2ಜಿ ಕೈಬಿಡಲು ನೀತಿ ಬೇಕು: ಮುಕೇಶ್ ಅಂಬಾನಿ

ನವದೆಹಲಿ: 25 ವರ್ಷಗಳ ಹಿಂದೆ ಶುರುವಾದ 2–ಜಿ ದೂರಸಂಪರ್ಕ ವ್ಯವಸ್ಥೆಯ ಬಳಕೆಯನ್ನು ಕೈಬಿಡಲು ನೀತಿ ನಿರೂಪಣೆ ಹಂತದಲ್ಲಿ ತುರ್ತಾಗಿ ಕ್ರಮ ಕೈಗೊಳ್ಳಬೇಕಾದ ಅಗತ್ಯ ಇದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಹೇಳಿದರು.
ಭಾರತ ಮತ್ತು ಜಗತ್ತು 5–ಜಿ ದೂರಸಂಪರ್ಕ ವ್ಯವಸ್ಥೆಯ ಕಡೆ ಮುಖ ಮಾಡುತ್ತಿರುವ ಸಂದರ್ಭದಲ್ಲಿ, 2–ಜಿ ಯುಗದ ಫೀಚರ್ ಫೋನ್ಗಳು ಭಾರತದ 30 ಕೋಟಿ ಚಂದಾದಾರರನ್ನು ಮೂಲಭೂತ ಇಂಟರ್ನೆಟ್ ಸೇವೆಗಳಿಂದ ದೂರ ಇರಿಸಿವೆ ಎಂದು ಅಂಬಾನಿ ಹೇಳಿದರು. ಭಾರತದಲ್ಲಿ ಮಾಡಿದ ಮೊದಲ ಮೊಬೈಲ್ ದೂರವಾಣಿ ಕರೆಯ ಬೆಳ್ಳಿಹಬ್ಬದ ಆಚರಣೆ ಸಂದರ್ಭದಲ್ಲಿ ಅವರು ಈ ಮಾತು ಹೇಳಿದರು.
‘ರಿಲಯನ್ಸ್ ಜಿಯೊ ಕಂಪನಿಯು ಕೈಗೆಟಕುವ ಬೆಲೆಯ ಸ್ಮಾರ್ಟ್ಫೋನ್ಗಳನ್ನು ಮಾರುಕಟ್ಟೆಗೆ ತಂದು, ಫೀಚರ್ ಫೋನ್ ಬಳಸುತ್ತಿರುವವರು ಈ ಸ್ಮಾರ್ಟ್ಫೋನ್ ಬಳಸುವಂತೆ ಮಾಡಲಿದೆ. ಆ ಮೂಲಕ ಭಾರತವನ್ನು ‘2–ಜಿ ಮುಕ್ತ’ವಾಗಿಸಲಿದೆ’ ಎಂದು ಮುಕೇಶ್ ಅಂಬಾನಿ ಅವರು ಈ ಹಿಂದೆ ಹೇಳಿದ್ದರು.
ಮೊಬೈಲ್ ಫೋನ್ಗಳು ಈಗ ಎಲ್ಲರ ನಿರೀಕ್ಷೆಗಳನ್ನು ಮೀರಿ ಅಗ್ಗವಾಗಿವೆ. 1995ರಲ್ಲಿ ಒಂದು ಮೊಬೈಲ್ ಫೋನ್ನಿಂದ ಕರೆ ಮಾಡಲು ನಿಮಿಷಕ್ಕೆ ₹ 24 ವೆಚ್ಚ ಆಗುತ್ತಿತ್ತು. ಕರೆ ಮಾಡಿದವರು ₹ 16, ಕರೆ ಸ್ವೀಕರಿಸಿದವರು ₹ 8 ಪಾವತಿಸಬೇಕಿತ್ತು. ಈಗ ಧ್ವನಿ ಕರೆಗಳು ಉಚಿತವಾಗಿವೆ ಎಂದು ಅಂಬಾನಿ ಹೇಳಿದರು.
‘ಜನ ಈಗ ಫೋನ್ ಬಳಸಿ ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ, ಮನೆಯಲ್ಲಿ ಇದ್ದೇ ಪಾಠ ಹೇಳಿಸಿಕೊಳ್ಳುತ್ತಿದ್ದಾರೆ. ಸಭೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಮೊಬೈಲ್ ಫೋನ್ಗಳು ಜನರನ್ನು ಹೇಗೆ ಸಶಕ್ತಗೊಳಿಸಬಲ್ಲವು ಎಂಬುದನ್ನು ಕೋವಿಡ್–19 ಲಾಕ್ಡೌನ್ ಸಂದರ್ಭವು ತೋರಿಸಿಕೊಟ್ಟಿದೆ’ ಎಂದು ಅವರು ಹೇಳಿದರು.
ಪ್ರಜಾವಾಣಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.