ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಹಾರ ತುಟ್ಟಿ: ಕುಕ್ಕುಟೋದ್ಯಮಕ್ಕೆ ಸಂಕಷ್ಟ

ಮೆಕ್ಕೆಜೋಳಕ್ಕೆ ಐತಿಹಾಸಿಕ ದರ: ಮೊಟ್ಟೆಗೆ ಬೇಡಿಕೆ ಇದ್ದರೂ ದರ ಏರಿಕೆಯಾಗುತ್ತಿಲ್ಲ
Last Updated 13 ಜುಲೈ 2019, 19:46 IST
ಅಕ್ಷರ ಗಾತ್ರ

ಮೊಳಕಾಲ್ಮುರು: ಮೆಕ್ಕೆಜೋಳ ಸೇರಿ ಆಹಾರ ಧಾನ್ಯಗಳ ಬೆಲೆ ಗಗನಕ್ಕೆ ಏರಿರುವ ಕಾರಣ ಕುಕ್ಕುಟೋದ್ಯಮ ತತ್ತರಿಸಿ ಹೋಗಿದೆ.

ಮೂರು ತಿಂಗಳಿನಿಂದ ಕುಕ್ಕುಟಕ್ಕೆ ಬಳಸುವ ಆಹಾರಧಾನ್ಯಗಳ ಪೈಕಿ ಮೆಕ್ಕೆಜೋಳ ದರ ದುಪ್ಪಟ್ಟಾಗಿದೆ. ಸಾಮಾನ್ಯವಾಗಿ ಕ್ವಿಂಟಲ್‌ ಮೆಕ್ಕೆ ಜೋಳದ ಬೆಲೆ ₹ 1,300ರಿಂದ ₹ 1,500ರ ಆಸುಪಾಸಿನಲ್ಲಿ ಇರುತ್ತಿತ್ತು. ಈ ಬಾರಿ ₹ 1,700 ಇತ್ತು. ನಂತರ ಏರುತ್ತಲೇ ಹೋಗಿ ಸದ್ಯ ಕ್ವಿಂಟಲ್‌ಗೆ ₹ 2,700ರಿಂದ ₹ 2,800ರ ಗಡಿ ತಲುಪಿದೆ.

‘ಮೆಕ್ಕೆಜೋಳ ಖರೀದಿ ಬೆಲೆ ಇದೇ ಮೊದಲ ಸಲ ಇಷ್ಟೊಂದು ಏರಿಕೆಯಾಗಿದ್ದು, ದಾಖಲೆ ದರ ಬಂದಿದೆ’ ಎಂದು ಮೆಕ್ಕೆಜೋಳ ವ್ಯಾಪಾರಿ ಕೊಂಡ್ಲಹಳ್ಳಿಯ ಬಿ.ಟಿ. ಹನುಮಾರೆಡ್ಡಿ ತಿಳಿಸಿದರು.

ಕಳೆದ ವರ್ಷ ಮಳೆ ಕೊರತೆಯಿಂದ ಉತ್ತಮ ಇಳುವರಿ ಬಂದಿರಲಿಲ್ಲ. ಮೇಲಾಗಿ ಸೈನಿಕ ಹುಳು ಬಾಧೆಯೂ ಇತ್ತು. ಈ ವರ್ಷವೂ ಮುಂಗಾರು ಕ್ಷೀಣಿಸಿದ್ದು, ತಡವಾಗಿ ಬಿತ್ತನೆಯಾಗಿರುವುದು ದರ ಏರಿಕೆಗೆ ಕಾರಣಗಳಾಗಿವೆ. ನವೆಂಬರ್‌ ವೇಳೆಗೆ ಬೆಳೆ ಕಟಾವಿಗೆ ಬರಲಿದ್ದು, ಅಲ್ಲಿಯವರೆಗೂ ದರ ಕುಸಿತವಾಗಲಿಕ್ಕಿಲ್ಲ ಎನ್ನುತ್ತಾರೆ ಅವರು.

‘ಸೋಯಾ ಸಹ ಕ್ವಿಂಟಲ್‌ಗೆ ₹ 1,000 ಏರಿಕೆಯಾಗಿದ್ದು, ₹ 3,600 ತಲುಪಿದೆ. ಪ್ರತಿ ಕೋಳಿಗೆ ನಿತ್ಯ 120 ಗ್ರಾಂ ಆಹಾರ ಬೇಕು. ನಿರ್ವಹಣೆ ಕಷ್ಟವಾಗಿದೆ. ಸದ್ಯ ಬಿಹಾರದಿಂದ ಮೆಕ್ಕೆಜೋಳ ತರಿಸುತ್ತಿದ್ದೇವೆ. ಪರಿಸ್ಥಿತಿ ಹೀಗೇ ಮುಂದುವರಿದಲ್ಲಿ ಉದ್ಯಮ ನಡೆಸುವುದು ಕಷ್ಟವಾಗಲಿದೆ’ ಎಂದು ಕೋಳಿ ಸಾಕಣೆದಾರರ ಸಂಘದ ಸ್ಥಳೀಯ ಅಧ್ಯಕ್ಷ ಕೆ.ಆರ್. ರಾಮರೆಡ್ಡಿ ಅಳಲು ತೋಡಿಕೊಂಡರು.

‘ಆಹಾರಧಾನ್ಯಗಳ ಬೆಲೆ ಏರಿಕೆಯಿಂದಾಗಿ ಹೊಸದಾಗಿ ಮಾಂಸ ಕೋಳಿ ಸಾಕಣೆ ಮಾಡುವವರು ನಿಲ್ಲಿಸಿದ್ದಾರೆ. ಮೊಟ್ಟೆ ಕೋಳಿಯವರು ಈ ರೀತಿ ಮಾಡಲು ಬರುವುದಿಲ್ಲ. ನಷ್ಟ ಅನುಭವಿಸುವುದು ಅನಿವಾರ್ಯವಾಗಿದೆ. ಎನ್‌ಸಿಸಿಸಿ ಬೋರ್ಡ್‌ನಲ್ಲಿ ಉದ್ಯಮಿಗಳಿಗಿಂತಲೂ ಮಾರಾಟಗಾರರು ಹೆಚ್ಚಿದ್ದಾರೆ. ಇದರಿಂದಾಗಿ ಉದ್ಯಮದವರಿಗೆ ತೊಂದರೆಯಾಗುತ್ತಿದೆ. ಮೊಟ್ಟೆಗೆ ಬೇಡಿಕೆ ಇದ್ದರೂ ದರ ಏರಿಕೆಯಾಗುತ್ತಿಲ್ಲ’ ಎಂದು ಹಾನಗಲ್‌ನ ಕುಕ್ಕುಟೋದ್ಯಮಿ ಹರೀಶ್ ಹೇಳಿದರು.

ದೂರು ನೀಡಿದರೆ ಕ್ರಮ
‘ಮೆಕ್ಕೆಜೋಳದ ದರ ಏರಿಕೆಯಿಂದಾಗಿ ಕೋಳಿ ಸಾಕಣೆ ಕಷ್ಟವಾಗುತ್ತಿದೆ. ಮೊಟ್ಟೆ ದರ ಪರಿಷ್ಕರಣೆ ಮಾಡಿ ಎಂದು ಯಾರೂ ದೂರು ನೀಡಿಲ್ಲ. ಈ ಬಗ್ಗೆ ಲಿಖಿತ ದೂರು ನೀಡಿದರೆ ಮುಂದಿನ ಕ್ರಮಕ್ಕಾಗಿ ಹೈದರಾಬಾದ್ ಕೇಂದ್ರ ಕಚೇರಿಗೆ ಮನವಿ ಮಾಡಲಾಗುವುದು. ಸದ್ಯ ರಾಜ್ಯದಲ್ಲಿ 1.50 ಕೋಟಿ ಮೊಟ್ಟೆ ಕೋಳಿ ಸಾಗಣೆ ಮಾಡಲಾಗುತ್ತಿದ್ದು, ನಿತ್ಯ 1.20 ಕೋಟಿಯಿಂದ 1.30 ಕೋಟಿ ಮೊಟ್ಟೆಗಳನ್ನು ಉತ್ಪಾದಿಸಲಾಗುತ್ತಿದೆ’ ಎಂದು ಹೊಸಪೇಟೆಯ ನ್ಯಾಷನಲ್‌ ಎಗ್‌ ಕೋಆರ್ಡಿನೇಷನ್‌ ಕಮಿಟಿ (ಎನ್‌ಇಸಿಸಿ) ಸಂಯೋಜನಾಧಿಕಾರಿ ಗಿರಿಧರ್ ತಿಳಿಸಿದರು.

*
ಈ ಬಾರಿ ಮೆಕ್ಕೆಜೋಳ ಬೆಲೆ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿದೆ. ಬೆಳೆ ಬರುವ ತನಕ ಬೆಲೆ ಕಡಿಮೆಯಾಗುವುದು ಅನುಮಾನ. ಮಳೆ ಕೈಕೊಟ್ಟರೆ ದರ ಇಳಿಯಲಿಕ್ಕಿಲ್ಲ.
-ಬಿ.ಟಿ. ಹನುಮಾರೆಡ್ಡಿ, ಮೆಕ್ಕೆಜೋಳ ವ್ಯಾಪಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT