ಭಾನುವಾರ, ಜನವರಿ 19, 2020
20 °C

ಪಿಪಿಎಫ್ ಹೊಸ ನಿಯಮದಲ್ಲೇನಿದೆ?

ಕ್ಲಿಯೋನ್ ಡಿಸೋಜ Updated:

ಅಕ್ಷರ ಗಾತ್ರ : | |

ಪಿಪಿಎಫ್‌ ಉಳಿತಾಯ ಮಾರ್ಗ

ಕೇಂದ್ರ ಹಣಕಾಸು ಸಚಿವಾಲಯವು ಸಾರ್ವಜನಿಕ ಭವಿಷ್ಯ ನಿಧಿಗೆ (ಪಿಪಿಎಫ್) ಸಂಬಂಧಿಸಿದಂತೆ ಹೊಸ ನಿಯಮ ರಚಿಸಿ ಇತ್ತೀಚೆಗೆ (ಡಿ. 12) ಅಧಿಸೂಚನೆ ಹೊರಡಿಸಿದೆ. ಈ ಹೊಸ ನಿಯಮ ಜಾರಿಯಿಂದ ಈ ಹಿಂದೆ, ಪಿಪಿಎಫ್‌ಗೆ ಸಂಬಂಧಿಸಿದಂತೆ ಇದ್ದ ಎಲ್ಲ ನಿಯಮಗಳು ರದ್ದಾಗಲಿವೆ. ಪಿಪಿಎಫ್‌ನಲ್ಲಿ ಆಗಿರುವ ಪ್ರಮುಖ ಬದಲಾವಣೆಗಳ ಒಳನೋಟ ಇಲ್ಲಿದೆ.

ಪಿಪಿಎಫ್ ಹೂಡಿಕೆ ಮೇಲಿನ ಸಾಲಕ್ಕೆ ಬಡ್ಡಿ ಕಡಿತ: ಪಿಪಿಎಫ್ ಖಾತೆ ಆರಂಭಿಸಿದ ಮೂರನೇ ಹಣಕಾಸು ವರ್ಷದಲ್ಲಿ ಹೂಡಿಕೆ ಮಾಡಿದ ಹಣದ ಮೇಲೆ ಶೇ 25 ರಷ್ಟು ಸಾಲ ಪಡೆಯಬಹುದಾಗಿದೆ. ಹೀಗೆ ಪಡೆಯುವ ಸಾಲಕ್ಕೆ ಈ ಹಿಂದೆ ಪಿಪಿಎಫ್‌ಗೆ ನಿಗದಿ ಮಾಡಿರುವ ಬಡ್ಡಿ ಮೇಲೆ ಶೇ 2 ರಷ್ಟು ಬಡ್ಡಿ ವಿಧಿಸಲಾಗುತ್ತಿತ್ತು. ಆದರೆ, ಹೊಸ ನಿಯಮದಂತೆ ಶೇ 1 ರಷ್ಟು ಬಡ್ಡಿಯನ್ನು ಮಾತ್ರ ನಿಗದಿ ಮಾಡಲಾಗುತ್ತದೆ. ಉದಾಹರಣೆಗೆ ಈ ಹಿಂದೆ ಪಿಪಿಎಫ್ ದರ ಶೇ 8 ರಷ್ಟಿದ್ದಾಗ ನೀವು ಶೇ 10 ರಷ್ಟು ಬಡ್ಡಿ ಪಾವತಿ ಮಾಡಬೇಕಾಗುತ್ತಿತ್ತು. ಆದರೆ ಇನ್ನು ಮುಂದೆ ಪಿಪಿಎಫ್ ಬಡ್ಡಿ ದರ ಶೇ 8 ರಷ್ಟಿದ್ದರೆ ನೀವು ಶೇ 9 ರಷ್ಟು ಬಡ್ಡಿ ಮಾತ್ರ ಪಾವತಿಸಬೇಕಾಗುತ್ತದೆ.

ಇದನ್ನೂ ಓದಿ: ಗಳಿಕೆಗೆ ತೆರಿಗೆ ಇಲ್ಲ, ಹೂಡಿಕೆಗೆ ತೆರಿಗೆ ಅನುಕೂಲ; ಗುರಿ ಸಾಧನೆಗೆ ಪಿಪಿಎಫ್ ಹಾದಿ

ಅವಧಿಗೆ ಮುನ್ನ ಖಾತೆ ಸ್ಥಗಿತಕ್ಕೆ ಹೆಚ್ಚುವರಿ ಅವಕಾಶ: ಕೆಲ ನಿರ್ದಿಷ್ಟ ಕಾರಣಗಳಿಗೆ ಅವಧಿಗೆ ಮುನ್ನ ಪಿಪಿಎಫ್ ಖಾತೆ ಮುಚ್ಚಲು ಸರ್ಕಾರ ಈ ಹಿಂದೆಯೇ ಅವಕಾಶ ಕಲ್ಪಿಸಿತ್ತು. ಗಂಭೀರ ಅನಾರೋಗ್ಯದ ಕಾರಣಗಳಿಗೆ ಮತ್ತು ಮಕ್ಕಳ ಉನ್ನತ ಶಿಕ್ಷಣದ ಉದ್ದೇಶಕ್ಕೆ ಅವಧಿಗೆ ಮೊದಲು ಖಾತೆ ಮುಚ್ಚಲು ಅವಕಾಶವಿತ್ತು. ಈಗ ಅವಧಿಗೆ ಮುನ್ನ ಪಿಪಿಎಫ್ ಖಾತೆ ಮುಚ್ಚಲು ಹೆಚ್ಚುವರಿಯಾಗಿ ಇನ್ನೊಂದು ಅವಕಾಶ ಕಲ್ಪಿಸಲಾಗಿದೆ.

ಪಿಪಿಎಫ್ ಹೂಂದಿರುವ ವ್ಯಕ್ತಿಯು ವಿದೇಶದಲ್ಲಿ ನೆಲೆಸಿರುವಂತಹ ಸಂದರ್ಭವಿದ್ದಲ್ಲಿ , ಪಾಸ್‌ಪೋರ್ಟ್, ವೀಸಾ ಅಥವಾ ಇನ್‌ಕಮ್ ಟ್ಯಾಕ್ಸ್ ರಿಟರ್ನ್ಸ್ ದಾಖಲೆ ಸಲ್ಲಿಸಿ ಅವಧಿಗೆ ಮುನ್ನ ಪಿಪಿಎಫ್ ಖಾತೆ ಸ್ಥಗಿತಗೊಳಿಸಬಹುದಾಗಿದೆ. ಆದರೆ, ಇಂತಹ ಸಂದರ್ಭದಲ್ಲಿ ಪಿಪಿಎಫ್ ಖಾತೆದಾರ ಪಡೆಯುವ ಒಟ್ಟು ಬಡ್ಡಿ ಲಾಭದಲ್ಲಿ ಶೇ 1 ರಷ್ಟನ್ನು ಕಡಿತ ಮಾಡಲಾಗುವುದು.

ಹೂಡಿಕೆಗೆ 12 ಕಂತು ಮಾತ್ರ ಎನ್ನುವ ನಿಯಮ ರದ್ದು: ಈ ಹಿಂದೆ ಪಿಪಿಎಫ್‌ನಲ್ಲಿ ವರ್ಷಕ್ಕೆ 12 ಕಂತುಗಳಲ್ಲಿ ಮಾತ್ರ ಹೂಡಿಕೆ ಮಾಡಲು ಅವಕಾಶವಿತ್ತು. ಆದರೆ ಈಗ ಅದನ್ನು ರದ್ದು ಮಾಡಲಾಗಿದ್ದು ₹ 50 ರಿಂದ ಹೂಡಿಕೆ ಸಾಧ್ಯವಿದೆ. ₹ 50, ₹ 100, ₹ 150, ₹ 200ರಂತೆ ಹೀಗೆ ವರ್ಷದಲ್ಲಿ ಎಷ್ಟು ಬಾರಿಯಾದರೂ ಪಿಪಿಎಫ್‌ನಲ್ಲಿ ಹಣ ತೊಡಗಿಸಬಹುದಾಗಿದೆ. ಆದರೆ, ವಾರ್ಷಿಕ ಹೂಡಿಕೆ ₹ 1.5 ಲಕ್ಷ ಮೀರುವಂತಿಲ್ಲ.

ಮಕ್ಕಳ ಹೆಸರಿನಲ್ಲಿ ಪ್ರತ್ಯೇಕ ಖಾತೆಗೆ ಅವಕಾಶ: ಹೊಸ ನಿಯಮದಂತೆ ವ್ಯಕ್ತಿಯು ತನ್ನ ಹೆಸರಿನಲ್ಲಿ ಒಂದು ಪಿಪಿಎಫ್ ಖಾತೆ ತೆಗೆಯುವ ಜತೆಗೆ  ಕಿರಿಯ ವಯಸ್ಸಿನ ಮಗ ಅಥವಾ ಮಗಳ ಹೆಸರಿನಲ್ಲಿ ಒಂದು ಪ್ರತ್ಯೇಕ ಪಿಪಿಎಫ್ ಖಾತೆ ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಆದರೆ ಈ ಎರಡೂ ಪಿಪಿಎಫ್ ಖಾತೆಗಳ ಒಟ್ಟು ಹೂಡಿಕೆ ವರ್ಷಕ್ಕೆ ₹ 1.5 ಲಕ್ಷ ಮೀರುವಂತಿಲ್ಲ.

ಶೇ 50 ರಷ್ಟು ಹಣ ಹಿಂಪಡೆಯಲು ಅವಕಾಶ: ಪಿಪಿಎಫ್ ಖಾತೆ ಆರಂಭಿಸಿ 5 ವರ್ಷ ತುಂಬಿದ ಬಳಿಕ ಇನ್ನು ಮುಂದೆ ಶೇ 50 ರಷ್ಟು ಹಣವನ್ನು ಪಡೆಯಲು ಅವಕಾಶವಿದೆ. ಈ ಹಿಂದೆ 7 ವರ್ಷಗಳ ಬಳಿಕ ಶೇ 25 ರಷ್ಟು ಹಣ ಹಿಂಪಡೆಯಲು ಅವಕಾಶವಿತ್ತು.

ಪಿಪಿಎಫ್ ಹೂಡಿಕೆದಾರನಿಗೆ ಮತ್ತಷ್ಟು ಬಲ: ಪಿಪಿಎಫ್ ಖಾತೆಯಲ್ಲಿನ ಹಣವು ಯಾವುದೇ ನ್ಯಾಯಾಲಯದ ಆದೇಶ ಅಥವಾ ತೀರ್ಪಿಗೆ ಒಳಪಡುವುದಿಲ್ಲ. ಸುಸ್ತಿ ಸಾಲ ಅಥವಾ ಮುಂತಾದ ಕಾರಣಗಳನ್ನು ನೀಡಿ ಪಿಪಿಎಫ್ ಹಣವನ್ನು ಹಣಕಾಸು ಸಂಸ್ಥೆಗಳು ಪಡೆದುಕೊಳ್ಳಲು ಸಾಧ್ಯವಿಲ್ಲ.

(ಲೇಖಕ, ಸುವಿಷನ್ ಹೋಲ್ಡಿಂಗ್ಸ್‌ನ ಸಂಶೋಧನಾ ವಿಭಾಗದ ಮುಖ್ಯಸ್ಥ)

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು