ಮಂಗಳವಾರ, ಜನವರಿ 21, 2020
26 °C
ಹಣದುಬ್ಬರ ನಿಯಂತ್ರಣಕ್ಕೆ ಒತ್ತು

ಭಾರತೀಯ ರಿಸರ್ವ್‌ ಬ್ಯಾಂಕ್‌ನ ಅಚ್ಚರಿಯ ನಡೆ; ಬದಲಾಗದ ಅಲ್ಪಾವಧಿ ಬಡ್ಡಿ ದರ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಭಾರತೀಯ ರಿಸರ್ವ್‌ ಬ್ಯಾಂಕ್‌ ತನ್ನ ದ್ವೈಮಾಸಿಕ ಹಣಕಾಸು ನೀತಿಯ ಪರಾಮರ್ಶೆಯಲ್ಲಿ ಅಲ್ಪಾವಧಿ ಬಡ್ಡಿ (ರೆಪೊ) ದರಗಳಲ್ಲಿ ಯಥಾಸ್ಥಿತಿ ಕಾಯ್ದುಕೊಂಡು ಅಚ್ಚರಿ ಮೂಡಿಸಿದೆ.

ಅರ್ಥಶಾಸ್ತ್ರಜ್ಞರು, ಬ್ಯಾಂಕ್‌ ಮುಖ್ಯಸ್ಥರು ಮತ್ತು ಮಾರುಕಟ್ಟೆಯ ವ್ಯಾಪಕ ನಿರೀಕ್ಷೆಗಳನ್ನು ಕೇಂದ್ರೀಯ ಬ್ಯಾಂಕ್‌ ತಲೆಕೆಳಗು ಮಾಡಿದೆ. ಚಿಂತೆಗೆ ಎಡೆಮಾಡಿಕೊಟ್ಟಿರುವ ಮಂದಗತಿಯ ಆರ್ಥಿಕತೆಗೆ ಉತ್ತೇಜನ ನೀಡುವ ಬದಲಿಗೆ ಹಣದುಬ್ಬರ ಒತ್ತಡ ಮತ್ತು ಆಹಾರ ಧಾನ್ಯಗಳ ಬೆಲೆ ಹೆಚ್ಚಳ ನಿಯಂತ್ರಣಕ್ಕೆ ಹೆಚ್ಚು ಒತ್ತು ನೀಡಿದೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ನಿರಂತರವಾಗಿ ಐದು ಬಾರಿ ರೆಪೊ ದರ ಕಡಿತ ಮಾಡಿದ್ದ ಆರ್‌ಬಿಐನ ಹಣಕಾಸು ನೀತಿ ಸಮಿತಿಯ (ಎಂಪಿಸಿ) 6 ಸದಸ್ಯರು, ಈ ಬಾರಿ ದರ ಕಡಿತ ಮಾಡದಿರಲು ಒಮ್ಮತದ ತೀರ್ಮಾನಕ್ಕೆ ಬಂದಿದ್ದಾರೆ. ಕೇಂದ್ರೀಯ ಬ್ಯಾಂಕ್‌, ಬ್ಯಾಂಕಿಂಗ್‌ ವ್ಯವಸ್ಥೆಗೆ ನೀಡುವ ಸಾಲದ ಬಡ್ಡಿಗೆ ರೆಪೊ ದರ ಎನ್ನುತ್ತಾರೆ.

ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿನ ವೃದ್ಧಿ ದರವು ಶೇ 4.5ರಷ್ಟಾಗಿ 6 ವರ್ಷಗಳ ಕನಿಷ್ಠ ಮಟ್ಟಕ್ಕೆ ಕುಸಿದಿತ್ತು. ವರ್ಷದ ಹಿಂದಿನ ಇದೇ ಅವಧಿಯಲ್ಲಿ ಇದು ಶೇ 7ರಷ್ಟಿತ್ತು. ಆರ್ಥಿಕತೆಗೆ ಚೇತರಿಕೆ ನೀಡಲು ಆರನೇ ಬಾರಿಯೂ ರೆಪೊ ದರಗಳು ಕಡಿತವಾಗಲಿವೆ ಎಂದು ಬಹುವಾಗಿ ನಿರೀಕ್ಷಿಸಲಾಗಿತ್ತು.

‘ಆರ್ಥಿಕತೆಯಲ್ಲಿ ಬಂಡವಾಳ ಹೂಡಿಕೆ ತಡೆ ಹಿಡಿದಿರುವ ಅಡಚಣೆಗಳನ್ನು ನಿವಾರಿಸುವುದು ಸದ್ಯದ ಅಗತ್ಯವಾಗಿದೆ. ಬಡ್ಡಿ ದರ ಕಡಿತದ ನಿರ್ಧಾರಕ್ಕೆ ಬರುವ ಮುನ್ನ, ಆರ್ಥಿಕತೆ ಪುಟಿದೇಳಲು ಕೇಂದ್ರ ಸರ್ಕಾರ ಮತ್ತು ಕೇಂದ್ರೀಯ ಬ್ಯಾಂಕ್‌ ಕೈಗೊಂಡಿರುವ ಸಮನ್ವಯ ಕ್ರಮಗಳ ಫಲಶ್ರುತಿಯನ್ನು ಎದುರು ನೋಡಲಾಗುತ್ತಿದೆ’ ಎಂದು ಆರ್‌ಬಿಐ ಗವರ್ನರ್‌ ಶಕ್ತಿಕಾಂತ್ ದಾಸ್‌ ಹೇಳಿದ್ದಾರೆ.

‘ಆರ್ಥಿಕತೆಯಲ್ಲಿ ಚೇತರಿಕೆಯ ಕೆಲ ಲಕ್ಷಣಗಳು ಕಂಡು ಬರುತ್ತಿದ್ದು, ಅವುಗಳ ಸ್ಥಿರತೆ ಬಗ್ಗೆ ಈ ಸಂದರ್ಭದಲ್ಲಿ ನಿರ್ಧಾರಕ್ಕೆ ಬರುವುದು ಅವಸರದ ಧೋರಣೆಯಾಗುತ್ತದೆ’ ಎಂದರು

ಆರ್‌ಬಿಐ, ಪ್ರತಿ ಬಾರಿಯೂ ಯಾಂತ್ರಿಕವಾಗಿ ಬಡ್ಡಿ ದರ ಕಡಿತ ಮಾಡುವುದನ್ನು ನೀವು ನಿರೀಕ್ಷಿಸಬಾರದು

- ಶಕ್ತಿಕಾಂತ್ ದಾಸ್‌, ಆರ್‌ಬಿಐ ಗವರ್ನರ್‌

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು