ಮುಂಬೈ: 2025–26ನೇ ಸಾಲಿನ ಕೇಂದ್ರ ಬಜೆಟ್ನಲ್ಲಿ ಘೋಷಿಸಿರುವ ಆದಾಯ ತೆರಿಗೆ ಕಡಿತದ ಕ್ರಮವು ದೇಶದ ಮಧ್ಯಮ ವರ್ಗದ ಜನರಲ್ಲಿ ನಿರಾಳತೆ ಮೂಡಿಸಿದೆ. ಇದರ ಬೆನ್ನಲ್ಲೇ ಭಾರತೀಯ ರಿಸರ್ವ್ ಬ್ಯಾಂಕ್ ಶುಕ್ರವಾರ ರೆಪೊ ದರ ಇಳಿಕೆ ಮಾಡುವ ಮೂಲಕ ಈ ವರ್ಗದ ಜನರ ಬಹುದಿನಗಳ ಬೇಡಿಕೆಯನ್ನು ಈಡೇರಿಸಿದೆ.

2023ರ ಫೆಬ್ರುವರಿ ಯಿಂದಲೂ ಶೇ 6.50ರಷ್ಟಿದ್ದ ರೆಪೊ ದರದಲ್ಲಿ ಶೇ 0.25ರಷ್ಟು ಕಡಿತಗೊಳಿಸಿದೆ. ಇದರಿಂದ ಬ್ಯಾಂಕ್ಗಳಲ್ಲಿ ಈ ಬಡ್ಡಿದರ ಆಧರಿತ ಗೃಹ, ಕಾರು ಹಾಗೂ ವೈಯಕ್ತಿಕ ಸಾಲ ಪಡೆದವರಿಗೆ ಇಎಂಐ ಹೊರೆ ತಗ್ಗಲಿದೆ.

ಜಡತ್ವಗೊಂಡಿರುವ ದೇಶದ ಆರ್ಥಿಕತೆ ಬೆಳವಣಿಗೆಗೆ ಉತ್ತೇಜನ ನೀಡಲು ಆರ್ಬಿಐ 5 ವರ್ಷದ ಬಳಿಕ ಈ ಕ್ರಮ ಕೈಗೊಂಡಿದೆ. ಇದರಿಂದ ಗೃಹ ಹಾಗೂ ಇತರೆ ಸಾಲಗಳು ಅಗ್ಗವಾಗಲಿವೆ ಎಂದು ಆರ್ಥಿಕ ತಜ್ಞರು ಹೇಳಿದ್ದಾರೆ.

ಆರ್ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಅವರ ಅಧ್ಯಕ್ಷತೆಯಲ್ಲಿ ಮುಕ್ತಾಯಗೊಂಡ ಹಣಕಾಸು ನೀತಿ ಸಮಿತಿ ಸಭೆಯಲ್ಲಿ ಎಲ್ಲಾ ಸದಸ್ಯರು, ರೆಪೊ ದರ ಇಳಿಕೆ ಬಗ್ಗೆ ಸರ್ವಾನುಮತದಿಂದ ಒಪ್ಪಿಗೆ ಸೂಚಿಸಿದರು.

ವಾಣಿಜ್ಯ ಬ್ಯಾಂಕ್ಗಳ ಹಣಕಾಸಿನ ಕೊರತೆ ನೀಗಿಸಲು ಆರ್ಬಿಐ ಅವುಗಳಿಗೆ ಸಾಲ ನೀಡುತ್ತದೆ. ಈ ಸಾಲಕ್ಕೆ ವಿಧಿಸುವ ಬಡ್ಡಿಯನ್ನು ರೆಪೊ ದರ ಎಂದು ಕರೆಯಲಾಗುತ್ತದೆ. ಇದು ಏರಿಕೆಯಾದರೆ ಸಹಜವಾಗಿ ಬ್ಯಾಂಕ್ಗಳ ಸಾಲದ ವೆಚ್ಚವೂ ಹೆಚ್ಚಳ ವಾಗುತ್ತದೆ. ಈ ಹೊರೆಯನ್ನು ಬ್ಯಾಂಕ್ಗಳು ಗ್ರಾಹಕರಿಗೆ ವರ್ಗಾಯಿಸುತ್ತವೆ. ಇದರಿಂದ ಗೃಹ, ಕಾರು ಹಾಗೂ ವೈಯಕ್ತಿಕ ಸಾಲದ ಇಎಂಐ ಹೆಚ್ಚಳವಾಗುತ್ತದೆ.

ರೆಪೊ ದರವು ಗ್ರಾಹಕರ ಉಳಿತಾಯ ಮತ್ತು ಹೂಡಿಕೆ ಮೇಲೂ ಪರಿಣಾಮ ಬೀರುತ್ತದೆ. ಬ್ಯಾಂಕ್ಗಳು ಹೆಚ್ಚಿನ ಮೊತ್ತದ ಠೇವಣಿ ಆಕರ್ಷಿಸಲು ಮುಂದಾಗುತ್ತವೆ. ಹಾಗಾಗಿ, ರೆಪೊ ದರ ಏರಿಕೆಯಾದರೆ ಸ್ಥಿರ ಠೇವಣಿ ಮತ್ತು ಇತರೆ ಉಳಿತಾಯದ ಮೊತ್ತಕ್ಕೆ ಹೆಚ್ಚಿನ ಬಡ್ಡಿ ಲಭಿಸುತ್ತದೆ. ಒಂದು ವೇಳೆ ಕಡಿಮೆಯಾದರೆ ಉಳಿತಾಯ ಯೋಜನೆಗಳ ಮೇಲೆ ಲಭಿಸುವ ಬಡ್ಡಿ ಕಡಿಮೆ ಯಾಗುತ್ತದೆ ಎಂದು ಆರ್ಥಿಕ ತಜ್ಞರು ಹೇಳಿದ್ದಾರೆ.

‘ಪ್ರತಿದಿನವೂ ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯವು ಇಳಿಕೆ ಆಗುತ್ತಿದೆ. ಆರ್ಬಿಐನ ಈ ನಿರ್ಧಾರದಿಂದ ಚಿಲ್ಲರೆ ಹಣದುಬ್ಬರ ಮತ್ತು ರೂಪಾಯಿ ಮೇಲೆ ಮತ್ತಷ್ಟು ಒತ್ತಡ ಸೃಷ್ಟಿಯಾಗುವ ಸಾಧ್ಯತೆಯಿದೆ. ಈಕ್ವಿಟಿ ಮಾರುಕಟ್ಟೆಯಲ್ಲಿ ವಿದೇಶಿ ಬಂಡವಾಳದ ಹೊರಹರಿವಿನ ಪ್ರಮಾಣ ಹೆಚ್ಚಳವಾಗುವ ಸಾಧ್ಯತೆಯಿದೆ’ ಎಂದು ಹೇಳಿದ್ದಾರೆ.

ಹಣದುಬ್ಬರ ನಿಯಂತ್ರಿಸುವ ಮೂಲಕ ದೇಶದ ಆರ್ಥಿಕ ಬೆಳವಣಿಗೆಯ ಸ್ಥಿರತೆಗೆ ಒತ್ತು ನೀಡಲು ಸಭೆಯು ನಿರ್ಧರಿಸಿದೆ. ಈ ನಿಟ್ಟಿನಲ್ಲಿ ‘ತಟಸ್ಥ’ ನೀತಿಯನ್ನು ಮುಂದುವರಿಸಲು ಒಪ್ಪಿಗೆ ನೀಡಿದೆ ಎಂದು ಗವರ್ನರ್ ಮಲ್ಹೋತ್ರಾ ಹೇಳಿದ್ದಾರೆ.

ಚಿಲ್ಲರೆ ಹಣದುಬ್ಬರವು ನವೆಂಬರ್ನಲ್ಲಿ ಶೇ 5.48ರಷ್ಟು ದಾಖಲಾಗಿತ್ತು. ಡಿಸೆಂಬರ್ನಲ್ಲಿ ಶೇ 5.22ಕ್ಕೆ ಇಳಿಕೆಯಾಗಿತ್ತು.

ಚಿಲ್ಲರೆ ಹಣದುಬ್ಬರ ಇಳಿಕೆ ನಿರೀಕ್ಷೆ

ಪ್ರಸಕ್ತ ಆರ್ಥಿಕ ವರ್ಷದಲ್ಲಿ ಚಿಲ್ಲರೆ ಹಣದುಬ್ಬರವು ಶೇ 4.8ರಷ್ಟು ದಾಖಲಾಗಲಿದೆ. 2025–26ನೇ ಆರ್ಥಿಕ ವರ್ಷದಲ್ಲಿ ಶೇ 4.2ರಷ್ಟು ಇರಲಿದೆ ಎಂದು ಆರ್ಬಿಐ ಅಂದಾಜಿಸಿದೆ.

‘ದೇಶದಲ್ಲಿ ಆಹಾರ ಧಾನ್ಯಗಳ ಉತ್ಪಾದನೆ ಹೆಚ್ಚಳವಾಗಿದೆ. ಹಿಂದಿನ ಹಣಕಾಸು ನೀತಿ ಸಮಿತಿ ಸಭೆಗಳಲ್ಲಿ ಕೈಗೊಂಡ ನಿರ್ಧಾರದಿಂದ ಹಣದುಬ್ಬರ ಇಳಿಕೆಯಾಗಿದೆ’ ಎಂದು ಗವರ್ನರ್ ಮಲ್ಹೋತ್ರಾ ಹೇಳಿದ್ದಾರೆ.

ಸರಕು ಮತ್ತು ಸೇವೆಗಳ ವೆಚ್ಚದಲ್ಲಿನ ಬದಲಾವಣೆಯ ಸಂಕೇತವಾಗಿರುವ ಕೋರ್ ಹಣದುಬ್ಬರ ಏರಿಕೆಯಾದರೂ ಮುಂದಿನ ದಿನಗಳಲ್ಲಿ ಮಂದಗತಿಯಲ್ಲಿ ಇರಲಿದೆ. ಜಾಗತಿಕ ಬಿಕ್ಕಟ್ಟುಗಳು ಹಣದುಬ್ಬರದ ಮೇಲೆ ಪರಿಣಾಮ ಬೀರಲಿವೆ ಎಂದು ಹೇಳಿದ್ದಾರೆ.

2025–26ರಲ್ಲಿ ಜಿಡಿಪಿ ಶೇ 6.7ರಷ್ಟು ಪ್ರಗತಿ

2025–26ನೇ ಆರ್ಥಿಕ ವರ್ಷದಲ್ಲಿ ಒಟ್ಟು ಆಂತರಿಕ ಉತ್ಪನ್ನವು (ಜಿಡಿಪಿ) ಶೇ 6.7ರಷ್ಟು ಪ್ರಗತಿ ಕಾಣಲಿದೆ ಎಂದು ಆರ್ಬಿಐ ಅಂದಾಜಿಸಿದೆ.

ಕೇಂದ್ರ ಸರ್ಕಾರವು ಬಜೆಟ್ನಲ್ಲಿ ಆದಾಯ ತೆರಿಗೆ ಕಡಿತಗೊಳಿಸುವ ಮೂಲಕ ಮಧ್ಯಮ ವರ್ಗದವರ ಮೇಲಿನ ತೆರಿಗೆ ಹೊರೆ ಇಳಿಸಿದೆ. ಹಿಂಗಾರು ಅವಧಿಯಲ್ಲಿ ಆಹಾರ ಧಾನ್ಯಗಳ ಉತ್ಪಾದನೆ ಹೆಚ್ಚಿದೆ. ಇದು ಆರ್ಥಿಕ ಬೆಳವಣಿಗೆ ದರ ಏರಿಕೆಗೆ ನೆರವಾಗಲಿದೆ ಎಂದು ಹೇಳಿದೆ.

2024–25ನೇ ಆರ್ಥಿಕ ವರ್ಷದಲ್ಲಿ ಜಿಡಿಪಿಯು ಶೇ 6.4ರಷ್ಟು ಬೆಳವಣಿಗೆ ಕಾಣುವ ನಿರೀಕ್ಷೆಯಿದೆ ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿ ಅಂದಾಜಿಸಿದೆ.

ಬ್ಯಾಂಕ್ಗಳಿಗೆ ಪ್ರತ್ಯೇಕ ಡೊಮೇನ್ ರಚನೆ

ಸೈಬರ್ ಭದ್ರತೆ ದೃಷ್ಟಿಯಿಂದ ದೇಶದ ಬ್ಯಾಂಕ್ಗಳು ಹಾಗೂ ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ ಪ್ರತ್ಯೇಕ ಡೊಮೇನ್ ರಚನೆಗೆ ಆರ್ಬಿಐ ನಿರ್ಧರಿಸಿದೆ.

ಏಪ್ರಿಲ್ನಿಂದ ‘ಬ್ಯಾಂಕ್ ಡಾಟ್ ಇನ್’ ಜಾಲತಾಣದಲ್ಲಿ ನೋಂದಣಿ ಆರಂಭವಾಗಲಿದೆ. ಆ ನಂತರ ‘ಫಿನ್ ಡಾಟ್ ಇನ್’ ಆರಂಭಿಸಲಾಗುವುದು ಎಂದು ತಿಳಿಸಿದೆ.

ಡಿಜಿಟಲ್ ಪಾವತಿಯಲ್ಲಿನ ವಂಚನೆ ತಡೆಗಟ್ಟುವುದು ಇದರ ಪ್ರಮುಖ ಉದ್ದೇಶವಾಗಿದೆ. ಈ ಕ್ರಮವು ಬ್ಯಾಂಕಿಂಗ್ ವಲಯದ ಮೇಲೆ ಜನರ ನಂಬಿಕೆ ಮತ್ತು ವಿಶ್ವಾಸವನ್ನು ಬಲಗೊಳಿಸಲು ನೆರವಾಗಲಿದೆ ಎಂದು ಹೇಳಿದೆ.

ಬ್ಯಾಂಕಿಂಗ್ ತಂತ್ರಜ್ಞಾನದ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆಯು (ಐಡಿಆರ್ಬಿಟಿ) ವಿಶೇಷ ರಿಜಿಸ್ಟಾರ್ ಆಗಿ ಕಾರ್ಯ ನಿರ್ವಹಿಸಲಿದೆ ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.