ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಚ್ಚುವ ಹಂತದಲ್ಲಿ ಶೇ 35ರಷ್ಟು ಸಣ್ಣ ಕೈಗಾರಿಕೆಗಳು

ಕೈಗಾರಿಕೆಗಳಿಗೆ ಗಗನ ಕುಸುಮವಾದ ಪ್ಯಾಕೇಜ್
Last Updated 5 ಜೂನ್ 2020, 19:45 IST
ಅಕ್ಷರ ಗಾತ್ರ

ಬೆಂಗಳೂರು: ಸಣ್ಣ ಮತ್ತು ಅತಿ ಸಣ್ಣ ಕೈಗಾರಿಕೆಗಳಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರ ಘೋಷಣೆ ಮಾಡಿರುವ ಪ್ಯಾಕೇಜ್ ಗಗನಕುಸುಮವಾಗಿದೆ. ಸಂಕಷ್ಟದಲ್ಲಿರುವ ಕೈಗಾರಿಕೆಗಳಿಗೆ ತುರ್ತು ಸಾಲ ಖಾತ್ರಿ ಯೋಜನೆ (ಇಸಿಎಲ್‌ಜಿಎಸ್) ಅಡಿಯಲ್ಲಿ ಸಾಲವೇ ದೊರಕುತ್ತಿಲ್ಲ. ಹೀಗಾಗಿ, ಶೇ 35ರಷ್ಟು ಕೈಗಾರಿಕೆಗಳು ಮುಚ್ಚುವ ಆತಂಕದಲ್ಲಿವೆ.

ಸಂಕಷ್ಟದಿಂದ ಸಣ್ಣ ಕೈಗಾರಿಕೆಗಳನ್ನು ಮೇಲೆತ್ತಲು ₹3 ಲಕ್ಷ ಕೋಟಿ ಸಾಲ ಸೌಲಭ್ಯ ನೀಡುವುದಾಗಿ ಕೇಂದ್ರ ಸರ್ಕಾರ ಘೋಷಣೆ ಮಾಡಿದೆ. ಆದರೆ, ಈ ಸಾಲ ಪಡೆಯುವುದು ಕೈಗಾರಿಕೆಗಳ ಪಾಲಿಗೆ ಮರೀಚಿಕೆಯಾಗಿದೆ. ಈ ಯೋಜನೆಗೆ ಏಕರೂಪದ ಮಾರ್ಗಸೂಚಿ ಇಲ್ಲ. ಒಂದೊಂದು ಬ್ಯಾಂಕ್‌ಗಳು ಒಂದೊಂದು ಮಾರ್ಗಸೂಚಿ ಮಾಡಿಕೊಂಡಿವೆ.

‘ಕಳೆದ ಸಾಲಿನಲ್ಲಿ ಕೈಗಾರಿಕೆಗಳು ಸುಸ್ಥಿತಿಯಲ್ಲಿದ್ದವೇ? ಸಾಲದ ಕಂತುಗಳನ್ನು ತಪ್ಪದೆ ಪಾವತಿ ಮಾಡಲಾಗಿದೆಯೇ? ಎಂಬುದನ್ನು ಪರಿಗಣಿಸಲಾಗುತ್ತಿದೆ. ಕ್ರಿಸಿಲ್ ರೇಟ್ ಮತ್ತು ಸಿಬಿಲ್ ರೇಟ್‌ ಉತ್ತಮವಾಗಿದ್ದರೆ ಮಾತ್ರ ಸಾಲ ದೊರೆಯುತ್ತದೆ. ಕಳೆದ ಸಾಲಿನಲ್ಲಿ ಆರ್ಥಿಕ ಹಿಂಜರಿತ ಉಂಟಾಗಿದ್ದ ಕಾರಣ ಬಹುತೇಕ ಸಣ್ಣ ಕೈಗಾರಿಕೆಗಳಲ್ಲಿ ತಯಾರಾಗುವ ಉತ್ಪನ್ನಗಳಿಗೆ ಬೇಡಿಕೆಯೇ ಇರಲಿಲ್ಲ. ಐಸಿಯು ಸೇರಿದ್ದ ಸಣ್ಣ ಕೈಗಾರಿಕೆಗಳಲ್ಲಿ ಕ್ರಿಸಿಲ್ ರೇಟ್ ಮತ್ತು ಸಿಬಿಲ್ ರೇಟ್ ಉತ್ತಮವಾಗಿರಲು ಹೇಗೆ ಸಾಧ್ಯ’ ಎಂಬುದು ಕೈಗಾರಿಕೋದ್ಯಮಿಗಳ ಪ್ರಶ್ನೆ.

‘ಆರ್ಥಿಕವಾಗಿ ಸುಸ್ಥಿತಿಯಲ್ಲಿ ಇರುವ ಕೈಗಾರಿಕೆಗಳಿಗಷ್ಟೇ ಬ್ಯಾಂಕ್‌ಗಳು ಸಾಲ ನೀಡುವುದಾದರೆ ಸಂಕಷ್ಟದಲ್ಲಿರುವ ಕೈಗಾರಿಕೆಗಳ ಪುನರುಜ್ಜೀವನ ಹೇಗೆ? ಈಗಾಗಲೇ ಶೇ 35ರಷ್ಟು ಕೈಗಾರಿಕೆಗಳು ಬಾಗಿಲು ಮುಚ್ಚುವ ಹಂತದಲ್ಲಿವೆ. ಬ್ಯಾಂಕ್‌ಗಳು ಈ ಧೋರಣೆ ಬಿಡದಿದ್ದರೆ ಶೇ 50ರಷ್ಟು ಕೈಗಾರಿಕೆಗಳು ಶಾಶ್ವತವಾಗಿ ಮುಚ್ಚಲಿವೆ. 30 ಲಕ್ಷ ಜನರು ಉದ್ಯೋಗ ಕಳೆದುಕೊಳ್ಳಲಿದ್ದಾರೆ’ ಎಂದು ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಆರ್. ರಾಜು ಆತಂಕ ವ್ಯಕ್ತಪಡಿಸಿದರು.

ವಿದ್ಯುತ್ ಶುಲ್ಕ ಮನ್ನಾ: ಹಲವು ತೊಡಕು
ಲಾಕ್‌ಡೌನ್ ಆಗಿದ್ದರಿಂದ ಎರಡು ತಿಂಗಳ ನಿಗದಿತ ಕನಿಷ್ಠ ವಿದ್ಯುತ್ ಶುಲ್ಕವನ್ನು ರಾಜ್ಯ ಸರ್ಕಾರ ಮನ್ನಾ ಮಾಡಿದೆ. ವಿದ್ಯುತ್ ಸರಬರಾಜು ಕಂಪನಿಗಳು ಹಲವು ಷರತ್ತುಗಳನ್ನು ವಿಧಿಸಿರುವುದರಿಂದ ಅದರ ಲಾಭ ಪಡೆಯಲು ಕೈಗಾರಿಕೆಗಳಿಗ ಸಾಧ್ಯವಾಗುತ್ತಿಲ್ಲ.

‘ಉದ್ಯೋಗಾಧಾರ ಪ್ರಮಾಣ ಪತ್ರ ಮತ್ತು ನೋಟರಿಯಿಂದ ಅಫಿಡವಿಟ್ ತರಬೇಕು ಎಂದು ಕೈಗಾರಿಕೆಗಳ ಮಾಲೀಕರಿಗೆ ಅಧಿಕಾರಿಗಳು ಹೇಳುತ್ತಿದ್ದಾರೆ. ₹500ರಿಂದ ₹1,000 ವಿದ್ಯುತ್ ಶುಲ್ಕ ಮನ್ನಾ ಮಾಡಿಸಿಕೊಳ್ಳಲು ಅಷ್ಟೇ ಹಣ ಖರ್ಚು ಮಾಡಬೇಕಾದ ಸ್ಥಿತಿ ಇದೆ’ ಎಂದು ಕೈಗಾರಿಕೋದ್ಯಮಿಗಳು ಬೇಸರ ವ್ಯಕ್ತಪಡಿಸುತ್ತಾರೆ.

‘ವಿದ್ಯುತ್ ಶುಲ್ಕ ಪಾವತಿಸದಿದ್ದರೂ ಜೂನ್ 30ರವರೆಗೆ ಸಂಪರ್ಕ ಕಡಿತ ಮಾಡದಂತೆ ಸರ್ಕಾರ ಹೇಳಿದೆ. ಆದರೆ, ಈಗಾಗಲೇ ಬೆಸ್ಕಾಂ ಅಧಿಕಾರಿಗಳು ಸಂಪರ್ಕ ಕಡಿತ ಪ್ರಕ್ರಿಯೆ ಆರಂಭಿಸಿದ್ದಾರೆ. ಎರಡು ತಿಂಗಳ ವಿದ್ಯುತ್ ಶುಲ್ಕವನ್ನು ಠೇವಣಿ ಇಡಬೇಕೆಂದು ನೋಟಿಸ್ ನೀಡಲಾಗುತ್ತಿದೆ’ ಎಂದು ದೂರುತ್ತಾರೆ.

‘ಮೊದಲೇ ಕಷ್ಟದಲ್ಲಿರುವ ಕೈಗಾರಿಕೆಗಳಿಗೆ ನೆರವಾಗುವ ಬದಲು ಗಾಯದ ಮೇಲೆ ಬರೆ ಎಳೆಯುವ ಕೆಲಸವನ್ನು ಎಸ್ಕಾಂಗಳು ಮಾಡುತ್ತಿವೆ. ಸರ್ಕಾರ ಹೇಳಿದರೂ ಅಧಿಕಾರಿಗಳು ಕೇಳುತ್ತಿಲ್ಲ. ಇಂಧನ ಇಲಾಖೆ ಸರಿಯಾದ ಮಾರ್ಗಸೂಚಿಯನ್ನೇ ಸಿದ್ಧಪಡಿಸಿಲ್ಲ’ ಎಂಬುದು ಕೈಗಾರಿಕೋದ್ಯಮಿಗಳ ದೂರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT