ಬುಧವಾರ, ಜುಲೈ 28, 2021
23 °C

ಮುಂದಿನ ವರ್ಷ ಶೇ 9.5 ವೃದ್ಧಿ ದರ: ಫಿಚ್‌ ರೇಟಿಂಗ್ಸ್‌ ಅಂದಾಜು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ 5ರಷ್ಟು ಕುಸಿತ ಕಾಣಲಿರುವ ದೇಶಿ ಆರ್ಥಿಕ ವೃದ್ಧಿ ದರವು (ಜಿಡಿಪಿ) 2021–22ರಲ್ಲಿ ಶೇ 9.5ರಷ್ಟು ಪ್ರಗತಿ ಸಾಧಿಸಲಿದೆ ಎಂದು ಫಿಚ್‌ ರೇಟಿಂಗ್ಸ್ ಅಂದಾಜಿಸಿದೆ.

ಕೋವಿಡ್‌ ಪಿಡುಗು, ಈ ಮೊದಲೇ ಮಂದಗತಿಯ ಪ್ರಗತಿ ಕಾಣುತ್ತಿದ್ದ ಜಿಡಿಪಿಯು ಗಮನಾರ್ಹವಾಗಿ ಕುಸಿಯುವಂತೆ ಪೆಟ್ಟು ನೀಡಿದೆ. ಆರ್ಥಿಕ ಪ್ರಗತಿಯ ಮುನ್ನೋಟವನ್ನೂ ಗಮನಾರ್ಹವಾಗಿ ದುರ್ಬಲಗೊಳಿಸಿದೆ. ಸರ್ಕಾರಿ ಸಾಲದ ಹೊರೆ ಒಡ್ಡಿರುವ ಸವಾಲುಗಳನ್ನೂ ಬಹಿರಂಗಪಡಿಸಿದೆ ಎಂದು ಕಂಪನಿಯು ತನ್ನ ವರದಿಯಲ್ಲಿ ತಿಳಿಸಿದೆ.

ಜಾಗತಿಕ ಹಿಂಜರಿತದ ನಂತರ ಭಾರತದ ಜಿಡಿಪಿಯು ‘ಬಿಬಿಬಿ’ ರೇಟಿಂಗ್ಸ್‌ನ ಇತರ ದೇಶಗಳಗಿಂತ ಗರಿಷ್ಠ ಮಟ್ಟದ ಪ್ರಗತಿಯ ಹಾದಿಗೆ ಮರಳಲಿದೆ. ಜಿಡಿಪಿಯು ಗರಿಷ್ಠ ಪ್ರಗತಿಯ ಹಾದಿಗೆ ಮರಳಲು ಕೋವಿಡ್‌ನಿಂದಾಗಿ ಬಿಕ್ಕಟ್ಟಿಗೆ ಸಿಲುಕಿರುವ ಹಣಕಾಸು ವಲಯದ ಪರಿಸ್ಥಿತಿಯು ಇನ್ನಷ್ಟು ವಿಷಮಗೊಳ್ಳದಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದೆ.

ಸರ್ಕಾರದ ಸಾಲದ ಹೊರೆಯು 2019–20ರ ಹಣಕಾಸು ವರ್ಷದಲ್ಲಿಯೇ ಜಿಡಿಪಿಯ ಶೇ 70ಕ್ಕೆ ತಲುಪಿತ್ತು. ಈ ಹಣಕಾಸು ವರ್ಷದಲ್ಲಿ ಸರ್ಕಾರಿ ಸಾಲ ಮತ್ತು ಜಿಡಿಪಿ ಅನುಪಾತವು ಜಿಡಿಪಿಯ ಶೇ 84ಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ. ವಿತ್ತೀಯ ಕೊರತೆಯು ಇನ್ನಷ್ಟು ಹೆಚ್ಚಲಿದೆ. ಹಣದುಬ್ಬರ ಏರಿಕೆಯಾಗಲಿದೆ. ಚಾಲ್ತಿ ಖಾತೆ ಕೊರತೆ ಹೆಚ್ಚಳಗೊಳ್ಳಲಿದೆ ಎಂದೂ ಅಂದಾಜಿಸಿದೆ.

ಆರ್ಥಿಕ ಮುನ್ನೊಟ ಸ್ಥಿರ: ಎಸ್‌ಆ್ಯಂಡ್‌ಪಿ
ವಿತ್ತೀಯ ಶಿಸ್ತು ಕಾಯ್ದುಕೊಳ್ಳುವಲ್ಲಿ ಭಾರತಕ್ಕೆ ನೀಡಿರುವ ರೇಟಿಂಗ್ಸ್‌ ಬದಲಿಸಲು ಜಾಗತಿಕ ಸಂಸ್ಥೆ ಎಸ್‌ಆ್ಯಡ್‌ಪಿ ನಿರಾಕರಿಸಿದೆ.

ಸತತ 13ನೇ ವರ್ಷವೂ ‘ಬಿಬಿಬಿ ಮೈನಸ್‌’ ನೀಡಿದೆ. ಆದರೆ, ಆರ್ಥಿಕ ಮುನ್ನೋಟ ಸ್ಥಿರವಾಗಿರಲಿದೆ. 2021–22ರಲ್ಲಿ ಜಿಡಿಪಿಯು ಶೇ 8.5ರಷ್ಟಾಗಲಿದೆ. ಆದರೆ, 2022–23ರಲ್ಲಿ ಶೇ 6.5ಕ್ಕೆ ಇಳಿಕೆ ಕಾಣಲಿದೆ ಎಂದೂ ಹೇಳಿದೆ ಎಂದು ತಿಳಿಸಿದೆ.

ವಿತ್ತೀಯ ಶಿಸ್ತು ಕಾಯ್ದುಕೊಳ್ಳುವಲ್ಲಿ ಸರ್ಕಾರ ವಿಫಲವಾಗಿದೆ. ಹೀಗಾಗಿ ದೇಶದ ವಿತ್ತೀಯ ಸ್ಥಿತಿಯು ಅಸ್ಥಿರವಾಗಿದೆ. ಆದರೆ, 2021ರಿಂದ ವಿತ್ತೀಯ ಸ್ಥಿತಿ ಮತ್ತು ಆರ್ಥಿಕತೆಯು ಸ್ಥಿರತೆಗೆ ಬರಲಿದ್ದು, ಚೇತರಿಸಿಕೊಳ್ಳಲು ಆರಂಭಿಸಲಿದೆ. ದೀರ್ಘಾವಧಿಯಲ್ಲಿ ಜಿಡಿಪಿ ಬೆಳವಣಿಗೆಗೆ ಅಡೆತಡೆಗಳು ಹೆಚ್ಚಾಗುತ್ತಿದ್ದು, ಆರ್ಥಿಕ ಸುಧಾರಣಾ ಕ್ರಮಗಳನ್ನು ಸರಿಯಾಗಿ ಜಾರಿಗೊಳಿಸಿದರೆ ಗರಿಷ್ಠ ಮಟ್ಟದ ಬೆಳವಣಿಗೆ ಸಾಧ್ಯವಾಗಲಿದೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ಜಿಡಿಪಿ ಬೆಳವಣಿಗೆ ದರ ಶೇ 5ಕ್ಕೆ ಇಳಿಕೆಯಾಗಲಿದೆ ಎಂದು ಹೇಳಿರುವ ಸಂಸ್ಥೆಯು, ಭಾರತವು ಕೋವಿಡ್‌–19 ಬಿಕ್ಕಟ್ಟಿನಿಂದ ಹೊರಬಂದು ಚೇತರಿಸಿಕೊಳ್ಳುವ ನಿರೀಕ್ಷೆ ಇರುವುದರಿಂದ ಸ್ಥಿರ ಮುನ್ನೋಟ ನೀಡಲಾಗಿದೆ ಎಂದು ತಿಳಿಸಿದೆ.

ಜಿಡಿಪಿ ಬೆಳವಣಿಗೆಯು ಅಂದಾಜಿಗಿಂತಲೂ ಕೆಳ ಮಟ್ಟಕ್ಕೆ ಇಳಿಕೆ ಕಂಡರೆ, ರೇಟಿಂಗ್ಸ್‌ನಲ್ಲಿ ಬದಲಾವಣೆ ಮಾಡಲಾಗುವುದು. ವಿತ್ತೀಯ ಕೊರತೆಯಲ್ಲಿ ಏರಿಕೆ ಮತ್ತು ರಾಜಕೀಯ ವಿದ್ಯಮಾನಗಳು ಆರ್ಥಿಕ ಸುಧಾರಣಾ ಕ್ರಮಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದೂ ಹೇಳಿದೆ.

ಜಾಗತಿಕ ರೇಟಿಂಗ್ಸ್‌ ವರದಿ ಅಲ್ಲಗಳೆದ ಸರ್ಕಾರ
ಅಂತರರಾಷ್ಟ್ರೀಯ ಸಂಸ್ಥೆಗಳು ಭಾರತದ ಆರ್ಥಿಕತೆ ಬಗ್ಗೆ ಇತ್ತೀಚೆಗೆ ನೀಡಿರುವ ರೇಟಿಂಗ್ಸ್‌ಗಳನ್ನು ಕೇಂದ್ರ ಸರ್ಕಾರ ಸ್ಪಷ್ಟವಾಗಿ ತಳ್ಳಿ ಹಾಕಿದೆ.

‘ದೇಶದ ಸಾಲ ಮರುಪಾವತಿ ಸಾಮರ್ಥ್ಯವು ಶ್ರೇಷ್ಠ ದರ್ಜೆಯದಾಗಿದೆ’ ಎಂದು ಮುಖ್ಯ ಆರ್ಥಿಕ ಸಲಹೆಗಾರ ಕೃಷ್ಣಮೂರ್ತಿ ಸುಬ್ರಮಣಿಯನ್‌ ಹೇಳಿದ್ದಾರೆ.

ದೇಶದ ರೇಟಿಂಗ್‌ ತಗ್ಗಿಸಿದ್ದ ಮೂಡೀಸ್‌ ಇನ್ವೆಸ್ಟರ್ಸ್‌ ಸರ್ವಿಸ್‌ ಮತ್ತು  ಹೂಡಿಕೆ ದರ್ಜೆ ತಗ್ಗಿಸಿದ್ದ ಎಸ್‌ಆ್ಯಂಡ್‌ಪಿ ವರದಿಗಳಿಗೆ ಸರ್ಕಾರದ ಮೊದಲ ಪ್ರತಿಕ್ರಿಯೆ ಇದಾಗಿದೆ.

‘ದೇಶದ ಆರ್ಥಿಕ ವೃದ್ಧಿ ದರವು ಪ್ರಸಕ್ತ ಹಣಕಾಸು ವರ್ಷದಲ್ಲಿ ಕುಸಿತಗೊಳ್ಳಲಿದೆ. ಅಕ್ಟೋಬರ್‌ನಿಂದ ಮಾರ್ಚ್‌ವರೆಗಿನ ಅವಧಿಯಲ್ಲಿ ಆರ್ಥಿಕತೆಯಲ್ಲಿ ಚೇತರಿಕೆ ಕಂಡು ಬಂದರೆ ಈ ಕುಸಿತ ಸೀಮಿತಗೊಳ್ಳಲಿದೆ’ ಎಂದು ಸುಬ್ರಮಣಿಯನ್‌ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು