ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ಸಾಲ ಆ್ಯಪ್‌ಗಳಿಗೆ ಕೇಂದ್ರ ಸರ್ಕಾರದಿಂದ ಮೂಗುದಾರ

Last Updated 10 ಸೆಪ್ಟೆಂಬರ್ 2022, 1:48 IST
ಅಕ್ಷರ ಗಾತ್ರ

ನವದೆಹಲಿ: ಡಿಜಿಟಲ್ ವೇದಿಕೆಗಳ ಮೂಲಕ ಸಾಲ ಕೊಡಲು ಪರವಾನಗಿ ಇರುವ ಆ್ಯಪ್‌ಗಳ ಪಟ್ಟಿಯೊಂದನ್ನು ಭಾರತೀಯ ರಿಸರ್ವ್‌ ಬ್ಯಾಂಕ್ (ಆರ್‌ಬಿಐ) ಸಿದ್ಧಪಡಿಸಲಿದೆ. ಈ ಆ್ಯಪ್‌ಗಳು ಮಾತ್ರ ಆ್ಯಪ್‌ ಸ್ಟೋರ್‌ಗಳಲ್ಲಿ ಲಭ್ಯವಿರುವಂತೆ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ನೋಡಿಕೊಳ್ಳಲಿದೆ.

ಅಕ್ರಮವಾಗಿ ಸಾಲ ನೀಡುವ ಆ್ಯಪ್‌ಗಳ ಕುರಿತು ಚರ್ಚಿಸಲು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ ಗುರುವಾರ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಇಂತಹ ಆ್ಯಪ್‌ಗಳಿಗೆ ಕಡಿವಾಣ ಹಾಕಲು ತೀರ್ಮಾನಿಸಲಾಗಿದೆ.

ಸಾಲ ನೀಡುವ ಬಹುತೇಕ ಆ್ಯಪ್‌ಗಳು ಆರ್‌ಬಿಐನಲ್ಲಿ ನೋಂದಣಿ ಆಗಿಲ್ಲ. ಇಂತಹ ಆ್ಯಪ್‌ಗಳ ಮೂಲಕ ಸಾಲ ಪಡೆದವರು, ಸಾಲ ಕೊಟ್ಟವರ ಕಿರುಕುಳ ತಡೆಯಲು ಆಗದೆ ಆತ್ಮಹತ್ಯೆ ಮಾಡಿಕೊಂಡ ವರದಿಗಳು ಇವೆ.

ಹಣದ ಅಕ್ರಮ ವರ್ಗಾವಣೆಗೆ ಬಳಕೆಯಾಗುವ ಖಾತೆಗಳ ಮೇಲೆ ಆರ್‌ಬಿಐ ನಿಗಾ ಇರಿಸಲಿದೆ. ಅಲ್ಲದೆ, ಬ್ಯಾಂಕೇತರ ಹಣಕಾಸು ಸಂಸ್ಥೆಗಳು ನಿಷ್ಕ್ರಿಯವಾಗಿದ್ದರೆ ಅವು ದುರ್ಬಳಕೆ ಆಗದಂತೆ ನೋಡಿಕೊಳ್ಳಲು ಅವುಗಳ ಪರವಾನಗಿ ರದ್ದು ಮಾಡುವ ಅಥವಾ ಪರವಾನಗಿಯನ್ನು ಪುನರ್‌ಪರಿಶೀಲಿಸುವ ಕೆಲಸವನ್ನೂ ಮಾಡಲಿದೆ.

ಸಾಲವನ್ನು ಅಕ್ರಮವಾಗಿ ನೀಡುವ ಆ್ಯಪ್‌ಗಳ ಸಂಖ್ಯೆ ಹೆಚ್ಚಾಗುವುದನ್ನು ತಡೆಯಲು ಕೇಂದ್ರ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯವು ಶೆಲ್ ಕಂಪನಿಗಳನ್ನು (ಸಕ್ರಿಯವಾಗಿ ಇಲ್ಲದ ಕಂಪನಿಗಳು) ಗುರುತಿಸುವ ಹಾಗೂ ಅವುಗಳ ನೋಂದಣಿ ಹಿಂಪಡೆಯುವ ಕೆಲಸ ಮಾಡಲಿದೆ. ಅಲ್ಲದೆ, ಗ್ರಾಹಕರು, ಬ್ಯಾಂಕ್ ನೌಕರರು, ಕಾನೂನು ಜಾರಿ ಸಂಸ್ಥೆಗಳ ನೌಕರರಲ್ಲಿ ಸೈಬರ್ ಅರಿವು ಹೆಚ್ಚಿಸುವ ಕೆಲಸವನ್ನೂ ಮಾಡಲಿದೆ.

ಅಕ್ರಮವಾಗಿ ಸಾಲ ನೀಡುವ ಆ್ಯಪ್‌ಗಳು ಕಡಿಮೆ ಆದಾಯ ಇರುವವರಿಗೆ ಹಾಗೂ ಹೆಚ್ಚು ಅರಿವು ಇಲ್ಲದವರಿಗೆ ಭಾರಿ ಬಡ್ಡಿಗೆ ಸಾಲ ಕೊಟ್ಟು, ಸಾಲ ವಸೂಲಿ ವೇಳೆ ಬೆದರಿಕೆ ಹಾಕುವ ನಿದರ್ಶನಗಳು ಹೆಚ್ಚುತ್ತಿರುವ ಬಗ್ಗೆ ನಿರ್ಮಲಾ ಅವರು ಸಭೆಯಲ್ಲಿ ಕಳವಳ ವ್ಯಕ್ತಪಡಿಸಿದರು ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT