ಭಾನುವಾರ, 23 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಲೋಕಸಭಾ ಚುನಾವಣಾ ಫಲಿತಾಂಶ ಅನಿಶ್ಚಿತತೆ: ಎಫ್‌ಪಿಐ ₹22,000 ಕೋಟಿ ಹಿಂತೆಗೆತ

Published 26 ಮೇ 2024, 15:45 IST
Last Updated 26 ಮೇ 2024, 15:45 IST
ಅಕ್ಷರ ಗಾತ್ರ

ನವದೆಹಲಿ: ಲೋಕಸಭಾ ಚುನಾವಣಾ ಫಲಿತಾಂಶದ ಅನಿಶ್ಚಿತತೆಯಿಂದಾಗಿ ವಿದೇಶಿ ಹೂಡಿಕೆದಾರರು (ಎಫ್‌ಪಿಐ) ಮೇ ತಿಂಗಳ ಆರಂಭದಿಂದ 24ರ ವರೆಗೆ ಭಾರತದ ಷೇರು ಮಾರುಕಟ್ಟೆಗಳಿಂದ ₹22,047 ಕೋಟಿ ಬಂಡವಾಳವನ್ನು ಹಿಂತೆಗೆದುಕೊಂಡಿದ್ದಾರೆ.

ಚೀನಾದ ಮಾರುಕಟ್ಟೆಗಳಲ್ಲಿ ಸಕಾರಾತ್ಮಕ ವಹಿವಾಟು ನಡೆಯುತ್ತಿರುವುದು ಕೂಡ ಬಂಡವಾಳ ಹಿಂಪಡೆಯಲು ಕಾರಣವಾಗಿದೆ.  

ಫೆಬ್ರುವರಿಯಲ್ಲಿ ₹1,539 ಕೋಟಿ ಹಾಗೂ ಮಾರ್ಚ್‌ನಲ್ಲಿ ₹35,098 ಕೋಟಿ ಹೂಡಿಕೆ ಮಾಡಿದ್ದರು. ಆದರೆ, ಏಪ್ರಿಲ್‌ನಲ್ಲಿ ಭಾರತವು ಮಾರಿಷಸ್‌ ಜೊತೆಗಿನ ತೆರಿಗೆ ಒಪ್ಪಂದಕ್ಕೆ ಸಂಬಂಧಿಸಿದಂತೆ ಕೆಲವು ನಿಯಮಾವಳಿಗಳಲ್ಲಿ ಬದಲಾವಣೆ ಮಾಡಿತು. ಅಲ್ಲದೆ, ಅಮೆರಿಕದ ಬಾಂಡ್ ಗಳಿಕೆಯೂ ಇಳಿಕೆ ಕಂಡಿತ್ತು. ಹಾಗಾಗಿ, ಈ ತಿಂಗಳಿನಲ್ಲಿ ₹8,700 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದರು.

ಚುನಾವಣಾ ಫಲಿತಾಂಶದ ಬಗ್ಗೆ ವಿದೇಶಿ ಹೂಡಿಕೆದಾರರಲ್ಲಿ ಸ್ಪಷ್ಟತೆ ಮೂಡಿದರೆ ದೇಶೀಯ ಮಾರುಕಟ್ಟೆಗಳಲ್ಲಿ ಷೇರುಗಳನ್ನು ಖರೀದಿಸುವ ಸಾಧ್ಯತೆಯಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ. 

‘ಚುನಾವಣಾ ಫಲಿತಾಂಶ ಹೊರಬೀಳುವುದಕ್ಕೂ ಮೊದಲೇ ವಿದೇಶಿ ಬಂಡವಾಳ ಹೂಡಿಕೆ ಪ್ರಮಾಣವು ಏರಿಕೆಯಾಗಬಹುದು’ ಎಂದು ಜಿಯೋಜಿತ್ ಫೈನಾನ್ಶಿಯಲ್ ಸರ್ವಿಸಸ್‌ನ ಮುಖ್ಯ ಹೂಡಿಕೆ ತಜ್ಞ ವಿ.ಕೆ. ವಿಜಯಕುಮಾರ್‌ ಹೇಳಿದ್ದಾರೆ.

‘ಚೀನಾ ಮಾರುಕಟ್ಟೆಗಳು ಏರಿಕೆ ಕಂಡಿದ್ದರಿಂದ ವಿದೇಶಿ ಹೂಡಿಕೆದಾರರು ಭಾರತದ ಮಾರುಕಟ್ಟೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಶಾಂಘೈ ಮಾರುಕಟ್ಟೆ ಮೂಲಕ ವಿದೇಶಿ ಬಂಡವಾಳ ಹೂಡಿಕೆಗೆ ನಿರ್ಬಂಧಗಳಿವೆ. ಹಾಂಗ್‌ಕಾಂಗ್‌ ಮಾರುಕಟ್ಟೆ ಮೂಲಕ ಹೂಡಿಕೆಗೆ ಅವಕಾಶವಿದೆ. ಕಳೆದ ತಿಂಗಳು ಹಾಂಗ್‌ಕಾಂಗ್‌ನ ಹ್ಯಾಂಗ್ ಸೆಂಗ್ ಸೂಚ್ಯಂಕ ಶೇ 7.66ರಷ್ಟು ಏರಿಕೆ ಕಂಡಿದೆ’ ಎಂದು ಹೇಳಿದ್ದಾರೆ. 

‘ಚುನಾವಣಾ ಫಲಿತಾಂಶದ ಬಗ್ಗೆ ಹೂಡಿಕೆದಾರರಲ್ಲಿ ಸ್ಪಷ್ಟತೆ ಇಲ್ಲ. ಹಾಗಾಗಿ, ಫಲಿತಾಂಶಕ್ಕೂ ಮುನ್ನವೇ ಭಾರತದ ಮಾರುಕಟ್ಟೆಗಳಲ್ಲಿ ಹೂಡಿಕೆಗೆ ಅವರು ಹಿಂಜರಿಯುತ್ತಿದ್ದಾರೆ’ ಎಂದು ಮಾರ್ನಿಂಗ್‌ಸ್ಟಾರ್‌ ಇನ್‌ವೆಸ್ಟ್‌ಮೆಂಟ್‌ ರಿಸರ್ಚ್‌ ಇಂಡಿಯಾದ ವ್ಯವಸ್ಥಾಪಕ (ಸಂಶೋಧನೆ) ಹಿಮಾಂಶು ಶ್ರೀವಾಸ್ತವ ಹೇಳಿದ್ದಾರೆ.

ಬಾಂಡ್‌ಗಳತ್ತ ಚಿತ್ತ

ವಿದೇಶಿ ಹೂಡಿಕೆದಾರರು ಭಾರತದ ಸಾಲಪತ್ರ ಮಾರುಕಟ್ಟೆಯಲ್ಲಿ ತಮ್ಮ ಹೂಡಿಕೆಯ ಪ್ರಮಾಣವನ್ನು ಹೆಚ್ಚಿಸುತ್ತಿದ್ದಾರೆ. ಜನವರಿಯಲ್ಲಿ ₹19836 ಕೋಟಿ ಫೆಬ್ರುವರಿಯಲ್ಲಿ ₹22419 ಕೋಟಿ ಹಾಗೂ ಮಾರ್ಚ್‌ನಲ್ಲಿ ₹13602 ಕೋಟಿ ಹಾಗೂ ಏಪ್ರಿಲ್‌ನಲ್ಲಿ ₹2009 ಕೋಟಿ ಹೂಡಿಕೆ ಮಾಡಿದ್ದಾರೆ. ಭಾರತದ ಬಾಂಡ್‌ ಅನ್ನು ಜೆ.ಪಿ. ಮಾರ್ಗನ್‌ನ ಗ್ಲೋಬಲ್‌ ಬಾಂಡ್‌ ಇಂಡೆಕ್ಸ್‌ಗೆ ಸೇರಿಸುತ್ತಿರುವುದರಿಂದ ಭಾರತದ ಬಾಂಡ್‌ಗಳತ್ತ ವಿದೇಶಿ ಹೂಡಿಕೆದಾರರು ಚಿತ್ತ ಹರಿಸಿದ್ದಾರೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT