ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಗ್ಗಿದ ಬೇಡಿಕೆ: ಚಿನ್ನ ಆಮದು ಶೇ 30ರಷ್ಟು ಇಳಿಕೆ

Last Updated 9 ಏಪ್ರಿಲ್ 2023, 16:30 IST
ಅಕ್ಷರ ಗಾತ್ರ

ನವದೆಹಲಿ: ಚಿನ್ನದ ಆಮದು 2022-23ರ ಏಪ್ರಿಲ್‌–ಫೆಬ್ರುವರಿ ಅವಧಿಯಲ್ಲಿ ಶೇಕಡ 30ರಷ್ಟು ಇಳಿಕೆ ಕಂಡಿದ್ದು, ₹ 2.60 ಲಕ್ಷ ಕೋಟಿಗೆ ತಲುಪಿದೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯ ತಿಳಿಸಿದೆ.

ಆಮದು ಸುಂಕ ಗರಿಷ್ಠ ಮಟ್ಟದಲ್ಲಿ ಇರುವುದು ಹಾಗೂ ಜಾಗತಿಕ ಆರ್ಥಿಕ ಅನಿಶ್ಚಿತ ಪರಿಸ್ಥಿತಿಯೇ ಆಮದು ಪ್ರಮಾಣ ಕಡಿಮೆ ಆಗಲು ಕಾರಣಗಳಾಗಿವೆ ಎಂದು ಸಚಿವಾಲಯ ಹೇಳಿದೆ.

2021–22ರ ಏಪ್ರಿಲ್‌–ಫೆಬ್ರುವರಿ ಅವಧಿಯಲ್ಲಿ ₹ 3.70 ಲಕ್ಷ ಕೋಟಿ ಮೌಲ್ಯದ ಚಿನ್ನ ಆಮದಾಗಿತ್ತು. 2022ರ ಆಗಸ್ಟ್‌ನಿಂದ ಚಿನ್ನದ ಆಮದು ಇಳಿಮುಖವಾಗಿಯೇ ಇದೆ. ಬೆಳ್ಳಿ ಆಮದು 2022–23ರ ಏಪ್ರಿಲ್‌–ಫೆಬ್ರುವರಿ ಅವಧಿಯಲ್ಲಿ ಶೇ 66ರಷ್ಟು ಹೆಚ್ಚಾಗಿ ₹ 43,460 ಕೋಟಿಗೆ ತಲುಪಿದೆ.

ಚಿನ್ನದ ಆಮದು ಇಳಿಮುಖವಾಗಿದ್ದರೂ ವ್ಯಾಪಾರ ಕೊರತೆಯನ್ನು ಕಡಿಮೆ ಮಾಡಲು ಸಾಧ್ಯವಾಗಿಲ್ಲ. ಒಟ್ಟು ಆಮದು ಮತ್ತು ರಫ್ತು ವಹಿವಾಟಿನ ನಡುವಣ ಅಂತರವು 2022–23ರ ಏಪ್ರಿಲ್‌–ಫೆಬ್ರುವರಿ ಅವಧಿಯಲ್ಲಿ ₹ 20.29 ಲಕ್ಷ ಕೋಟಿ ಆಗುವ ಅಂದಾಜು ಮಾಡಲಾಗಿದೆ. 2021–22ರ ಇದೇ ಅವಧಿಯಲ್ಲಿ ಇದು ₹ 14.14 ಲಕ್ಷ ಕೋಟಿಯಷ್ಟು ಇತ್ತು.

‘ಭಾರತವು 2022–23ರ ಏಪ್ರಿಲ್‌–ಜನವರಿ ಅವಧಿಯಲ್ಲಿ 600 ಟನ್‌ಗಳಷ್ಟು ಚಿನ್ನ ಆಮದು ಮಾಡಿಕೊಂಡಿದೆ. ಆಮದು ಸುಂಕ ಗರಿಷ್ಠ ಮಟ್ಟದಲ್ಲಿ ಇರುವುದರಿಂದ ಆಮದು ಪ್ರಮಾಣ ಕಡಿಮೆ ಆಗಿದೆ. ದೇಶಿ ಉದ್ಯಮ ಮತ್ತು ರಫ್ತು ವಹಿವಾಟಿಗೆ ಉತ್ತೇಜನ ನೀಡಲು ಕೇಂದ್ರ ಸರ್ಕಾರವು ಸುಂಕ ಕಡಿಮೆ ಮಾಡುವ ನಿಟ್ಟಿನಲ್ಲಿ ಆಲೋಚನೆ ಮಾಡಬೇಕಿದೆ’ ಎಂದು ಹರಳು ಮತ್ತು ಆಭರಣ ರಫ್ತು ಉತ್ತೇಜನ ಮಂಡಳಿಯ (ಜಿಜೆಇಪಿಸಿ) ಮಾಜಿ ಅಧ್ಯಕ್ಷ ಕೋಲಿನ್‌ ಶಾ ಹೇಳಿದ್ದಾರೆ.

‘ಚಿನ್ನದ ದರ ಹೆಚ್ಚಾದರೆ ಬೇಡಿಕೆ ಕಡಿಮೆ ಆಗುತ್ತದೆ. ಆಮದು ಸುಂಕ ಗರಿಷ್ಠ ಮಟ್ಟದಲ್ಲಿ ಇದ್ದರೆ ಅನಧಿಕೃತ ಮಾರ್ಗಗಳ ಮೂಲಕ ಚಿನ್ನದ ಆಮದು ಹೆಚ್ಚಾಗುತ್ತದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT