ಭಾನುವಾರ, ಏಪ್ರಿಲ್ 11, 2021
25 °C
ತೈಲ ಬೆಲೆ ಏರಿಕೆಯಿಂದ ಉದ್ಯಮಗಳ ಮೇಲೆ ಪರಿಣಾಮ

ವೆಚ್ಚ ಹೆಚ್ಚಳ, ಆದಾಯ ಕುಸಿತ

ವಿಜಯ್ ಜೋಷಿ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಒಂದು ವರ್ಷದ ಅವಧಿಯಲ್ಲಿ ಪೆಟ್ರೋಲ್ ಬೆಲೆ ಶೇಕಡ 23ರಷ್ಟು, ಡೀಸೆಲ್ ಬೆಲೆ ಶೇ 25ರಷ್ಟು ಹೆಚ್ಚಳವಾಗಿದೆ. ಈ ಅವಧಿಯಲ್ಲಿ ಉದ್ಯಮಗಳ ವೆಚ್ಚವು ಕನಿಷ್ಠ ಶೇ 10ರಿಂದ, ಗರಿಷ್ಠ ಶೇ 20ರವರೆಗೆ ಏರಿಕೆ ಆಗಿದೆ. ಆದರೆ, ಆದಾಯ ಮಾತ್ರ ಶೇ 30ರವರೆಗೆ ಕುಸಿದಿದೆ!

ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯ ಕಾರಣದಿಂದಾಗಿ ಉದ್ದಿಮೆಗಳು ಸರಕು ಸಾಗಣೆ, ಕಾರ್ಮಿಕರ ಓಡಾಟ, ವಿದ್ಯುತ್ ನಿಲುಗಡೆ ಸಂದರ್ಭದಲ್ಲಿ ಜನರೇಟರ್‌ಗಳಿಗೆ ಡೀಸೆಲ್‌ ತುಂಬಿಸಲು ಹೆಚ್ಚಿನ ಮೊತ್ತ ತೆಗೆದಿರಿಸಬೇಕಾಗಿದೆ.

‘ತೈಲ ಬೆಲೆ ಹೆಚ್ಚಳದಿಂದಾಗಿ ಕಚ್ಚಾ ವಸ್ತುಗಳ ಬೆಲೆ ಹೆಚ್ಚಳವಾಗಿದೆ. ವಿವಿಧ ಉದ್ಯಮಗಳಲ್ಲಿ ಕೆಲಸ ಮಾಡುವ ನೌಕರರನ್ನು ಕಚೇರಿಗೆ, ಕಾರ್ಖಾನೆಗೆ ಕರೆಸಿಕೊಳ್ಳಲು ಹಾಗೂ ಅವರನ್ನು ಮನೆಗೆ ಕಳುಹಿಸಿಕೊಡಲು ಮಾಡುವ ವೆಚ್ಚ ಹೆಚ್ಚಾಗಿದೆ. ಇಂತಹ ವೆಚ್ಚಗಳ ಹೆಚ್ಚಳದ ಪರಿಣಾಮವಾಗಿ ಒಟ್ಟಾರೆ ಖರ್ಚು ಶೇ 10ರಿಂದ ಶೇ 20ರಷ್ಟು ಜಾಸ್ತಿ ಆಗಿದೆ. ಇದು ಕಳೆದ ಒಂದು ವರ್ಷದ ಅವಧಿಯಲ್ಲಿ ಆಗಿರುವ ಹೆಚ್ಚಳ’ ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ (ಎಫ್‌ಕೆಸಿಸಿಐ) ಅಧ್ಯಕ್ಷ ಪೆರಿಕಲ್ ಎಂ. ಸುಂದರ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ತೈಲ ಬೆಲೆ ಇನ್ನೂ ಹೆಚ್ಚಾದರೆ, ಅದನ್ನು ತಡೆದುಕೊಳ್ಳುವ ಶಕ್ತಿ ನಮ್ಮ ಉದ್ಯಮಗಳಿಗೆ ಇಲ್ಲ. ಜನಸಾಮಾನ್ಯರಿಗೂ ಇನ್ನಷ್ಟು ಕಷ್ಟವಾಗಬಹುದು. ಸಣ್ಣ ಉದ್ದಿಮೆಗಳು ಬಾಗಿಲು ಹಾಕಬೇಕಾದ, ದೊಡ್ಡ ಉದ್ದಿಮೆಗಳು ಮಾತ್ರ ಉಳಿದುಕೊಳ್ಳಬಹುದಾದ ಸ್ಥಿತಿ ನಿರ್ಮಾಣವಾಗುತ್ತದೆ’ ಎಂದು ಸುಂದರ್ ಹೇಳಿದರು.

‘ಮುಕ್ತ ಮಾರುಕಟ್ಟೆಯಲ್ಲಿ ತೈಲ ದರವು ಒಂದು ವರ್ಷದ ಹಿಂದಿನ ಮಟ್ಟಕ್ಕೆ ತಗ್ಗಿದರೆ ಅದು ಉದ್ದಿಮೆಗಳ ಪಾಲಿಗೆ ಹಿತಕರವಾಗುತ್ತದೆ’ ಎಂದರು.

ತೈಲ ಬೆಲೆ ಹೆಚ್ಚುತ್ತ ಸಾಗಿರುವುದು ಅತಿಸಣ್ಣ, ಸಣ್ಣ ಹಾಗೂ ಮಧ್ಯಮ ಪ್ರಮಾಣದ (ಎಂಎಸ್‌ಎಂಇ) ಉದ್ದಿಮೆಗಳಿಗೆ ದೊಡ್ಡ ಏಟು ಎಂದು ‘ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ’ದ ಅಧ್ಯಕ್ಷ ಕೆ.ಬಿ. ಅರಸಪ್ಪ ಹೇಳಿದರು. ‘ತೈಲ ಬೆಲೆ ಏರಿಕೆಯಿಂದ ವರ್ಷದ ಅವಧಿಯಲ್ಲಿ ಉದ್ಯಮಗಳ ಖರ್ಚಿನಲ್ಲಿ ಶೇ 20ರಷ್ಟು ಹೆಚ್ಚಳವಾಗಿದೆ. ಇದೇ ಅವಧಿಯಲ್ಲಿ ಆದಾಯವು ಶೇ 30ರಷ್ಟು ಕುಸಿದಿದೆ. ತೈಲದ ಬೆಲೆಯಲ್ಲಿ ಇನ್ನಷ್ಟು ಏರಿಕೆಯನ್ನು ತಡೆದುಕೊಳ್ಳುವ ಶಕ್ತಿ ಸಣ್ಣ ಉದ್ದಿಮೆಗಳಿಗೆ ಇಲ್ಲ’ ಎಂದರು. ಆದಾಯ ಕುಸಿದಿರುವುದಕ್ಕೆ ಕೋವಿಡ್–19 ಸೃಷ್ಟಿಸಿದ ಸಮಸ್ಯೆಯೂ ಒಂದು ಕಾರಣ ಎಂದು ಅರಸಪ್ಪ ಮತ್ತು ಸುಂದರ್ ಹೇಳಿದರು.


ಕೆ.ಬಿ. ಅರಸಪ್ಪ   

ಸರಕು ಸಾಗಣೆಯಲ್ಲಿ ವೆಚ್ಚ ಕಡಿತ
ತೈಲ ಬೆಲೆ ಹೆಚ್ಚಳದ ಕಾರಣದಿಂದಾಗಿ ಕೆಲವು ಸರಕು ಸಾಗಣೆ ಕಂಪನಿಗಳು ವೆಚ್ಚ ಕಡಿತದ ಮೊರೆ ಹೋಗಿವೆ. ‘ತೈಲ ಏರಿಕೆಯು ಉದ್ಯಮದ ವೆಚ್ಚಗಳನ್ನು ಶೇ 20ರಷ್ಟು ಹೆಚ್ಚಿಸಿದೆ. ಆದರೆ, ಅಷ್ಟನ್ನೂ ಗ್ರಾಹಕರಿಗೆ ವರ್ಗಾಯಿಸುವ ಕೆಲಸ ಆಗಿಲ್ಲ. ವೆಚ್ಚ ತಗ್ಗಿಸುವ, ಸಣ್ಣ‍–ಪುಟ್ಟ ವಸ್ತುಗಳನ್ನು ಬೈಕ್ ಮೂಲಕವೇ ತಲುಪಿಸುವ, ಎರಡು ವಾಹನಗಳು ಹೋಗುತ್ತಿದ್ದ ಮಾರ್ಗಗಳಲ್ಲಿ ಒಂದೇ ವಾಹನದ ಮೂಲಕ ಸರಕು ಸಾಗಿಸುವ ಯತ್ನಗಳು ನಡೆದಿವೆ’ ಎಂದು ಸರಕು ಸಾಗಣೆ ಉದ್ಯಮಿಯೊಬ್ಬರು ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು