ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಗ್ಗಿದ ಹೂಡಿಕೆ: ಸೂಚ್ಯಂಕ ಇಳಿಕೆ

ಜಾಗತಿಕ ವಾಣಿಜ್ಯ ಸಮರ, ಚುನಾವಣೆಯ ಪರಿಣಾಮ
Last Updated 9 ಮೇ 2019, 18:59 IST
ಅಕ್ಷರ ಗಾತ್ರ

ಮುಂಬೈ: ದೇಶಿ ಮತ್ತು ಜಾಗತಿಕ ವಿದ್ಯಮಾನಗಳ ಪ್ರಭಾವಕ್ಕೆ ಒಳಗಾಗಿ ಷೇರುಪೇಟೆಗಳಲ್ಲಿ ನಿರಂತರವಾಗಿ ನಕಾರತ್ಮಕ ವಹಿವಾಟು ನಡೆಯುತ್ತಿದೆ.

ಸತತ ಏಳನೇ ವಹಿವಾಟು ಅವಧಿಯಲ್ಲಿಯೂ ಮಾರಾಟದ ಒತ್ತಡಕ್ಕೆ ಸೂಚ್ಯಂಕಗಳು ಇಳಿಕೆ ಕಂಡಿವೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಚೀನಾದ ಸರಕುಗಳ ಮೇಲೆ ಗರಿಷ್ಠ ಆಮದು ಸುಂಕ ಹೇರುವುದಾಗಿ ಘೋಷಿಸಿದ್ದಾರೆ. ಇದು ಭಾರತವನ್ನೂ ಒಳಗೊಂಡು ಜಾಗತಿಕ ಷೇರುಪೇಟೆಗಳಲ್ಲಿ ಚಂಚಲ ವಹಿವಾಟಿಗೆ ಕಾರಣವಾಗಿದೆ.

ಫೆಬ್ರುವರಿಯಿಂದ ಷೇರುಗಳು ಮತ್ತು ಸಾಲಪತ್ರಗಳ ಖರೀದಿಗೆ ಉತ್ಸಾಹ ತೋರಿದ್ದ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಮೇ ತಿಂಗಳಿನಲ್ಲಿ ಮಾರಾಟಕ್ಕೆ ಗಮನ ನೀಡಿದ್ದಾರೆ. ಇದರಿಂದ ಷೇರುಪೇಟೆಯಿಂದ ಬಂಡವಾಳ ಹೊರಹರಿವು ಹೆಚ್ಚಾಗುತ್ತಿದ್ದು ಸೂಚ್ಯಂಕ ಇಳಿಮುಖ ಚಲನೆಗೆ ಕಾರಣವಾಗುತ್ತಿದೆ ಎಂದು ತಜ್ಞರು ವಿಶ್ಲೇಷಣೆ ಮಾಡಿದ್ದಾರೆ.

ಗುರುವಾರದ ವಹಿವಾಟಿನಲ್ಲಿ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್‌ಇ) 230 ಅಂಶ ಇಳಿಕೆಯಾಗಿ ಎರಡು ತಿಂಗಳ ಕನಿಷ್ಠ ಮಟ್ಟವಾದ 37,559 ಅಂಶಗಳಿಗೆ ತಲುಪಿತು.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 58 ಅಂಶ ಇಳಿಕೆ ಕಂಡು 11,301 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿದೆ.

ರೂಪಾಯಿ ಇಳಿಕೆ: ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್‌ ಎದುರು ರೂಪಾಯಿ ಮೌಲ್ಯ 23 ಪೈಸೆ ಇಳಿಕೆಯಾಗಿ ಒಂದು ಡಾಲರ್‌ಗೆ₹ 69.94ರಂತೆ ವಿನಿಮಯಗೊಂಡಿತು.

₹4.71 ಲಕ್ಷ ಕೋಟಿ ನಷ್ಟ

ನಾಲ್ಕು ದಿನಗಳ ವಹಿವಾಟಿನಲ್ಲಿ ಹೂಡಿಕೆದಾರರ ಸಂಪತ್ತು ಮೌಲ್ಯ ಮಾರುಕಟ್ಟೆ ಲೆಕ್ಕದಲ್ಲಿ ₹ 4.71 ಲಕ್ಷ ಕೋಟಿಗಳಷ್ಟು ಕರಗಿದೆ. ಷೇರುಪೇಟೆಯ ಬಂಡವಾಳ ಮೌಲ್ಯ ₹ 151.61 ಲಕ್ಷ ಕೋಟಿಗಳಿಂದ₹ 146.90 ಲಕ್ಷ ಕೋಟಿಗಳಿಗೆ ಇಳಿಕೆಯಾಗಿದೆ.

ಟಿಸಿಎಸ್‌ ಮೌಲ್ಯಯುತ ಕಂಪನಿ: ಮಾರುಕಟ್ಟೆ ಮೌಲ್ಯದ ಲೆಕ್ಕದಲ್ಲಿ ರಿಯಲ್ಸ್‌ ಇಂಡಸ್ಟ್ರೀಸ್‌ ಕಂಪನಿಯನ್ನು ಹಿಂದಿಕ್ಕಿ ಟಿಸಿಎಸ್‌ ಮತ್ತೊಮ್ಮೆ ಮೊದಲ ಸ್ಥಾನಕ್ಕೇರಿದೆ. ಟಿಸಿಎಸ್‌ ಮಾರುಕಟ್ಟೆ ಮೌಲ್ಯ ₹8.13 ಲಕ್ಷ ಕೋಟಿಗಳಷ್ಟಿದೆ.

***

ಅಮೆರಿಕ–ಚೀನಾ ವಾಣಿಜ್ಯ ಮಾತುಕತೆ ಒಂದು ನಿರ್ದಿಷ್ಟ ಹಂತಕ್ಕೆ ಬರುವವರೆಗೂ ಹೂಡಿಕೆದಾರರು ಚಂಚಲ ವಹಿವಾಟನ್ನು ಎದುರಿಸಲು ಸಿದ್ಧರಿರಬೇಕು’

–ಸುನೀಲ್‌ ಶರ್ಮಾ,ಸ್ಯಾಂಕ್ಟಂ ವೆಲ್ತ್‌ ಮ್ಯಾನೇಜ್‌ಮೆಂಟ್‌ನ ಮುಖ್ಯ ಹೂಡಿಕೆ ಅಧಿಕಾರಿ

ಲೋಕಸಭಾ ಚುನಾವಣೆ ಮತ್ತು ಕಂಪನಿಗಳ ತ್ರೈಮಾಸಿಕ ಸಾಧನೆಯಿಂದ ಅಲ್ಪಾವಧಿಯಲ್ಲಿ ಮಾರುಕಟ್ಟೆ ಚಂಚಲವಾಗಿರಲಿದೆ

–ಹೇಮಾಂಗ್‌ ಜೈನ್‌,ಶೇರ್‌ಖಾನ್‌ನ ಸಲಹೆಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT