ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಭೀರ ಕಾಯಿಲೆಗೂ ಆರೋಗ್ಯ ವಿಮೆ

Last Updated 9 ಜೂನ್ 2019, 20:10 IST
ಅಕ್ಷರ ಗಾತ್ರ

ದೇಶದಲ್ಲಿ 27 ಇನ್ಶೂರೆನ್ಸ್ ಕಂಪನಿಗಳಿವೆ. ಇವುಗಳಲ್ಲಿ 400 ರಿಂದ 500 ಮಾದರಿಯ ಆರೋಗ್ಯ ವಿಮೆ ಉತ್ಪನ್ನಗಳಿವೆ. ಒಂದೊಂದು ಕಂಪನಿಯು ತನ್ನದೇ ರೀತಿಯಲ್ಲಿ ನೀತಿ ನಿಬಂಧನೆಗಳನ್ನು ರೂಪಿಸಿಕೊಂಡು ಗ್ರಾಹಕರ ಮೇಲೆ ಹೇರುತ್ತಿದೆ. ಜತೆಗೆ ಇನ್ಶೂರೆನ್ಸ್ ಮಾಡಿಸುವ ಗ್ರಾಹಕರಿಗೆ ಚಿಕಿತ್ಸೆ ಸಿಗದ ಕಾಯಿಲೆಗಳ ಪಟ್ಟಿ ನೀಡುವಾಗ ಒಬ್ಬೊಬ್ಬರು ಒಂದೊಂದು ಕ್ರಮ ಅನುಸರಿಸುತ್ತಿದ್ದಾರೆ.

ಇದೆಲ್ಲದಕ್ಕೂ ಕಡಿವಾಣ ಹಾಕಿ, ಗ್ರಾಹಕರಿಗೆ ಸುಧಾರಿತ ಆರೋಗ್ಯ ವಿಮೆ ಸಿಗುವಂತೆ ಮಾಡಲು ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್‌ಡಿಎಐ) ಪಣ ತೊಟ್ಟಿದೆ. ಈಗಾಗಲೇ ಈ ನಿಟ್ಟಿನಲ್ಲಿ ಕರಡು ಮಾರ್ಗಸೂಚಿಯನ್ನು ಪ್ರಕಟಿಸಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಸದ್ಯದಲ್ಲೇ ಆರೋಗ್ಯ ವಿಮೆಗಳಲ್ಲಿ ಭಾರಿ ಸುಧಾರಣೆ ಜಾರಿಯಾಗಲಿದೆ.

ಹೆಚ್ಚು ರೋಗಗಳಿಗೆ ಸಿಗಲಿದೆ ಚಿಕಿತ್ಸೆ: ಯಾವುದೇ ಆರೋಗ್ಯ ವಿಮೆಯಲ್ಲಿ ನೀವು ಚಿಕಿತ್ಸೆ ಸಿಗದ ರೋಗಗಳ ಪಟ್ಟಿ (exclusions) ಬಗ್ಗೆ ಕೇಳಿಯೇ ಇರುತ್ತೀರಿ. ಪಟ್ಟಿಯಲ್ಲಿ ಸೂಚಿಸಿರುವ ಕಾಯಿಲೆಗಳಿಗೆ ವಿಮೆಯ ಪರಿಹಾರ ಸಿಗುವುದಿಲ್ಲ ಎಂದೇ ಇದರರ್ಥ. ಉದಾಹರಣೆಗೆ ಈವರೆಗೆ ಬಹುತೇಕ ಆರೋಗ್ಯ ವಿಮೆ ಕಂಪನಿಗಳು ಮಾನಸಿಕ ಅಸ್ವಸ್ಥತೆಯನ್ನು ಚಿಕಿತ್ಸೆಗೆ ಪರಿಗಣಿಸುತ್ತಿರಲಿಲ್ಲ.

ಆದರೆ, ‘ಐಆರ್‌ಡಿಎಐ‘ ಪ್ರಕಟಿಸಿರುವ ಹೊಸ ಕರಡು ಪ್ರಸ್ತಾವನೆಯಂತೆ ಮಾನಸಿಕ ಅಸ್ವಸ್ಥತೆ, ಮಾನಸಿಕ ಖಿನ್ನತೆ, ಪ್ರೌಢಾವಸ್ಥೆಯಲ್ಲಿ ಉಂಟಾಗುವ ಸಮಸ್ಯೆ, ಋತುಬಂಧ, ನರ ಬೆಳವಣಿಗೆ ಸಮಸ್ಯೆ ಹಾಗೂ ಅನುವಂಶಿಕ ಸಮಸ್ಯೆಗಳ ಚಿಕಿತ್ಸೆಗೆ ಇನ್ಶೂರೆನ್ಸ್ ಕಂಪನಿಗಳು ಇನ್ನು ಮುಂದೆ ವಿಮಾ ಪರಿಹಾರ ನೀಡಬೇಕಾಗುತ್ತದೆ.

ಮೂರ್ಛೆರೋಗ, ಹೆಪಟೈಟಿಸ್ ಬಿ, ಅರಳು ಮರಳು ರೋಗ,ಪಾರ್ಕಿನ್ಸನ್ ಕಾಯಿಲೆ, ಎಚ್‌ಐವಿ ಸೋಂಕು, ಶ್ರವಣದೋಷ ಸೇರಿ 17 ಕಾಯಿಲೆಗಳಿಗೆ ಆರೋಗ್ಯ ವಿಮೆಯ ರಕ್ಷಣೆ ನೀಡಬೇಕೆ ಬೇಡವೇ ಎನ್ನುವ ತೀರ್ಮಾನವನ್ನು ಐಆರ್‌ಡಿಎಐ ವಿಮಾ ಕಂಪನಿಗಳ ವಿವೇಚನೆಗೆ ಬಿಟ್ಟಿದೆ.

ಕಾಯುವಿಕೆ ಅವಧಿಯಲ್ಲಿ ಸುಧಾರಣೆ: ಸಕ್ಕರೆ ಕಾಯಿಲೆ ಮತ್ತು ರಕ್ತದೊತ್ತಡಕ್ಕೆ ಚಿಕಿತ್ಸೆ ನೀಡಲು ವಿಮಾ ಕಂಪನಿಗಳು 2 ರಿಂದ 3 ವರ್ಷಗಳ ಕಾಯುವಿಕೆ ಅವಧಿ (waiting period) ನಿಗದಿಪಡಿಸುತ್ತಿದ್ದವು. ಆದರೆ, ‘ಐಆರ್‌ಡಿಎಐ’ ಕರಡು ಮಾರ್ಗಸೂಚಿಯಲ್ಲಿ ಇರುವಂತೆ ವಿಮೆ ಮಾಡಿಸುವಾಗ ವ್ಯಕ್ತಿಯು ಸಕ್ಕರೆ ಕಾಯಿಲೆ ಮತ್ತು ರಕ್ತದೊತ್ತಡದ ಬಗ್ಗೆ ತಿಳಿಸಿದ್ದರೆ, 30 ದಿನಗಳಿಗಿಂತ ಹೆಚ್ಚಿಗೆ ಕಾಯುವಿಕೆ ಅವಧಿ ನಿಗದಿ ಮಾಡುವಂತಿಲ್ಲ. ಇದರಂತೆ ರೋಗಿಗೆ ಕೇವಲ 1 ತಿಂಗಳ ಬಳಿಕ ಚಿಕಿತ್ಸೆ ಸಿಗುತ್ತದೆ.

ಅತ್ಯಾಧುನಿಕ ಚಿಕಿತ್ಸಾ ವಿಧಾನಕ್ಕೆ ವಿಮೆ ನಿರಾಕರಿಸುವಂತಿಲ್ಲ: ಅತ್ಯಾಧುನಿಕ ಚಿಕಿತ್ಸಾ ವಿಧಾನಗಳಾದ ರೋಬೊಟಿಕ್ ಸರ್ಜರಿ, ಓರಲ್ ಕಿಮೋಥೆರಪಿ ಸೇರಿ ಪ್ರಮುಖ ವಿಧಾನಗಳಿಗೆ ವಿಮೆ ಕವರೇಜ್ ನಿರಾಕರಿಸುವಂತಿಲ್ಲ.

ಚಿಕಿತ್ಸೆ ಹೊರತುಪಡಿಸಿ, ಕೆಲ ಖರ್ಚುಗಳಿಗೆ ವಿಮೆ: ಒಂದೊಂದು ಆಸ್ಪತ್ರೆಯಲ್ಲಿ ಒಂದೊಂದು ರೀತಿಯ ಬಿಲ್ಲಿಂಗ್ ಪ್ರಕ್ರಿಯೆ ಇದೆ. ಹೀಗಾಗಿ ಇನ್ಶೂರೆನ್ಸ್ ಕ್ಲೇಮ್ ಪ್ರಕ್ರಿಯೆಯಲ್ಲಿ ಸಾಕಷ್ಟು ಗೊಂದಲ ಏರ್ಪಡುತ್ತಿತ್ತು. ಇದನ್ನು ನಿವಾರಿಸಲು ಐಆರ್‌ಡಿಎಐ ನಾಲ್ಕು ವಿಭಾಗಗಳಲ್ಲಿ ಹೆಚ್ಚುವರಿ ವೆಚ್ಚಗಳನ್ನು ಬೇರ್ಪಡಿಸಿ ಸಲ್ಲಿಸಲು ತಿಳಿಸಿದೆ.

ಸ್ಯಾನಿಟರಿ ಪ್ಯಾಡ್, ಮಕ್ಕಳ ಆಹಾರ, ಇಂಟರ್‌ನೆಟ್, ಇ–ಮೇಲ್, ಲಾಂಡ್ರಿ ವೆಚ್ಚ ಸೇರಿ ಇನ್ನಿತರ ಮಾದರಿಯ ಖರ್ಚುಗಳಿಗೆ ವಿಮೆ ಕವರೇಜ್ ನೀಡಬೇಕೇ ಎನ್ನುವುದನ್ನು ‘ಐಆರ್‌ಡಿಎಐ’ ಇನ್ಶೂರೆನ್ಸ್ ಕಂಪನಿಗಳ ವಿವೇಚನೆಗೆ ಬಿಟ್ಟಿದೆ. ಒಟ್ಟಿನಲ್ಲಿ ಆರೋಗ್ಯ ವಿಮೆಯನ್ನು ಮತ್ತಷ್ಟು ಜನಸ್ನೇಹಿಯಾಗಿಸಲು ‘ಐಆರ್‌ಡಿಎಐ’ ಚಿಂತನೆ ನಡೆಸಿರುವುದಂತೂ ಸ್ವಾಗತಾರ್ಹ ಬೆಳವಣಿಗೆ.

ಆರ್‌ಬಿಐ ನೀತಿಗೆ ಸ್ಪಂದಿಸದ ಪೇಟೆ
ಮೂರು ವಾರಗಳಿಂದ ನಿರಂತರ ಗಳಿಕೆ ಕಂಡಿದ್ದ ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕಗಳು ಕಳೆದ ವಾರ ಹಿನ್ನಡೆ ಅನುಭವಿಸಿವೆ. 39,616 ಅಂಶಗಳಲ್ಲಿ ವಹಿವಾಟು ಅಂತ್ಯಗೊಳಿಸಿರುವ ಸೆನ್ಸೆಕ್ಸ್, ವಾರದ ಅವಧಿಯಲ್ಲಿ ಶೇ 0.2 ರಷ್ಟು ಕುಸಿತ ಕಂಡಿದೆ. ನಿಫ್ಟಿ (50) ಸೂಚ್ಯಂಕ ಶೇ 0.4 ರಷ್ಟು ತಗ್ಗಿದೆ. ಇನ್ನು ನಿಫ್ಟಿ ಮಿಡ್ ಕ್ಯಾಪ್ ಸಹ ಶೇ 1 ರಷ್ಟು ಕುಸಿದು ನಿರೀಕ್ಷೆ ತಲೆಕೆಳಗಾಗಿಸಿದೆ.

ಗುರುವಾರ, ಆರ್‌ಬಿಐ ಅಲ್ಪಾವಧಿ ಬಡ್ಡಿ ದರವನ್ನು ಶೇ 0.25 ರಷ್ಟು ತಗ್ಗಿಸಿದ್ದರೂ ಸಹಿತ ಮಾರುಕಟ್ಟೆಯು ಅದಕ್ಕೆ ಪೂರಕವಾಗಿ ಸ್ಪಂದಿಸಲಿಲ್ಲ. ದಿವಾನ್ ಹೌಸಿಂಗ್ ಫೈನಾನ್ಸ್‌ನ ಬಿಕ್ಕಟ್ಟಿನ ನಡುವೆ ಹಣಕಾಸು ಮತ್ತು ಬ್ಯಾಂಕಿಂಗ್ ವಲಯದ ಷೇರುಗಳು ಕೂಡ ಕುಸಿತ ದಾಖಲಿಸಿವೆ. ನಿಫ್ಟಿಯ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ವಲಯ ಶೇ 4 ರಷ್ಟು ಕುಸಿದಿದೆ. ನಿಫ್ಟಿ ಫಾರ್ಮಾ (ಶೇ 3.3), ಮಾಧ್ಯಮ ವಲಯ (ಶೇ 3.3), ವಿದ್ಯುತ್ ವಲಯ (ಶೇ 2), ರಿಯಲ್ ಎಸ್ಟೇಟ್ (ಶೇ1.6) ಹಾಗೂ ಬ್ಯಾಂಕ್ ವಲಯಗಳು (ಶೇ 1) ರಷ್ಟು ತಗ್ಗಿವೆ. ಎಫ್‌ಎಂಸಿಜಿ ಮತ್ತು ಲೋಹ ವಲಯ ಮಾತ್ರ ಕ್ರಮವಾಗಿ ಶೇ 0.4 ಮತ್ತು ಶೇ 0.2 ರಷ್ಟು ಜಿಗಿದಿವೆ.

ಗಳಿಕೆ: ಕೋಲ್ ಇಂಡಿಯಾ ನಿಫ್ಟಿಯಲ್ಲಿ ಅಗ್ರಮಾನ್ಯ ಗಳಿಕೆ ಸಾಧಿಸಿದೆ. ಭಾರ್ತಿ ಇನ್ಫ್ರಾಟೆಲ್, ವಿಪ್ರೊ, ಹೀರೊ ಮೋಟೊ ಕಾರ್ಪ್ ಮತ್ತು ಟೈಟಾನ್ ಕಂಪನಿಗಳು ಉತ್ತಮ ಗಳಿಕೆ ಕಂಡಿವೆ.

ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯು ಭಾರ್ತಿ ಇನ್ಫ್ರಾಟೆಲ್ ಜತೆ ಇಂಡಸ್ ಟವರ್ಸ್‌ನ ವಿಲೀನವನ್ನು ಮಾನ್ಯ ಮಾಡಿದ ಪರಿಣಾಮ ಕಂಪನಿ ಷೇರುಗಳು ಶೇ 4 ರಷ್ಟು ಏರಿಕೆ ದಾಖಲಿಸಿವೆ. ಹೀರೊ ಮೋಟೊ ಕಾರ್ಪ್ ಮೇ ತಿಂಗಳಲ್ಲಿ 6.5 ಲಕ್ಷ ವಾಹನಗಳನ್ನು ಮಾರಾಟ ಮಾಡಿ ಶೇ 13.5 ರಷ್ಟು ಪ್ರಗತಿ ಸಾಧಿಸಿದ ಕಾರಣ, ಕಂಪನಿ ಷೇರುಗಳು ಶೇ 3 ರಷ್ಟು ಜಿಗಿದಿವೆ. ಉಳಿದಂತೆ ವಿಪ್ರೊ ಶೇ 2.9, ಭಾರ್ತಿ ಏರ್ ಟೆಲ್ ಶೇ 2.4 ರಷ್ಟು ಏರಿಕೆ ಕಂಡಿವೆ.

ಇಳಿಕೆ: ನೈಸರ್ಗಿಕ ಅನಿಲ ನಿಯಂತ್ರಣ ಪ್ರಾಧಿಕಾರವು, ನಿರೀಕ್ಷಿತ ದರ ಪರಿಷ್ಕರಣೆ ಮಾಡಲು ಗೇಲ್ (GAIL) ಗೆ ಅನುಮತಿ ನೀಡದ ಪರಿಣಾಮ ಕಂಪನಿ ಷೇರುಗಳು ಶೇ 13 ರಷ್ಟು ಕುಸಿದಿವೆ.

ಬಡ್ಡಿ ಪಾವತಿಯಲ್ಲಿ ಎಡವಿದ್ದರಿಂದ ಇಂಡಿಯಾ ಬುಲ್ಸ್ ಹೌಸಿಂಗ್ ಫೈನಾನ್ಸ್‌ನ ಷೇರುಗಳು ಶೇ 7 ರಷ್ಟು ಇಳಿದಿವೆ. ಇದರ ನಕಾರಾತ್ಮಕ ಪರಿಣಾಮ ಇತರ ಬ್ಯಾಂಕ್‌ಗಳ ಮೇಲೂ ಬೀರಿದ್ದು, ಯೆಸ್ ಬ್ಯಾಂಕ್, ಇಂಡಸ್ ಇಂಡ್ ಬ್ಯಾಂಕ್, ಮತ್ತು ಎಸ್‌ಬಿಐ ಬ್ಯಾಂಕ್‌ ಷೇರುಗಳು ಶೇ 5.3 ರಿಂದ ಶೇ 3 ರ ವರೆಗೆ ಕುಸಿದಿವೆ. ಅಲ್ಟ್ರಾಟೆಕ್ ಸಿಮೆಂಟ್ ಶೇ 3.9,ಡಾ. ರೆಡ್ಡೀಸ್ ಲ್ಯಾಬ್ಸ್ ಶೇ 3.6, ಎಲ್‌ಆ್ಯಂಡ್‌ಟಿ ಶೇ 2.8 ರಷ್ಟು ಹಿನ್ನಡೆ ದಾಖಲಿಸಿವೆ.

ಮುನ್ನೋಟ: ಪ್ರಸಕ್ತ ವಾರ ಆರ್ಥಿಕತೆಯ ಹಲವಾರು ವಿದ್ಯಮಾನಗಳು ಮಾರುಕಟ್ಟೆ ಸೂಚ್ಯಂಕಗಳ ಮೇಲೆ ಪ್ರಭಾವ ಬೀರಲಿವೆ.

ಗ್ರಾಹಕ ಬೆಲೆ ಸೂಚ್ಯಂಕ, ಸಗಟು ದರ ಸೂಚ್ಯಂಕ, ಆಮದು, ರಫ್ತು, ಕೈಗಾರಿಕಾ ಉತ್ಪಾದನೆ ಸೇರಿ ಪ್ರಮುಖ ದತ್ತಾಂಶಗಳು ಈ ವಾರದ ಅವಧಿಯಲ್ಲಿ ಹೊರ ಬೀಳಲಿವೆ. ಕಚ್ಚಾ ತೈಲ ಬೆಲೆಯ ಏರಿಳಿತದ ಬಗ್ಗೆ ಇನ್ನಷ್ಟು ಸ್ಪಷ್ಟತೆ ಸಿಗುವ ಸಾಧ್ಯತೆ ಇದೆ.

(ಲೇಖಕ: ಸುವಿಷನ್ ಹೋಲ್ಡಿಂಗ್ಸ್ ಪ್ರೈವೇಟ್ ಲಿಮಿಟೆಡ್‌ನ ಉಪಾಧ್ಯಕ್ಷ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT