನುಕೂಲವಾಗಲು ಪ್ಯಾಕೇಜ್‌ ಹಂಚಿಕೆ ಪ್ರಕಟಿಸಿದ್ದಾರೆ. ಶುಕ್ರವಾರ ಮೂರನೇ ಹಂತದ ಪ್ಯಾಕೇಜ್‌ನಲ್ಲಿ‌ ಪ್ರಕಟಿಸಿದ್ದಾರೆ. 

11 ಉಪಕ್ರಮಗಳನ್ನು ಘೋಷಿಸಲಾಗಿದೆ. ಈ ಪೈಕಿ 8 ಅಂಶಗಳು ಮೂಲಸೌಕರ್ಯ, ಸರಕು ಸಾಗಣೆ ವ್ಯವಸ್ಥೆ ಉತ್ತಮಗೊಳಿಸುವುದಕ್ಕೆ ಸಂಬಂಧಿಸಿದ್ದಾಗಿದೆ. ಉಳಿದ ಮೂರು ಉಪಕ್ರಮಗಳು ಆಡಳಿತ ಹಾಗೂ ಆಡಳಿತಾತ್ಮಕ ಸುಧಾರಣೆಗಳಿಗೆ ಸಂಬಂಧಿಸಿದ್ದಾಗಿದೆ. 

* ಕೃಷಿ ಮೂಲಸೌಕರ್ಯಕ್ಕೆ ₹1 ಲಕ್ಷ ಕೋಟಿ: ಶೀತಲ ಸಂಗ್ರಹ ಕೇಂದ್ರಗಳು, ಆಹಾರ ಧಾನ್ಯಗಳ ಸಂಗ್ರಹ ಕೇಂದ್ರಗಳ ನಿರ್ಮಾಣ. ಕೃಷಿ ಸೊಸೈಟಿಗಳು, ಸ್ಟಾರ್ಟ್‌–ಅಪ್‌ಗಳು ಹಾಗೂ ಸಂಗ್ರಹಕಾರರಿಗೆ ಇದರಿಂದ ಉಪಯೋಗವಾಗಲಿದೆ. ಉತ್ಪನ್ನಗಳನ್ನು ರಫ್ತು ಮಾಡುವಲ್ಲಿಯೂ ಪ್ರಯೋಜನವಾಗಲಿದೆ. 

* ಕಿರು ಆಹಾರ ಉದ್ಯಮಗಳಿಗೆ ₹10,000 ಕೋಟಿ: ಆರೋಗ್ಯ, ಪೌಷ್ಟಿಕಾಂಶ, ಹರ್ಬಲ್‌ ಹಾಗೂ ಸಾವಯವ ಉತ್ಪನ್ನಗಳು ಯೋಜನೆಯಡಿಗೆ ಬರಲಿವೆ. 2 ಲಕ್ಷ ಕಿರು ಆಹಾರ ಉದ್ಯಮಗಳಿಗೆ ಇದರಿಂದ ಅನುಕೂಲವಾಗಲಿದೆ. ಸಮುದಾಯ ಆಧಾರಿತ ಈ ವ್ಯವಸ್ಥೆಯಲ್ಲಿ ಬ್ರ್ಯಾಂಡಿಂಗ್‌ ಮತ್ತು ಮಾರ್ಕೆಟಿಂಗ್‌ ಉದ್ದೇಶ ಒಳಗೊಂಡಿದೆ. ಸ್ಥಳೀಯವಾಗಿ ಉತ್ಪಾದಿಸಿದ ಆಹಾರ ಪದಾರ್ಥಗಳನ್ನು ಜಾಗತಿಕ ಮಟ್ಟದಲ್ಲಿ ಪ್ರಚುರ ಪಡಿಸಲು ಈ ನಿಧಿಯನ್ನು ಬಳಿಸಿಕೊಳ್ಳಲಾಗುತ್ತದೆ. ಮಹಿಳಾ ಉದ್ಯೋಗಿಗಳು ಹಾಗೂ ಮಾಲೀಕರನ್ನು ಕೇಂದ್ರೀಕರಿಸಲಾಗುತ್ತದೆ. 

* ಪ್ರಧಾನ ಮಂತ್ರಿ ಮತ್ಸ್ಯ–ಸಂಪದ ಯೋಜನೆ: ಮೀನುಗಾರಿಕೆಗಾಗಿ ಹೊಸ ಮೀನುಗಾರಿಕೆ ದೋಣಿಗಳು ಹಾಗೂ ಮೀನುಗಾರಿಕಾ ಬಂದರುಗಳ ನಿರ್ಮಾಣಕ್ಕಾಗಿ ₹20,000 ಕೋಟಿ. ದೋಣಿಗಳಿಗೆ ವಿಮೆ ಸೌಲಭ್ಯ. ಇದರಿಂದಾಗಿ ಹೆಚ್ಚುವರಿಯಾಗಿ 70 ಲಕ್ಷ ಟನ್‌ನಷ್ಟು ಮೀನುಗಳ ಸಂಗ್ರಹ ಮಾಡಬಹುದಾಗಿದೆ. ₹20,000 ಕೋಟಿ ಪೈಕಿ ₹9,000 ಕೋಟಿಯನ್ನು ದೋಣಿ, ಮಂಡಿ, ಬಂದರು ಹಾಗೂ ಮಾರುಕಟ್ಟೆ ನಿರ್ಮಾಣಕ್ಕೆ ಬಳಸಲಾಗುತ್ತದೆ. ಇದರಿಂದ 55 ಲಕ್ಷ ಜನರಿಗೆ ಉದ್ಯೋಗ ಸಿಗಲಿದೆ. 

* ಪ್ರಾಣಿಗಳಲ್ಲಿ ಕಾಲು, ಬಾಯಿ ರೋಗ ಸಾಮಾನ್ಯವಾದುದು. ಲಸಿಕೆ ಹಾಕಿಸದ ಪ್ರಾಣಿಗಳು ಇಂಥ ರೋಗಗಳಿಂದ ಬಳಲುತ್ತವೆ. ಇದರಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕುತ್ತಾರೆ. ರಾಸುಗಳಿಗೆ ಶೇ 100 ಲಸಿಕೆ ಹಾಕಿಸುವುದಕ್ಕೆ ವ್ಯವಸ್ಥೆ. ಸುಮಾರು 53 ಕೋಟಿ ಪ್ರಾಣಿಗಳಿಗೆ ₹13,343 ಕೋಟಿ ಮೀಸಲಿಡಲಾಗಿದೆ. ಜನವರಿ ವರೆಗೂ 1.5 ಕೋಟಿ ಹಸು ಹಾಗೂ ಎಮ್ಮೆಗಳಿಗೆ ಲಸಿಕೆ ಹಾಕಲಾಗಿದೆ. 

* ಹೈನುಗಾರಿಕೆ ವಲಯಕ್ಕೆ ₹15,000 ಕೋಟಿ: ಪಶು ಸಂಗೋಪನೆ ಮೂಲಸೌಕರ್ಯ ಅಭಿವೃದ್ಧಿ ನಿಧಿ ಸ್ಥಾಪಿಸಲಾಗಿದೆ. ಹೈನುಗಾರಿಕೆಯಲ್ಲಿ ಖಾಸಗಿ ಹೂಡಿಕೆಗಳಿಗೆ ಪೂರಕವಾಗುವ ಗುರಿ ಹೊಂದಲಾಗಿದೆ. 

* ಗಿಡ ಮೂಲಿಕೆಗಳ ಬೆಳೆಗಾಗಿ ₹4,000 ಕೋಟಿ. 10 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಗಿಡ ಮೂಲಿಕೆಗಳನ್ನು ಬೆಳೆಯಲಾಗುತ್ತಿದೆ. ಗಂಗಾ ನದಿ ತೀರಗಳಲ್ಲಿ ಕಾರಿಡಾರ್‌ ನಿರ್ಮಾಣ ಮಾಡಲಾಗುತ್ತದೆ. 

* ಜೇನು ಸಾಕಣೆಗಾಗಿ ₹500 ಕೋಟಿ. ಜೇನು ಉತ್ಪಾದನೆ ಹೆಚ್ಚಳ ಹಾಗೂ ಪರಾಗಸ್ಪರ್ಶ ಪ್ರಕ್ರಿಯೆಗೆ ಅಗತ್ಯವಾಗಿರುವ ಜೇನು ಸಾಕಣೆಯನ್ನು ಅಭಿವೃದ್ಧಿ ಪಡಿಸಲಾಗುತ್ತದೆ. 

* ಟಾಪ್‌ ಟು ಟೋಟಲ್‌ ಯೋಜನೆಗಾಗಿ ₹500 ಕೋಟಿ. ಲಾಕ್‌ಡೌನ್‌ನಿಂದಾಗಿ ಪೂರೈಕೆ ವಲಯದಲ್ಲಿ ಕೊಂಡಿ ಕಳಚಿದಂತಾಗಿದ್ದು, ಅದನ್ನು ಉತ್ತಮಪಡಿಸಲಾಗುತ್ತಿದೆ. ಟೊಮ್ಯಾಟೊ, ಈರುಳ್ಳಿ ಹಾಗೂ ಬೆಳ್ಳುಳ್ಳಿ ಪೂರೈಕೆಯಲ್ಲಿ ಪೂರೈಕೆ ಸಂಪರ್ಕವಿದೆ. ಇದೀಗ ತರಕಾರಿಗಳನ್ನೂ ನಿರ್ದಿಷ್ಟ ಮಾರ್ಗದಲ್ಲಿ ಪೂರೈಸುವ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಬೆಳೆಯ ಸಾಗಣೆಯ ಮೇಲೆ ಶೇ 50 ಹಾಗೂ ಸಂಗ್ರಹದಲ್ಲಿ (ಶೀತಲ ಸಂಗ್ರಹ ಸೇರಿ) ಶೇ 50ರಷ್ಟು ಸಬ್ಸಿಡಿ ಸಿಗುತ್ತದೆ. 

* ಕೋವಿಡ್‌–19 ಅವಧಿಯಲ್ಲಿ ಹಾಲಿಗೆ ಬೇಡಿಕೆ ಶೇ 20–25ರಷ್ಟು ಕಡಿಮೆಯಾಗಿದೆ. ಹಾಲು ಉತ್ಪಾದಕರಿಗೆ ಸಾಲದ ಮೇಲಿನ ಬಡ್ಡಿಯಲ್ಲಿ ಸರ್ಕಾರದಿಂದ ಶೇ 2ರಷ್ಟು ಪಾವತಿ ಮಾಡುವ ಹೊಸ ಯೋಜನೆ. 2020–21 ಹಣಕಾಸು ವರ್ಷಕ್ಕೆ ಅನ್ವಯವಾಗುತ್ತದೆ. ಇದರಿಂದಾಗಿ 2 ಕೋಟಿ ರೈತರಿಗೆ ಉಪಯೋಗವಾಗಲಿದ್ದು, ₹5,000 ಕೋಟಿ ಹೆಚ್ಚುವರಿ ನಗದು ಹೊರಬರಲಿದೆ. 

* ಲಾಕ್‌ಡೌನ್‌ ಅವಧಿಯಲ್ಲಿ ಕನಿಷ್ಠ ಬೆಂಬಲ ಬೆಲೆಗಾಗಿ ₹74,300 ಕೋಟಿಗಳು; ಪಿಎಂ ಕಿಸಾನ್‌ ನಿಧಿಯಿಂದ ₹18,700 ಕೋಟಿ ವರ್ಗಾಯಿಸಲಾಗಿದೆ.

ಆಡಳಿತಾತ್ಮಕ ಕ್ರಮಗಳು

* ರೈತರಿಗೆ ಉತ್ತಮ ಬೆಲೆ ಸಿಗುವಂತೆ ಮಾಡಲು ಅವಶ್ಯಕ ವಸ್ತುಗಳ ಕಾಯ್ದೆಗೆ ತಿದ್ದುಪಡಿ ತರಲಾಗುತ್ತದೆ. ಆಲೂಗಡ್ಡೆ, ಈರುಳ್ಳಿ ಹಾಗೂ ದವಸ ಧಾನ್ಯಗಳು ಸೇರಿದಂತೆ ಕೆಲವು ಬೆಳೆಗಳ ಮೇಲಿನ ನಿಯಮಗಳಿಗೆ ಸಡಿಲಿಕೆ ಸಿಗಲಿದೆ. ಆಹಾರ ಸಂಸ್ಕರಣ ಘಟಕಗಳು, ರಫ್ತುದಾರರು ಹಾಗೂ ಮರುಮಾರಾಟಗಾರರು ಬೆಳೆ ಉತ್ಪನ್ನಗಳ ಸಂಗ್ರಹಿಸುವುದರ ಮೇಲಿನ ಮಿತಿ ಹೇರಿಕೆ ಕೈಬಿಡಲಾಗುತ್ತದೆ. 

* ರೈತರು ಬೆಳೆದ ಬೆಳೆಯನ್ನು ಉತ್ತಮ ಬೆಲೆಗೆ ಮಾರಾಟ ಮಾಡಲು ಅವಕಾಶ. ಕೃಷಿ ಮಾರುಕಟ್ಟೆ ಸುಧಾರಣೆಗಳ ಮೂಲಕ ರೈತರಿಗೆ ಮಾರಾಟದಲ್ಲಿ ಆಯ್ಕೆಗಳನ್ನು ನೀಡುವುದು. ಪ್ರಸ್ತುತ ರೈತರು ಪರವಾನಗಿ ಹೊಂದಿರುವ ಕೆಲವರಿಗೆ ಮಾರುತ್ತಿದ್ದಾರೆ. ಇದು ಇನ್ನಾವುದೇ ಉತ್ಪಾದನಾ ವಲಯಗಳಲ್ಲಿ ಆಗುತ್ತಿಲ್ಲ. ಈಗ ರೈತರು ಉತ್ತಮ ಬೆಲೆ ಕೊಡುವ ಯಾರಿಗಾದರೂ ಮಾರಾಟ ಮಾಡಲು ಅವಕಾಶ ಸಿಗಲಿದೆ. ಇದರಿಂದಾಗಿ ರೈತರಿಗೆ ಉತ್ತಮ ಆದಾಯ ಸಿಗಲಿದೆ. 

* ರೈತರ ಬೆಳೆಗೆ ಬೆಲೆ ನಿಗದಿ ಪಡಿಸುವುದು: ರೈತರು ಬೆಳೆಯುವ ಬೆಳೆಗೆ ಸಿಗಬಹುದಾದ ಬೆಲೆಯನ್ನು ನಿರ್ದಿಸುವ ವ್ಯವಸ್ಥೆ ಇಲ್ಲ. ಸಿಗಬಹುದಾದ ಬೆಲೆಯ ಬಗ್ಗೆ ಬೆಳೆ ಬೆಳೆಯುವ ಸಮಯದಲ್ಲಿಯೂ ಅವರಿಗೆ ಅನಿಶ್ಚಿತತೆ ಕಾಡುತ್ತಿರುತ್ತದೆ. ನಿಯಮಗಳ ಅನುಸಾರ ವ್ಯವಸ್ಥೆ ತರುವ ನಿಟ್ಟಿನಲ್ಲಿ ಗಮನ ಹರಿಸಲಾಗುತ್ತಿದೆ. ರೈತರು ಬೆಳೆಯುವ ಬೆಳೆಗೆ ನಿರ್ದಿಷ್ಟವಾಗಿ ಎಷ್ಟು ಹಣ ಪಡೆಯಬಹುದು ಎಂಬ ಲೆಕ್ಕಾಚಾರ ಒದಗಿಸುವ ವ್ಯವಸ್ಥೆ ಮಾಡಲಾಗುತ್ತದೆ ಎಂದು ನಿರ್ಮಲಾ ಸೀತಾರಾಮನ್‌ ಹೇಳಿದರು. 

₹6 ಲಕ್ಷ ಕೋಟಿ ಮೊತ್ತದ ಪರಿಹಾರ ಪ್ಯಾಕೇಜ್‌ ಅನ್ನು ಬುಧವಾರ ಪ್ರಕಟಿಸಲಾಯಿತು. ಇದರ ಪೈಕಿ ₹3 ಲಕ್ಷ ಕೋಟಿಯನ್ನು ಸಣ್ಣ ಉದ್ಯಮಗಳಿಗೆ ಖಾತರಿರಹಿತ ಸಾಲ ನೀಡಲು ಬಳಸಿಕೊಳ್ಳಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಮೊದಲ ಪ್ಯಾಕೇಜ್‌ನಲ್ಲಿ ಘೋಷಿಸಿದ್ದರು. ಎರಡನೇ ಕಂತಿನಲ್ಲಿ ವಲಸೆ ಕಾರ್ಮಿಕರಿಗೆ ಆಹಾರ ಧಾನ್ಯ ಉಚಿತ ವಿತರಣೆ, ರೈತರಿಗೆ ರಿಯಾಯಿತಿ ದರದಲ್ಲಿ ಸಾಲ, ಬೀದಿಬದಿ ವ್ಯಾಪಾರಿಗಳಿಗೆ ಸಾಲ ಮುಂತಾದ ಅಂಶಗಳನ್ನು ಒಳಗೊಂಡ  ₹3.16 ಲಕ್ಷ ಕೋಟಿಯ ಯೋಜನೆಗಳನ್ನು ಪ್ರಕಟಿಸಿದ್ದಾರೆ. 

ಬ್ಯಾಂಕ್‌ಗಳಲ್ಲಿ ನಗದು ಹೆಚ್ಚಳಕ್ಕೆ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಪ್ರಕಟಿಸಿದ ಉಪಕ್ರಮಗಳು, ಆಹಾರ ಭದ್ರತೆ ಮತ್ತು ಇತರ ಪರಿಹಾರವಾಗಿ ನೀಡಲಾದ ಮೊತ್ತವೂ ಸೇರಿ ₹20 ಲಕ್ಷ ಕೋಟಿಯ ಪ್ಯಾಕೇಜ್‌ ಪ್ರಕಟವಾಗಲಿದೆ ಎಂದು ಪ್ರಧಾನಿ ತಿಳಿಸಿದ್ದರು. 

ಮಾರ್ಚ್‌ 25ರಿಂದ ದೇಶದಲ್ಲಿ ಲಾಕ್‌ಡೌನ್‌ ಜಾರಿಯಲ್ಲಿದೆ. ಇದರಿಂದಾಗಿ ಆರ್ಥಿಕ ಚಟುವಟಿಕೆಗಳೆಲ್ಲ ಸ್ಥಗಿತಗೊಂಡಿದ್ದವು. ಲಾಕ್‌ಡೌನ್‌ನ ಹಲವು ನಿರ್ಬಂಧಗಳನ್ನು ಈಗ ಸಡಿಲಿಸಿ, ಆರ್ಥಿಕ ಚಟುವಟಿಕೆಗಳು ಆರಂಭವಾಗಲು ಅನುವು ಮಾಡಿಕೊಡಲಾಗಿದೆ. ಆದರೆ, ಲಾಕ್‌ಡೌನ್‌ನಿಂದಾಗಿ 12.2 ಕೋಟಿ ಜನರು ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ಅಂದಾಜಿಸಲಾಗಿದೆ. ಇದರಿಂದಾಗಿ, ಗ್ರಾಹಕ ಬೇಡಿಕೆಯಲ್ಲಿ ಭಾರಿ ಕುಸಿತ ಕಂಡು ಬಂದಿದೆ. 

ಪ್ಯಾಕೇಜ್‌ 1: ₹6 ಲಕ್ಷ ಕೋಟಿ

* ಬ್ಯಾಂಕೇತರ ಹಣಕಾಸು ಕಂಪನಿಗಳು (ಎನ್‌ಬಿಎಫ್‌ಸಿ), ಗೃಹ ಹಣಕಾಸು ಕಂಪನಿಗಳಿಗೆ (ಎಚ್‌ಎಫ್‌ಸಿ) ₹30 ಸಾವಿರ ಕೋಟಿ ಮೊತ್ತದ ನೆರವು.

* ಸಣ್ಣ ಉದ್ಯಮಗಳಿಗೆ ಖಾತರಿರಹಿತ ಸಾಲ ನೀಡುವುದಕ್ಕಾಗಿ ₹3 ಲಕ್ಷ ಕೋಟಿ. ಇದು ನಾಲ್ಕು ವರ್ಷ ಅವಧಿಯ ಸಾಲ. ಮೊದಲ 12 ತಿಂಗಳು ಸಾಲದ ಮೇಲಿನ ಬಡ್ಡಿ ಪಾವತಿಸಬೇಕಿಲ್ಲ. ಈ ಪ್ಯಾಕೇಜ್‌ನಿಂದಾಗಿ 45 ಲಕ್ಷ ಸಣ್ಣ ಉದ್ಯಮಗಳಿಗೆ ಅನುಕೂಲ.

* ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಅಥವಾ ಸುಸ್ತಿದಾರ ಕಿರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ (ಎಂಎಸ್‌ಎಂಇ) ನೆರವಾಗಲು ₹20 ಸಾವಿರ ಕೋಟಿ. ಇದರಿಂದ ಎರಡು ಲಕ್ಷ ಉದ್ಯಮಗಳು ಪ್ರಯೋಜನ ಪಡೆದುಕೊಳ್ಳಬಹುದು.

* ಎಂಎಸ್‌ಎಂಇ ನಿಧಿ: ಈ ನಿಧಿಯ ಮೂಲಕ ಎಂಎಸ್‌ಎಂಇ ವಲಯಕ್ಕೆ ₹50 ಸಾವಿರ ಕೋಟಿ ಹೂಡಿಕೆ ಆಗಲಿದೆ. ಬೆಳವಣಿಗೆಯ ಸಾಮರ್ಥ್ಯ ಇರುವ ಕೈಗಾರಿಕೆಗಳಿಗೆ ಇದರ ಪ್ರಯೋಜನ ದಕ್ಕಲಿದೆ.

*ವಿದ್ಯುತ್‌ ವಿತರಣಾ ಕಂಪನಿಗಳಿಗೆ (ಡಿಸ್ಕಾಂ) ₹90 ಸಾವಿರ ಕೋಟಿ ನಗದು ಪೂರೈಕೆ ಆಗಲಿದೆ.  ಡಿಜಿಟಲ್‌ ಪಾವತಿಯಂತಹ ಸುಧಾರಣಾ ಕ್ರಮಗಳಿಗೆ ಮುಂದಾದರೆ ಮಾತ್ರ ಈ ನೆರವು ದೊರೆಯಲಿದೆ ಎಂಬ ಷರತ್ತನ್ನೂ ಹಾಕಲಾಗಿದೆ.

*2019–20ನೇ ಸಾಲಿನ ಆದಾಯ ತೆರಿಗೆ ಲೆಕ್ಕ ಸಲ್ಲಿಕೆಯ (ಐ.ಟಿ ರಿಟರ್ನ್‌) ಗಡುವು 2020ರ ಜುಲೈ 31 ಮತ್ತು ಅಕ್ಟೋಬರ್‌ 31 ಆಗಿತ್ತು. ಅದನ್ನು 2020ರ ನವೆಂಬರ್‌ 30ಕ್ಕೆ ವಿಸ್ತರಿಸಲಾಗಿದೆ.

* ಸಂಬಳಯೇತರ ಆದಾಯಗಳಿಗೆ ಮೂಲದಲ್ಲಿ ತೆರಿಗೆ ಕಡಿತ (ಟಿಡಿಎಸ್‌) ಮತ್ತು ಮೂಲದಲ್ಲಿ ತೆರಿಗೆ ಸಂಗ್ರಹದ (ಟಿಸಿಎಸ್‌) ಪ್ರಮಾಣವು ಈಗಿನ ದರದ ಶೇ 25ರಷ್ಟು ಕಡಿತವಾಗಲಿದೆ. ಇದು 2020–21ನೇ ಆರ್ಥಿಕ ವರ್ಷಕ್ಕೆ ಅನ್ವಯ. 

* ಭವಿಷ್ಯ ನಿಧಿಗೆ ಉದ್ಯೋಗದಾತರು ಮತ್ತು ಉದ್ಯೋಗಿಗಳ ಪಾಲನ್ನು ಈಗಿನ ಶೇ 12ರಿಂದ ಶೇ 10ಕ್ಕೆ ಇಳಿಸಲಾಗಿದೆ. ಮುಂದಿನ ಮೂರು ತಿಂಗಳು ಇದು ಜಾರಿಯಲ್ಲಿರುತ್ತದೆ. ನಿರ್ದಿಷ್ಟ ಸಂಸ್ಥೆಗಳಲ್ಲಿನ ಪಿಎಫ್‌ ವಂತಿಗೆಯನ್ನು ಸರ್ಕಾರವೇ ಪಾವತಿಸುವ ಯೋಜನೆಯನ್ನು ಮೂರು ತಿಂಗಳು ವಿಸ್ತರಿಸಲಾಗಿದೆ.

ಪ್ಯಾಕೇಜ್‌ 2: ₹3.16 ಲಕ್ಷ ಕೋಟಿ 

* ಬೀದಿಬದಿ ವ್ಯಾಪಾರಿಗಳು ಮತ್ತೆ ತಮ್ಮ ವ್ಯಾಪಾರ ಆರಂಭಿಸುವುದಕ್ಕಾಗಿ ತಲಾ ₹10 ಸಾವಿರ ಸಾಲ ನೀಡಲಾಗುವುದು. ಇದರಿಂದ ಸುಮಾರು 50 ಲಕ್ಷ ಜನರಿಗೆ ಪ್ರಯೋಜನ.

* ಮುದ್ರಾ ಯೋಜನೆ ಅಡಿ ಶಿಶು ಸಾಲದ (₹50 ಸಾವಿರದ ವರೆಗೆ) ಬಡ್ಡಿಯ ಶೇ 2ರಷ್ಟನ್ನು ಸರ್ಕಾರ ಪಾವತಿಸಲಿದೆ. ಇದರಿಂದಾಗಿ ಸರ್ಕಾರಕ್ಕೆ ₹1,500 ಕೋಟಿ ವೆಚ್ಚ.

* ಕಿಸಾನ್ ಕ್ರೆಡಿಟ್‌‌ ಕಾರ್ಡ್‌ಗಳ ಮೂಲಕ 2.5 ಕೋಟಿ ರೈತರಿಗೆ ಸಾಲ ನೀಡುವ ಯೋಜನೆ ಪ್ರಕಟಿಸಲಾಗಿದೆ. ಈ ಯೋಜನೆಗಾಗಿ ₹2 ಲಕ್ಷ ಕೋಟಿ ವೆಚ್ಚ.

* ಮೇ–ಜೂನ್‌ ಅವಧಿಯ ಬೆಳೆಯ ಅಗತ್ಯಗಳಿಗಾಗಿ ನಬಾರ್ಡ್‌ ಮೂಲಕ ರೈತರಿಗೆ ತುರ್ತು ಸಾಲ ನೀಡಲಾಗುವುದು. ಇದಕ್ಕಾಗಿ ₹30 ಸಾವಿರ ಕೋಟಿ ವೆಚ್ಚ.

* ವಾರ್ಷಿಕ ₹6 ಲಕ್ಷದಿಂದ ₹18 ಲಕ್ಷ ಆದಾಯದ ಜನರು ಕೈಗೆಟಕುವ ಬೆಲೆಯ ಮನೆ ಖರೀದಿಸುವುದಕ್ಕೆ ಇದ್ದ ಸಾಲ ಸಹಾಯಧನ ಇನ್ನೊಂದು ವರ್ಷ ಮುಂದುವರಿಯಲಿದೆ. ಇದಕ್ಕಾಗಿ ₹70 ಸಾವಿರ ಕೋಟಿ ವೆಚ್ಚ.

* ಲಾಕ್‌ಡೌ‌ನ್‌ನಿಂದ ತೀವ್ರ ಸಂಕಷ್ಟಕ್ಕೆ ಒಳಗಾಗಿರುವ ವಲಸೆ ಕಾರ್ಮಿಕರಿಗೆ ತಿಂಗಳಿಗೆ ಐದು ಕೆ.ಜಿ. ಅಕ್ಕಿ ಅಥವಾ ಗೋಧಿ ಮತ್ತು ಒಂದು ಕೆ.ಜಿ ಕಾಳನ್ನು ಉಚಿತವಾಗಿ ವಿತರಿಸಲಾಗುವುದು. ಸುಮಾರು 8 ಕೋಟಿ ವಲಸೆ ಕಾರ್ಮಿಕರಿಗೆ ಎರಡು ತಿಂಗಳು ಇದರಿಂದ ಪ್ರಯೋಜನ.

* ಒಂದು ರಾಷ್ಟ್ರ, ಒಂದು ಕಾರ್ಡ್‌: ಪಡಿತರ ಚೀಟಿ ಹೊಂದಿರುವ ಕುಟುಂಬವು ಸಾರ್ವಜನಿಕ ವಿತರಣೆ ವ್ಯವಸ್ಥೆ ಮೂಲಕ ದೇಶದ ಯಾವುದೇ ಭಾಗದಲ್ಲಿ ಉಚಿತ ಅಥವಾ ರಿಯಾಯಿತಿ ದರದಲ್ಲಿ ಪಡಿತರ ಪಡೆಯಬಹುದಾದ ವ್ಯವಸ್ಥೆ. ರೇಷನ್‌ ಕಾರ್ಡ್‌ ಹೊಂದಿರುವವರ ಪೈಕಿ ಈಗಾಗಲೇ  ಶೇ 84ರಷ್ಟು ಜನರನ್ನು ಇದರಡಿ ತರಲಾಗಿದ್ದು, 2021ರ ಮಾರ್ಚ್‌‌ ಹೊತ್ತಿಗೆ ಪೂರ್ಣ ಜಾರಿಯಾಗಲಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು