ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IT Return: ಆದಾಯ ತೆರಿಗೆ ರಿಟರ್ನ್ಸ್‌ ವೇಳೆ ಈ 10 ದಾಖಲೆಗಳು ನಿಮ್ಮೊಂದಿಗೆ ಇರಲಿ

Published 24 ಜೂನ್ 2023, 6:28 IST
Last Updated 24 ಜೂನ್ 2023, 6:28 IST
ಅಕ್ಷರ ಗಾತ್ರ

2022–23ನೇ ಹಣಕಾಸು ವರ್ಷದ ವೈಯಕ್ತಿಕ ಆದಾಯ ತೆರಿಗೆ ರಿಟರ್ನ್ಸ್‌ (IT Return) ಸಲ್ಲಿಕೆಗೆ ಜುಲೈ 31 ಕೊನೆಯ ದಿನಾಂಕ. ಕೇಂದ್ರ ಸರ್ಕಾರ ಒಂದು ವೇಳೆ ಈ ಅವಧಿಯನ್ನು ವಿಸ್ತರಿಸದಿದ್ದರೆ ಇದೇ ಅಂತಿಮ ದಿನವಾಗಲಿದೆ. ಹೀಗಾಗಿ ಕೊನೆಯ ದಿನಾಂಕಕ್ಕಿಂತ ಮುಂಚಿತವಾಗಿ ಆದಾಯ ತೆರಿಗೆ ರಿಟರ್ನ್ಸ್‌ ಸಲ್ಲಿಕೆ ಮಾಡುವುದು ಒಳಿತು.

ಐಟಿ ರಿಟರ್ನ್ಸ್‌ ಫೈಲ್‌ ಮಾಡಲು ಕೆಲವೊಂದು ದಾಖಲೆಗಳು ಅಗತ್ಯ. ಈ ದಾಖಲೆಗಳನ್ನು ಮೊದಲೇ ಸಿದ್ಧಪಡಿಸಿಟ್ಟುಕೊಂಡರೆ ನಿಮ್ಮ ಐಟಿ ರಿಟರ್ನ್ಸ್ ಸಲ್ಲಿಕೆ ಸುಲಭವಾಗಲಿದೆ.

ಐಟಿ ಫೈಲಿಂಗ್‌ಗೂ ಮುನ್ನ ಈ ಕೆಳಗಿನ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಿ

1. ಫಾರ್ಮ್ 16 (Form-16)

ಒಂದು ವೇಳೆ ನೀವು ವೇತನದಾರರಾಗಿದ್ದರೆ ಆದಾಯ ತೆರಿಗೆ ಫೈಲ್‌ ಮಾಡಲು ಈ ದಾಖಲೆ ಅತೀ ಅವಶ್ಯ. ನಿಮ್ಮ ವೇತನದಲ್ಲಿ ಕಡಿತಗೊಳಿಸಲಾದ ಟಿಡಿಎಸ್‌ನ (TDS- Tax Deducted at Source) ವಿವರಣೆ ಬಗ್ಗೆ ನಿಮ್ಮ ಕಂಪನಿ ಕೊಡುವ ಫಾರ್ಮ್ ಇದಾಗಿದೆ. ಒಂದು ವೇಳೆ ನಿಮ್ಮ ವೇತನದಿಂದ ಟಿಡಿಎಸ್ ಕಡಿತಗೊಳಿಸಲಾಗಿದ್ದರೆ, ಅದರ ವಿವರಣೆಯನ್ನು ಕಂಪನಿ ನೀಡುತ್ತದೆ. ಆದಾಯ ತೆರಿಗೆ ರಿಟರ್ನ್ಸ್‌ ಫೈಲ್ ಮಾಡುವಾಗ ಇದನ್ನು ಸಿದ್ದವಾಗಿಟ್ಟುಕೊಳ್ಳಿ.

2. ಬ್ಯಾಂಕ್‌ ಅಥವಾ ಅಂಚೆ ಕಚೇರಿ ಬಡ್ಡಿ ಪ್ರಮಾಣಪತ್ರ ( Interest Certificates)

ಆದಾಯ ತೆರಿಗೆ ನಿಯಮಗಳ ಪ್ರಕಾರ ಬ್ಯಾಂಕ್‌ ಅಥವಾ ಅಂಚೆ ಕಚೇರಿ ಉಳಿತಾಯ ಖಾತೆ, ನಿಶ್ಚಿತ ಠೇವಣಿ (ಎಫ್‌ಡಿ), ಮರುಕಳಿಸುವ ಠೇವಣಿ (ಆರ್‌ಡಿ)ಯಿಂದ ಗಳಿಸಿದ ಬಡ್ಡಿಗೆ ತೆರಿಗೆ ಕಟ್ಟಬೇಕು. ಈ ಠೇವಣಿಗಳಿಂದ ನೀವು ಬಡ್ಡಿ ಗಳಿಸುತ್ತಿದ್ದರೆ, ಬ್ಯಾಂಕ್‌ ಅಥವಾ ಅಂಚೆ ಕಚೇರಿಯಿಂದ ಬಡ್ಡಿ ಪ್ರಮಾಣ ಪತ್ರ ಪಡೆಯಬೇಕು. ಐಟಿ ರಿಟರ್ನ್ಸ್ ವೇಳೆ ಇದನ್ನು ಸಲ್ಲಿಕೆ ಮಾಡಬೇಕು.

3. ಫಾರ್ಮ್ 16–A ಹಾಗೂ ಇತರ ಟಿಡಿಎಸ್‌ ಪ್ರಮಾಣಪತ್ರಗಳು ( Form-16A and Other TDS Certificates)

ಹಣಕಾಸು ವರ್ಷದಲ್ಲಿ ನಿಶ್ಚಿತ ಠೇವಣಿ ಮೇಲೆ ₹ 40,000ಕ್ಕಿಂತ ಅಧಿಕ ಬಡ್ಡಿ ಪಡೆದಿದ್ದರೆ ( ಹಿರಿಯ ನಾಗರಿಕರಿಗೆ ₹50,000) ಅದರ ಮೇಲೆ ಬ್ಯಾಂಕುಗಳು ಟಿಡಿಎಸ್‌ ಕಡಿತಗೊಳಿಸುತ್ತವೆ. ಒಂದು ವೇಳೆ ಬಡ್ಡಿ ಮೇಲೆ ಟಿಡಿಎಸ್‌ ಕಡಿತಗೊಂಡಿದ್ದೇ ಆದಲ್ಲಿ, ಬ್ಯಾಂಕ್‌ಗಳಿಂದ 16-A ಪ್ರಮಾಣಪತ್ರ ಪಡೆಯಬೇಕು.

ಆರ್ಥಿಕ ವರ್ಷದಲ್ಲಿ ₹ 5,000 ಅಧಿಕ ಡಿವಿಡೆಂಡ್‌ ಪಡೆದಿದ್ದೇ ಆದಲ್ಲಿ ಮ್ಯೂಚುವಲ್‌ ಫಂಡ್‌ ಕಂಪನಿಗಳು 16–A ಫಾರ್ಮ್ ನೀಡುತ್ತವೆ. ಆದರಲ್ಲಿ ನಿಮ್ಮ ಆದಾಯದ ಮೇಲೆ ಕಡಿತಗೊಳಿಸಲಾಗಿರುವ ಟಿಡಿಎಸ್‌ನ ವಿವರಗಳು ಇರಲಿವೆ.

ಒಂದು ವೇಳೆ ಮನೆ ಬಾಡಿಗೆಯಿಂದ ವಾರ್ಷಿಕವಾಗಿ ₹ 50,000ಕ್ಕಿಂತ ಅಧಿಕ ಆದಾಯ ಪಡೆಯುತ್ತಿದ್ದೇ ಆದಲ್ಲಿ, ಮಾಲೀಕರು ಬಾಡಿಗೆದಾರರಿಂದ 16C ಪ್ರಮಾಣಪತ್ರ ಪಡೆಯಬೇಕು.

ಭೂಮಿ, ಆಸ್ತಿ ಮಾರಾಟ ಮಾಡಿದರೆ, ಖರೀದಿದಾರರಿಂದ Form 16B ಪಡೆದುಕೊಳ್ಳಬೇಕು. 50 ಲಕ್ಷಕ್ಕಿಂತ ಅಧಿಕ ಮೌಲ್ಯಕ್ಕೆ ಮಾರಾಟ ಮಾಡಿದ್ದರೆ ಮಾತ್ರ ಇದು ಅನ್ವಯ.

4. ವಾರ್ಷಿಕ ಮಾಹಿತಿ ವಿವರಣೆ ಪತ್ರ (Annual Information Statement – AIS)

2021ರಲ್ಲಿ ಆದಾಯ ತೆರಿಗೆ ಇಲಾಖೆ ವಾರ್ಷಿಕ ಮಾಹಿತಿ ವಿವರಣೆ ಪತ್ರ ಪರಿಚಯಿಸಿತ್ತು. ಇದರಲ್ಲಿ ನೀವು ಆರ್ಥಿಕ ವರ್ಷದಲ್ಲಿ ಮಾಡಿದ್ದ ಎಲ್ಲಾ ಹಣಕಾಸು ವ್ಯವಹಾರಗಳ ಮಾಹಿತಿ ಇರಲಿವೆ. ಇದನ್ನು ಡೌನ್ಲೋಡ್‌ ಮಾಡಿಕೊಂಡು ಪರಿಶೀಲನೆ ಮಾಡಬೇಕು.

5. ಫಾರ್ಮ್ 26AS (Form 26AS)

ವೈಯಕ್ತಿಕ ಆದಾಯ ತೆರಿಗೆ ಪಾವತಿದಾರರು ಆದಾಯ ತೆರಿಗೆ ಇಲಾಖೆಯಿಂದ ಫಾರ್ಮ್‌ 26AS ಡೌನ್ಲೋಡ್‌ ಮಾಡಿಕೊಳ್ಳಬೇಕು. ನಿಮ್ಮ ಪ್ಯಾನ್ ಸಂಖ್ಯೆಯಲ್ಲಿ ಕಡಿತವಾದ ಹಾಗೂ ಠೇವಣಿಯಾದ ತೆರಿಗೆಯ ವಿವರ ಇದು. ಟಿಡಿಎಸ್ ಪ್ರಮಾಣಪತ್ರ ಹಾಗೂ ಫಾರ್ಮ್‌ 26AS ನಲ್ಲಿರುವ ಮಾಹಿತಿಗಳನ್ನು ಪರಿಶೀಲನೆ ಮಾಡಬೇಕು.

6. ತೆರಿಗೆ ಉಳಿಸುವ ಹೂಡಿಕೆ ಹಾಗೂ, ಖರ್ಚಿನ ಮಾಹಿತಿ (Tax-saving Investment, Expenditure Proofs)

ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಗೂ ಮುನ್ನ ತೆರಿಗೆ ಉಳಿಸಲು ಮಾಡಿದ ಹೂಡಿಕೆ ಹಾಗೂ ಖರ್ಚುಗಳ ಮಾಹಿತಿಯನ್ನು ಸಂಗ್ರಹಿಸಬೇಕು. ಇದು ಹಳೆಯ ತೆರಿಗೆ ಪದ್ಧತಿ ಆಯ್ಕೆಮಾಡಿಕೊಂಡಿರುವವರಿಗೆ ಮಾತ್ರ ಇದು ಅನ್ವಯ.

7. ಬಂಡವಾಳ ಗಳಿಕೆ (Capital Gains)

ಷೇರು, ಡಿಬೆಂಚರ್‌ ಹಾಗೂ ಆಸ್ತಿ ಮಾರಾಟದಿಂದ ಗಳಿಸಿದ ದೀರ್ಘಾವಧಿ ಬಂಡವಾಳ ಲಾಭ ಒಂದು ಲಕ್ಷಕ್ಕಿಂತ ಅಧಿಕ ಇದ್ದರೆ ಅದನ್ನು ಬಂಡವಾಳ ಗಳಿಕೆ ಎಂದು ಪರಿಗಣಿಸಲಾಗುತ್ತದೆ. ಇದರ ಮೇಲೆ ತೆರಿಗೆ ವಿಧಿಸಲಾಗುತ್ತದೆ. ಬಂಡವಾಳದ ಪ್ರಕಾರದ ಮೇಲೆ ತೆರಿಗೆ ವಿಧಿಸಲಾಗುತ್ತದೆ. ಹೀಗಾಗಿ ಆದಾಯ ತೆರಿಗೆ ರಿರ್ಟರ್ನ್ಸ್‌ ಫೈಲ್‌ಗೂ ಮುನ್ನ ಇದರ ಮಾಹಿತಿ ಸಿದ್ಧಪಡಿಸಿಟ್ಟುಕೊಳ್ಳಬೇಕು.

8. ವಿದೇಶಿ ಆಸ್ತಿಗಳ ಮಾಹಿತಿ

ಬ್ಯಾಂಕ್‌ ಖಾತೆ ಸೇರಿ ಎಲ್ಲಾ ವಿದೇಶಿ ಆಸ್ತಿಗಳ ವಿವರವನ್ನು ಆದಾಯ ತೆರಿಗೆ ರಿಟರ್ನ್ಸ್‌ ವೇಳೆ ಸಲ್ಲಿಕೆ ಮಾಡುವುದು ಕಡ್ಡಾಯ.

9. ಆಧಾರ್‌ ನಂಬರ್‌ (Aadhar Number)

ಆದಾಯ ತೆರಿಗೆ ಕಾಯ್ದೆ 1961ರ ಸೆಕ್ಷನ್‌ 139AA ಪ್ರಕಾರ ರಿಟರ್ನ್ಸ್‌ ಸಲ್ಲಿಕೆ ವೇಳೆ ಆಧಾರ್‌ ಸಂಖ್ಯೆ ನಮೂದು ಮಾಡುವುದು ಕಡ್ಡಾಯ. ಇಂದು ವೇಳೆ ಆಧಾರ್‌ ಕಾರ್ಡ್‌ ಇಲ್ಲದಿದ್ದರೆ ಆಧಾರ್‌ ನೋಂದಣಿ ಸಂಖ್ಯೆ ದಾಖಲಿಸಬೇಕು. ನಿಮ್ಮ ಆಧಾರ್‌ಗೆ ಮೊಬೈಲ್‌ ಸಂಖ್ಯೆ ಜೋಡಣೆಯಾಗಿದ್ದರೆ ಐಟಿಆರ್‌ ಇ–ವೇರಿಫೈ ಸುಲಭವಾಗಲಿದೆ.

10. ಬ್ಯಾಂಕ್‌ ಖಾತೆ ಮಾಹಿತಿ (Bank Account)

ಐಟಿಆರ್‌ ಫೈಲಿಂಗ್‌ ವೇಳೆ ಬ್ಯಾಂಕ್‌ ಖಾತೆಯ ಮಾಹಿತಿ ನೀಡುವುದು ಕಡ್ಡಾಯ. ಒಂದು ವೇಳೆ ಬ್ಯಾಂಕ್‌ ಖಾತೆ ಸ್ಥಗಿತಗೊಳಿಸಿದ್ದೇ ಆದಲ್ಲಿ, ಹೊಸ ಬ್ಯಾಂಕ್ ಖಾತೆಯ ಮಾಹಿತಿ ನೀಡಬೇಕು. ಅಕೌಂಟ್‌ ಸಂಖ್ಯೆ, ಖಾತೆಯ ವಿಧ ಹಾಗೂ ಐಎಫ್‌ಎಸ್‌ಸಿ ಕೋಡ್‌ ನಮೂದು ಮಾಡಬೇಕು. ತೆರಿಗೆ ಮರುಪಾವತಿ ಸಿಗಲು ಬ್ಯಾಂಕ್ ಖಾತೆ ವಿವರ ನೀಡುವುದು ಕಡ್ಡಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT