ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶೀಘ್ರದಲ್ಲೇ ಬೆಂಗಳೂರು- ಮಾರಿಷಸ್‌ ನಡುವೆ ನೇರ ವಿಮಾನ ಸೇವೆ

ಮಾರಿಷಸ್‌ ಪ್ರವಾಸೋದ್ಯಮ ಪ್ರಾಧಿಕಾರದಿಂದ ರೋಡ್‌ಶೋ
Published 2 ಸೆಪ್ಟೆಂಬರ್ 2024, 18:20 IST
Last Updated 2 ಸೆಪ್ಟೆಂಬರ್ 2024, 18:20 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರಿನಿಂದ ಮಾರಿಷಸ್‌ಗೆ ನೇರ ವಿಮಾನ ಸಂಪರ್ಕ ಕಲ್ಪಿಸುವ ಕುರಿತು ಮಾತುಕತೆಗಳು ನಡೆಯುತ್ತಿದ್ದು, ಶೀಘ್ರದಲ್ಲಿಯೇ ಈ ಸೇವೆ ಆರಂಭವಾಗಲಿದೆ ಎಂದು ಮಾರಿಷಸ್‌ ಪ್ರವಾಸೋದ್ಯಮ ಅಭಿವೃದ್ಧಿ ಪ್ರಾಧಿಕಾರ (ಮಾರಿಷಸ್‌ ಟೂರಿಸಂ ಪ್ರಮೋಷನ್‌ ಅಥಾರಿಟಿ- ಎಂಟಿಪಿಎ) ನಿರ್ದೇಶಕರಾದ ಅರಿವಿಂದ್‌ ಬಂಧನ್‌ ತಿಳಿಸಿದರು.

ಬೆಂಗಳೂರಿನಲ್ಲಿ ಸೋಮವಾರ ಆರಂಭವಾದ ಮಾರಿಷಸ್‌ ಪ್ರವಾಸೋದ್ಯಮ ಇಲಾಖೆಯ ರೋಡ್‌ಶೋದ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಪ್ರಸ್ತುತ ಭಾರತದ ಚೆನ್ನೈ, ಮುಂಬೈ ಮತ್ತು ದೆಹಲಿಯಿಂದ ಮಾರಿಷಸ್‌ಗೆ ನೇರ ವಿಮಾನಗಳಿವೆ. ಬೆಂಗಳೂರಿನಿಂದಲೂ ಈ ಸೌಲಭ್ಯಕ್ಕೆ ಬೇಡಿಕೆ ಇದೆ. ಈ ಕುರಿತು ಚರ್ಚೆಗಳು ಅಂತಿಮ ಹಂತದಲ್ಲಿವೆ ಎಂದು ಅವರು ತಿಳಿಸಿದರು.

‘ಹಿಂದಿನಿಂದಲೂ ಭಾರತೀಯ ಪ್ರವಾಸಿಗರು ಮಾರಿಷಸ್‌ ಭೇಟಿಗೆ ಉತ್ಸಾಹ ತೋರುತ್ತ ಬಂದಿದ್ದಾರೆ. ಪ್ರತಿವರ್ಷ ಸರಾಸರಿ 50 ಸಾವಿರ ಭಾರತೀಯರು ಮಾರಿಷಸ್‌ಗೆ ಭೇಟಿ ಕೊಡುತ್ತಿದ್ದಾರೆ. ಇದನ್ನು ಇನ್ನಷ್ಟು ತೀವ್ರಗೊಳಿಸಲು ಭಾರತದ ಪ್ರಮುಖ ನಗರಗಳಲ್ಲಿ ರೋಡ್‌ಶೋಗಳನ್ನು ನಡೆಸುತ್ತಿದ್ದು, ದೇಶದಲ್ಲಿರುವ ಹೊಸ ಪ್ರವಾಸೋದ್ಯಮ ಅವಕಾಶಗಳ ಕುರಿತು ವಿವರಿಸಲಾಗುತ್ತಿದೆ’ ಎಂದು ಅರವಿಂದ್‌ ಬಂಧನ್‌ ತಿಳಿಸಿದರು.

ಎಂಟಿಪಿಎ ಇಂಡಿಯಾದ ಕಂಟ್ರಿ ಮ್ಯಾನೇಜರ್‌ ಸುನೀಲ್‌ ಮಠಪತಿ ಮಾತನಾಡಿ, ಭಾರತದಲ್ಲಿ ಮಾರಿಷಸ್‌ನ ರೋಡ್‌ಶೋಗಳಿಗೆ ಉತ್ತೇಜನಕಾರಿ ಪ್ರತಿಕ್ರಿಯೆ ದೊರಕುತ್ತಿದೆ. ಮಾರಿಷಸ್‌ ಕೇವಲ ಬೀಚ್‌ ಪ್ರವಾಸೋದ್ಯಮವಷ್ಟೇ ಅಲ್ಲ. ವಿಲಾಸಿ, ವಾಣಿಜ್ಯ, ಸಾಹಸಿ ಪ್ರವೃತ್ತಿಯ ಪ್ರವಾಸಿಗರಿಗೆ ಮತ್ತು ಜಲಕ್ರೀಡೆಗಳಲ್ಲಿ ಆಸಕ್ತಿ ಹೊಂದಿರುವವರೂ ಸೇರಿದಂತೆ ವೈವಿಧ್ಯಮಯ ಪ್ರವಾಸಿಗರಿಗೆ ಸೂಕ್ತವಾದ ಪ್ರವಾಸೋದ್ಯಮ ಚಟುವಟಿಕೆಗಳನ್ನು ಹೊಂದಿದೆ ಎಂದು ತಿಳಿಸಿದರು.

ಭಾರತೀಯ ಪ್ರವಾಸಿಗರಿಗೆ ‘ವೀಸಾ ಆನ್‌ ಅರೈವಲ್‌’ ಸೌಲಭ್ಯವನ್ನೂ ಮಾರಿಷಸ್‌ ನೀಡುತ್ತಿದೆ. ವೀಸಾ ಶುಲ್ಕವನ್ನೂ ರದ್ದುಗೊಳಿಸಲಾಗಿದೆ. ವೀಸಾ ಪ್ರಕ್ರಿಯೆ ಬಹಳ ಸರಳವಾಗಿದ್ದು, ಭಾರತೀಯ ಪ್ರವಾಸಿಗರಿಗೆ ವಿಶೇಷ ಸೌಲಭ್ಯ ಕಲ್ಪಿಸಲಾಗುತ್ತಿದೆ. ಪ್ರವಾಸೋದ್ಯಮ ಮಾರಿಷಸ್‌ ಅರ್ಥವ್ಯವಸ್ಥೆಯ ಆಧಾರ ಸ್ತಂಭಗಳಲ್ಲಿ ಒಂದಾಗಿದ್ದು, ಪ್ರವಾಸಿಗರಿಗೆ ಎಲ್ಲ ಸೌಲಭ್ಯಗಳನ್ನು ಕಲ್ಪಿಸಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.

ಮಾರಿಷಸ್‌ ಪ್ರವಾಸೋದ್ಯಮ ಪ್ರಾಧಿಕಾರ, ಬೆಂಗಳೂರು, ಹೈದರಾಬಾದ್‌ ಮತ್ತು ಕೋಲ್ಕತ್ತಗಳಲ್ಲಿ ರೋಡ್‌ಶೋ ನಡೆಸುತ್ತಿದ್ದು, ಮೊದಲ ರೋಡ್‌ಶೋ ಬೆಂಗಳೂರಿನಲ್ಲಿ ನಡೆಯಿತು. ಮಾರಿಷಸ್‌ನ ಪ್ರವಾಸೋದ್ಯಮ ಸಚಿವಾಲಯದ 22ಕ್ಕೂ ಹೆಚ್ಚು ಪ್ರತಿನಿಧಿಗಳು, ಸುಮಾರು 100 ಮಂದಿ ಪ್ರವಾಸೋದ್ಯಮ ಪಾಲುದಾರರು ರೋಡ್‌ಶೋದಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT