ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

6,000 ಕ್ರಿಪ್ಟೋಕರೆನ್ಸಿಗಳಲ್ಲಿ ಕೆಲವು ಮಾತ್ರ ಉಳಿಯಲಿವೆ: ರಘುರಾಮ್ ರಾಜನ್

Last Updated 24 ನವೆಂಬರ್ 2021, 10:56 IST
ಅಕ್ಷರ ಗಾತ್ರ

ನವದೆಹಲಿ: ಸದ್ಯದ ಕ್ರಿಪ್ಟೋಕರೆನ್ಸಿ ಬಗೆಗಿನ ಉನ್ಮಾದವು 17ನೇ ಶತಮಾನದಲ್ಲಿ ನೆದ‌ರ್ಲೆಂಡ್‌ನಲ್ಲಿದ್ದ ತುಲಿಪ್ ಬಲ್ಬ್(ಫ್ಯಾಶನ್ ಹೂವಿನ ಗಿಡದ ಕಾಯಿ)ಉನ್ಮಾದದೊಂದಿಗೆ ಸಾಮ್ಯತೆ ಹೊಂದಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮಾಜಿ ಗವರ್ನರ್ ರಘುರಾಮ್ ರಾಜನ್ ಹೇಳಿದ್ದಾರೆ. ಇಂದು ಅಸ್ತಿತ್ವದಲ್ಲಿರುವ 6,000 ಕ್ರಿಪ್ಟೋಕರೆನ್ಸಿಗಳಲ್ಲಿ ಬೆರಳೆಣಿಕೆಯಷ್ಟು ಮಾತ್ರ ಉಳಿದುಕೊಳ್ಳಲಿವೆ ಎಂದು ಅವರು ಹೇಳಿದ್ಧಾರೆ.

ಸಿಎನ್‌ಬಿಸಿ-ಟಿವಿ18 ಜೊತೆಗಿನ ಸಂದರ್ಶನದಲ್ಲಿ, ಮಾತನಾಡಿದ ರಾಜನ್, ‘ಯಾವುದೇ ವಸ್ತುಗಳು ಮೌಲ್ಯವನ್ನು ಹೊಂದಿದ್ದರೆ ಮಾತ್ರ ಅವುಗಳಿಗೆ ಬೆಲೆ ಇರುತ್ತದೆ. ಹೆಚ್ಚಿನ ಸಂಖ್ಯೆಯ ಮೂರ್ಖರು ಖರೀದಿಸಲು ಸಿದ್ಧರಿರುವುದರಿಂದ ಬಹಳಷ್ಟು ಕ್ರಿಪ್ಟೋಕರೆನ್ಸಿಗಳು ಮೌಲ್ಯವನ್ನು ಹೊಂದಿವೆ’ಎಂದು ಅವರು ಹೇಳಿದ್ಧಾರೆ.

17ನೇ ಶತಮಾನದಲ್ಲಿ 1634ರ ಹೊತ್ತಿಗೆ ನೆದರ್ಲೆಂಡ್‌ನಲ್ಲಿ ತುಲಿಪ್ ಬಲ್ಬ್(ಫ್ಯಾಶನ್ ಹೂವಿನ ಗಿಡದ ಕಾಯಿ)ಗಳ ಬೆಲೆಗಳು ಅಸಾಧಾರಣವಾದ ಮಟ್ಟಕ್ಕೆ ತಲುಪಿದ್ದವು. ಬಳಿಕ 1637ರಲ್ಲಿ ಅವುಗಳ ಬೆಲೆ ನಾಟಕೀಯವಾಗಿ ಕುಸಿಯಿತು ಎಂದು ಅವರು ಹೇಳಿದ್ದಾರೆ.

‘ಕ್ರಿಪ್ಟೋಕರೆನ್ಸಿಯೂ ಸಹ ಅದೇ ರೀತಿಯ ಸಮಸ್ಯೆ ಎದುರಿಸಲಿದೆ. ಅನಿಯಂತ್ರಿತವಾಗಿ ನಡೆಯುತ್ತಿರುವ ಈ ಹಣಕಾಸು ವ್ಯವಹಾರಕ್ಕೆ ತಡೆ ಬೀಳಲಿದೆ. ಕ್ರಿಪ್ಟೋ ಸಂಪತ್ತು ಹೊಂದಿರುವ ಬಹಳಷ್ಟು ಜನರು ಸಂಕಟಕ್ಕೀಡಾಗಲಿದ್ದಾರೆ’ಎಂದು ಅವರು ಹೇಳಿದ್ದಾರೆ.

ಇದರರ್ಥ ಕ್ರಿಪ್ಟೋಕರೆನ್ಸಿಗಳಿಗೆ ಯಾವುದೇ ಮೌಲ್ಯವಿರುವುದಿಲ್ಲ ಎಂಬುದಲ್ಲ, ಅವುಗಳಲ್ಲಿ ಕೆಲವು ಪಾವತಿಗಳನ್ನು ಮಾಡಲು ಬಳಕೆಯಾಗುವ ಮೂಲಕ ಉಳಿದುಕೊಳ್ಳಬಹುದು. ವಿಶೇಷವಾಗಿ ಗಡಿಯಾಚೆಗಿನ ಪಾವತಿ ಎಂದು ಅವರು ಹೇಳಿದ್ದಾರೆ.

ಈ ವ್ಯವಸ್ಥೆಯನ್ನು ಹೇಗೆ ನಿಯಂತ್ರಿಸಬೇಕೆಂಬುದರ ಬಗ್ಗೆ ನಿಯಂತ್ರಕರರಿಗೆ ಸಂಪೂರ್ಣವಾಗಿ ಅರ್ಥವಾಗದ ಕಾರಣ ಸಮಸ್ಯೆ ತಲೆದೋರುತ್ತಿದೆ ಎಂದು ರಾಜನ್ ಹೇಳಿದ್ಧಾರೆ.

ಸಂಸತ್ತಿನಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಕೇಂದ್ರ ಸರ್ಕಾರವು ಕ್ರಿಪ್ಟೋಕರೆನ್ಸಿ ನಿಷೇಧಿಸುವ ಮಸೂದೆ ಮಂಡನೆ ಮಾಡುತ್ತಿದೆ ಎಂಬ ವರದಿಗಳ ಬೆನ್ನಲ್ಲೇ ರಘುರಾಮ್ ರಾಜನ್ ಈ ಹೇಳಿಕೆ ನೀಡಿದ್ದಾರೆ.

‘ಕ್ರಿಪ್ಟೋಕರೆನ್ಸಿ ಮತ್ತು ಅಧಿಕೃತ ಡಿಜಿಟಲ್ ಕರೆನ್ಸಿ ನಿಯಂತ್ರಣ ಮಸೂದೆ 2021’ ಅನ್ನು ಪರಿಚಯಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಇದರ ಜೊತೆಗೆ ಆರ್‌ಬಿಐ ಮೂಲಕ ಅಧಿಕೃತ ಡಿಜಿಟಲ್ ಕರೆನ್ಸಿ ಸೃಷ್ಟಿಗೆ ಬೇಕಾದ ಫ್ರೇಮ್‌ವರ್ಕ್ ಸಿದ್ಧತೆಗೂ ಈ ಕಾಯ್ದೆ ಅನುವುಮಾಡಿಕೊಡಲಿದೆ.

‘ಮಸೂದೆಯು ಭಾರತದಲ್ಲಿ ಎಲ್ಲಾ ಖಾಸಗಿ ಕ್ರಿಪ್ಟೋಕರೆನ್ಸಿಗಳನ್ನು ನಿಷೇಧಿಸುತ್ತದೆ. ಆದರೆ, ಕ್ರಿಪ್ಟೋಕರೆನ್ಸಿಯ ಆಧಾರವಾಗಿರುವ ತಂತ್ರಜ್ಞಾನ ಮತ್ತು ಅದರ ಬಳಕೆಗಳನ್ನು ಉತ್ತೇಜಿಸಲು ಕೆಲವು ವಿನಾಯಿತಿಗಳನ್ನು ಇದು ಅನುಮತಿಸುತ್ತದೆ’ಎಂದು ಅಧಿಕೃತ ದಾಖಲೆ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT