ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಲ ಮುಕ್ತಗೊಳ್ಳಲು 30 ವರ್ಷಗಳಲ್ಲಿ ಮೊದಲ ಬಾರಿಗೆ ರಿಲಯನ್ಸ್‌ ಹಕ್ಕಿನ ಷೇರು ಮಾರಾಟ

Last Updated 28 ಏಪ್ರಿಲ್ 2020, 6:40 IST
ಅಕ್ಷರ ಗಾತ್ರ

ಮುಂಬೈ: ಅತಿ ಹೆಚ್ಚು ಮಾರುಕಟ್ಟೆ ಮೌಲ್ಯ ಹೊಂದಿರುವ ದೇಶದ ಬೃಹತ್‌ ಕಂಪನಿ ರಿಲಯನ್ಸ್‌ ಇಂಡಸ್ಟ್ರೀಸ್‌, ಹೂಡಿಕೆದಾರರಿಗೆ ರಿಯಾಯಿತಿ ದರದಲ್ಲಿ ಷೇರುಗಳನ್ನು ಮಾರಾಟ ಮಾಡಲು ಮುಂದಾಗಿದೆ. ಹಕ್ಕಿನ ಷೇರು (ರೈಟ್ಸ್‌ ಇಶ್ಯೂ) ಪ್ರಕ್ರಿಯೆಯ ಮೂಲಕ 30 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಹಣ ಸಂಗ್ರಹಿಸುವ ಪ್ರಯತ್ನಕ್ಕೆ ಮುಂದಾಗಿದೆ.

ಇಂಧನ ಕ್ಷೇತ್ರದಿಂದ ತಂತ್ರಜ್ಞಾನದತ್ತ ಮುಖಮಾಡಿರುವ ರಿಲಯನ್ಸ್‌ ಇಂಡಸ್ಟ್ರೀಸ್‌ ಸಂಪೂರ್ಣ ಸಾಲದ ಹೊರೆಯನ್ನು ಇಳಿಸಿಕೊಳ್ಳಲು ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಈಗಾಗಲೇ ಕಂಪನಿಯಲ್ಲಿ ಹೂಡಿಕೆ ಮಾಡಿರುವವರಿಗೆ ರೈಟ್ಸ್‌ ಇಶ್ಯೂ ಮೂಲಕ ರಿಯಾಯಿತಿ ದರದಲ್ಲಿ ಷೇರುಗಳನ್ನು ಮಾರಾಟ ಮಾಡುವ ಪ್ರಸ್ತಾವನೆಯನ್ನು ಏಪ್ರಿಲ್‌ 30ರಂದು ಪರಿಗಣಿಸಲಿದೆ. ಮಾರ್ಚ್‌ 31ರ ವರೆಗಿನ ತ್ರೈಮಾಸಿಕ ಗಳಿಕೆಯ ಘೋಷಣೆಯು ಅಂದೇ ಆಗಲಿದೆ ಎಂದು ಸೋಮವಾರ ಪ್ರಕಟಣೆಯಲ್ಲಿ ತಿಳಿಸಿದೆ. ಇದರ ಪರಿಣಾಮ ವಹಿವಾಟು ಆರಂಭದಲ್ಲಿ ರಿಲಯನ್ಸ್‌ ಇಂಡಸ್ಟ್ರೀಸ್‌ ಷೇರು ಶೇ 2.1ರಷ್ಟು ಕುಸಿಯಿತು.

ಕೊರೊನಾ ವೈರಸ್‌ ಸೋಂಕು ಸಾಂಕ್ರಾಮಿಕದಿಂದಾಗಿ ತೈಲ ವಲಯ ತೀವ್ರ ಕುಸಿತಕ್ಕೆ ಒಳಗಾಗಿದ್ದರೂ ರಿಲಯನ್ಸ್ ಮುಖ್ಯಸ್ಥ ಮುಕೇಶ್‌ ಅಂಬಾನಿ ಅತ್ಯಂತ ವಿಶ್ವಾಸದಿಂದ ಮುಂದಿನ ಯೋಜನೆಗಳತ್ತ ಗಮನ ಹರಿಸಿದ್ದಾರೆ. ಮೂರನೇ ಬಾರಿಗೆ ಕಂಪನಿ ಹಣ ಸಂಗ್ರಹಿಸುವ ಪ್ರಸ್ತಾಪವನ್ನು ಮುಂದಿಟ್ಟಿದೆ. ಫೇಸ್‌ಬುಕ್‌ ರಿಲಯನ್ಸ್‌ ಜಿಯೊದಲ್ಲಿ ₹43,574 ಕೋಟಿ ಹೂಡಿಕೆ ಮಾಡಿರುವುದನ್ನು ಇತ್ತೀಚೆಗಷ್ಟೇ ಬಹಿರಂಗ ಪಡಿಸಿತ್ತು ಹಾಗೂ ಪರಿವರ್ತಿಸಲಾಗದ ಸಾಲಪತ್ರಗಳ ಮೂಲಕ ₹25,000 ಕೋಟಿ ಸಂಗ್ರಹಿಸುವುದಾಗಿ ಏಪ್ರಿಲ್‌ ಆರಂಭದಲ್ಲಿ ತಿಳಿಸಿತ್ತು.

'ಸಾಲ ಮುಕ್ತ ಕಂಪನಿಯಾಗುವ ನಿಟ್ಟಿನಲ್ಲಿ ಇದು ಮತ್ತೊಂದು ಹೆಜ್ಜೆಯಾಗಿದೆ' ಎಂದು ಐಡಿಬಿಐ ಕ್ಯಾಪಿಟಲ್‌ ಮಾರ್ಕೆಟ್‌ ಸರ್ವೀಸಸ್‌ ಲಿಮಿಟೆಡ್‌ನ ಸಂಶೋಧನಾ ಕೇಂದ್ರದ ಮುಖ್ಯಸ್ಥ ಸುದೀಪ್‌ ಆನಂದ್‌ ಅಭಿಪ್ರಾಯ ಪಟ್ಟಿದ್ದಾರೆ. ಫೇಸ್‌ಬುಕ್‌ ಹೂಡಿಕೆಯ ನಂತರವೂ ರಿಲಯನ್ಸ್‌ ಸಾಲ ಮುಕ್ತವಾಗಲು ₹1.1 ಲಕ್ಷ ಕೋಟಿ ಹಣ ಸಂಗ್ರಹಿಸುವ ಅವಶ್ಯಕತೆ ಇದೆ ಎಂದಿದ್ದಾರೆ.

ಮಾರ್ಚ್‌ 2019ರ ವರೆಗೂ ಕಂಪನಿಯ ಸಾಲ20 ಬಿಲಿಯನ್‌ ಡಾಲರ್‌ (ಸುಮಾರು ₹1.52 ಲಕ್ಷ ಕೋಟಿ) ಇರುವುದಾಗಿ ಮುಕೇಶ್‌ ಅಂಬಾನಿ ಕಳೆದ ಆಗಸ್ಟ್‌ನಲ್ಲಿ ಷೇರುದಾರರಿಗೆ ತಿಳಿಸಿದ್ದರು ಹಾಗೂ 2021ರ ವೇಳೆಗೆ ಸಾಲ ಪ್ರಮಾಣವನ್ನು ಶೂನ್ಯಕ್ಕೆ ತರುವ ಉದ್ದೇಶ ಹೊಂದಲಾಗಿದೆ ಎಂದಿದ್ದರು. ತೈಲ ಸಂಸ್ಕರಣ ಮತ್ತು ರಾಸಾಯನಿಕ ಘಟಕವನ್ನು ಸೌದಿ ಅರೇಬಿಯಾದ ತೈಲ ಕಂಪನಿಗೆ ಅಂದಾಜು 15 ಬಿಲಿಯನ್‌ ಡಾಲರ್‌ ಪಾಲುದಾರಿಗೆಯನ್ನು ಮಾರಾಟ ಮಾಡಲು ಉದ್ದೇಶಿಸಲಾಗಿದೆ. ಆದರೆ, ಕಚ್ಚಾ ತೈಲ ದರ ಕುಸಿತ ಹಾಗೂ ಕೋವಿಡ್‌–19 ಪರಿಣಾಮ ಮಾರಾಟ ಪ್ರಸ್ತಾವನೆ ಬಾಕಿಯಾಗಿದೆ.

ರಿಲಯನ್ಸ್‌ ಇಂಡಸ್ಟ್ರೀಸ್‌ ಷೇರು ಬೆಲೆ ಈ ವರ್ಷ ಶೇ 7.4ರಷ್ಟು ಇಳಿಕೆಯಾಗಿದೆ. ಪ್ರಸ್ತುತ ಷೇರುದಾರರಿಗೆ ಕಂಪನಿಯ ಷೇರುಗಳನ್ನು ಮಾರಾಟ ಮಾಡುವ ಹಣ ಸಂಗ್ರಹಿಸುತ್ತಿರುವುದು, ಕಂಪನಿಯ 29 ವರ್ಷಗಳ ಇತಿಹಾಸದಲ್ಲಿಯೇ ಮೊದಲು ಎನ್ನಲಾಗಿದೆ.

ಮಂಗಳವಾರ ಸೆನ್ಸೆಕ್ಸ್‌ 144.17 ಅಂಶ ಏರಿಕೆಯೊಂದಿಗೆ 31,887.25 ಅಂಶಗಳಲ್ಲಿ ವಹಿವಾಟು ನಡೆದಿದೆ ಹಾಗೂ ನಿಫ್ಟಿ 37.80 ಅಂಶ ಚೇತರಿಕೆಯೊಂದಿಗೆ 9,320.10 ಅಂಶಗಳಲ್ಲಿ ವಹಿವಾಟು ಮುಂದುವರಿದಿದೆ. ರಿಲಯನ್ಸ್‌ ಷೇರು ಬೆಲೆ 24.75 (ಶೇ 1.73) ಕಡಿಮೆಯಾಗಿ ₹1,405 ತಲುಪಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT