ಮಂಗಳವಾರ, ಜನವರಿ 21, 2020
18 °C

ಐಟಿಆರ್‌: ಹೊಸತೇನು?

ಕೇಶವ ಜಿ. ಝಿಂಗಾಡೆ Updated:

ಅಕ್ಷರ ಗಾತ್ರ : | |

Prajavani

ಆದಾಯ ತೆರಿಗೆ ಲೆಕ್ಕಪತ್ರ ವಿವರ (ಐ.ಟಿ ರಿಟರ್ನ) ಸಲ್ಲಿಸುವ ಪ್ರಕ್ರಿಯೆಗೆ ಆದಾಯ ತೆರಿಗೆ ಇಲಾಖೆಯು ಈ ಬಾರಿ ಸಾಕಷ್ಟು ಮುಂಚಿತವಾಗಿಯೇ ಚಾಲನೆ ನೀಡಿದೆ. ಈ ಸಂಬಂಧ, ಕೇಂದ್ರ ಸರ್ಕಾರವು ಸಾಮಾನ್ಯವಾಗಿ ಏಪ್ರಿಲ್‌ನಲ್ಲಿ ಅಧಿಸೂಚನೆ ಹೊರಡಿಸುತ್ತಿತ್ತು. ಈ ವರ್ಷ ಅಚ್ಚರಿಯ ಬೆಳವಣಿಗೆಯಲ್ಲಿ ಜನವರಿ ಮೊದಲ ವಾರದಲ್ಲಿಯೇ ಅಧಿಸೂಚನೆ ಹೊರಡಿಸಿತ್ತು.

‘ಐಟಿಆರ್‌’ ಫಾರ್ಮ್ಸ್‌ಗಳ ಬಗ್ಗೆ ಮುಂಚಿತವಾಗಿಯೇ ಅಧಿಸೂಚನೆ ಹೊರಡಿಸಿದರೆ ಐಟಿ ರಿಟರ್ನ್ಸ್‌ಗಳನ್ನು ಸುಸೂತ್ರವಾಗಿ ಸಲ್ಲಿಸಬಹುದು ಎಂದು ತೆರಿಗೆದಾರರು ಒತ್ತಾಯಿಸುತ್ತಲೇ ಬಂದಿದ್ದರು. ಆ ಬೇಡಿಕೆ ಈ ವರ್ಷ ಈಡೇರಿದೆ.

ಹಣಕಾಸು ವರ್ಷ 2019ರ ಏಪ್ರಿಲ್‌ 1 ರಿಂದ 2020ರ ಮಾರ್ಚ್‌ 31ರ ಅವಧಿಯಲ್ಲಿನ ಆದಾಯ ಗಳಿಕೆಗೆ ಸಂಬಂಧಿಸಿದಂತೆ 2020–21ನೇ ಅಂದಾಜು ವರ್ಷದ (assessment year) ಐಟಿ ರಿಟರ್ನ್‌ ಅರ್ಜಿ ನಮೂನೆಗಳ ನಿಬಂಧನೆಗಳನ್ನು ಪ್ರಕಟಿಸಿದೆ. ವಿವಿಧ ಆದಾಯದವರು ಯಾವ ಬಗೆಯ ಅರ್ಜಿ ನಮೂನೆ ಸಲ್ಲಿಸಬೇಕು ಎನ್ನುವ ವಿವರಗಳು ಈ ಅಧಿಸೂಚನೆಯಲ್ಲಿ ಇವೆ. ಜನವರಿ 3ರಂದು ಹೊರಡಿಸಿದ್ದ ಅಧಿಸೂಚನೆಯಲ್ಲಿ ಕೆಲ ಬದಲಾವಣೆಗಳನ್ನು ಮಾಡಿ 9ರಂದು ಪರಿಷ್ಕೃತ ಅಧಿಸೂಚನೆ ಹೊರಡಿಸಲಾಗಿದೆ.

ಮೊದಲ ಅಧಿಸೂಚನೆಯಲ್ಲಿ ಎರಡು ಪ್ರಮುಖ ಬದಲಾವಣೆಗಳನ್ನು ಮಾಡಲಾಗಿತ್ತು. ಮನೆ ಆಸ್ತಿಯಲ್ಲಿ ಜಂಟಿ ಮಾಲೀಕತ್ವ ಹೊಂದಿದ ವೈಯಕ್ತಿಕ ಆದಾಯ ತೆರಿಗೆದಾರರು ಸರಳ ಸ್ವರೂಪದ ‘ಐಟಿಆರ್‌–1’ (ಸಹಜ್‌) ಅಥವಾ ‘ಐಟಿಆರ್‌–4’ (ಸುಗಮ್‌) ಸಲ್ಲಿಸುವಂತಿರಲಿಲ್ಲ.

ಬ್ಯಾಂಕ್‌ ಖಾತೆಯಲ್ಲಿ ₹ 1 ಕೋಟಿಗಿಂತ ಹೆಚ್ಚಿನ ಮೊತ್ತ ಠೇವಣಿ ಇರಿಸಿದವರು, ವಿದೇಶ ಪ್ರವಾಸಕ್ಕೆ ₹ 2 ಲಕ್ಷ ವೆಚ್ಚ ಮಾಡಿದವರು ಅಥವಾ ವರ್ಷಕ್ಕೆ ₹ 1 ಲಕ್ಷ ವಿದ್ಯುತ್‌ ಬಿಲ್‌ ಪಾವತಿಸುವವರು ಕೂಡ ಐಟಿಆರ್‌–1 ಸಲ್ಲಿಸಲು ಅರ್ಹರಾಗಿರಲಿಲ್ಲ. ಇವರು ಬೇರೆ ಅರ್ಜಿಗಳನ್ನು ಸಲ್ಲಿಸಬೇಕಾಗುತ್ತದೆ ಎಂದು ಸೂಚಿಸಲಾಗಿತ್ತು.

ಈ ನಿಬಂಧನೆಗಳಿಂದಾಗಿ, ಸರಳ ಸ್ವರೂಪದ ಐಟಿಆರ್‌–1 ಮತ್ತು ಐಟಿಆರ್‌–4 ಸಲ್ಲಿಸಲು ವೈಯಕ್ತಿಕ ಆದಾಯ ತೆರಿಗೆದಾರರಿಗೆ ಸಾಧ್ಯವಿರಲಿಲ್ಲ. ಈ ಬದಲಾವಣೆಗಳು ವೈಯಕ್ತಿಕ ಆದಾಯ ತೆರಿಗೆದಾರರಿಗೆ ಕಠಿಣವಾಗಿ ಪರಿಣಮಿಸಿದ್ದವು. ಈ ಕುರಿತು ತೆರಿಗೆದಾರರಿಂದ ವ್ಯಾಪಕವಾದ ಆಕ್ಷೇಪಗಳು ದಾಖಲಾಗಿದ್ದವು.

ಬದಲಾದ ಅಧಿಸೂಚನೆ

ಆಕ್ಷೇಪಗಳು ಹೆಚ್ಚಿದ ಕಾರಣಕ್ಕೆ ಒಂದು ವಾರದ ನಂತರ ನೇರ ತೆರಿಗೆ ಕೇಂದ್ರೀಯ ಮಂಡಳಿಯು (ಸಿಬಿಡಿಟಿ) ತನ್ನ ಈ ಮೊದಲಿನ ಅಧಿಸೂಚನೆಯಲ್ಲಿ ಕೆಲ ಮಾರ್ಪಾಡುಗಳನ್ನು ಮಾಡಿ ಹೊಸ ಅಧಿಸೂಚನೆ ಹೊರಡಿಸಿತು.

ಬ್ಯಾಂಕ್‌ ಖಾತೆಯಲ್ಲಿ ₹ 1 ಕೋಟಿಗಿಂತ ಹೆಚ್ಚಿನ ಮೊತ್ತ ಠೇವಣಿ ಇರಿಸಿದವರು, ಮನೆ ಆಸ್ತಿಯ ಜಂಟಿ ಮಾಲೀಕರು, ವಿದೇಶ ಪ್ರವಾಸಕ್ಕೆ ₹ 2 ಲಕ್ಷ ವೆಚ್ಚ ಮಾಡಿದವರು ಅಥವಾ ವರ್ಷಕ್ಕೆ ₹ 1 ಲಕ್ಷ ವಿದ್ಯುತ್‌ ಬಿಲ್‌ ಪಾವತಿಸುವವರು ಕೂಡ ಐಟಿಆರ್‌–1 ಸಲ್ಲಿಸಬಹುದು ಎಂದು ನಿಯಮದಲ್ಲಿ ಬದಲಾವಣೆ ತಂದಿದೆ.

ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್‌ 139 (1)ರ ಏಳನೇ ನಿಯಮಗಳಡಿ ಒಂದು ಅಥವಾ ಅದಕ್ಕಿಂತ ಹೆಚ್ಚು ನಿಬಂಧನೆಗಳನ್ನು ಪಾಲಿಸಲು ರಿಟರ್ನ್‌ ಸಲ್ಲಿಸಬೇಕಾದವರು ‘ಸಹಜ್‌’ ಅರ್ಜಿ ಬಳಸಿಕೊಳ್ಳಲು ಅನುಮತಿ ನೀಡಲಾಗಿದೆ.

ಸಹಜ್‌ ಮತ್ತು ಸುಗಮ್‌ ಅರ್ಜಿ ನಮೂನೆಗಳು
ಸಂಕ್ಷಿ‍ಪ್ತ ಹಾಗೂ ಸರಳವಾಗಿ ಇರಬೇಕು. ಹೆಚ್ಚುವರಿ ವಿವರಗಳ ಪಟ್ಟಿ (ಷೆಡೂಲ್ಸ್‌) ಕನಿಷ್ಠ ಸಂಖ್ಯೆಯಲ್ಲಿ ಇರಬೇಕು ಎನ್ನುವ ಕಾರಣಕ್ಕೆ ಇವುಗಳನ್ನು ಸಲ್ಲಿಸಲು ಅಗತ್ಯವಾದ ಅರ್ಹತಾ ನಿಬಂಧನೆಗಳನ್ನು ಬದಲಿಸಲಾಗಿದೆ.

ಆದಾಯ ತೆರಿಗೆ ಇಲಾಖೆಯು ಹೊರಡಿಸಿದ ಪರಿಷ್ಕೃತ ಅಧಿಸೂಚನೆ ಮತ್ತು ನೀಡಿದ ಸ್ಪಷ್ಟನೆ ನಂತರ ಐಟಿಆರ್‌–1 (ಸಹಜ್‌) ಅರ್ಜಿ ಭರ್ತಿ ನಿಯಮಗಳು ಹೀಗಿವೆ.

* ವಾರ್ಷಿಕ ಆದಾಯ ₹ 50 ಲಕ್ಷ ಮೀರದ ವೈಯಕ್ತಿಕ ಆದಾಯ ತೆರಿಗೆದಾರರು

* ವೇತನ, ಮನೆ ಆಸ್ತಿ, ಬಡ್ಡಿ ಆದಾಯ, ಕುಟುಂಬ ಪಿಂಚಣಿಯು ಆದಾಯ ಮೂಲ ಹೊಂದಿದವರು

* 2019–20ರಲ್ಲಿ ತಮ್ಮ ಇಲ್ಲವೇ ಇತರರ ವಿದೇಶ ಪ್ರವಾಸಕ್ಕೆ ₹ 2 ಲಕ್ಷ ವೆಚ್ಚ ಮಾಡಿದವರು

* 2019–20ರಲ್ಲಿ ಒಂದು ಅಥವಾ ಒಂದಕ್ಕಿಂತ ಹೆಚ್ಚು ಕರೆಂಟ್‌ ಅಕೌಂಟ್‌ಗಳಲ್ಲಿ ₹ 1 ಕೋಟಿಗಿಂತ ಹೆಚ್ಚು ಠೇವಣಿ ಇರಿಸಿದವರು

* 2019–20ರಲ್ಲಿ ₹ 1 ಲಕ್ಷಕ್ಕಿಂತ ಹೆಚ್ಚು ವಿದ್ಯುತ್‌ ಬಿಲ್‌ ಪಾವತಿಸಿದವರು

* ಒಂದು ಮನೆ ಆಸ್ತಿಯನ್ನು ಸ್ವಂತದ ಮಾಲೀಕತ್ವ ಹೊಂದಿದವರು ಅಥವಾ ಇತರರ ಜತೆ ಜಂಟಿಯಾಗಿ ಮಾಲೀಕತ್ವ ಹೊಂದಿದವರು

ಸಹಜ್‌’ ಅನ್ವಯಗೊಳ್ಳದವರು

* ವಾರ್ಷಿಕ ಆದಾಯ ₹ 50 ಲಕ್ಷ ಮೀರಿದವರು

* ಅಲ್ಪಾವಧಿ ಅಥವಾ ದೀರ್ಘಾವಧಿ ಬಂಡವಾಳ ಗಳಿಕೆ (capital gains) ಹೊಂದಿದವರು

* ಕಂಪನಿಗಳಲ್ಲಿ ನಿರ್ದೇಶಕರಾದವರು

* ಷೇರುಪೇಟೆಗಳಲ್ಲಿ ವಹಿವಾಟು ನಡೆಸದ ಕಂಪನಿಗಳಲ್ಲಿ ಹಣ ಹೂಡಿಕೆ ಮಾಡಿದವರು

* ಒಂದಕ್ಕಿಂತ ಹೆಚ್ಚು ಮನೆ ಆಸ್ತಿ ಹೊಂದಿದವರು

* ಲಾಭಾಂಶ ಆದಾಯ ಹೊರತುಪಡಿಸಿ ಇತರ ಆದಾಯ ಮೂಲಗಳನ್ನು ಹೊಂದಿದವರು

ಐಟಿಆರ್‌–4 (ಸುಗಮ್‌) ನಿಯಮಗಳು

* ವಾರ್ಷಿಕ ಆದಾಯ ₹ 50 ಲಕ್ಷ ಮೀರಿದ ವೈಯಕ್ತಿಕ ಆದಾಯ ತೆರಿಗೆದಾರರು

* ಉದ್ದಿಮೆ ಮತ್ತು ವೃತ್ತಿಯಿಂದ ಆದಾಯ ಹೊಂದಿದವರು, ಹಿಂದೂ ಅವಿಭಕ್ತ ಕುಟುಂಬ ಮತ್ತು ಸೀಮಿತ ಹೊಣೆಗಾರಿಕೆ ಪಾಲುದಾರಿಕೆಯ (ಎಲ್‌ಎಲ್‌ಪಿ) ಖಾಸಗಿ ಕಂಪನಿಗಳು

* ಪ್ರತಿ ವರ್ಷ ಜುಲೈ 31 ಐ.ಟಿ ರಿಟರ್ನ್‌ ಸಲ್ಲಿಕೆಗೆ ಅಂತಿಮ ದಿನವಾಗಿರುತ್ತದೆ. ಆಕಸ್ಮಾತ್ತಾಗಿ ಯಾರಾದರು ಈ ಗಡುವಿನ ಒಳಗೆ ಐ.ಟಿ ರಿಟರ್ನ್ ಸಲ್ಲಿಸದಿದ್ದರೆ ತೆರಿಗೆ ಪಾವತಿಸಬೇಕಾಗಿದ್ದರೆ, ತಡವಾಗಿ ರಿಟರ್ನ್‌ ಸಲ್ಲಿಸಲು ಅವಕಾಶ ಇದೆ. ಆದರೆ, ಇದಕ್ಕೆ ಬಾಕಿ ಇರುವ ತೆರಿಗೆ ಮೊತ್ತಕ್ಕೆ ಆಗಸ್ಟ್‌ನಿಂದ ಪ್ರತಿ ತಿಂಗಳೂ ಶೇ 1ರಷ್ಟು ಸರಳ ಬಡ್ಡಿ ಪಾವತಿಸಬೇಕಾಗುತ್ತದೆ.

* 2020–21ನೇ ಅಂದಾಜು ವರ್ಷಕ್ಕೆ ಇ–ಫೈಲಿಂಗ್‌ ಮಾಡುವ ಸೌಲಭ್ಯವು ಏಪ್ರಿಲ್‌ನಿಂದ ಲಭ್ಯವಾಗಿರಲಿದೆ ಎಂದು ನೇರ ತೆರಿಗೆ ಕೇಂದ್ರೀಯ ಮಂಡಳಿಯು (ಸಿಬಿಡಿಟಿ) ತಿಳಿಸಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು