ಭಾನುವಾರ, ಮಾರ್ಚ್ 26, 2023
23 °C
ಹಣಕಾಸು ಸಚಿವಾಲಯಕ್ಕೆ ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ರಾಜೀವ್ ಸಲಹೆ

ನವೋದ್ಯಮಗಳಿಗೆ ಠೇವಣಿ ಆಧರಿಸಿ ಸಾಲ

ವಿಜಯ್ ಜೋಷಿ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಅಮೆರಿಕದ ಸಿಲಿಕಾನ್ ವ್ಯಾಲಿ ಬ್ಯಾಂಕ್‌ನಲ್ಲಿ ಠೇವಣಿ ಹೊಂದಿರುವ ಭಾರತ ಮೂಲದ ನವೋದ್ಯಮಗಳಿಗೆ ಅವುಗಳ ಠೇವಣಿಯನ್ನು ಆಧರಿಸಿ ಅಮೆರಿಕದ ಡಾಲರ್‌ನಲ್ಲಿ ಅಥವಾ ಭಾರತದ ರೂಪಾಯಿಯಲ್ಲಿ ಸಾಲ ನೀಡಬಹುದು ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಸಲಹೆ ನೀಡಿದೆ.

‘ಎಸ್‌ವಿಬಿ’ಯ ಪುನರ್‌ರಚನೆ ನಡೆದಿದೆ. ಹೀಗಾಗಿ ಅಲ್ಲಿ ಠೇವಣಿ ಇರಿಸಿರುವ ಗಣನೀಯ ಸಂಖ್ಯೆಯ ನವೋದ್ಯಮಗಳಿಗೆ ತಕ್ಷಣಕ್ಕೆ ಹಣ ಲಭ್ಯವಾಗದೆ ಇರಬಹುದು. ಈ ಸಂದರ್ಭದಲ್ಲಿ, ಅವುಗಳು ಎಸ್‌ವಿಬಿಯಲ್ಲಿ ಹೊಂದಿರುವ ಠೇವಣಿಯನ್ನೇ ಆಧರಿಸಿ ಸಾಲ ಕೊಡಬಹುದು ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಅವರು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಸಲಹೆ ಮಾಡಿದ್ದಾರೆ ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಎಸ್‌ವಿಬಿ ದಿವಾಳಿ ನಂತರ ರಾಜೀವ್ ಅವರು ಭಾರತ ಮೂಲದ ನವೋದ್ಯಮಗಳ ಜೊತೆ ಸಭೆ ನಡೆಸಿದ್ದರು. ಅವುಗಳು ಎದುರಿಸುತ್ತಿರುವ ನಗದು ಕೊರತೆ ವಿಚಾರವಾಗಿ ಮಾಹಿತಿ ಪಡೆದಿದ್ದರು. ಅವರು ನಡೆಸಿದ್ದ ಸಭೆಯಲ್ಲಿ 450ಕ್ಕೂ ಹೆಚ್ಚು ನವೋದ್ಯಮಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಭಾರತ ಮೂಲದ ನವೋದ್ಯಮಗಳ ಸಮಸ್ಯೆ ಕುರಿತು ಹಣಕಾಸು ಸಚಿವಾಲಯದ ಜೊತೆ ಚರ್ಚಿಸುವುದಾಗಿ ರಾಜೀವ್‌ ಹೇಳಿದ್ದರು.

ಭಾರತದ ಹಲವು ಬ್ಯಾಂಕ್‌ಗಳು ಈಗ ನವೋದ್ಯಮಗಳನ್ನು ಗಮನದಲ್ಲಿ ಇಟ್ಟುಕೊಂಡು ಸೇವೆ ಒದಗಿಸಲು ಆರಂಭಿಸಿವೆ. ಹೀಗಿದ್ದರೂ, ಅವುಗಳ ಸಾಲ ಸಂಬಂಧಿ ಸೇವೆಗಳು ಅಂತರರಾಷ್ಟ್ರೀಯ ಗುಣಮಟ್ಟಕ್ಕೆ ಹೋಲಿಸುವಂತೆ ಇಲ್ಲ. ಭಾರತದ ನವೋದ್ಯಮಗಳು ವಿದೇಶಿ ಬ್ಯಾಂಕ್‌ಗಳನ್ನು ಅವಲಂಬಿಸುವುದು ಕಡಿಮೆ ಆಗಬೇಕು ಎಂದಾದಲ್ಲಿ, ಭಾರತದ ಬ್ಯಾಂಕ್‌ಗಳು ನವೋದ್ಯಮಗಳಿಗೆ ಸಾಲಕ್ಕೆ ಸಂಬಂಧಿಸಿದ ಸೇವೆಗಳನ್ನು ಅಂತರರಾಷ್ಟ್ರೀಯ ಗುಣಮಟ್ಟಕ್ಕೆ ಸರಿಸಮನಾಗಿ ಕೊಡುವ ಅಗತ್ಯ ಇದೆ ಎಂದು ಅವರು ಹಣಕಾಸು ಸಚಿವಾಲಯಕ್ಕೆ ಸಲ್ಲಿಸಿರುವ ಸಲಹೆಯಲ್ಲಿ ಹೇಳಿದ್ದಾರೆ.

ಅಮೆರಿಕದಲ್ಲಿ ಇರುವ ಭಾರತದ ಬ್ಯಾಂಕ್‌ಗಳ ಶಾಖೆಗಳು ನವೋದ್ಯಮಗಳನ್ನು ಬೆಂಬಲಿಸುವ ಅಗತ್ಯವಿದೆ. ಭಾರತದ ಕೆಲವು ಬ್ಯಾಂಕ್‌ಗಳು ಅಮೆರಿಕದಲ್ಲಿ ಶಾಖೆಯನ್ನು ಹೊಂದಿದ್ದರೂ, ಅಲ್ಲಿ ನವೋದ್ಯಮಗಳು ಈ ಶಾಖೆಗಳ ಜೊತೆ ಹೆಚ್ಚು ಒಡನಾಟ ಹೊಂದಿಲ್ಲ. ಹೀಗಾಗಿ, ಅಲ್ಲಿ ಭಾರತದ ಬ್ಯಾಂಕ್‌ಗಳಿಗೆ ಹೆಚ್ಚಿನ ಅವಕಾಶಗಳು ಇವೆ ಎಂದು ರಾಜೀವ್ ಪ್ರತಿಪಾದಿಸಿದ್ದಾರೆ ಎಂದು ಮೂಲಗಳು ವಿವರಿಸಿವೆ.

ನವೋದ್ಯಮಗಳಿಗೆಂದೇ ಎಸ್‌ಬಿಐ ಭಾರತದಲ್ಲಿ ವಿಶೇಷ ಶಾಖೆ ಆರಂಭಿಸಿದೆ. ನವೋದ್ಯಮಗಳಿಗೆ ಅಡಮಾನ ಇಲ್ಲದೆ ಡಾಲರ್ ಅಥವಾ ಇತರ ವಿದೇಶಿ ಕರೆನ್ಸಿಗಳಲ್ಲಿ ಸಾಲ ಒದಗಿಸುವ ವಿಚಾರವಾಗಿ ಎಸ್‌ಬಿಐ ಜೊತೆ ಸೇರಿ ಕೆಲಸ ಮಾಡಲು ಅವಕಾಶ ಇದೆ. ನವೋದ್ಯಮಗಳು ಅಮೆರಿಕದ ಬ್ಯಾಂಕ್‌ಗಳಲ್ಲಿ ಇರಿಸಿರುವ ಠೇವಣಿಗಳನ್ನು ಅಡಚಣೆ ಉಂಟಾಗದಂತೆ ಭಾರತದ ಬ್ಯಾಂಕ್‌ಗಳಿಗೆ ವರ್ಗಾವಣೆ ಮಾಡಿಕೊಡುವ ನಿಟ್ಟಿನಲ್ಲಿಯೂ ಆಲೋಚನೆ ನಡೆಸಬೇಕು ಎಂದು ಸಲಹೆಯಲ್ಲಿ ಹೇಳಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು