ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೆಟ್ರೋಲ್‌, ಡೀಸೆಲ್‌ ದರ ಮತ್ತೆ ಏರಿಕೆ: ನಾಲ್ಕು ದಿನಗಳಲ್ಲಿ ₹2.40 ಹೆಚ್ಚಳ

Last Updated 25 ಮಾರ್ಚ್ 2022, 2:39 IST
ಅಕ್ಷರ ಗಾತ್ರ

ನವದೆಹಲಿ: ಪೆಟ್ರೋಲ್‌ ಮತ್ತು ಡೀಸೆಲ್‌ ದರವು ಶುಕ್ರವಾರ 80 ಪೈಸೆಯಷ್ಟು ಏರಿಕೆಯಾಗಿದೆ. ಕಳೆದ ನಾಲ್ಕು ದಿನಗಳಲ್ಲಿ ಮೂರನೇ ಬಾರಿಗೆ ದರ ಏರಿಕೆಯಾಗಿದೆ. ಈ ಹಿಂದೆ ಮಂಗಳವಾರ, ಬುಧವಾರ ದರ ಏರಿಸಲಾಗಿತ್ತು. ಐದು ರಾಜ್ಯಗಳ ಚುನಾವಣೆಗೂ ಮುನ್ನ ತೈಲ ಕಂಪನಿಗಳು ದರ ಹೆಚ್ಚಳವನ್ನು ತಡೆ ಹಿಡಿಯುವ ಮೂಲಕ ಆಗಿದ್ದ ನಷ್ಟವನ್ನು ಈಗ ಸರಿದೂಗಿಸಿಕೊಳ್ಳಲು ಮುಂದಾಗಿವೆ.

ದೆಹಲಿಯಲ್ಲಿ ಈಗ ಪ್ರತಿ ಲೀಟರ್‌ ಪೆಟ್ರೋಲ್‌ ದರ ₹97.81 ಮತ್ತು ಡೀಸೆಲ್‌ ದರ ₹89.07 ತಲುಪಿದೆ. ಸುಮಾರು ನಾಲ್ಕೂವರೆ ತಿಂಗಳ ಅಂತರದ ಬಳಿಕ ಮಾರ್ಚ್‌ 22ರಿಂದ ಪೆಟ್ರೋಲ್‌, ಡೀಸೆಲ್‌ ದರ ಹೆಚ್ಚಿಸಲಾಗುತ್ತಿದೆ. ನಾಲ್ಕು ದಿನಗಳಲ್ಲಿ ತೈಲ ದರ ಪ್ರತಿ ಲೀಟರ್‌ಗೆ ಒಟ್ಟು ₹2.40ರಷ್ಟು ಹೆಚ್ಚಳ ಕಂಡಿದೆ.

ಬೆಂಗಳೂರಿನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಕ್ರಮವಾಗಿ ಲೀಟರ್‌ಗೆ 85 ಮತ್ತು 79 ಪೈಸೆ ಏರಿಕೆಯಾಗಿದೆ. ಅದರಂತೆ, ಪೆಟ್ರೋಲ್‌ ದರ ಲೀಟರಿಗೆ ₹103.11 ಮತ್ತು ಡೀಸೆಲ್ ದರ ಲೀಟರಿಗೆ ₹87.37 ಆಗಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಕಚ್ಚಾ ತೈಲದ ಬೆಲೆಗೆ ಅನುಗುಣವಾಗಿ ದೇಶಿ ಮಾರುಕಟ್ಟೆಯಲ್ಲಿ ಪೆಟ್ರೋಲ್ ಬೆಲೆ ನಿಗದಿ ಮಾಡುವ ವ್ಯವಸ್ಥೆಯು 2017ರ ಜೂನ್‌ನಲ್ಲಿ ಜಾರಿಗೆ ಬಂತು. ಆದರೆ, ಉತ್ತರ ಪ್ರದೇಶ, ಪಂಜಾಬ್‌ ಸೇರಿದಂತೆ ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಘೋಷಣೆಯಾದ ಬೆನ್ನಲ್ಲೇ 2021ರ ನವೆಂಬರ್‌ 4ರಿಂದ ತೈಲ ದರ ಏರಿಕೆಯನ್ನು ತಡೆಯಲಾಗಿತ್ತು. 137 ದಿನಗಳಲ್ಲಿ ಕಚ್ಚಾ ತೈಲ ದರವು ಪ್ರತಿ ಬ್ಯಾರೆಲ್‌ಗೆ 30 ಡಾಲರ್‌ಗಳಷ್ಟು ಏರಿಕೆಯಾಗಿದೆ.

ಆ ಅವಧಿಯಲ್ಲಿ ತೈಲ ರಿಟೇಲ್‌ ಮಾರಾಟ ಕಂಪನಿಗಳಾದ ಐಒಸಿ, ಬಿಪಿಸಿಎಲ್‌ ಹಾಗೂ ಎಚ್‌ಪಿಸಿಲ್‌ ತಮ್ಮ ಆದಾಯದಲ್ಲಿ ಒಟ್ಟು ₹19,000 ಕೋಟಿ ನಷ್ಟ ಮಾಡಿಕೊಂಡಿರುವುದಾಗಿ ಮೂಡೀಸ್‌ ಇನ್ವೆಸ್ಟರ್‌ ಸರ್ವೀಸಸ್ ವಿಶ್ಲೇಷಿಸಿದೆ.

ಭಾರತದಲ್ಲಿ ಅಗತ್ಯವಿರುವ ಒಟ್ಟು ತೈಲದ ಪ್ರಮಾಣದಲ್ಲಿ ಶೇಕಡ 85ರಷ್ಟು ಆಮದು ಮಾಡಿಕೊಳ್ಳಲಾಗುತ್ತಿದೆ.

ಗುರುವಾರ ದೆಹಲಿಯಲ್ಲಿ ಸಿಎನ್‌ಜಿ ದರ ಪ್ರತಿ ಕೆಜಿಗೆ ಒಂದು ರೂಪಾಯಿ ಹೆಚ್ಚಿಸಲಾಗಿದೆ. ಪ್ರತಿ ಕೆಜಿ ಸಿಎನ್‌ಜಿ ದರ 59.01 ರೂಪಾಯಿ ಮತ್ತು ಕೊಳವೆ ಮೂಲಕ ಮನೆಗಳಿಗೆ ಪೂರೈಕೆಯಾಗುತ್ತಿರುವ ಅಡುಗೆ ಅನಿಲ (ಪಿಎನ್‌ಜಿ) ಪ್ರತಿ ಕ್ಯೂಬಿಕ್‌ ಮೀಟರ್‌ಗೆ 36.61 ರೂಪಾಯಿ ತಲುಪಿದೆ. ಬುಧವಾರ ಗೃಹ ಬಳಕೆ ಎಲ್‌ಪಿಜಿ ಸಿಲಿಂಡರ್‌ ದರ 50 ರೂಪಾಯಿ ಹೆಚ್ಚಿಸಲಾಗಿತ್ತು.

ಕಚ್ಚಾ ತೈಲ ದರ ಪ್ರತಿ ಬ್ಯಾರೆಲ್‌ಗೆ 100ರಿಂದ 120ರ ನಡುವೆ ಖರೀದಿಯಾಗಿದ್ದರೆ, ತೈಲ ಕಂಪನಿಗಳು ಪ್ರತಿ ಲೀಟರ್‌ ಡೀಸೆಲ್‌ ದರವನ್ನು 13.1ರಿಂದ 24.9 ರೂಪಾಯಿಯಷ್ಟು ಹೆಚ್ಚಿಸಬೇಕಾಗುತ್ತದೆ. ಪ್ರತಿ ಲೀಟರ್‌ ಪೆಟ್ರೋಲ್‌ ದರವನ್ನು 10.6ರಿಂದ 22.3 ರೂಪಾಯಿಯಷ್ಟು ಹೆಚ್ಚಳ ಮಾಡಬೇಕಾಗುತ್ತದೆ ಎಂದು ಕೊಟ್ಯಾಕ್‌ ಇನ್‌ಸ್ಟಿಟ್ಯೂಷನಲ್‌ ಈಕ್ವಿಟೀಸ್‌ ಅಭಿಪ್ರಾಯ ಪಟ್ಟಿದೆ.

ಕ್ರಿಸಿಲ್‌ ರಿಸರ್ಚ್‌ ಪ್ರಕಾರ, ಪ್ರತಿ ಬ್ಯಾರೆಲ್‌ ಕಚ್ಚಾ ತೈಲದ ಸರಾಸರಿ ದರವು 100 ಡಾಲರ್‌ ಇದ್ದು, ಪೆಟ್ರೋಲ್‌ ಮತ್ತು ಡೀಸೆಲ್‌ ರಿಟೇಲ್‌ ಮಾರಾಟ ದರವನ್ನು ಪ್ರತಿ ಲೀಟರ್‌ಗೆ 9ರಿಂದ 12 ರೂಪಾಯಿ ಹೆಚ್ಚಿಸುವುದು ಅವಶ್ಯವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT